* ರೌಡಿ ಶೀಟರ್ ಪಟ್ಟಿ ಪರಾಮರ್ಶೆ
*ಅಕ್ರಮವಾಗಿ ನೆಲಸಿರುವ ವಿದೇಶಿ ನಾಗರಿಕರ ಮೇಲೆ ಹೆಚ್ಚಿನ ನಿಗಾ ವಹಿಸಬೇಕು:
ಗೃಹ ಸಚಿವ: ಆರಗ ಜ್ಞಾನೇಂದ್ರ*
ಬೆಂಗಳೂರು, ಸೆಪ್ಟೆಂಬರ್ ೦೬.: ವೀಸಾ ಅವಧಿ ಮುಗಿದರೂ ರಾಜ್ಯದಲ್ಲಿ ಅಕ್ರಮವಾಗಿ ನೆಲಸಿರುವ ವಿದೇಶಿ ನಾಗರಿಕರನ್ನು ಗುರುತಿಸಿ ಅವರು ನಡೆಸುತ್ತಿರುವ ಚಟುವಟಿಕೆಗಳ ಮೇಲೆ ತೀವ್ರ ನಿಗಾ ವಹಿಸಬೇಕೆಂದು ರಾಜ್ಯ ಪೊಲೀಸರಿಗೆ ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಪತ್ರಿಕಾಗೋಷ್ಠಿ ಯನ್ನುದ್ದೇಶಿಸಿ ಮಾತನಾಡಿದ ಸಚಿವರು, “ರಾಜ್ಯದಲ್ಲಿ ಅಕ್ರಮವಾಗಿ ವೀಸಾ ಅವಧಿ ಮುಟ್ಟಿದರೂ ನೆಲಸಿರುವ ವಿದೇಶಿ ನಾಗರಿಕರು ಯಾವುದೇ ಅಕ್ರಮ ಚಟುವಟಿಕೆ, ದೇಶದ್ರೋಹಿ ಕೃತ್ಯ ಅಥವಾ ಸಮಾಜವಿರೋಧಿ ಕೃತ್ಯ ನಡೆಸದಂತೆ ನಿಗಾ ವಹಿಸಬೇಕು, ಹಾಗೂ ಅವರ ಬಗ್ಗೆ ಪ್ರತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವಂತೆ ಪ್ರತ್ಯೇಕ
ದಾಖಲಾತಿ ಗಳನ್ನೂ ನಿರ್ವಹಿಸಬೇಕು’ ಎಂದು ನಿರ್ದೇಶನ ನೀಡಲಿಗಿದೆ ಎಂದರು.
ರಾಜ್ಯದಲ್ಲಿ ಅಪರಾಧ ನಿಯಂತ್ರಣ ಹಾಗೂ ಅಪರಾಧಿಗಳ ವಿರುದ್ಧ ಹೂಡಲಾದ ಪ್ರಕರಣಗಳನ್ನು ನ್ಯಾಯಾಲಯದಲ್ಲಿ ಸಮರ್ಥವಾಗಿ ಮಂಡಿಸಿ, ಶಿಕ್ಷೆ ಕೊಡಿಸುವ ಪ್ರಮಾಣ ಹೆಚ್ಚಿಸುವುದರ ಮೂಲಕ, ಇಲಾಖೆ ಬಗ್ಗೆ ಸಾರ್ವಜನಿಕರಲ್ಲಿ ಇನ್ನೂ ಹೆಚ್ಚಿನ ವಿಶ್ವಾಸ ಮೂಡಿಸಬೇಕಾದ ಅಗತ್ಯ ವಿದೆ ಎಂಬುದನ್ನು ಪ್ರತಿಪಾದಿಸಲಾಗಿದೆ ಎಂದು ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಕರಾವಳಿ ರಕ್ಷಣಾ ಪಡೆಯನ್ನು ಬಲಪಡಿಸಬೇಕು, ಹಾಗೂ ಅಕ್ರಮವಾಗಿ ನುಸುಳುವುದನ್ನು ತಡೆಯಲು ನೌಕಾದಳ ಸಿಬ್ಬಂದಿಯೊಡನೆ ಸದಾ ಸಂಪರ್ಕ ಸಾದಿಸಿ ದೇಶದ ಭದ್ರತೆ ಹಾಗೂ ಸುರಕ್ಷತೆಗೆ ಹೆಚ್ಚಿನ ಗಮನ ಹರಿಸಬೇಕೆಂದು ಸೂಚನೆ ನೀಡಲಾಗಿದೆ, ಮತ್ತು ಈ ವಿಷಯದಲ್ಲಿ
ಯಾವುದೇ ಅಜಾಗರೂಕತೆಗೆ ಆಸ್ಪದ ಇರಬಾರದು ಎಂದು ಸ್ಪಷ್ಟವಾಗಿ ಸೂಚಿಸಲಾಗಿದೆ ಎಂದರು.
ರಾಜ್ಯದಲ್ಲಿ ಅಕ್ರಮ ಜಾನುವಾರು ಸಾಗಣೆ ಹಾಗೂ ಹತ್ಯೆ ನಡೆಸಲು ಯಾವುದೇ ಕಾರಣಕ್ಕೂ ಅವಕಾಶ ನೀಡದೆ , ಕಾನೂನು ಉಲ್ಲಂಘಿಸುವ ಸಮಾಜ ವಿರೋಧಿ ಶಕ್ತಿಗಳನ್ನು ನಿಗ್ರಹಿಸಬೇಕು ಎಂದೂ ತಿಳಿಸಲಾಗಿದೆ, ಎಂದರು.
ಗ್ರಾಮೀಣ ಪ್ರದೇಶದಲ್ಲಿ ಗಸ್ತು ಹೆಚ್ಚಳ:
ಗ್ರಾಮೀಣ ಪ್ರದೇಶದಲ್ಲಿ ಪೋಲೀಸರ ಗಸ್ತು ಪದ್ದತಿಯನ್ನು ಪರಿಷ್ಕರಿಸಿ ಅಪರಾಧ ಪ್ರಕರಣಗಳನ್ನು, ಗಣನೀಯವಾಗಿ ತಗ್ಗಿಸಲು ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಲಾಗಿದೆ, ಎಂದು ತಿಳಿಸಿದ ಸಚಿವರು ಪಟ್ಟಣ ಪ್ರದೇಶದಲ್ಲಿ ಈ-ಗಸ್ತು
(E-Beat system) ವ್ಯವಸ್ಥೆಯನ್ನು ಬಲಪಡಿಸಲು ತೀರ್ಮಾನಿಸಲಾಗಿದೆ, ಎಂದು ಸಚಿವರು ತಿಳಿಸಿದರು.
ರೌಡಿ ಶೀಟರ್ ಪಟ್ಟಿ ಪರಾಮರ್ಶೆ
ಪ್ರತಿ ಪೊಲೀಸ್ ಠಾಣೆಯಲ್ಲಿ ಇರುವ ‘ರೌಡಿ ಶೀಟರ್’ ಪಟ್ಟಿಯನ್ನು ಕಾನೂನಿನ ಮಾನದಂಡ ಪ್ರಕಾರ ಪುನಃ ಪರಿಶೀಲಿಸಿ ,ಕನ್ನಡ-ಪರ, ರೈತ-ಪರ ಹಾಗೂ ಇನ್ನಿತರ ಜನಪರ ಚಳುವಳಿ ಭಾಗವಿಸಿದವರ ವಿರುದ್ಧ ದಾಖಲಾದ ‘ರೌಡಿ ಶೀಟರ್’ ಹಣೆಪಟ್ಟಿಯನ್ನು ವೈಜ್ಞಾನಿಕವಾಗಿ ಪರಿಷ್ಕರಿಸಬೇಕು ಹಾಗೂ ಅಮಾಯಕರ ಹೆಸರು ಒಂದುವೇಳೆ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದರೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಪರಿಷ್ಕರಿಸಲು, ನಿರ್ಧಾರ ತೆಗೆದು ಕೊಳ್ಳಲು ಸೂಚಿಸಲಾಗಿದೆ
,ಇನ್ಮುಂದೆ ಸಣ್ಣಪುಟ್ಟ ಅಪರಾಧಗಳಿಗೆ ರೌಡಿ ಪಟ್ಟ ಕಟ್ಟುವಂತಿಲ್ಲ. ಜೊತೆಗೆ ಅಕ್ರಮ ಕ್ಯಾಸಿನೋ ತಡೆಯದಿದ್ದರೆ ಪೊಲೀಸರೇ ಹೊಣೆ ಹೊರಬೇಕಾಗುತ್ತದೆ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ಆದೇಶಿಸಿದ್ದಾರೆ.
ರಾಜ್ಯದ ಎಲ್ಲ ಕಡೆ ಸಣ್ಣಪುಟ್ಟ ಕಾರಣಕ್ಕೆ ರೌಡಿಪಟ್ಟಿ ಕಟ್ಟಲಾಗಿದೆ. ಸದಾ ಕಾಲ ಸಮಾಜ ಕಂಟಕರಾಗಿ ಭಯಹುಟ್ಟಿಸುತ್ತಾ ಇರುವವರು ರೌಡಿಪಟ್ಟಿಗೆ ಸೇರಿಸುತ್ತಾರೆ. ಸಾವಿರಾರು ಜನರನ್ನು ರೌಡಿ ಪಟ್ಟಿಯಲ್ಲಿ ಇಡುವುದರಲ್ಲಿ ಅರ್ಥವೇ ಇಲ್ಲ. ಹೀಗಾಗಿ ನಿಯಮಾವಳಿ ಪ್ರಕಾರ ಪರಿಶೀಲಿಸಿ ರೌಡಿಪಟ್ಟಿ ಪರಾಮರ್ಶೆ ಮಾಡಲು ಸೂಚಿಸಲಾಗಿದೆ ಅನೇಕ ಮಾನದಂಡ ಇಟ್ಟು ರೌಡಿ ಶೀಟರ್ ಪಟ್ಟಿ ಪರಾಮರ್ಶೆ ಮಾಡಲಾಗುವುದು ಎಂದರು.
ಬೆಂಗಳೂರಿನಲ್ಲಿ ಹೆಚ್ಚುತ್ತಿರುವ ಅಕ್ರಮ ಕ್ಯಾಸಿನೋ ಕ್ಲಬ್ ಮಟ್ಕಾ ದಂಧೆಗೆ ಕಡಿವಾಣ ಹಾಕಲು ಮುಂದಾಗಿರುವ ಗೃಹ ಇಲಾಖೆ, ಅಕ್ರಮ ಕ್ಯಾಸಿನೋ ಪತ್ತೆಯಾದಲ್ಲಿ ಅದರ ವ್ಯಾಪ್ತಿಯ ಪೊಲೀಸ್ ಠಾಣೆಯ ಅಧಿಕಾರಿಗಳನ್ನೇ ಹೊಣೆ ಮಾಡುತ್ತಿದೆ. ಅಕ್ರಮ ಕ್ಯಾಸಿನೋ ಕ್ಲಬ್ ಮಟ್ಕಾ ನಡೆಯುತ್ತಿರುವುದನ್ನು ಪೊಲೀಸರು ಗಮನಿಸಿ ಕ್ರಮಕೈಗೊಳ್ಳಬೇಕು. ಒಂದು ವೇಳೆ ಇದನ್ನು ಪೊಲೀಸರು ಸಮರ್ಪಕವಾಗಿ ನಿರ್ವಹಿಸದೇ ಇದ್ದಲ್ಲಿ ಅಕ್ರಮ ತಡೆಯದಿದ್ದರೆ ಅಂಥ ಅಧಿಕಾರಿಗಳನ್ನೇ ಆಯಾ ಸ್ಟೇಷನ್ ಪೊಲೀಸ್ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡುವುದಾಗಿ ಎಚ್ಚರಿಸಿದರು.
ರಾಷ್ಟ್ರ ವಿರೋಧಿ ಶಕ್ತಿಗಳನ್ನು ಬಗ್ಗು ಬಡಿಯಲು, ಹಾಗೂ ಕೇಂದ್ರದ ರಾಷ್ಟೀಯ ತನಿಖಾ ದಳ (NIA) ದ ಜೊತೆಗೆ ಸಮನ್ವಯ
ಸಾಧಿಸಲು ಬೆಂಗಳೂರು ಅಥವಾ ಮಂಗಳೂರಿನಲ್ಲಿ NIA ಘಟಕವನ್ನು ರಾಜ್ಯದಲ್ಲಿ ಸ್ಥಾಪಿಸುವ ಅಗತ್ಯದ ಬಗ್ಗೆ
ಕೇಂದ್ರಕ್ಕೆ ಮನವಿ ಸಲ್ಲಿಸಲೂ ನಿರ್ಧರಿಸಲಾಗಿದೆ ಎಂದೂ ಸಚಿವರು ತಿಳಿಸಿದರು.