*ನಿರುದ್ಯೋಗ ದಿನ ಆಚರಣೆ ಜತೆಗೆ ಪಿಎಂಗೆ ನಿಮ್ಮ ಪದವಿ ಪ್ರಮಾಣ ಪತ್ರ ಹಿಂದಿರುಗಿಸಿ: ಯುವಕರಿಗೆ ಡಿ.ಕೆ. ಶಿವಕುಮಾರ್ ಕರೆ*
ಬೆಂಗಳೂರು:- ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇನೆ ಎಂದಿದ್ದ ಪ್ರಧಾನಿ ನರೇಂದ್ರ ಮೋದಿ ಅವರು ನುಡಿದಂತೆ ನಡೆದುಕೊಳ್ಳಲು ವಿಫಲರಾಗಿದ್ದಾರೆ. ಹೀಗಾಗಿ *ನಿರುದ್ಯೋಗ ದಿನ* ಆಚರಣೆ ಜತೆಗೆ ನಿರುದ್ಯೋಗಿ ಯುವಕರು ತಮ್ಮ ಪದವಿ ಪ್ರಮಾಣ ಪತ್ರವನ್ನು ಮೋದಿ ಅವರಿಗೆ ಹಿಂದಿರುಗಿಸಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಕರೆಕೊಟ್ಟಿದ್ದಾರೆ.
ಸದಾಶಿವನಗರ ನಿವಾಸದ ಬಳಿ ಮಾಧ್ಯಮಗಳಿಗೆ ಶನಿವಾರ ಪ್ರತಿಕ್ರಿಯೆ ನೀಡಿದ ಶಿವಕುಮಾರ್ ಅವರು ಹೇಳಿದ್ದಿಷ್ಟು;
‘ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ರಾಜಕಾರಣಿಗಳು ನುಡಿದಂತೆ ನಡೆಯಬೇಕು. ಅದೇ ನಮ್ಮ ನೀತಿ ಹಾಗೂ ಧರ್ಮ. ನಾವು ಜನರ ಸೇವೆ ಮಾಡಲು ಬಂದಿದ್ದು, ಕೊಟ್ಟ ಮಾತು ಉಳಿಸಿಕೊಳ್ಳಬೇಕು. ಇದನ್ನು ನಮ್ಮ ದೇಶ ಹಾಗೂ ನಾಡಿನ ಎಲ್ಲ ಧರ್ಮದಲ್ಲೂ ಬಸವಣ್ಣನವರ ಕಾಲದಿಂದಲೂ ನಾಯಕರು ಪ್ರತಿಪಾದಿಸಿಕೊಂಡು ಬಂದಿದ್ದಾರೆ.’
‘ಪ್ರಧಾನಿ ನರೇಂದ್ರ ಮೋದಿ ಅವರು ವರ್ಷಕ್ಕೆ 2 ಕೋಟಿ ಉದ್ಯೋಗ ನೀಡುತ್ತೇವೆ ಎಂದು ಮಾತು ಕೊಟ್ಟಿದ್ದರು. 2 ಕೋಟಿ ಸರ್ಕಾರಿ ಉದ್ಯೋಗ ನೀಡಲು ಸಾಧ್ಯವಾಗದಿದ್ದರೂ ಕನಿಷ್ಟ ಖಾಸಗಿ ಉದ್ಯೋಗಗಳಾದರೂ ಸೃಷ್ಟಿಯಾಗುವಂತೆ ಮಾಡಬೇಕಿತ್ತು. ಉದ್ಯೋಗ ಸೃಷ್ಟಿಗೆ ಅಗತ್ಯ ನೀತಿ ರೂಪಿಸಬೇಕಾಗಿತ್ತು.’
‘ಕೋವಿಡ್ ಸಂದರ್ಭದಲ್ಲಿ ದೇಶದಲ್ಲಿ 2 ಕೋಟಿ ಉದ್ಯೋಗ ನಷ್ಟವಾಗಿದೆ. ಸರ್ಕಾರ ಉದ್ಯೋಗ ಸೃಷ್ಟಿ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿ ಅವರ ಜನ್ಮದಿನವನ್ನು ನಮ್ಮ ಯೂಥ್ ಕಾಂಗ್ರೆಸ್ ವತಿಯಿಂದ ನಿರುದ್ಯೋಗ ದಿನವನ್ನಾಗಿ ಆಚರಣೆ ಮಾಡಿದ್ದಾರೆ. ಇದರಲ್ಲಿ ತಪ್ಪೇನಿದೆ?’
‘ಕೇವಲ ನಿರುದ್ಯೋಗ ದಿನ ಆಚರಣೆ ಮಾಡುವುದಷ್ಟೇ ಅಲ್ಲ, ಎಲ್ಲ ನಿರುದ್ಯೋಗಿ ಯುವಕರು ತಮ್ಮ ಪದವಿ ಪ್ರಮಾಣ ಪತ್ರವನ್ನು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹಿಂದಿರುಗಿಸಬೇಕು ಎಂದು ಕರೆ ನೀಡುತ್ತೇನೆ.’