IMG 20210923 WA0014

ಹಳ್ಳಿಗಳು ಅಭಿವೃದ್ಧಿಯಾದರೆ-ದೇಶ ಅಭಿವೃದ್ಧಿಯಾದಂತೆ ಕೇಂದ್ರ ಸಚಿವ: ಗಿರಿರಾಜ್ ಸಿಂಗ್..

Genaral STATE

ಹಳ್ಳಿಗಳು ಅಭಿವೃದ್ಧಿಯಾದರೆ-ದೇಶ ಅಭಿವೃದ್ಧಿಯಾದಂತೆ
ಕೇಂದ್ರ ಸಚಿವ: ಗಿರಿರಾಜ್ ಸಿಂಗ್

ಬೆಂಗಳೂರು, ಸೆಪ್ಟೆಂಬರ್ 23 (ಕರ್ನಾಟಕ ವಾರ್ತೆ):
ಭಾರತದ ಸರ್ಕಾರ ದೆಹಲಿಯಲ್ಲಿ ಕೇಂದ್ರೀಕೃತವಾಗಿದ್ದರೆ, ಗ್ರಾಮ ಪಂಚಾಯತಿಗಳ ಸರ್ಕಾರ ಗ್ರಾಮಗಳಲ್ಲಿ ಕೇಂದ್ರೀಕೃತವಾಗಿದ್ದು, ಕೇಂದ್ರ ಸರ್ಕಾರ ಗ್ರಾಮೀಣಾಭಿವೃದ್ಧಿಗಾಗಿ ಅತಿ ಹೆಚ್ಚಿನ ಅನುದಾನವನ್ನು ಒದಗಿಸುವ ಮೂಲಕ ಹಳ್ಳಿಗಳು ಅಭಿವೃದ್ಧಿಯಾದರೆ ದೇಶ ಅಭಿವೃದ್ಧಿಯಾದಂತೆ ಎಂಬ ಪ್ರಧಾನಿಗಳ ಕನಸಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಕೇಂದ್ರ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಗಿರಿರಾಜ್ ಸಿಂಗ್ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
ಇಂದು ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಭಾರತ ಸ್ವಾತಂತ್ರ್ಯೋತ್ಸವದ ಅಂಗವಾಗಿ ರಾಜ್ಯ ಸರ್ಕಾರ ಇತ್ತೀಚಿಗೆ ನೂತನವಾಗಿ ಘೋಷಿಸಿದ್ದ ಅಮೃತ ಗ್ರಾಮಪಂಚಾಯಿತಿ ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಸಚಿವರು ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಮಹನೀಯರ ಕನಸಾಗಿದ್ದ ಗ್ರಾಮ ಸ್ವರಾಜ್ಯದ ಕಲ್ಪನೆಯಲ್ಲಿ ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಗಾಗಿ ಮುಂದಾಗಿರುವ ರಾಜ್ಯ ಸರ್ಕಾರದ ಈ ಯೋಜನೆ ಅತ್ಯಂತ ಅರ್ಥಗರ್ಭಿತವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಶ್ಲಾಘಿಸಿದರು.
ಗ್ರಾಮಗಳ ಜೀವಾಳವಾಗಿರುವ ಕೃಷಿಕರ ಆರ್ಥಿಕ ಅಭಿವೃದ್ಧಿಯನ್ನು ಮುಖ್ಯವಾಗಿ ಗಮನದಲ್ಲಿಟ್ಟುಕೊಂಡು ಪ್ರಧಾನಮಂತ್ರಿಗಳು ರೈತರ ಆದಾಯ ದ್ವಿಗುಣಗೊಳಿಸುವ ಗುರಿಯನ್ನು ಸಾಕಾರಗೊಳಿಸುವಲ್ಲಿ ನಿರತರಾಗಿದ್ದಾರೆ, ಮಹಿಳಾ ಸಬಲೀಕರಣವನ್ನು ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ಹಮ್ಮಿಕೊಳ್ಳಲಾಗುತ್ತಿದೆ. ಮುಖ್ಯವಾಗಿ ಶಿಕ್ಷಣವನ್ನು ಗಮನದಲ್ಲಿರಿಸಿಕೊಂಡು ಹಳ್ಳಿಗಳ ಶಾಲೆಗಳ ಅಭಿವೃದ್ಧಿ ಹಾಗೂ ಇ-ಲೈಬ್ರರಿ ಸ್ಥಾಪನೆಗೆ ಮುಂದಾಗಿರುವುದು ತಳ ಮಟ್ಟದಿಂದ ಹಳ್ಳಿಗಳನ್ನು ಕಟ್ಟುವ ಕೆಲಸ ಈ ಯೋಜನೆಯಿಂದಾಗುತ್ತಿದೆ.

IMG 20210923 WA0018
ಈಗಾಗಲೇ ಕೇಂದ್ರ ಸರ್ಕಾರ ಉತ್ತಮ ಗ್ರಾಮ ಪಂಚಾಯಿತಿಗಳೆಂದು ಗುರುತಿಸಿ ಅವುಗಳ ಅಭಿವೃದ್ಧಿ ಕಾರ್ಯಗಳನ್ನು ದೇಶಾದ್ಯಂತ ಪ್ರಶಂಸಿಸಲು ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ. ಕರ್ನಾಟಕ ರಾಜ್ಯದ ಈ ನೂತನ ಯೋಜನೆ ದೇಶಕ್ಕೆ ಮಾದರಿಯಾಗಲಿ ಎಂದು ಹಾರೈಸಿದರು.
ಕಲಬುರಗಿಯಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಅಬ್ದುಲ್ ನಜೀರ್ ಸಾಬ್ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಂಸ್ಥೆಯ ಪ್ರಾದೇಶಿಕ ಕೇಂದ್ರವನ್ನು ಆನ್‍ಲೈನ್ ಮೂಲಕ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಗ್ರಾಮ ಪಂಚಾಯಿತಿಗಳ ಸ್ಥಾಪನೆಯ ಮೂಲಕ ಅಧಿಕಾರ ವಿಕೇಂದ್ರಿಕರಣಗೊಳಿಸಿ ದೇಶಕ್ಕೆ ಮಾದರಿಯಾದ ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆ ಮತ್ತು ಮಾಜಿ ಸಚಿವ ಅಬ್ದುಲ್ ನಜೀರ್ ಸಾಬ್ ಅವರ ಕೊಡುಗೆಯನ್ನು ಸ್ಮರಿಸಿ ಪ್ರಜೆಗಳು ಕೊಟ್ಟ ಅಧಿಕಾರವನ್ನು ಪ್ರಜಾಪ್ರಭುತ್ವದ ಅಡಿಯಲ್ಲಿ ಜನರಿಂದ, ಜನರಿಗಾಗಿ, ಜನರಿಗೋಸ್ಕರ ತಮ್ಮದೇ ಸರ್ಕಾರದಡಿಯಲ್ಲಿ ಗ್ರಾಮೀಣರು ತಮ್ಮ ಬದುಕನ್ನು ಕಟ್ಟಿಕೊಳ್ಳುವಂತಾಗಬೇಕು ಎಂದು ಹೇಳಿದರು.
ತಾವು ಮುಖ್ಯಮಂತ್ರಿಗಳಾಗಿ ಈ ಮಾತನ್ನು ಹೇಳುತ್ತಿಲ್ಲ, ಒಬ್ಬ ರೈತನ ಮಗನಾಗಿ ಹಾಗೂ ಸ್ವತಃ ರೈತನಾಗಿ ಈ ಮಾತನ್ನು ಹೇಳುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಬದುಕುವ ರೈತರ ಬದುಕು ಅಭಿವೃದ್ಧಿಯಾದಲ್ಲಿ ದೇಶ ಅಭಿವೃದ್ಧಿಯಾದಂತೆ. ಜನರ ಸಹಭಾಗಿತ್ವದಲ್ಲಿ ಪ್ರಜಾಪ್ರಭುತ್ವ ಯಶಸ್ವಿಯಾಗಲು ಸಾಧ್ಯ, ಜನರನ್ನು ಭಾಗೀದಾರರನ್ನಾಗಿಸಿಕೊಂಡು ಅಭಿವೃದ್ಧಿ ಮಾಡುವ ಈ ನೂತನ ಯೋಜನೆ ದೇಶಕ್ಕೆ ಮಾದರಿಯಾಗಲಿ ಎಂದರು.
ಕೆಳ ಹಂತದಿಂದ ಅಭಿವೃದ್ಧಿಯಾದರೆ ಮಾತ್ರ ಸಮಾಜದ ಕಟ್ಟಕಡೆಯ ಮನುಷ್ಯನನ್ನು ಸಹ ಮುಟ್ಟಲು ಸಾಧ್ಯ, ಕಳೆದ ಆಗಷ್ಟ್ 15 ರಂದು ಘೋಷಣೆ ಮಾಡಲಾಗಿದ್ದ ಈ ನೂತನ ಯೋಜನೆಯನ್ನು ಜಾರಿಗೆ ತರುತ್ತಿರುವ ಸಚಿವ ಈಶ್ವರಪ್ಪ ಮತ್ತು ಅಧಿಕಾರಿಗಳ ತಂಡ ನಿಜಕ್ಕೂ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿದೆ. ಮುಂದಿನ ಸಾಲಿನ ಮಾರ್ಚ್ ಅಂತ್ಯದೊಳಗೆ 750 ಗ್ರಾಮ ಪಂಚಾಯಿತಿಗಳ ಅಭಿವೃದ್ಧಿಯ ಈ ಯೋಜನೆಯನ್ನು ಪೂರ್ಣಗೊಳಿಸುವುದಾಗಿದೆ. ಈ ರೀತಿ ಸವಾಲಾಗಿ ಸ್ವೀಕರಿಸಿ ಈ ಯೋಜನೆಯನ್ನು ಯಶಸ್ವಿಗೊಳಿಸಿದ್ದಲ್ಲಿ ಮತ್ತೇ ಈ ಯೋಜನೆಯನ್ನು ರಾಜ್ಯದ 3000 ಗ್ರಾಮ ಪಂಚಾಯಿತಿಗಳಿಗೆ ವಿಸ್ತರಿಸುವುದಾಗಿದೆ ಎಂದು ತಿಳಿಸಿದರು.
ಪ್ರಸ್ತುತ ಈ ಯೋಜನೆಯಡಿಯಲ್ಲಿ ಘೋಷಿಸಲಾಗಿರುವ 750 ಗ್ರಾಮ ಪಂಚಾಯ್ತಿಗಳ ಅಭಿವೃದ್ಧಿಗಾಗಿ 2300 ಕೋಟಿ ರೂ. ಅನುದಾನ ನಿಗಧಿಪಡಿಸಲಾಗಿದೆ, ತಲಾ ಒಂದು ಗ್ರಾಮ ಪಂಚಾಯಿತಿಗೆ ಮೂರು ಕೋಟಿ ರೂ ಅನುದಾನ ಒದಗಿಸಲಾಗುತ್ತಿದೆ. ಗ್ರಾಮಗಳಲ್ಲಿ ಆರ್ಥಿಕ ಚಟುವಟಿಕೆಗಳಿಗೆ ಪೂರಕವಾಗಿ ಅಭಿವೃದ್ಧಿಯನ್ನು ಕೈಗೊಳ್ಳಬೇಕು, ಮುಖ್ಯವಾಗಿ ಮಹಿಳಾ ಸಬಲೀಕರಣವನ್ನು ಮಹಿಳಾ ಸ್ವ-ಸಹಾಯ ಗುಂಪುಗಳ ಮೂಲಕ ಹಮ್ಮಿಕೊಳ್ಳಲು ಯೋಜಿಸಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಮುಖ್ಯ ಗುರಿಯಾಗಿದ್ದು, ಇವರ ತಲಾ ಆದಾಯ ಹೆಚ್ಚಾದಲ್ಲಿ ರಾಜ್ಯದ ತಲಾ ಆದಾಯ ಸಹ ಹೆಚ್ಚಾಗುತ್ತದೆ. ಸಹಕಾರ ಕ್ಷೇತ್ರ ಗ್ರಾಮೀಣ ಭಾಗಗಳಲ್ಲಿ ಪ್ರಮುಖ ಪಾತ್ರವಹಿಸುತ್ತದೆ ಎಂಬುದನ್ನು ಮನಗಂಡು ಅದನ್ನು ಸಹ ಮುಖ್ಯವಾಗಿ ಪರಿಗಣಿಸಲಾಗಿದೆ.
ಹಳ್ಳಿಗಳಲ್ಲಿ ಪ್ರತಿ ಮನೆಗೆ ಕುಡಿಯುವ ನೀರು ಒದಗಿಸುವ ಗುರಿಯೊಂದಿಗೆ ಕಾರ್ಯನಿರ್ವಹಿಸುತ್ತಿರುವವರ ಕೇಂದ್ರ ಸರ್ಕಾರದ ಜಲಜೀವನ್ ಯೋಜನೆಗೆ ಈಗಾಗಲೇ 2000 ಕೋಟಿ ರೂ. ಅನುದಾನ ಬಿಡುಗಡೆ ಮಾಡಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸುವ ಪ್ರದಾನಿಗಳ ಉದ್ದೇಶದಂತೆ ಗ್ರಾಮಗಳಲ್ಲಿ ರೈತ ಸಹಕಾರ ಸಂಘಗಳ ಸ್ಥಾಪನೆಗೆ ಸರ್ಕಾರ ಮುಂದಾಗಿದೆ.

IMG 20210923 WA0015
ಒಟ್ಟಾರೆಯಾಗಿ ಹಳ್ಳಿಗಳ ಅಭಿವೃದ್ಧಿಗೆ ಮುಂದಾಗಿರುವ ರಾಜ್ಯ ಸರ್ಕಾರ, ಜನರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳ ಅಭಿವೃದ್ಧಿಗೆ ಅಲೆಯುವುದನ್ನು ತಪ್ಪಿಸಲು ರಾಜ್ಯದ 5 ಜಿಲ್ಲೆಗಳಲ್ಲಿ ಶೀಘ್ರದಲ್ಲಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಸಕಲ ಸರ್ಕಾರಿ ಸೇವೆಗಳನ್ನು ಒದಗಿಸುವ ನೂತನ ಯೋಜನೆಯನ್ನು ಪ್ರಾಯೋಗಿಕವಾಗಿ ಮುಂದಿನ ಜನವರಿಯಿಂದ ಜಾರಿಗೆ ತರಲು ಉದ್ದೇಶಿಸಿಲಾಗಿದೆ. ಗ್ರಾಮ ಪಂಚಾಯಿತಿಗಳು ಗ್ರಾಮ ಸೇವಾ ಸಂಸ್ಥೆಗಳಾಗಿ ಬದಲಾಯಿಸಲಾಗುವುದು, ಇದರಿಂದ ಜನರ ಮನೆ-ಮನೆಗೆ ಸೇವೆಯನ್ನು ಒದಗಿಸಲಾಗುವುದು ಎಂದು ಹೇಳಿದರು.
ಕರ್ನಾಟಕ ರಾಜ್ಯದ ಅಭಿವೃದ್ಧಿ ಯೋಜನೆಗಳ ವಸ್ತುಪ್ರದರ್ಶನವನ್ನು ಉದ್ಘಾಟಿಸಿ ಪ್ರಾಸ್ತಾವಿಕವಾಗಿ ಮಾತನಾಡಿದ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಅವರು ಇದೊಂದು ಐತಿಹಾಸಿಕ ಸಂದರ್ಭವಾಗಿದ್ದು, ಭಾರತಕ್ಕೆ ಸ್ವಾತಂತ್ರ್ಯ ಬಂದು 75ನೇ ಈ ವರ್ಷದಲ್ಲಿ ಅಮೃತ ಗ್ರಾಮ ಪಂಚಾಯಿತಿ ಯೋಜನೆಯ ಘೋಷಣೆ ಮಾಡಿರುವುದು ಅತ್ಯಂತ ಸಂತಸದ ವಿಷಯ ಎಂದು ಹೇಳಿದರು.
ದೇಶದ್ಯಾಂತ ಈ ಸಂದರ್ಭದಲ್ಲಿ ಹಲವು ಸರ್ಕಾರಗಳು ನೂರಾರು ಯೋಜನೆಗಳನ್ನು ಘೋಷಿಸಿವೆ, ಇಂತಹ ಸಂದರ್ಭದಲ್ಲಿ ನಮ್ಮ ಮುಖ್ಯಮಂತ್ರಿಗಳು ಸಹ 13 ಯೋಜನೆಗಳನ್ನು ಘೋಷಿಸಿದ್ದು, ಅದರಲ್ಲಿ 10 ಯೋಜನೆಗಳು ಗ್ರಾಮೀಣಾಭಿವೃದ್ಧಿಗೆ ಸಂಬಂಧಿಸಿದ್ದು, ಇಂತಹ ನಿರ್ಣಯವನ್ನು ಕೈಗೊಂಡಿರುವ ಮುಖ್ಯಮಂತ್ರಿಗಳ ಗ್ರಾಮೀಣ ಪ್ರೀತಿಯನ್ನು ತೋರಿಸುತ್ತದೆ ಅವರಿಗೆ ಅಭಿನಂದನೆಗಳು.

IMG 20210923 WA0016
ಗ್ರಾಮಗಳ ಸರ್ವಾಂಗಿಣ ಅಭಿವೃದ್ಧಿಗಾಗಿ ಮಹತ್ವವನ್ನು ನೀಡಲಾಗಿದ್ದು, ರಾಜ್ಯದ 6000 ಗ್ರಾಮ ಪಂಚಾಯಿತಿಗಳನ್ನು ಅಭಿವೃದ್ಧಿಪಡಿಸುವ ಉದ್ದೇಶದಿಂದ ಮೊದಲನೇ ಹಂತದಲ್ಲಿ ಅಮೃತ ಯೋಜನೆಯಡಿ 750 ಗ್ರಾಮ ಪಂಚಾಯಿತಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಗ್ರಾಮಗಳಲ್ಲಿ ಅವಶ್ಯವಿರುವ ಬೀದಿ ದೀಪ, ಕುಡಿಯುವ ನೀರು, ಘನ ತ್ಯಾಜ್ಯ ನಿರ್ವಹಣೆ ಸೇರಿದಂತೆ ಶಾಲೆಗಳ ಅಭಿವೃದ್ಧಿಯನ್ನು ಒಳಗೊಂಡಿರುತ್ತದೆ.
ಕೋವಿಡ್ ಕಾಲದಲ್ಲಿ ಸಹ ಗ್ರಾಮೀಣಾಭಿವೃದ್ಧಿ ಯೋಜನೆಯಡಿಯಲ್ಲಿ ಬಡವರಿಗೆ ಕೆಲಸ ಒದಗಿಸುವ ಮೂಲಕ ಕೂಲಿ ನೀಡಲಾಗಿದೆ, ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆ, ಗ್ರಾಮಗಳ ಕೆರೆಗಳು ಮತ್ತು ನೀರಿನ ಮೂಲಗಳ ಕಾರ್ಯಗಳನ್ನು ಕೈಗೆತ್ತಿಕೊಂಡು ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ.
ಪಂಚಾಯತ್ ರಾಜ್ಯ ವ್ಯವಸ್ಥೆಯನ್ನು ಬಲಪಡಿಸಲು ಹಲವು ಕ್ರಮಗಳನ್ನು ಕೈಗೊಳ್ಳಲಾಗಿದ್ದು, ರಾಜ್ಯದ ಗ್ರಾಮ ಪಂಚಾಯಿತಿಗಳಿಗೆ ಯಶಸ್ವಿಯಾಗಿ ಚುನಾವಣೆ ಪೂರ್ಣಗೊಳಿಸಲಾಗಿದ್ದು, ಚುನಾಯಿತರಾದ ಪ್ರತಿನಿಧಿಗಳಿಗೆ ಉತ್ತಮ ತರಬೇತಿಗಳನ್ನು ನೀಡಲಾಗುತ್ತಿದೆ. ಅದಿಕಾರಿ ಮತ್ತು ಚುನಾಯಿತರನ್ನು ಒಳಗೊಂಡ ಸಭೆಗಳನ್ನು ಹಮ್ಮಿಕೊಳ್ಳುವ ಮೂಲಕ ಗ್ರಾಮೀಣಾಭಿವೃದ್ಧಿಗಾಗಿ ಪಣ ತೊಡಲಾಗಿದೆ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಕೇಂದ್ರ ಸಚಿವರಿಗೆ ನರೆಗಾ ಯೋಜನೆಯಡಿ ರಾಜ್ಯಕ್ಕೆ 20000 ಮಾನವ ದಿನಗಳನ್ನು ಸೃಜಿಸಲು ಅವಕಾಶ ನೀಡಬೇಕು, ಕೇಂದ್ರದ ಗ್ರಾಮೀಣಾಭಿವೃದ್ಧಿ ಯೋಜನೆಯಡಿ ರಾಜ್ಯದ 17000 ಕಿ.ಮೀ ಗ್ರಾಮೀಣ ರಸ್ತೆಯನ್ನು ಅಭಿವೃದ್ಧಿಪಡಿಸಿ ಹಾಗೂ ನರೆಗಾ ಯೋಜನೆಯಡಿ ಶಾಲೆಗಳ ಅಭಿವೃದ್ಧಿ ಕಾರ್ಯವನ್ನು ಮಾಡಲು ಸರ್ಕಾರ ಅವಕಾಶ ಮಾಡಿಕೊಡಬೇಕು ಎಂದು ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಎನ್.ಆರ್..ಎಲ್.ಎಂ ಫಲಾನುಭವಿಗಳಿಗೆ ಸೌಲಭ್ಯ ಹಾಗೂ ಯಶಸ್ವಿಯಾಗಿ ತರಬೇತಿ ಪೂರ್ಣಗೊಳಿಸಿ ಉದ್ಯೋಗವನ್ನು ಪಡೆದಿರುವ ಯುವಕರಿಗೆ ಸಾಂಕೇತಿಕವಾಗಿ ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ರಿಜ್ವಾನ್ ಅರ್ಷದ್ ಅವರು ವಹಿಸಿದ್ದರು, ರಾಜ್ಯ ಸಚಿವ ಸಂಪುಟದ ಅನೇಕ ಸಚಿವರುಗಳು, ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಿದ್ದರು