ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು: ಬಂಡೆಪ್ಪ ಖಾಶೆಂಪುರ್
ಬೀದರ್ (ಸೆ.23): ಕೇಂದ್ರ, ರಾಜ್ಯ ಸರ್ಕಾರಗಳು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹೆಚ್ಚಿನ ಆದ್ಯತೆ ನೀಡಬೇಕು. ಈ ಭಾಗದ ಶಿಕ್ಷಣ ವ್ಯವಸ್ಥೆ, ಆರೋಗ್ಯ ವ್ಯವಸ್ಥೆಗೆ ಹೆಚ್ಚಿನ ಆದ್ಯತೆ ನೀಡುವ ಕೆಲಸವನ್ನು ಸರ್ಕಾರಗಳು ಮಾಡಬೇಕೆಂದು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಮನವಿ ಮಾಡಿದ್ದಾರೆ.
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಕಲಾಪದಲ್ಲಿ ಪಾಲ್ಗೊಂಡು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಸಂಬಂಧಿಸಿದ ವಿಷಯವಾಗಿ ಮಾತನಾಡಿದ ಅವರು, ಹೈದ್ರಾಬಾದ್ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿಯನ್ನು ಯಡಿಯೂರಪ್ಪರವರು ಮುಖ್ಯಮಂತ್ರಿಯಾಗಿದ್ದಾಗ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಮಂಡಳಿ ಎಂದು ಮರುನಾಮಕರಣ ಮಾಡಿದ್ದಾರೆ.
ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಕುಮಾರಸ್ವಾಮಿರವರು ಮುಖ್ಯಮಂತ್ರಿಯಾಗಿದ್ದಾಗ, ಹೈದ್ರಾಬಾದ್ ಕರ್ನಾಟಕ ಭಾಗವನ್ನು ಕಲ್ಯಾಣ ಕರ್ನಾಟಕ ಭಾಗವೆಂದು ನಾಮಕರಣ ಮಾಡುವಂತೆ ನಾವೆಲ್ಲರೂ ಸೇರಿ ಅವರಿಗೆ ಮನವಿ ಮಾಡಿದ್ದೇವು. ಹಾಗ ಅವರು ಮೊದಲು ಆ ಪ್ರದೇಶವನ್ನು ಕಲ್ಯಾಣಗೊಳಿಸೋಣ. ಅಭಿವೃದ್ಧಿಗೊಳಿಸುವ ಕೆಲಸ ಮಾಡೋಣ. ಕಲ್ಯಾಣಗೊಳಿಸಿದ ನಂತರ ಹೆಸರು ಇಡೋಣ ಎಂದು ಹೇಳಿದ್ದದ
ನಮ್ಮಲ್ಲಿ ಹೃದಯ ಶ್ರೀಮಂತಿಕೆ ಇದೆ. ಈ ಕಲಾಪದಲ್ಲಿ ಬಹಳಷ್ಟು ರಾಜಕೀಯ ವಿಚಾರಗಳು ಚರ್ಚೆಯಾಗ್ತಿವೆ. ನಂಜಂಡಪ್ಪ ವರದಿ ಆಧಾರದ ಮೇಲೆ ಬಜೆಟ್ ನೀಡುವುದು ಮೊದಲು ಬಂದ್ ಮಾಡ್ಬೇಕು. ಮರು ಸರ್ವೇ ಮಾಡಿಸಿ ಅನುದಾನ ಹಂಚಿಕೆ ಮಾಡಬೇಕು. ಹಿಂದೆ ನಮ್ಮ ಭಾಗದವರು ಹೋರಾಟ ಮಾಡಿದ ಕಾರಣದಿಂದಾಗಿ ನಮಗೆ 371ಜೆ ವಿಶೇಷ ಪ್ರಾತಿನಿಧ್ಯ ಸಿಕ್ಕಿದೆ. ಆದರೆ ಎಲ್ಲಾ ರೀತಿಯಲ್ಲಿಯೂ ಅಭಿವೃದ್ಧಿ ಆಗಬೇಕಾಗಿದೆ. ಕೇಂದ್ರ ಸರ್ಕಾರದಿಂದ ನಮ್ಮ ಭಾಗಕ್ಕೆ ಹೆಚ್ಚಿನ ಅನುದಾನ ದೊರೆಯುವಂತೆ ಮಾಡಿಕೊಡಬೇಕು.
ನಮ್ಮ ಭಾಗದಲ್ಲಿ ಶಿಕ್ಷಣ, ಆರೋಗ್ಯ ವ್ಯವಸ್ಥೆ ಸುಧಾರಣೆಯಾಗಬೇಕು. ನಮ್ಮ ಭಾಗದಲ್ಲಿ ದೊಡ್ಡ ಪ್ರಮಾಣದ ಕೈಗಾರಿಕೆಗಳು ಆಗಬೇಕು. ನಾನು ಈ ಹಿಂದೆ ಮಂತ್ರಿಯಾಗಿದ್ದಾಗ ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಲು ತಿಳಿಸಿದ್ದೆ. ದೆಹಲಿಗೆ ಹೋಗಿ ಅಲ್ಲಿನ ಶಾಲೆಗಳನ್ನು ನೋಡಿಕೊಂಡು ಬಂದು ನಮ್ಮ ಭಾಗದಲ್ಲಿನ ಶಾಲೆಗಳ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡಿದ್ದೆ.
ನಮ್ಮ ಭಾಗದ ಒಂದು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡಲು 1.50 ಕೋಟಿ ಅನುದಾನ ನೀಡಿದ್ದೆ. ನಮ್ಮ ಭಾಗದ 2.50 ಕೋಟಿ ಜನರ ಪರವಾಗಿ ನಾವು ಕೈಜೋಡಿಸಿ ಮನವಿ ಮಾಡುತ್ತೇವೆ. ನಮ್ಮ ಭಾಗಕ್ಕೆ ಸಂಬಂಧಿಸಿದಂತೆ ತಾರತಮ್ಯ ಮಾಡಬೇಡಿ. ಅಭಿವೃದ್ಧಿಗೆ ಆದ್ಯತೆ ನೀಡಿ ಎಂದು ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸರ್ಕಾರಕ್ಕೆ ಮನವಿ ಮಾಡಿದರು.