ಮಕ್ಕಳಿಗೆ ಶೀಘ್ರವೇ ಕೋವಿಡ್ ಲಸಿಕೆ- ಡಾ.ಸುಧಾಕರ್
ಬೆಂಗಳೂರು: ಅಕ್ಟೋಬರ್ ತಿಂಗಳಲ್ಲೇ ಮಕ್ಕಳಿಗೆ ಕೋವಿಡ್ ಲಸಿಕೆ ಸಿಗಲಿದೆ ಎಂದು ನಿರೀಕ್ಷಿಸಿರುವುದಾಗಿ ರಾಜ್ಯದ ಆರೋಗ್ಯ, ಕುಟುಂಬ ಕಲ್ಯಾಣ ಮತ್ತು ವೈದ್ಯಕೀಯ ಶಿಕ್ಷಣ ಸಚಿವರಾದ ಡಾ: ಕೆ ಸುಧಾಕರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಕರ್ತರೊಂದಿಗೆ ಮಾತನಾಡಿ, ಪ್ರಶ್ನೆಗಳಿಗೆ ಉತ್ತರಿಸಿದರು. ಝೈಡಸ್ ಡಿ ಮೂರನೇ ಹಂತದ ಟ್ರಯಲ್ ಈಗಾಗಲೇ ಕೊನೆಯ ಹಂತ ತಲುಪಿದೆ. ಇವತ್ತು ಅಥವಾ ನಾಳೆ ದರ ನಿಗದಿ ಆಗುವ ಸಾಧ್ಯತೆ ಇದೆ. ಅಂತಿಮವಾಗಿ ಕೇಂದ್ರ ಸರಕಾರ ಈ ಕುರಿತು ಪ್ರಕಟಿಸಲಿದೆ ಎಂದರು.
ಮಕ್ಕಳಲ್ಲಿ ಕೋವಿಡ್ ಪ್ರಮಾಣ ಆತಂಕಕಾರಿ ಆಗಿಲ್ಲ. ಶಾಲೆಗಳಲ್ಲಿ ಮಕ್ಕಳ ಚಟುವಟಿಕೆ ಕುರಿತು ಈಗಾಗಲೇ ಮಾರ್ಗಸೂಚಿಗಳನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅವರು ತಿಳಿಸಿದರು.
ಚಿತ್ರನಟ ಶಂಕರ್‍ನಾಗ್ ಅವರ ಹೆಸರನ್ನು ಮೆಟ್ರೋ ನಿಲ್ದಾಣಕ್ಕೆ ಇಡಬೇಕೆಂಬ ಕುರಿತ ಪ್ರಶ್ನೆಗೆ ಉತ್ತರ ನೀಡಿದ ಅವರು, ಜನರ ಆಶಯ- ಕೋರಿಕೆಯನ್ನು ಮುಖ್ಯಮಂತ್ರಿಗಳು ಆಲಿಸಿ ಪರಿಶೀಲಿಸಿ ನಿರ್ಧರಿಸಲಿದ್ದಾರೆ. ಈ ಕುರಿತು ಮುಖ್ಯಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರ ಜೊತೆ ಮಾತನಾಡುವುದಾಗಿ ಅವರು ತಿಳಿಸಿದರು.
ಎಲ್ಲರಿಗೂ ಕೋವಿಡ್ ಲಸಿಕೆ ನೀಡುವ ಮೊದಲೇ ದೊಡ್ಡ ಪ್ರಮಾಣದ ಸಭೆ, ಸಮಾರಂಭಕ್ಕೆ ಅವಕಾಶ ನೀಡಲು ಸಾಧ್ಯವಿಲ್ಲ ಎಂದ ಅವರು, ಕೇರಳ, ಮಹಾರಾಷ್ಟ್ರ ಮತ್ತಿತರ ಕಡೆ ಕೋವಿಡ್ ಪ್ರಮಾಣ ಕಡಿಮೆ ಆಗಿಲ್ಲ. ಆದ್ದರಿಂದ ಅಲ್ಲಿಂದ ಬಂದವರಿಗೆ ಕೋವಿಡ್ ನೆಗೆಟಿವ್ ಪ್ರಮಾಣಪತ್ರ ಪಡೆಯುವುದು ಅನಿವಾರ್ಯವೆನಿಸಿದೆ. ಮೂರನೇ ಅಲೆ ತಡೆಯುವ ಉದ್ದೇಶ ಇದರ ಹಿಂದಿದೆ ಎಂದರು.