2023ರ ಚುನಾವಣೆ: ಅಲ್ಪಸಂಖ್ಯಾತರಿಗೆ 25ಕ್ಕೂ ಹೆಚ್ಚು ಕ್ಷೇತ್ರ ಮೀಸಲು ಎಂದ ಹೆಚ್.ಡಿ.ಕುಮಾರಸ್ವಾಮಿ
ಕಲಬುರಗಿ: ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಅಲ್ಪಸಂಖ್ಯಾತರಿಗೆ 25ಕ್ಕಿಂತ ಹೆಚ್ಚು ವಿಧಾನಸಭೆ ಕ್ಷೇತ್ರಗಳನ್ನು ಮೀಸಲು ಇಡುವುದಾಗಿ ಜೆಡಿಎಸ್ ವರಿಷ್ಠ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಪ್ರಕಟಿಸಿದರು.
ಸಿಂಧಗಿಯಲ್ಲಿಂದು ಮಾಧ್ಯಮಗಳ ಜತೆ ಮಾತನಾಡಿದ ಅವರು; ನಮ್ಮ ಪಕ್ಷವನ್ನು ಬಲಪಡಿಸುವ ನಿಟ್ಟಿನಲ್ಲಿ ನಾನು ಬಿಡದಿಯಲ್ಲಿ ಏಳು ದಿನಗಳ ಕಾರ್ಯಾಗಾರ ನಡೆಸಿದ್ದೇನೆ. 2023 ಚುನಾವಣೆಗೆ ಮಿಷನ್ 123 ಗುರಿಯೊಂದಿಗೆ ಈ ಚುನಾವಣೆಯಲ್ಲಿ ಇಬ್ಬರು ಮುಸ್ಲೀಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡಿದ್ದೇನೆ. ಈ ಚುನಾವಣೆ ಜೆಡಿಎಸ್ ಪಾಲಿಗೆ 2023ರ ಹೋರಾಟಕ್ಕೆ ಇದು ಸೆಮಿಫೈನಲ್ ಎಂದರು.
ಯತ್ನಾಳ್ʼಗೆ ವಿಷಯ ಗೊತ್ತಿಲ್ಲ:
ಆರೆಸ್ಸೆಸ್ ಬಗ್ಗೆ ತಾವು ನೀಡಿರುವ ಹೇಳಿಕೆ ಬಗ್ಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಮಾಡಿರುವ ಟೀಕೆಗೆ ಉತ್ತರಿಸಿದ ಹೆಚ್ಡಿಕೆ; ನನ್ನ ಹೇಳಿಕೆಯನ್ನು ಯತ್ನಾಳ್ ಅವರು ಸರಿಯಾಗಿ ಅರ್ಥೈಸಿಕೊಂಡಿಲ್ಲ. ನಾನು ಓದಿದ ಪುಸ್ತಕದಲ್ಲಿ ಸಂತೋಷ್ ತನೇಜಾ ಎಂಬ ಪ್ರಚಾರಕ ಹೇಳಿರುವಂತೆ, ನಾಲ್ಕು ಸಾವಿರಕ್ಕೂ ಹೆಚ್ಚು ನಾಗರಿಕ ಸೇವಾ ಅಧಿಕಾರಿಗಳನ್ನು ವಿವಿಧ ಹಂತಗಳಲ್ಲಿ ನಾವು ತರಬೇತಿ ಕೊಟ್ಟು ತುಂಬಿದ್ದೇವೆ. ಪ್ರಧಾನಿ ನರೇಂದ್ರ ಮೋದಿ ಅವರು ಆಡಳಿತದ ಅಧಿಕಾರಗಳನ್ನು ಜನರಿಂದ ಆಯ್ಕೆಯಾದ ಮಂತ್ರಿಗಳಿಗೆ ನೀಡದೇ ಅಧಿಕಾರಿಗಳಿಗೆ ನೀಡಿದ್ದಾರೆ. ಅವರ ಹೇಳಿಕೆಯನ್ನೇ ಲೇಖಕರು ಪುಸ್ತಕದಲ್ಲಿ ಬರೆದಿದ್ದಾರೆ. ಅದನ್ನೇ ನಾನು ಓದಿ ಹೇಳಿದ್ದೇನೆ. ಎರಡು ದಿನಗಳಿಂದ ನನ್ನ ಮೇಲೆ ಮುಗಿಬಿದ್ದಿರುವ ನಾಯಕರು ಇದನ್ನು ಅರಿತುಕೊಳ್ಳಬೇಕು ಎಂದು ಎಂದರು.
ಮಂತ್ರಿಗಳಿಗೆ ಅಧಿಕಾರ ಇಲ್ಲ ಎಂದಾದ ಮೇಲೆ ಪ್ರಜಾಪ್ರಭುತ್ವ ಏಕೆ ಬೇಕು? ಚುನಾವಣೆ ಯಾಕೆ ಬೇಕು ಎಂದು ಅವರು, ಅಧಿಕಾರಿಗಳ ಮೂಲಕವೇ ಸರಕಾರ ನಡೆಸಬಹುದಲ್ಲ. ಇದು ಸಂವಿಧಾನದ ಮತ್ತು ಪ್ರಜಾಪ್ರಭುತ್ವದ ಆಶಯಕ್ಕೆ ವಿರುದ್ಧವಾದ ನಡೆ. ಅದರ ವಿರುದ್ಧವೇ ನಾನು ದನಿಯೆತ್ತಿದ್ದೇನೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ಬಿಜೆಪಿ ಅಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರು, ದೇವೇಗೌಡರ ಕುಟುಂಬ ರಾಜಕಾರಣವನ್ನು ಫ್ಯಾಮಿಲಿ ಬಿಸಿನೆಸ್ ಮಾಡಿಕೊಂಡಿದೆ ಎಂದು ಹೇಳಿರುವುದಕ್ಕೆ ಕಿಡಿ ಕಿಡಿಯಾದ ಹೆಚ್‌ಡಿಕೆ ಅವರು; ನಾವು ದುಡ್ಡು ಹೊಡೆಯೋಕೆ ರಾಜಕಾರಣ ಮಾಡುತ್ತಿಲ್ಲ. ಜನರ ಸೇವೆ ಮಾಡಲು ಮಾಡುತ್ತಿದ್ದೇವೆ. ಇದೇ ಯತ್ನಾಳ್ ಅವರು ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಏನೆಲ್ಲ ಹೇಳಿದ್ದರು ಅನ್ನುವುದು ಗೊತ್ತಲ್ಲವೆ ನಿಮಗೆ ಎಂದರು.
ನಾವು ಹಿಂಬಾಗಿಲಿನಿಂದ ನಾವು ರಾಜಕೀಯ ಪ್ರವೇಶ ಮಾಡಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದ್ದೇವೆ, ಗೆದ್ದಿದ್ದೇವೆ, ಸೋತಿದ್ದೇವೆ ಎಂದು ಅವರು ಹೇಳಿದರು.