ಬೆಂಗಳೂರು: ಅ.25: – ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯಲ್ಲಿ ಕಾಂಗ್ರೆಸ್ ಎರಡೂ ಕಡೆ ಗೆಲುವು ಸಾಧಿಸಲಿದೆ. ಜನ ಕಾಂಗ್ರೆಸ್ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಶಾಂತ ರೀತಿಯಲ್ಲಿ ಮತದಾನ ನಡೆಯುವುದಷ್ಟೇ ಬಾಕಿ.
ಈಗಾಗಲೇ ಸಾಕಷ್ಟು ಅಧಿಕಾರ ದುರುಪಯೋಗವಾಗುತ್ತಿದೆ. ಜನ ಪ್ರಜ್ಞಾವಂತರಿದ್ದು, ಇದನ್ನು ಜನ ಗಮನಿಸುತ್ತಿದ್ದಾರೆ. ನೂರಕ್ಕೆ ಶೇ. ಇನ್ನೂರಷ್ಟು ಖಚಿತವಾಗಿ ಎರಡೂ ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳು ಉತ್ತಮ ಬಹುಮತಗಳಿಂದ ನಮ್ಮ ಗೆಲ್ಲಲಿದ್ದಾರೆ.
ಸಿಎಂ ಸೇರಿದಂತೆ ಇಡೀ ಮಂತ್ರಿಮಂಡಲ ಹಾನಗಲ್ ನಲ್ಲಿ ಠಿಕಾಣಿ ಹೂಡಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಈಗಾಗಲೇ ವಿಧಾನಸೌಧಕ್ಕೆ ಬೀಗ ಹಾಕಲಾಗಿದೆ. ವಿಧಾನಸೌಧದಲ್ಲಿ ಒಬ್ಬ ಮಂತ್ರಿಯೂ ಇಲ್ಲ. ಬೇಕಾದರೆ ವಿಧಾನಸೌಧದ ಕಚೇರಿಗಳಿಗೆ ಹೋಗಿ ನೋಡಿ. ಮಂತ್ರಿಗಳು ಅಧಿಕಾರಿಗಳ ಜತೆ ಸಭೆ ನಡೆಸುತ್ತಿಲ್ಲ, ರಾಜ್ಯದ ಜನರ ಕಷ್ಟದ ಬಗ್ಗೆ ಚರ್ಚೆ ಇಲ್ಲ, ಅವರ ಬಗ್ಗೆ ಕಾಳಜಿ ಇಲ್ಲ. ಅಷ್ಟರಮಟ್ಟಿಗೆ ಅವರಿಗೆ ಉಪಚುನಾವಣೆ ಮುಖ್ಯವಾಗಿದೆ’ ಎಂದು ಉತ್ತರಿಸಿದರು.
ಬಿಜೆಪಿ ಈಗಾಗಲೇ ಗೆದ್ದಿದೆ ಎಂಬ ಮುಖ್ಯಮಂತ್ರಿಗಳ ಹೇಳಿಕೆಗೆ, ‘ಮುಖ್ಯಮಂತ್ರಿಗಳೇ ಫಲಿತಾಂಶ ಹೇಳಿದ ಮೇಲೆ ಇನ್ನೇನು ಮಾಡಲು ಸಾಧ್ಯ. ಅಧಿಕಾರ ಇದೆಯಲ್ಲಾ ಅದಕ್ಕೆ ದೊಡ್ಡ ಮಾತುಗಳಾಡುತ್ತಿದ್ದಾರೆ. ನಾವು ಚಿಕ್ಕವರಾಗಿ ಅವರ ಮಾತು ಕೇಳಿಸಿಕೊಳ್ಳುತ್ತೇವೆ’ ಎಂದು ತಿರುಗೇಟು ಕೊಟ್ಟರು.
ಮುಖ್ಯಮಂತ್ರಿಗಳು ಹಾನಗಲ್ ನಲ್ಲಿ ಸ್ವಾಮೀಜಿಗಳ ಸಭೆ, ಯಡಿಯೂರಪ್ಪನವರಿಂದ ಪ್ರಚಾರ ಮಾಡಿಸುತ್ತಿರುವ ಬಗ್ಗೆ ಕೇಳಿದ ಪ್ರಶ್ನೆಗೆ, ‘ಮುಖ್ಯಮಂತ್ರಿ ಆದವರು ಉಪಚುನಾವಣೆ ಸಂದರ್ಭದಲ್ಲಿ ಒಂದರಿಂದ ಎರಡು ಬಾರಿ ಪ್ರಚಾರ ಮಾಡೋದು ಸಾಮಾನ್ಯ. ಇವರು ಅಲ್ಲೇ ಕೂತಿದ್ದಾರೆ ಎಂದರೆ ಎಷ್ಟರ ಮಟ್ಟಿಗೆ ಅವರಿಗೆ ಭಯ ಉಂಟಾಗಿದೆ ಎಂಬುದು ಸ್ಫಷ್ಟವಾಗುತ್ತಿದೆಯಲ್ಲವೇ? ಅವರು ನುಡಿದಂತೆ ನಡೆದಿಲ್ಲ, ಹಿಂದೆಯೂ ಕೊಟ್ಟ ಮಾತು ಉಳಿಸಿಕೊಂಡಿಲ್ಲ. ಈಗ ಅವರು ಕೊಟ್ಟಿರುವ ಪ್ರಣಾಳಿಕೆ ನೋಡಿದರೆ ಆಯುಷ್ಮಾನ್ ಭಾರತದಿಂದ ಸರ್ಟಿಫಿಕೇಟ್ ಕೊಡುತ್ತಾರಂತೆ, ಈಗ ಶೌಚಾಲಯ ಕಟ್ಟಿಸಿಕೊಡುತ್ತಾರಂತೆ. ಈಗ ನಿವೇಶನ ಹಂಚಿ, ಮನೆ ಹಂಚುತ್ತಾರಂತೆ’ ಎಂದು ವ್ಯಂಗ್ಯವಾಡಿದರು.
ಹಾನಗಲ್ ಉಪಚುನಾವಣೆ ಕಣದಲ್ಲಿ ಬಿಜೆಪಿ ಅಭ್ಯರ್ಥಿಗಿಂತ ಸಿಎಂ ವರ್ಸಸ್ ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಎಂಬ ವಾತಾವರಣ ನಿರ್ಮಾಣವಾಗಿದೆಯೇ ಎಂಬ ಪ್ರಶ್ನೆಗೆ, ‘ಏನಾದರೂ ಆಗಲಿ, ನಮ್ಮ ಅಭ್ಯರ್ಥಿ ಮಾನೆ ಅವರಿಗೆ ಎಲ್ಲ ಜಾತಿ, ಧರ್ಮ, ವರ್ಗದ ಜನರ ಬೆಂಬಲ ಇದ್ದು, ಗೆಲ್ಲಲಿದ್ದಾರೆ’ ಎಂದರು.