“ಸಚಿವರ ನಡೆ ಹಳ್ಳಿಯ ಕಡೆ” ಕಾರ್ಯಕ್ರಮದ ಅನುಷ್ಠಾನ- ಬಿ.ಶ್ರೀರಾಮುಲು
ಬೆಂಗಳೂರು: ರಾಜ್ಯದ “ಸಚಿವರ ನಡೆ ಹಳ್ಳಿಯ ಕಡೆ” ಎಂಬ ಕಾರ್ಯಕ್ರಮವನ್ನು ಮುಂದಿನ ದಿನಗಳಲ್ಲಿ ಅನುಷ್ಠಾನಕ್ಕೆ ತರಲಾಗುವುದು ಎಂದು ರಾಜ್ಯದ ಸಮಾಜ ಕಲ್ಯಾಣ ಸಚಿವರಾದ ಶ್ರೀ ಬಿ. ಶ್ರೀರಾಮುಲು ಅವರು ತಿಳಿಸಿದರು.
ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಇಂದು ಭೇಟಿ ನೀಡಿದ ಸಂದರ್ಭದಲ್ಲಿ ಅವರು ಪತ್ರಕರ್ತರೊಂದಿಗೆ ಮಾತನಾಡಿದರು. ಸಚಿವರು ಪ್ರತಿ ಬುಧವಾರ ಮತ್ತು ಗುರುವಾರ ತಮಗೆ ನಿಗದಿ ಪಡಿಸಿದ ದಿನದಂದು ರಾಜ್ಯ ಕಾರ್ಯಾಲಯಕ್ಕೆ ಭೇಟಿ ನೀಡಿ, ಜನರ ಪರ ಕೆಲಸ ಮಾಡಬೇಕು. ಸಂಘಟನೆ ಮತ್ತು ಸೇವಾ ದೃಷ್ಟಿಯಿಂದ ಕೆಲಸ ಮಾಡಬೇಕೆಂದು ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ನಳಿನ್‍ಕುಮಾರ್ ಕಟೀಲ್ ಅವರು ಕೋರ್ ಕಮಿಟಿ ಸಭೆಯ ಸಂದರ್ಭದಲ್ಲಿ ಆದೇಶ ಮಾಡಿದ್ದಾರೆ. ಅದರಂತೆ ತಾವು ಇಂದು ಮಲ್ಲೇಶ್ವರದ ರಾಜ್ಯ ಬಿಜೆಪಿ ಕಾರ್ಯಾಲಯ “ಜಗನ್ನಾಥ ಭವನ”ಕ್ಕೆ ಭೇಟಿ ನೀಡಿದ್ದಾಗಿ ವಿವರಿಸಿದರು.
ಶ್ರೀ ಛಲವಾದಿ ನಾರಾಯಣಸ್ವಾಮಿ, ಶ್ರೀ ನೆ.ಲ.ನರೇಂದ್ರಬಾಬು, ಶ್ರೀ ವಿಶ್ವನಾಥ್, ಶ್ರೀ ಕರುಣಾಕರ ಅವರೊಂದಿಗೆ ಚರ್ಚೆ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಸರಕಾರವೇ ಹಳ್ಳಿಯಲ್ಲಿರುವ ಕಾರ್ಯಕರ್ತರ ಮನೆ ಬಾಗಿಲಿಗೆ ಹೋಗಿ ಸೇವೆ ಮಾಡುವ ಕುರಿತು ಚರ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಜನರು ಸರಕಾರವನ್ನು ಹುಡುಕಿ ಬರಬಾರದು. ಸರಕಾರವೇ ಜನರ ಬಳಿಗೆ ಹೋಗುವ ನಿಟ್ಟಿನಲ್ಲಿ ಕಾರ್ಯಕ್ರಮ ರೂಪಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಸಚಿವ ಸಂಪುಟದ ಎಲ್ಲಾ ಸಚಿವರು ಇನ್ನು ಮುಂದೆ ನಿಗದಿಯಾದ ದಿನದಂದು ಇಲ್ಲಿಗೆ ಭೇಟಿ ಕೊಡಲಿದ್ದಾರೆ. ಸರಕಾರದ ಯೋಜನೆಗಳು ಜನರನ್ನು ತಲುಪುವ ನಿಟ್ಟಿನಲ್ಲಿ ಇದು ಸಹಕಾರಿಯಾಗಲಿದೆ. ಪಕ್ಷದ ಸಂಘಟನೆಗೂ ಇದರ ಪ್ರಯೋಜನ ಲಭಿಸಲಿದೆ ಎಂದರು.
ಒಲಿಂಪಿಕ್ಸ್‍ನಲ್ಲಿ ಭಾಗವಹಿಸುತ್ತಿರುವ ರಾಜ್ಯದ ಮತ್ತು ದೇಶದ ಎಲ್ಲಾ ಕ್ರೀಡಾಪಟುಗಳಿಗೆ ಶುಭ ಹಾರೈಸುವುದಾಗಿ ಅವರು ತಿಳಿಸಿದರು.