ಬೆಂಗಳೂರು, ಅಕ್ಟೋಬರ್ 27 (ಕರ್ನಾಟಕ ವಾರ್ತೆ):
ರಾಜ್ಯದಲ್ಲಿ ರಸಗೊಬ್ಬರದ ಕೊರತೆ ಇಲ್ಲ, ರೈತರು ಯಾವುದೇ ಆತಂಕ ಪಡಬೇಕಾಗಿಲ್ಲ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ್ ಖೂಬಾ ಅವರು ತಿಳಿಸಿದರು.
ವಿಕಾಸಸೌಧದಲ್ಲಿ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಭಗವಂತ ಖೂಬಾ, ಕಳೆದ ಎರಡು ವರ್ಷದಲ್ಲಿ ಮಹಾರಾಷ್ಟ್ರ ಮಧ್ಯಪ್ರದೇಶ ಹಾಗೂ ಕರ್ನಾಟಕದ ಸ್ವಲ್ಪ ಭಾಗದಲ್ಲಿ ಕಾಂಪ್ಲೆಕ್ಸ್ ಗೊಬ್ಬರ ಬಳಕೆ ಹೆಚ್ಚಾಗಿದೆ. ಡಿಎಪಿ ಬದಲು, ಕಾಂಪ್ಲೆಕ್ಸ್ ಗೊಬ್ಬರ ಬಳಕೆಯಿಂದ ಉತ್ಪಾದನೆ ಹೆಚ್ಚಾಗುತ್ತಿದೆ. ಇದೇ ಕಾರಣಕ್ಕಾಗಿ ಸರ್ಕಾರ ಡಿಎಪಿ ಬದಲು ಕಾಂಪ್ಲೆಕ್ಸ್ ಗೊಬ್ಬರ ಖರೀದಿ ಮಾಡಲು ರೈತರಿಗೆ ಸೂಚಿಸಿದೆ ಎಂದು ತಿಳಿಸಿದರು.
ರಸಗೊಬ್ಬರದ ಕೊರತೆ ಉಂಟಾಗುತ್ತದೆ ಎನ್ನುವ ಸುಳ್ಳು ಸುದ್ದಿಗೆ ಆತಂಕಗೊಂಡ ರೈತರು ಮುಂದಿನ ನಾಲ್ಕು ತಿಂಗಳಿಗೆ ಬೇಕಾಗುವಷ್ಟು ಗೊಬ್ಬರ ಸಂಗ್ರಹಕ್ಕೆ ಮುಂದಾಗುತ್ತಿದ್ದು, ಇದರಿಂದ ದಲ್ಲಾಳಿಗಳ ಹಾವಳಿ ಹೆಚ್ಚಾಗಿದೆ. ಕಾಳಸಂತೆಯಲ್ಲಿ ರಸಗೊಬ್ಬರಕ್ಕೆ ಮಾರಾಟಕ್ಕೆ ಅವಕಾಶ ಕೊಡಬಾರದು. ನಾನು ಇಲಾಖೆಯ ಜವಾಬ್ದಾರಿ ಸಚಿವನಾಗಿ ರೈತರಿಗೆ ಧೈರ್ಯ ತುಂಬುವ ಪ್ರಯತ್ನ ಮಾಡಲು ಬಂದಿದ್ದೇನೆ ಎಂದು ಸ್ಪಷ್ಟಪಡಿಸಿದರು.
ಈ ವರ್ಷ ಮಳೆ ಹೆಚ್ಚಳವಾಗಿದ್ದರಿಂದ ರೈತರು ಹೆಚ್ಚಿನ ಪ್ರಮಾಣದಲ್ಲಿ ಗೊಬ್ಬರ ಖರೀದಿ ಮಾಡುತ್ತಿದ್ದಾರೆ. ಚೀನಾ ರಸಗೊಬ್ಬರ ರಫ್ತು ಸ್ಥಗಿತಗೊಳಿಸಿದೆ. ಅಮೇರಿಕಾದಲ್ಲಿ ಸೈಕ್ಲೋನ್ ಬಂದಿರುವುದರಿಂದ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ.ಈ ವರ್ಷ ಆತ್ಮನಿರ್ಭರ ಭಾರತ ಅಡಿಯಲ್ಲಿ ನ್ಯಾನೊ ಯುರಿಯಾ ಉತ್ಪಾದನೆ ಹೆಚ್ಚಾಗಿದೆ. ಮುಂದಿನ ವರ್ಷ ನ್ಯಾನೊ ಡಿಎಪಿ ಉತ್ಪಾದನೆ ಮಾಡಲಾಗುವುದು. ಯೂರಿಯಾ ರಾಜ್ಯದಲ್ಲಿ 22 ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಎಂ ಒ ಪಿ 29. ಲಕ್ಷ ಮೆಟ್ರಿಕ್ ಟನ್ ಲಭ್ಯವಿದೆ. ಮೈಸೂರು ಭಾಗದಲ್ಲಿ ಸ್ವಲ್ಪ ಕೊರತೆಯಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಅದಕ್ಕೆ ಕೇಂದ್ರದಿಂದ 3 ಸಾವಿರ ಮೆಟ್ರಿಕ್ ಟನ್ ತರಿಸಲು ಸೂಚನೆ ನೀಡಿದ್ದೇನೆ ಎಂದು ತಿಳಿಸಿದರು.
ರಬಿ ಸಸನ್ ನಲ್ಲಿ 2. ಲಕ್ಷ ಮೆಟ್ರಿಕ್ ಟನ್ ಡಿಎಪಿ ಬೇಕಾಗಲಿದೆ. ಅದನ್ನು ಉತ್ಪಾದನೆ ಮಾಡಲಾಗುವುದು. ಎರಡು ಕಾರ್ಖಾನೆಗಳಲ್ಲಿ ಉತ್ಪಾದನೆಗೆ ಕ್ರಮ ಕೈಗೊಂಡಿದ್ದೇವೆ. ಮುಂಗಾರು ಹಂಗಾಮಿನಲ್ಲಿ ರಾಜ್ಯಾದ್ಯಂತ ಉತ್ತಮ ಮಳೆಯಾಗಿದ್ದು, 78.51 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಬಿತ್ತನೆಯಾಗಿದೆ. ಬಿತ್ತನೆಗೆ ಅವಶ್ಯವಿರುವ ಪರಿಕರಗಳ ಸರಬರಾಜನ್ನು ರಾಜ್ಯದಿಂದ ಸಮರ್ಪಕವಾಗಿ ಮಾಡಲಾಗಿದೆ. ರಸಗೊಬ್ಬರಗಳನ್ನು ಕೇಂದ್ರ ಸರ್ಕಾರದ ಹಂಚಿಕೆಯಂತೆ ಜಿಲ್ಲೆಗಳಿಗೆ ಸರಬರಾಜು ಮಾಡಲು ಕ್ರಮವಹಿಸಲಾಗಿದೆ.
2021-22 ರ ಸಾಲಿನ ಹಿಂಗಾರು/ಬೇಸಿಗೆ ಹಂಗಾಮಿಗೆ (ಅಕ್ಟೋಬರ್-2021 ರಿಂದ ಮಾರ್ಚ್ 2022ರವರೆಗೆ) 16.94 ಲಕ್ಷ ಮೆಟನ್ (ಯೂರಿಯಾ-6.50 ಲಕ್ಷ ಮೆ.ಟನ್, ಡಿಎಪಿ 2.10 ಲಕ್ಷ ಮೆ.ಟನ್, ಎಂಒಪಿ-1.17 ಲಕ್ಷ ಮೆಟನ್ ಮತ್ತು ಕಾಂಪ್ಲೆಕ್ಸ್ 7.17 ಲಕ್ಷ ಮೆಟನ್) ಪ್ರಮಾಣದ ವಿವಿಧ ಗ್ರೇಡ್ ಗಳ ರಸಗೊಬ್ಬರದ ಬೇಡಿಕೆಯಿರುತ್ತದೆ.2021-22 ನೇ ಸಾಲಿನ ಹಿಂಗಾರು ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 28 ಲಕ್ಷ ಹೆಕ್ಟೇರ್ ಗೆ ಪ್ರತಿಯಾಗಿ ಅಕ್ಟೋಬರ್ 26 ರವರೆಗೆ 5.02 ಲಕ್ಷ ಹೆಕ್ಟೇರ್ ವಿಸ್ತೀರ್ಣದಲ್ಲಿ ಶೇ.18 ಬಿತ್ತನೆಯಾಗಿದೆ.
2021-22 ನೇ ಸಾಲಿನ ಬೇಸಿಗೆ ಹಂಗಾಮಿನಲ್ಲಿ ಕೃಷಿ ಬೆಳೆಗಳ ಪ್ರಸ್ತಾವಿತ ಬಿತ್ತನೆ ಗುರಿ 5.00 ಲಕ್ಷ ಹೆಕ್ಟೇರ್ ಇರುತ್ತದೆ. ನೇರ ರಸಗೊಬ್ಬರದ ಬದಲಿಗೆ ಕಾಂಪ್ಲೆಕ್ಸ್ ರಸಗೊಬ್ಬರದಲ್ಲಿ ಸಮತೋಲಿತ ಪೋಷಕಾಂಶಗಳೊಂದಿಗೆ ತ್ವರಿತವಾಗಿ ಬೆಳೆಗಳಿಗೆ ಲಭ್ಯವಾಗುವ ಕಾರಣ ಪ್ರಸ್ತುತ ನೇರ ರಸಗೊಬ್ಬರದ ಬದಲಾಗಿ ಕಾಂಪ್ಲೆಕ್ಸ್ ರಸಗೊಬ್ಬರವನ್ನು ಬಳಕೆ ಮಾಡಲು ರೈತರಿಗೆ ಪ್ರೋತ್ಸಾಹಿಸಲಾಗಿದ್ದು, ಈ ಬಗ್ಗೆ ರೈತರಿಗೆ ಮನವರಿಗೆ ಮಾಡಲಾಗಿದೆ ಎಂದರು.