IMG 20211114 WA0018

BJP : ಕಾಂಗ್ರೆಸ್ ಶಾಸಕರ ಮಕ್ಕಳನ್ನು ಬಂಧಿಸಲು ಆಗ್ರಹ….!

POLATICAL STATE

ಕಾಂಗ್ರೆಸ್ ಶಾಸಕರ ಮಕ್ಕಳನ್ನು ಬಂಧಿಸಲು ಅಶ್ವತ್ಥನಾರಾಯಣ್ ಆಗ್ರಹ
ಬೆಂಗಳೂರು: ಆಧಾರರಹಿತ ಆರೋಪ ಕಾಂಗ್ರೆಸ್ ಚಾಳಿ. ಈ ಸಂಬಂಧ ಶಾಮೀಲಾದ ಆರೋಪ ಹೊತ್ತ ಕಾಂಗ್ರೆಸ್ ಶಾಸಕರ ಮಕ್ಕಳನ್ನು ಬಂಧಿಸಿ ತನಿಖೆಗೆ ಒಳಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ವಿಧಾನಪರಿಷತ್ ಮಾಜಿ ಸದಸ್ಯರಾದ ಅಶ್ವತ್ಥನಾರಾಯಣ್ ಅವರು ಆಗ್ರಹಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್‍ನವರು ಕಪ್ಪು ಹಣ ಸಕ್ರಮಗೊಳಿಸಲು ಬಿಟ್ ಕಾಯಿನ್‍ನಲ್ಲಿ ಹೂಡಿರುವ ಸಾಧ್ಯತೆ ಇದೆ. ಅದರ ಕುರಿತು ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದರು. ಕಾಂಗ್ರೆಸ್‍ನವರದು ಸಾಕ್ಷ್ಯಾಧಾರ ನಾಶ, ತನಿಖೆ ಹಾದಿ ತಪ್ಪಿಸುವಲ್ಲಿ ಎತ್ತಿದ ಕೈ. ಡಿ.ಕೆ.ರವಿ ಸಾವಿನ ಪ್ರಕರಣದಲ್ಲೂ ಇದೇ ಆಗಿದೆ. ಕಾಂಗ್ರೆಸ್ ಸುಳ್ಳು ಅಪಪ್ರಚಾರದ ತನ್ನ ಚಾಳಿಯನ್ನು ಬಿಡಲಿ ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿಯಾದ ಬಸವರಾಜ ಬೊಮ್ಮಾಯಿಯವರು 100 ದಿನ ಅತ್ಯುತ್ತಮ ಕಾರ್ಯಕ್ರಮ ನೀಡಿದ್ದಾರೆ. ಅವರದು ಜನಪರ- ಜನಪ್ರಿಯ ಆಡಳಿತ. ಇದನ್ನು ತಡೆದುಕೊಳ್ಳಲಾಗದೆ ಕಾಂಗ್ರೆಸ್‍ನವರು ಅನಗತ್ಯ ಹಾಗೂ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷವು ರಚನಾತ್ಮಕ ಸಹಕಾರದ ಬದಲಾಗಿ ಹತಾಶೆಯ ಟೀಕೆಗೆ ತನ್ನನ್ನು ಸೀಮಿತಗೊಳಿಸಿದೆ ಎಂದು ಆರೋಪಿಸಿದರು.
ದೆಹಲಿಯಲ್ಲಿ ಕಾಂಗ್ರೆಸ್ ರಾಜ್ಯದ ಪ್ರಭಾರಿಯಾದ ಸುರ್ಜೇವಾಲಾ ಅವರಿಗೆ ಡಿ.ಕೆ.ಶಿವಕುಮಾರ್ -ಸಿದ್ದರಾಮಯ್ಯ ಒಳಜಗಳ ತಡೆಯಲು ಸಾಧ್ಯವಾಗಿಲ್ಲ. ಬದಲಾಗಿ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ. ನಮ್ಮ ಪ್ರಶ್ನೆಗೆ ಉತ್ತರ ನೀಡಿಲ್ಲ. ರಫೇಲ್ ಖರೀದಿ ಒಪ್ಪಂದದಲ್ಲಿ ಕಮಿಷನ್ ಸಂಬಂಧ 10 ವರ್ಷ ವಿಳಂಬ ಮಾಡಿದ್ದ ಕಾಂಗ್ರೆಸ್ಸಿಗರು ಈಗ ಕರ್ನಾಟಕ ಸರಕಾರದ ಬಗ್ಗೆ ಅನಪೇಕ್ಷಿತ ಟೀಕೆ ಹಾಗೂ ಆಧಾರರಹಿತ ಆರೋಪದಲ್ಲಿ ತೊಡಗಿದ್ದಾರೆ ಎಂದರು,
ಬಸವರಾಜ ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಡ್ರಗ್ಸ್ ಮಾಫಿಯಾ ಭೇದಿಸಿದ್ದರು. ಅದೊಂದು ದಿಟ್ಟ ಕ್ರಮ. ಡ್ರಗ್ಸ್ ಮಾಫಿಯಾ ಹಿಂದೆ ಕಾಂಗ್ರೆಸ್ ಕಡೆ ಬೆಟ್ಟು ಮಾಡುವಂಥ ಸ್ಥಿತಿ ಇದೆ. ಬಿಟ್ ಕಾಯಿನ್ ಶ್ರೀಕಿಯನ್ನು ಬೊಮ್ಮಾಯಿ ಅವರು ಗೃಹ ಸಚಿವರಾಗಿದ್ದಾಗ ಬಂಧಿಸಲಾಗಿತ್ತು. ಕಾಂಗ್ರೆಸ್ ಶಾಸಕರ ಮಕ್ಕಳು, ಮಾಜಿ ಸಚಿವರ ಮೇಲೆ ಬರುವ ಆರೋಪಗಳನ್ನು ತಡೆಯಲು ಆ ಪಕ್ಷದವರು ತಂತ್ರಗಾರಿಕೆ ರೂಪಿಸುತ್ತಿದ್ದಾರೆ ಎಂದು ಆಕ್ಷೇಪಿಸಿದರು.
ಸುರ್ಜೇವಾಲಾ ಅವರು ನಲಪಾಡ್, ಲಮಾಣಿ ಮಗನ ಬಗ್ಗೆಮಾತನಾಡಿಲ್ಲ. ಬಿಟ್ ಕಾಯಿನ್ ಹ್ಯಾಕ್, ಕಳ್ಳತನ ಬಗ್ಗೆ ಸಂಬಂಧಿತ ಕಂಪೆನಿಗಳಿಗೆ ಪತ್ರ ಬರೆದರೂ ಉತ್ತರ ಬಂದಿಲ್ಲ ಎಂದು ತಿಳಿದಿದ್ದರೂ ಅವರು ಮತ್ತು ರಾಜ್ಯದ ಕಾಂಗ್ರೆಸ್ಸಿಗರು ವೃಥಾ ಆಧಾರರಹಿತವಾಗಿ ಮಾತನಾಡುತ್ತಿದ್ದಾರೆ ಎಂದರು.
ಎಸ್.ಸಿ. ಮೋರ್ಚಾ ರಾಜ್ಯ ಅಧ್ಯಕ್ಷರು ಹಾಗೂ ರಾಜ್ಯ ವಕ್ತಾರರಾದ ಛಲವಾದಿ ನಾರಾಯಣಸ್ವಾಮಿ ಅವರು ಮಾತನಾಡಿ, ಕಾಂಗ್ರೆಸ್ಸಿಗರು ಪತ್ರಿಕಾಗೋಷ್ಠಿಗಳಲ್ಲಿ ಪುರಾಣ ಓದಿ ಹೋಗಿದ್ದರು. ಇದು ಕೇವಲ ಪುರಾಣ ಪಠಣ. ಇದೇ ಪುರಾಣವÀನ್ನು ಸುರ್ಜೇವಾಲಾರವರು ಇಂಗ್ಲಿಷ್, ಹಿಂದಿಯಲ್ಲಿ ತಿಳಿಸಿದ್ದಾರೆ. 2,500 ಕೋಟಿಯ ಬಿಟ್ ಕಾಯಿನ್ ಹಗರಣ ಎಂದು ಮೌಲ್ಯವರ್ಧಿತವಾಗಿ ಬಣ್ಣಿಸಿದ್ದಾರೆ ಎಂದು ಆರೋಪಿಸಿದರು.
ಸುರ್ಜೇವಾಲಾ ಅವರು ಫಲಾನುಭವಿಗಳ ವಿವರ ಕೊಡಲಿ. ನಿಮ್ಮ ಕಾಲದಲ್ಲಿ ಶ್ರೀಕಿಯನ್ನು ಬಂಧಿಸಿ ಬಿಟ್ಟದ್ಯಾಕೆ? ಎಂದು ಪ್ರಶ್ನಿಸಿದರು. ಬಿಟ್ ಕಾಯಿನ್‍ನದು ಕೇವಲ ಪುರಾಣವೇ ಹೊರತು ಅದಕ್ಕೆ ಪುರಾವೆಗಳಿಲ್ಲ. ಬಿಟ್ ಕಾಯಿನ್ ಕೇವಲ ಹಿಮದಂತಿದೆ. ಅದನ್ನು ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದು ವಿವರಿಸಿದರು.
ಕಾಂಗ್ರೆಸ್‍ನ ಪ್ರಿಯಾಂಕ್ ಖರ್ಗೆ ಅವರು ನಮ್ಮ ಟೀಕೆಗಳಿಗೆ ಉತ್ತರ ಕೊಟ್ಟಿಲ್ಲ. 2016-17ರಲ್ಲಿ ಅವರು ಐಟಿಬಿಟಿ ಸಚಿವರಾಗಿದ್ದರು. ಶ್ರೀಕಿಯನ್ನು ಆಗ ಬಿಟ್ಟು ಕಳಿಸಿಯೂ ಆಗಿತ್ತು. ಹೋಟೆಲ್ ಅಶೋಕದಲ್ಲಿ ನಡೆದ ಕಾರ್ಯಾಗಾರದಲ್ಲಿ ಸಚಿವರಾದ ಪ್ರಿಯಾಂಕ್ ಖರ್ಗೆ ಅವರು ಬಿಟ್ ಕಾಯಿನ್ ಬಗ್ಗೆ ತಿಳಿದುಕೊಂಡಿದ್ದರು. ಬಿಟ್ ಕಾಯಿನ್, ಕ್ರಿಪ್ಟೊ ಕರೆನ್ಸಿ ಬಗ್ಗೆ ತಿಳಿದುಕೊಂಡು ಅದನ್ನು ಬಚ್ಚಿಟ್ಟದ್ದು ಯಾಕೆ? ಸಿದ್ದರಾಮಯ್ಯ ಅವರ ಮೂಗಿನ ಕೆಳಗೆ, ನಿಮ್ಮ ಅಧಿಕಾರದಲ್ಲೇ ಇದು ನಡೆದುದಲ್ಲವೇ ಎಂದು ಪ್ರಶ್ನೆ ಹಾಕಿದರು.
ಬಸವರಾಜ ಬೊಮ್ಮಾಯಿಯವರು ಉತ್ತರ ಹೆಸರು ತರುವುದನ್ನು ಸಿದ್ದರಾಮಯ್ಯರಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದರಲ್ಲದೆ, ನಿಮಗೆ ಧೈರ್ಯ ಇದ್ದರೆ, ರಾಜಕೀಯ ಪ್ರಜ್ಞೆ ಇದ್ದರೆ ಸಣ್ಣತನದ ರಾಜಕೀಯ ಬಿಟ್ಟು ಹೆಸರುಗಳನ್ನು ಹೇಳಿ ಎಂದು ಸವಾಲೆಸೆದರು. ಕಾಂಗ್ರೆಸ್ ಪಕ್ಷದವರು ಬೇರೆಯವರ ಹೆಗಲ ಮೇಲೆ ಗನ್ ಇಟ್ಟು ಗುಂಡು ಹಾರಿಸಬಾರದು ಎಂದು ತಿಳಿಸಿದರು.
ರಾಜ್ಯ ಕಾರ್ಯಕಾರಿಣಿ ಸದಸ್ಯರಾದ ವಿವೇಕ್ ರೆಡ್ಡಿ ಅವರು ಮಾತನಾಡಿ, ಕಾಂಗ್ರೆಸ್ ಪಕ್ಷವು ಬಿಟ್ ಕಾಯಿನ್ ವಿಚಾರದಲ್ಲಿ ರಫೇಲ್ ಮಾರ್ಗವನ್ನೇ ತುಳಿಯುತ್ತಿದೆ. ಕಾಂಗ್ರೆಸ್ ಆರೋಪಗಳಿಗೆ ಆಧಾರಗಳಿಲ್ಲ. ಅದು ಕೇವಲ ಗಾಳಿಸುದ್ದಿ ಅಷ್ಟೇ ಎಂದರು.
ಸುರ್ಜೇವಾಲಾ ಅವರದು ಕೇವಲ ಗಾಳಿಗೋಪುರವಷ್ಟೇ. ಹಿಟ್ ಆಂಡ್ ರನ್ ಮಾತುಗಳವು. ಶ್ರೀಕಿ ತಪ್ಪೊಪ್ಪಿಗೆ ಹೇಳಿಕೆಯನ್ನು ಕೋರ್ಟ್ ಮುಂದಿಡಲಾಗಿದೆ. ತನಿಖೆಯ ಹಾದಿ ತಪ್ಪಿಸಲು ಕಾಂಗ್ರೆಸ್‍ನವರು ಈ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.