IMG 20211126 WA0004

ಎಫ್‌ಐಆರ್‌ ದಾಖಲಿಸಿರುವುದು ಲಿಂಬಾವಳಿ ಹತಾಶರಾಗಿರುವುದರ ಸಂಕೇತ….!

POLATICAL STATE


*ಎಫ್‌ಐಆರ್‌ ದಾಖಲಿಸಿರುವುದು ಲಿಂಬಾವಳಿ ಹತಾಶರಾಗಿರುವುದರ ಸಂಕೇತ: ಮಾಜಿ ಶಾಸಕ ಎಚ್‌.ಡಿ.ಬಸವರಾಜು*

ಶಾಸಕ ಅರವಿಂದ್‌ ಲಿಂಬಾವಳಿಯವರು ತಮ್ಮ ಕ್ಷೇತ್ರವನ್ನು “ರಿಪಬ್ಲಿಕ್‌ ಆಫ್‌ ಮಹದೇವಪುರ” ಮಾಡಿಕೊಂಡು ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದು, ಅನ್ಯಾಯವನ್ನು ಪ್ರಶ್ನಿಸುವವರನ್ನು ತುಳಿಯಲು ಅವರು ಯಾವ ಮಟ್ಟಕ್ಕಾದರೂ ಇಳಿಯುತ್ತಾರೆ ಎನ್ನುವುದಕ್ಕೆ ಎಎಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಿಸಿರುವುದೇ ಸಾಕ್ಷಿ ಎಂದು ಆಮ್‌ ಆದ್ಮಿ ಪಾರ್ಟಿಯ ಹಿರಿಯ ಮುಖಂಡ ಹಾಗೂ ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಾಜಿ ಶಾಸಕರಾದ ಎಚ್‌.ಡಿ.ಬಸವರಾಜು, “ರಾಜಕಾಲುವೆ ಒತ್ತುವರಿಯಿಂದಾಗಿ ಜುನ್ನಸಂದ್ರ ಹಾಗೂ ಹಾಲನಾಯಕನಹಳ್ಳಿ ಜನರು ತೀವ್ರ ತೊಂದರೆ ಅನುಭವಿಸುತ್ತಿರುವುದನ್ನು ಖಂಡಿಸಿ ನ. 21ರಂದು ಆಮ್‌ ಆದ್ಮಿ ಪಾರ್ಟಿ ಪಾದಯಾತ್ರೆ ನಡೆಸಿತ್ತು. ಇದಕ್ಕೆ ಸ್ಥಳೀಯರಿಂದ ಉತ್ತಮ ಬೆಂಬಲ ವ್ಯಕ್ತವಾಗಿತ್ತು. ಇದರಿಂದ ವಿಚಲಿತರಾಗಿರುವ ಶಾಸಕ ಲಿಂಬಾವಳಿಯವರು ಪೊಲೀಸ್‌ ಅಧಿಕಾರಿಗಳ ಮೇಲೆ ಒತ್ತಡ ಹೇರಿ ಎಎಪಿ ಮುಖಂಡರ ವಿರುದ್ಧ ಎಫ್‌ಐಆರ್‌ ದಾಖಲಾಗುವಂತೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಎಎಪಿಯು ದಿನದಿಂದ ದಿನಕ್ಕೆ ಪ್ರಬಲಗೊಳ್ಳುತ್ತಿರುವುದಕ್ಕೆ ಲಿಂಬಾವಳಿ ಎಷ್ಟು ಹತಾಶರಾಗಿದ್ದಾರೆ ಎನ್ನುವುದು ಇದರಿಂದಲೇ ಸ್ಪಷ್ಟವಾಗುತ್ತದೆ” ಎಂದು ಹೇಳಿದರು.

IMG 20211126 WA0005

ಆಮ್‌ ಆದ್ಮಿ ಪಾರ್ಟಿಯ ವಕೀಲರ ವಿಭಾಗದ ಹಿರಿಯ ಮುಖಂಡರಾದ ಜಗದೀಶ್ ಮಹದೇವ್ ರವರು ಮಾತನಾಡಿ, “ಆಮ್‌ ಆದ್ಮಿ ಪಾರ್ಟಿಯ ಮುಖಂಡರಾದ ಮನೋಹರ್‌ ರೆಡ್ಡಿ, ಅಶೋಕ್‌ ಮೃತ್ಯುಂಜಯ, ಮೋಹನ್‌ ದಾಸರಿ, ಜಗದೀಶ್‌ ವಿ. ಸದಂ ಹಾಗೂ ಇತರರನ್ನು ಪ್ರಕರಣದಲ್ಲಿ ಆರೋಪಿ ಮಾಡಲಾಗಿದೆ. ಮಕ್ಕಳು ಪಾದಯಾತ್ರೆಯಲ್ಲಿ ಭಾಗವಹಿಸಿರುವುದನ್ನು ಮಹಾಪರಾಧ ಎಂಬಂತೆ ಬಿಂಬಿಸಿ, ಅದಕ್ಕೆ ಎಎಪಿ ಮುಖಂಡರನ್ನು ಹೊಣೆ ಮಾಡಲಾಗಿದೆ. ರಾಜಕಾಲುವೆ ಒತ್ತುವರಿಯಿಂದ ಮಕ್ಕಳು ಆಟವಾಡುವ ಜಾಗದಲ್ಲೂ ನೀರು ನಿಂತಿದ್ದು, ಇದರಿಂದ ನೊಂದ ಮಕ್ಕಳು ಪೋಷಕರೊಂದಿಗೆ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು. ತೆರಿಗೆ ಕಟ್ಟುವ ಮೂಲಕ ದೇಶದ ಏಳಿಗೆಗೆ ಕೊಡುಗೆ ನೀಡುತ್ತಿರುವ ಪ್ರಜ್ಞಾವಂತ ನಾಗರಿಕರು ಪಾಲ್ಗೊಂಡಿದ್ದರು. ಅನ್ಯಾಯದ ವಿರುದ್ಧ ಪ್ರತಿಭಟಿಸುವ ಹಕ್ಕು ಮಕ್ಕಳು ಸೇರಿದಂತೆ ಎಲ್ಲರಿಗೂ ಇದೆ ಎಂಬುದನ್ನು ಲಿಂಬಾವಳಿ ಅರ್ಥ ಮಾಡಿಕೊಳ್ಳಬೇಕು” ಎಂದರು.

ಬೆಂಗಳೂರು ನಗರ ಎಎಪಿಯ ಕಾನೂನು ಘಟಕದ ಅಧ್ಯಕ್ಷರಾದ ಮಂಜುನಾಥ್‌ ಸ್ವಾಮಿ ಮಾತನಾಡಿ, “ಸ್ವಾತಂತ್ರ್ಯ ಪೂರ್ವದಲ್ಲಿ ಯಾರಾದರೂ ಅನ್ಯಾಯವನ್ನು ಪ್ರಶ್ನಿಸಿದರೆ, ಅವರ ವಿರುದ್ಧ ಬ್ರಿಟಿಷರು ಇಲ್ಲಸಲ್ಲದ ಆರೋಪ ಹೊರಿಸಿ ಕಿರುಕುಳ ನೀಡುತ್ತಿದ್ದರು. ಸ್ವಾತಂತ್ರ ಸಿಕ್ಕಿ 75 ವರ್ಷದ ನಂತರವೂ ಲಿಂಬಾವಳಿ ಕ್ಷೇತ್ರದಲ್ಲಿ ಅದೇ ಪರಿಸ್ಥಿತಿ ಇರುವುದು ದುರಂತ. ಮಹದೇವಪುರ ಕ್ಷೇತ್ರವನ್ನು ರಿಪಬ್ಲಿಕ್‌ ಆಫ್‌ ಮಹದೇವಪುರ ಮಾಡಿಕೊಂಡು ಜನರ ಭಾವನೆಯನ್ನು ತುಳಿದು ಲಿಂಬಾವಳಿ ಸರ್ವಾಧಿಕಾರಿಯಂತೆ ಮೆರೆಯುತ್ತಿದ್ದಾರೆ. ಅನ್ಯಾಯದ ವಿರುದ್ಧ ಹೋರಾಡಲು ಹಾಗೂ ಜನರ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಿಕೊಡಲೆಂದೇ ಹುಟ್ಟಿಕೊಂಡಿರುವ ಪಕ್ಷ ಆಮ್‌ ಆದ್ಮಿ ಪಾರ್ಟಿ. ಇಂತಹ ಯಾವುದೇ ಕುತಂತ್ರಗಳಿಗೆ ನಾವು ಬಗ್ಗುವುದಿಲ್ಲ ಎನ್ನುವುದನ್ನು ಶಾಸಕ ಲಿಂಬಾವಳಿ ಹಾಗೂ ಗೃಹ ಸಚಿವ ಆರಗ ಜ್ಞಾನೇಂದ್ರ ತಿಳಿದುಕೊಳ್ಳಬೇಕು. ಮಕ್ಕಳಿಗಾಗಿ, ಜನಸಾಮಾನ್ಯರಿಗಾಗಿ ಜೈಲಿಗೆ ಹೋಗಲೂ ನಾವು ಸದಾ ಸಿದ್ಧ” ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಉಪಾಧ್ಯಕ್ಷರುಗಳಾದ ಸುರೇಶ್ ರಾಥೋಡ್, ಬಿ.ಟಿ.ನಾಗಣ್ಣ, ಮುಖಂಡರುಗಳಾದ ಜಗದೀಶ್ ಚಂದ್ರ , ಶರತ್‌ ಖಾದ್ರಿ, ವಿಜಯ್‌ ಶಾಸ್ತ್ರಿಮಠ್‌ ಉಪಸ್ಥಿತರಿದ್ದರು.