*ವಿವಿಧ ಪಕ್ಷಗಳ ಮುಖಂಡರು ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿ ಡಿ.ಕೆ ಶಿವಕುಮಾರ್ ಅವರ ಮಾತುಗಳು:*
ಬೆಂಗಳೂರು:- ಕಾಂಗ್ರೆಸ್ ಪಕ್ಷದಲ್ಲಿ ದೊಡ್ಡ ಸಂಚಲನ ಶುರುವಾಗಿದೆ. ಕಾಂಗ್ರೆಸ್ ಜಾತ್ರೆ ಪ್ರಾರಂಭವಾಗಿದೆ. ಗ್ರಾಮೀಣ ಪ್ರದೇಶದಲ್ಲಿ ಕೆಲಸ ಮಾಡಿದ ನಾಯಕರನ್ನು ಇಂದು ಪಕ್ಷಕ್ಕೆ ಸೇರಿಸಿಕೊಳ್ಳುತ್ತಿದ್ದೇವೆ.
ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವ ಮನೋಹರ್ ಅವರು ಕೋಲಾರ ಜಿಲ್ಲೆಯ ಸ್ಥಳೀಯ ಸಂಸ್ಥೆಗಳ ಪ್ರತಿನಿಧಿಗಳ ಆಯ್ಕೆಯಾಗಿದ್ದರು. ಅವರ ಸದಸ್ಯತ್ವ ಚಾಲ್ತಿಯಲ್ಲಿದ್ದರೂ ಆ ಸ್ಥಾನಕ್ಕೆ ರಾಜೀನಾಮೆ ನೀಡಿ, ಕಾಂಗ್ರೆಸ್ ಪಕ್ಷಕ್ಕೆ ಯಾವುದೇ ಷರತ್ತು ಇಲ್ಲದೆ ಸೇರುತ್ತಿದ್ದಾರೆ. ಇವರ ಸೇರ್ಪಡೆ ಮಾಹಿತಿಯನ್ನು ದೆಹಲಿ ವರಿಷ್ಠರಿಗೂ ತಲುಪಿಸಲಾಗಿದೆ.
ಮನೋಹರ್ ರವರು ಕೇವಲ ಕೋಲಾರ ಜಿಲ್ಲೆ ಮಾತ್ರವಲ್ಲದೆ ಬೆಂಗಳೂರು ನಗರದಲ್ಲೂ ಅಪಾರ ಅಭಿಮಾನಿಗಳ ಬಳಗ ಹೊಂದಿದ್ದಾರೆ. ಆರು ವರ್ಷಗಳಿಂದ ಕೋಲಾರ ವಿಧಾನ ಪರಿಷತ್ ಸದಸ್ಯರಾಗಿ ಅವರು ಸೇವೆ ಸಲ್ಲಿಸಿದ್ದಾರೆ. ಕಾಂಗ್ರೆಸ್ ಸೇರುತ್ತಿರುವ ಅವರನ್ನು ನಿಮ್ಮೆಲ್ಲರ ಪರವಾಗಿ ಅಭಿನಂದಿಸುತ್ತೇನೆ.
ಮತ್ತೊಬ್ಬ ಪ್ರಮುಖ ನಾಯಕರು, ನಾವು ವಿದ್ಯಾರ್ಥಿ ನಾಯಕರಾಗಿದ್ದಾಗ ಹೆಚ್ಚು ಹೆಸರು ಮಾಡಿದ್ದ ಮಾಲೂರು ನಾಗರಾಜ್ ಅವರು 15 ವರ್ಷ ಜಿಲ್ಲಾ ಅಧ್ಯಕ್ಷರಾಗಿ 3 ಬಾರಿ ಶಾಸಕರಾಗಿ ಕೆಲಸ ಮಾಡಿದವರು. ಅವರು ಬಿಜೆಪಿಗೆ ಸೇರಿದ್ದರು. ಆದರೆ ಎಲ್ಲ ವರ್ಗದ ಜನರ ರಕ್ಷಣೆ ಕಾಂಗ್ರೆಸ್ ನಿಂದ ಮಾತ್ರ ಸಾಧ್ಯ ಎಂದು ಮನವರಿಕೆ ಆಗಿ ಮತ್ತೆ ಪಕ್ಷಕ್ಕೆ ಹಿಂತಿರುಗುತ್ತಿದ್ದಾರೆ. ಅವರನ್ನು ಸಂತೋಷದಿಂದ ಬರಮಾಡಿಕೊಳ್ಳುತ್ತೇನೆ.
ಹಿಂದುಳಿದ ವರ್ಗದ ಪ್ರಮುಖ ನೇತಾರರಾದ ಗೋಪಿಕೃಷ್ಣರವರು ತರಿಕೆರೆ ವಿಧಾನಸಭಾ ಕ್ಷೇತ್ರದಲ್ಲಿ ಎರಡು ಬಾರಿ ಕಡಿಮೆ ಅಂತರದಲ್ಲಿ ಪರಾಭವಗೊಂಡವರು. ಅವರ ಶ್ರೀಮತಿ ಅನಸೂಯಮ್ಮನವರು ಜಿಲ್ಲಾ ಪಂಚಾಯಿತಿ ಸದಸ್ಯರು. ಇವರನ್ನು ಕಳೆದ ಚುನಾವಣೆ ಸಮಯದಲ್ಲೇ ಪಕ್ಷಕ್ಕೆ ಸೇರಿಸಿಕೊಳ್ಳಲು ಪ್ರಯತ್ನಿಸಿದ್ದೆ. ಅವರು ಕೂಡ ಮಡಿವಾಳ ಸಮುದಾಯದ ನಾಯಕರು. ಅವರಿಗೂ ಸ್ವಾಗತ ಬಯಸುತ್ತೇನೆ.
ಅಮರನಾಥ್ ಅವರು ನಮ್ಮ ಜತೆ ಕೆಲಸ ಮಾಡಿದವರು. ರಾಜ್ಯ ಒಬಿಸಿ ಘಟಕದ ಅಧ್ಯಕ್ಷರು. ಜೆಡಿಎಸ್ ನಿಂದ ಕಾಂಗ್ರೆಸ್ ಗೆ ಬರುತ್ತಿದ್ದಾರೆ. ಅವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ. ನಂಜಪ್ಪನವರು ಬಿಜೆಪಿಯಿಂದ ಕಾಂಗ್ರೆಸ್ ಸೇರುತ್ತಿದ್ದಾರೆ. ಇವರು ಮಡಿವಾಳರ ಸಂಘದ ರಾಜ್ಯ ಅಧ್ಯಕ್ಷರು. ಅವರಿಗೂ ಪಕ್ಷಕ್ಕೆ ಸ್ವಾಗತಿಸುತ್ತೇನೆ. ಮಾಲೂರಿನ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರಾದ ವೆಂಕಟೇಶ್ ರವರನ್ನು ಪಕ್ಷಕ್ಕೆ ಸ್ವಾಗತಿಸುತ್ತೇನೆ.
ಮಳಬಾಗಿಲಿನ ಜಿಲ್ಲಾ ಪಂಚಾಯಿತಿ ಸದಸ್ಯರಾದ ಶಂಕರಪ್ಪನವರು, ಮಂಡ್ಯ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ವೆಂಕಟಪ್ಪ, ಮಂಡ್ಯದ ಜಿಲ್ಲಾ ಪಂಚಾಯಿತಿ ಪ್ರಮುಖರು ಡಾ. ಕೃಷ್ಣ, ಹೆಚ್ಎಎಲ್ ಕಾರ್ಮಿಕ ಮುಖಂಡರಾದ ದೇವರಾಜ್, ಶ್ರೀರಂಗಪಟ್ಟಣದ ರಾಜು ಅವರು ಸೇರಿದಂತೆ ಹಲವರು ನಾಯಕರು ಬಿಜೆಪಿ ಹಾಗೂ ಜೆಡಿಎಸ್ ನಿಂದ ಕಾಂಗ್ರೆಸ್ ಪಕ್ಷ ಸೇರುತ್ತಿದ್ದಾರೆ.
ಇವರೆಲ್ಲರೂ ಯಾವುದೇ ಷರತ್ತು ಇಲ್ಲದೆ ಪಕ್ಷ ಸೇರುತ್ತಿದ್ದಾರೆ. ಇದಲ್ಲದೆ ರಾಜ್ಯದುದ್ದಗಲಕ್ಕೆ ಅನೇಕ ಜಿಲ್ಲೆಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು, ಮುಖಂಡರು ಪಕ್ಷಕ್ಕೆ ಸೇರುತ್ತಿದ್ದಾರೆ. ನಮ್ಮ ಪಕ್ಷದ ಸಿದ್ಧಾಂತ ಹಾಗೂ ನಾಯಕತ್ವದ ಮೇಲೆ ನಂಬಿಕೆ ಇಟ್ಟುಕೊಂಡು ಪಕ್ಷ ಸೇರುತ್ತಿರುವ ಎಲ್ಲರಿಗೂ ಸ್ವಾಗತ ಬಯಸುತ್ತೇನೆ.
ಯಾರಿಗೂ ಕೂಡ ಹೊಸಬರು, ಹಳಬರು ಎಂಬ ಚಿಂತೆ, ಬೇಧ ಬೇಡ. ನಮ್ಮ ಮನೆ ಸೇರಿದ ಮೇಲೆ ನೀವು ವ್ಯಕ್ತಿ ಪೂಜೆ ಬಿಟ್ಟು ಪಕ್ಷ ಪೂಜೆ ಮಾಡಿ. ಪಕ್ಷದ ಕೆಲಸ ಮಾಡಿ.
ರಾಜ್ಯದಲ್ಲಿ ಕಾಂಗ್ರೆಸ್ ಗಾಳಿ ಬೀಸುತ್ತಿದೆ. ಉಪಚುನಾವಣೆ ಹಾಗೂ ಪರಿಷತ್ ಚುನಾವಣೆಯಲ್ಲಿ ನಾವೆಲ್ಲರೂ ಹೋರಾಟ ಮಾಡಬೇಕು. ಮುಂದಿನ ದಿನಗಳಲ್ಲಿ ಕಾರ್ಯಕರ್ತರು ಎಲ್ಲ ಹಂತದಲ್ಲೂ ಕೆಲಸ ಮಾಡಬೇಕು.
ಡಿ. 10 ರಂದು ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ಚುನಾವಣೆ ಮುಗಿಯಲಿದ್ದು, 11 ರಿಂದ ಅವರವರ ಬೂತ್ ಮಟ್ಟದಲ್ಲಿ ಸದಸ್ಯರಾಗಬೇಕು. 13 ರಿಂದ ಬೆಳಗಾವಿ ಅಧಿವೇಶನ ನಡೆಯಲಿದೆ. ಹೀಗಾಗಿ 11 ರಂದು ಶನಿವಾರ ಬೆಳಗ್ಗೆ 11 ಗಂಟೆಗೆ ಎಲ್ಲ ಪ್ರಮುಖ ನಾಯಕರು ನಿಮ್ಮ ಬೂತ್ ಮಟ್ಟದಲ್ಲಿ ಸದಸ್ಯತ್ವ ಪಡೆಯಬೇಕು.
ಸಾಮಾಜಿಕ ಜಾಲತಾಣ ತಂಡ ಜೂಮ್ ಮೂಲಕ ಕೆಪಿಸಿಸಿ ಹಾಗೂ ಎಐಸಿಸಿಗೆ ಸಂಪರ್ಕ ಕಲ್ಪಿಸಲಿದೆ.
ಇನ್ನು ಪಕ್ಷದ ವತಿಯಿಂದ ಜನಜಾಗೃತಿ ಕಾರ್ಯಕ್ರಮ ಆರಂಭ ಮಾಡಬೇಕು. ಮೇಕೆದಾಟು ಯೋಜನೆಗೆ ಆಗ್ರಹಿಸಿ ಜನವರಿ ಮೊದಲ ವಾರ ಪಾದಯಾತ್ರೆ ಆಯೋಜಿಸುತ್ತೇವೆ. ದಿನಾಂಕವನ್ನು ಶೀಘ್ರದಲ್ಲೇ ತಿಳಿಸಲಾಗುವುದು. ಈ ಯೋಜನೆ ಕೇವಲ ಬೆಂಗಳೂರಿಗೆ ಮಾತ್ರವಲ್ಲ ಮಂಡ್ಯ, ತುಮಕೂರು, ಕೋಲಾರ, ಚಿಕ್ಕಬಳ್ಳಾಪುರ, ಚಾಮರಾಜನಗರ, ಬೆಂಗ್ಳೂರಿಗೂ ಕುಡಿಯುವ ನೀರು, ವಿದ್ಯುತ್ ಗೆ ಅನುಕೂಲವಾಗಲಿದೆ.
ಪಾದಯಾತ್ರೆಯಲ್ಲಿ ಬರಲು ಬಯಸುವವರು ತಮ್ಮ ಹೆಸರು ನೋಂದಣಿ ಮಾಡಿಸಬೇಕು. ಜಿಲ್ಲಾ ಮಟ್ಟದ ನಾಯಕರು ಆಯಾ ಜಿಲ್ಲೆಯಿಂದ ಬರುವವರ ಮಾಹಿತಿ ನೀಡಬೇಕು. ಚುನಾವಣೆ ಮುಗಿದ ಬಳಿಕ ಸಂಪೂರ್ಣ ಮಾಹಿತಿ ನೀಡುತ್ತೇನೆ.
ಸ್ಥಳೀಯ ಮಟ್ಟದಲ್ಲಿ ಯಾವುದೇ ಷರತ್ತು ಇಲ್ಲದೆ ಯಾರೆಲ್ಲಾ ಪಕ್ಷ ಸೇರ್ಪಡೆಗೆ ಬಯಸುತ್ತಾರೋ ಅವರ ಅರ್ಜಿಯನ್ನು ಬ್ಲಾಕ್, ಜಿಲ್ಲಾ ಅಥವಾ ರಾಜ್ಯ ಮಟ್ಟದ ಸಮಿತಿಗೆ ಕಳುಹಿಸಿಕೊಡಿ.