*ಸೈಬರ್ ಅಪರಾಧಿಗಳ ವಿರುದ್ಧ ಯಾವುದೇ ರಾಜಿ ಇಲ್ಲದೇ ಕಠಿಣ ಕ್ರಮ : ಸಿಎಂ*
ಬೆಂಗಳೂರು, ಡಿಸೆಂಬರ್ 11 :ಸೈಬರ್ ಅಪರಾಧಿಗಳ ವಿರುದ್ಧ ಯಾವುದೇ ರಾಜಿ ಇಲ್ಲದೇ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೈಬರ್ ಸುರಕ್ಷಿತ ಕರ್ನಾಟಕ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಇಂದು ಮಾತನಾಡಿದರು.
ಸೈಬರ್ ಕ್ರೈಂ ನ ವಂಚನೆಗೊಳಗಾದವರು ತಮ್ಮ ಮೊಬೈಲ್ಗೆ ಎಲೆಕ್ಟ್ರಾನಿಕ್ ರೂಪದಲ್ಲಿ ಬರುವ ಸಿ ಐ ಆರ್ ನಂಬರನ್ನು ಬ್ಯಾಂಕಿಗೆ ತಿಳಿಸಿದ ತಕ್ಷಣ ವಂಚನೆಗೊಳಗಾದವರು ಹಾಗೂ ಅಪರಾಧಿಗಳಿಗೆ ಸೇರಿದ ಎಲ್ಲಾ ಖಾತೆಗಳು ತಕ್ಷಣ ಫ್ರೀಜ್ ಆಗುವ ವ್ಯವಸ್ಥೆಯನ್ನು ಈಗ್ ಕಲ್ಪಿಸಲಾಗಿದೆ. ಈ ಪ್ರಯತ್ನ ದೇಶದಲ್ಲಿ ನಮ್ಮ ರಾಜ್ಯದಲ್ಲಿ ಪ್ರಥಮವಾಗಿ ಆಗಿದೆ ಎಂದು ತಿಳಿಸಿದರು.
ಡ್ರಗ್ ದಂಧೆ, ಮಾನವ ಕಳ್ಳಸಾಗಾಣಿಕೆ, ಮದ್ದುಗುಂಡುಗಳು ಅಪರಾಧಗಳಿಗೆ ಸೈಬರ್ ಕ್ರೈಂ ಮೂಲವಾಗಿದೆ. ಸೈಬರ್, ಆರ್ಥಿಕ ಹಾಗೂ ಡ್ರಗ್ ದಂಧೆಯ ಅಪರಾಧಗಳು ಒಂದಕ್ಕೊಂದು ಸಂಬಂಧಿಸಿದೆ. ಸೈಬರ್ ಅಪರಾಧಿಗಳಿಗಿಂತ ವೇಗವಾಗಿ ಕ್ರೈಂ ನ್ನು ಪತ್ತೆಹಚ್ಚಬೇಕಿದೆ. ಸೈಬರ್ ಕ್ರೈಂ ಜಾಲ ದೊಡ್ಡದಿರುವುದರಿಂದ ಸೈಬರ್ ಸುರಕ್ಷತೆಯ ಜಾಲವನ್ನು ವಿಸ್ತರಿಸಬೇಕು. ಈ ನಿಟ್ಟಿನಲ್ಲಿ ಭಾರತ ಸರ್ಕಾರದ ಸಹಕಾರವನ್ನೂ ಪಡೆಯುವ ಸಲಹೆಯನ್ನು ಮುಖ್ಯಮಂತ್ರಿಗಳು ನೀಡಿದರು.
*ಯುವಕರಿಗೆ ಕರೆ :*
ಡಿಜಿಟಲ್ ಜ್ಞಾನ ಒಂದು ಅಸ್ತ್ರ. ಸಾಮಾಜಿಕ ಹೊಣಗಾರಿಕೆಯಿಂದ ಈ ಜ್ಞಾನದ ಸದ್ಬಳಕೆ ಮಾಡಿಕೊಂಡು ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ಯುವಕರಿಗೆ ಕರೆ ಮುಖ್ಯಮಂತ್ರಿಗಳು ಕರೆ ನೀಡಿದರು.
ಅಪರಾಧಗಳು ಮುಂದಿದ್ದು, ನಂತರ ಕಾನೂನು ರಚಿಸಿದಾಗ ಸಮಾಜ ಸುಭದ್ರವಾಗಿರುವುದಿಲ್ಲ. ನಾವು ಸಾಮಾಜಿಕ, ಆರ್ಥಿಕ ಹಾಗೂ ವೈಜ್ಞಾನಿಕ ಸುವ್ಯವಸ್ಥೆಯ ಬಗ್ಗೆ ಚಿಂತಿಸಬೇಕು. ಅದರ ಪರಿಣಾಮಗಳ ಆಧಾರಗಳ ಮೇಲೆ ಕಾನೂನು , ಅನುಷ್ಠಾನ ಹಾಗೂ ಕ್ರಿಯಾಯೋಜನೆಗಳು ಇರಬೇಕು. ಈ ರೀತಿ ನಾವು ಅಪರಾಧಗಳನ್ನು ತಡೆಯಬಹುದಾಗಿದೆ ಎಂದು ತಿಳಿಸಿದರು.
*ಡಿಜಿಟಲ್ ಸುರಕ್ಷತೆ ಬಹಳ ಮುಖ್ಯ:*
ಭೌತಿಕವಾಗಿ ನಡೆಯುವ ಅಪರಾಧಗಳಲ್ಲಿ ಬಹಳಷ್ಟು ಪುರಾವೆಗಳು ದೊರೆಯುತ್ತವೆ. ಆದರೆ ಸೈಬರ್ ಅಪರಾಧಗಳಲ್ಲಿ ಬಹಳ ಕಡಿಮೆ ಹಾಗೂ ಕಠಿಣವಾಗಿರುತ್ತದೆ. ಬ್ಯಾಂಕ್ ಖಾತೆಗಳಲ್ಲಾಗುವ ಸೈಬರ್ ಕ್ರೈಂಗಳಲ್ಲಿ ಖಾತೆಯಲ್ಲಿನ ಹಣವನ್ನು ವಿವಿಧ ಖಾತೆಗಳಲ್ಲಿ ಹಾಕಿ ಹಣ ಲಪಟಾಯಿಸಿರುವ ಅನೇಕ ಪ್ರಕರಣಗಳು ನನ್ನ ಗಮನಕ್ಕೆ ಬಂದಿವೆ. ಇಂತಹ ಅಪರಾಧಗಳನ್ನು ಮಿಂಚಿನವೇಗದಲ್ಲಿ ಮಾಡುತ್ತಾರೆ. ಡಿಜಿಟಲಿಕರಣ ಮಾಡುವವರಲ್ಲಿ ಇರುವ ಕೋಡಿಂಗ್ ಪ್ರಮಾದಗಳನ್ನು ಸೃಷ್ಟಿಸಬಹುದು. ಮನುಷ್ಯನ ನಿಯತ್ತು ಇದನ್ನು ಆಗದಂತೆ ತಡೆಯುತ್ತದೆ. ಡಿಜಲೀಕರಣದ ಬಳಕೆದಾರರು ಸೈಬರ್ ಕ್ರೈಂ ಗೆ ತಡೆಯೊಡ್ಡಬಹುದು. ಡಿಜಿಟಲ್ ಸುರಕ್ಷತೆಯನ್ನು ಪ್ರತಿಯೊಬ್ಬರೂ ಮಾಡಿಕೊಳ್ಳುವುದು ಬಹಳ ಮುಖ್ಯ ಎಂದು ತಿಳಿಸಿದರು.
*ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧಗಳ ಪತ್ತೆ:*
ಕೋಡಿಂಗ್ ಮೂಲಕ ಡಿಜಟಲ್ ಹಾಗೂ ಮೊಬೈಲ್ ಬಳಕೆದಾರರು ಸೈಬರ್ ಅಪರಾಧಿಗಳಿಗೆ ಸುಲಭದ ಬೇಟೆಯಾಗುತ್ತಾರೆ. ಆರ್ಥಿಕ ಸೈಬರ್ ಅಪರಾಧಗಳೂ ಸೇರಿದಂತೆ ಹೆಣ್ಣುಮಕ್ಕಳ ಸುರಕ್ಷತೆಯೂ ಸವಾಲಾಗುತ್ತಿದೆ. ಕರ್ನಾಟಕದ ಸೈಬರ್ ಕ್ರೈಂ ವಿಭಾಗ, ಆಧುನಿಕ ತಂತ್ರಜ್ಞಾನದ ಬಳಕೆಯಿಂದ ಅಪರಾಧಗಳನ್ನು ಯಶಸ್ವಿಯಾಗಿ ಪತ್ತೆಹಚ್ಚುತ್ತಿದ್ದಾರೆ. ಎಫ್ ಎಸ್ ಎಲ್ ಲ್ಯಾಬ್ ಗಳು ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ. 50 ಕೋಟಿಗಳ ವಂಚನೆ ನಮ್ಮ ಸರ್ಕಾರದ ಇಲಾಖೆಯೊಂದರಲ್ಲಿ ಆಗಿದ್ದು ಕಂಡುಬಂದಿದ್ದು , ತಂತ್ರಜ್ಞಾನದಲ್ಲಿ ಪರಿಣಿತರಾಗಿದ್ದ ಯುವ ಅಧಿಕಾರಿಗಳಿಂದ ಅದನ್ನು ಪರಿಶೀಲಿಸಿ ನಂತರ ಮಾಹಿತಿ ದೊರೆಯಿತು ಎಂದು ತಿಳಿಸಿದರು.
*ದೇಶದಲ್ಲಿ ಡಾರ್ಕ್ ವೆಬ್ ಅಪರಾಧವನ್ನು ಭೇದಿಸಿದ ರಾಜ್ಯ ಕರ್ನಾಟಕ :*
ಡ್ರಗ್ ದಂಧೆಯಲ್ಲಿ ಡಾರ್ಕ್ ವೆಬ್ ಪಾತ್ರ ವಹಿಸುತ್ತದೆ. ದೇಶದಲ್ಲಿ ಪ್ರಥಮ ಬಾರಿಗೆ ಡಾರ್ಕ್ ವೆಬ್ ಅಪರಾಧವನ್ನು ಭೇದಿಸಿದ ರಾಜ್ಯ ಕರ್ನಾಟಕ. ನಮ್ಮ ಸರ್ಕಾರ ಡ್ರಗ್ ದಂಧೆಯ ವಿರುದ್ಧ ಯುದ್ಧವನ್ನು ಸಾರಿದೆ. ಇಡೀ ದೇಶಕ್ಕೆ ಹೋಲಿಸಿದರೆ ದೊಡ್ಡ ಮೊತ್ತದ ಡ್ರಗ್ಸ್ ನ್ನು ಸೀಜ್ ಮಾಡಿರುವ ರಾಜ್ಯ ಕರ್ನಾಟಕ. ಈಗಾಗಲೇ 50 ಕೋಟಿ ರೂ. ಮೌಲ್ಯದ ಡ್ರಗ್ಸ್ ನ್ನು ನಾಶ ಮಾಡಲಾಗಿದೆ. ನಾನು ಗೃಹ ಸಚಿವನಾಗಿದ್ದಾಗ ಈ ಅಪರಾಧಗಳನ್ನು ಪತ್ತೆಹಚ್ಚಲು ಪೊಲೀಸ್ ಠಾಣೆಗಳನ್ನುಪ್ರಾರಂಭಿಸಲಾಗಿದೆ. ಈಗ ಈ ಠಾಣೆಗಳಿಗೆ ಅಗತ್ಯವಿರುವ ಆಧುನಿಕ ತಂತ್ರಜ್ಞತೆ, ಅನುದಾನವನ್ನು ನೀಡಲಾಗುವುದು ನಮ್ಮ ರಾಜ್ಯದ ಒಳಗೆ ಡ್ರಗ್ಸ್ ಪ್ರವೇಶಿದಂತೆ ನೋಡಿಕೊಳ್ಳಲಾಗಿದೆ. ಅನ್ ಲೈನ್ ಆಟಗಳಿಂದ ಬಡ ಕುಟುಂಬಗಳು ನಾಶವಾಗುತ್ತಿದೆ. ಆನ್ ಲೈನ್ ಗೇಮ್ಸ್ಗಳನ್ನು ಸಂಪೂರ್ಣವಾಗಿ ನಿಷೇದಿಸಲಾಗಿದೆ ಎಂದು ತಿಳಿಸಿದರು.