IMG 20220216 WA0018

ಜೆಡಿ(ಎಸ್) -ಕಲಾಪದ ಸಮಯ ಹಾಳು ಮಾಡಿದ ಕಾಂಗ್ರೆಸ್….!

POLATICAL STATE

ಸದನದಲ್ಲಿ ಮಲ್ಲಯುದ್ಧಕ್ಕೆ ಇಳಿದು 2023ರ ಚುನಾವಣೆ ಟ್ರೈಲರ್ ತೋರಿಸಿದ ಕಾಂಗ್ರೆಸ್

ಕಲಾಪದ ಸಮಯ ಹಾಳು ಮಾಡಿದ ಕಾಂಗ್ರೆಸ್ ವಿರುದ್ಧ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಟೀಕಾಪ್ರಹಾರ

ಯಾವ ಪುರುಷಾರ್ಥಕ್ಕೆ ಅಹೋರಾತ್ರಿ ಧರಣಿ?


ಹೆಚ್ಡಿಕೆ ಅವರು ಹೇಳಿದ್ದೇನು?

*ಸದನದ ಗೌರವ ಮರೆತು ಗೂಳಿಗಳಂತೆ ವರ್ತಿಸಿದ ಕಾಂಗ್ರೆಸ್ ನಾಯಕರು
*ಸಭಾ ಮರ್ಯಾದೆ ಮರೆತು ಪ್ರಜಾಪ್ರಭುತ್ವದ ಅಣಕ ಮಾಡಿದರು
*ಎರಡೂ ರಾಷ್ಟ್ರೀಯ ಪಕ್ಷಗಳು ಕನ್ನಡಿಗರ ಹಿತ ಮರೆತಿವೆ
*ಜನರ ಹಿತಕ್ಕಿಂತ ಮತ ಹಿತವೇ ಹೆಚ್ಚು ಎಂದು ವರ್ತಿಸಿದ ರಾಷ್ಟ್ರೀಯ ಪಕ್ಷಗಳು


ಬೆಂಗಳೂರು: ವಿಧಾನಸಭೆಯಲ್ಲಿಂದು ನಡೆದ ಬೆಳೆವಣಿಗೆಗಳು ಪ್ರಜಾಪ್ರಭುತ್ವವನ್ನೇ ಅಣಕಿಸುವಂತೆ ಇದ್ದು, 2023ರ ಚುನಾವಣೆಯಲ್ಲಿ ಏನೆಲ್ಲಾ ನಡೆಯುತ್ತದೆ ಎಂಬುದರ ಟ್ರೈಲರ್ ತೋರಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರೂ ಆಗಿರುವ ಹೆಚ್.ಡಿ.ಕುಮಾರಸ್ವಾಮಿ ಅವರು ಕಳವಳ ವ್ಯಕ್ತಪಡಿಸಿದರು.

ಸದನದಲ್ಲಿ ಆಡಳಿತಾರೂಢ ಬಿಜೆಪಿ ಹಾಗೂ ಪ್ರತಿಪಕ್ಷ ಕಾಂಗ್ರೆಸ್ ನಡುವೆ ನಡೆದ ಘರ್ಷಣೆ ಹಾಗೂ ಕಾಂಗ್ರೆಸ್ ಪಕ್ಷದ ಅಧ್ಯಕ್ಷರ ವರ್ತನೆಯ ಬಗ್ಗೆ ಸುದ್ದಿಗೋಷ್ಟಿಯಲ್ಲಿ ಪ್ರತಿಕ್ರಿಯೆ ನೀಡಿದರು ಅವರು.

ಈ ಸಂದರ್ಭದಲ್ಲಿ ಮಾಜಿ ಮುಖ್ಯಮಂತ್ರಿಗಳು ಹೇಳಿದ್ದಿಷ್ಟು;

ಇವತ್ತು ಸದನದಲ್ಲಿ ನಡೆದ ಘಟನೆಗಳು ಪ್ರಜಾಪ್ರಭುತ್ವಕ್ಕೆ ಶೋಭೆಯಲ್ಲ. ರಾಷ್ಟ್ರೀಯ ಪಕ್ಷಗಳು ತಮ್ಮ ಹಿತಕ್ಕಾಗಿ ಕನ್ನಡಿಗರ ತೆರಿಗೆ ಹಣವನ್ನು ಪೋಲು ಮಾಡುತ್ತಿವೆ. ಇಂದು ಮಾತನಾಡಲು ನನಗೆ ಅವಕಾಶವೇ ಸಿಗಲಿಲ್ಲ.

ಕಾಂಗ್ರೆಸ್ ನಾಯಕರ ವರ್ತನೆಯನ್ನು ಗಮನಿಸಿದೆ. ಅವರಲ್ಲಿ ಕೆಲವರು ತೊಡೆ ತಟ್ಟಿಕೊಂಡು ಗೂಳಿಗಳ ರೀತಿಯಲ್ಲಿ ನುಗ್ಗಿದ ಹಾಗೇ ನುಗ್ಗುತ್ತಿದ್ದರು. ರಾಷ್ಟ್ರಿಯ ಪಕ್ಷದ ಅಧ್ಯಕ್ಷರು, ಎರಡೂ ಪಕ್ಷಗಳ ನಾಯಕರ ಪರಸ್ಪರ ಪದಬಳಕೆ ದೇವರಿಗೆ ಪ್ರೀತಿ. ಪವಿತ್ರವಾದ ಈ ಸದನದ ಸಮಯವನ್ನು ಹಾಳು ಮಾಡಿದರು. ಸಂಸದೀಯ ವ್ಯವಸ್ಥೆಗೆ ಕಳಂಕ ತರುವ ಕೆಲಸ ಇದು.

ಎರಡೂ ರಾಷ್ಟ್ರೀಯ ಪಕ್ಷಗಳ ವರಸೆ ಏನು ಎನ್ನುವುದನ್ನು ಇವತ್ತು ಸದನದಲ್ಲಿ ನೋಡಿದ್ದೇವೆ. ನನ್ನ ಪ್ರಕಾರ ಇದು ಟ್ರೈಲರ್ ಅಷ್ಟೇ. 2023ರ ಚುನಾವಣೆಯಲ್ಲಿ ಅವರು ಪೂರ್ತಿ ಸಿನಿಮಾ ತೋರಿಸಲಿದ್ದಾರೆ. ಕಾಂಗ್ರೆಸ್ ನಾಯಕರು ಇಂದು ಟ್ರೈಲರ್ ತೋರಿಸಿ ಮುಂದಿನ ಮಲ್ಲಯುದ್ಧದ ಸುಳಿವು ನೀಡಿದ್ದಾರೆ. ಚುನಾವಣೆ ಹೊತ್ತಿನಲ್ಲಿ ಏನೆಲ್ಲಾ ಆಗಬಹುದು, ಸಂಭವಿಸಬಹುದು ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಜನ ಇದರಿಂದ ಎಚ್ಚೆತ್ತುಕೊಳ್ಳಬೇಕು.

ಸದನದ ಕಲಾಪ ಪ್ರಾರಂಭಕ್ಕೂ ಮೊದಲೇ ಕಾಂಗ್ರೆಸ್ ಪಕ್ಷ ನಿಲುವಳಿ ಸೂಚನೆ ಮಂಡಿಸಿತ್ತು. ನಮ್ಮ ಪಕ್ಷದಿಂದಲೂ ನಿಲುವಳಿ ಸೂಚನೆ ಮಂಡನೆ ಮಾಡಿಸಿದ್ದೆವು. ಕಾಂಗ್ರೆಸ್ ಅಧಿಕೃತ ವಿರೋಧ ಪಕ್ಷ ಎನ್ನುವ ಕಾರಣಕ್ಕೆ ಅವರಿಗೆ ಮೊದಲು ಅವಕಾಶ ನೀಡಿದರು ಸಭಾಧ್ಯಕ್ಷರು. ಆದರೆ ರಾಜ್ಯದ ಜ್ವಲಂತ ವಿಷಯಗಳ ಬಗ್ಗೆ ಮಾತನಾಡುವ ಅವಕಾಶವನ್ನು ಆ ಪಕ್ಷ ಕೈ ಚೆಲ್ಲಿತು. ನಮ್ಮ ಅವಕಾಶವನ್ನು ಹಾಳು ಮಾಡಿತು.

ಕಾಂಗ್ರೆಸ್ ನಾಯಕರು ಸಚಿವ ಈಶ್ವರಪ್ಪನವರು ರಾಷ್ಟ್ರಧ್ವಜದ ಬಗ್ಗೆ ನೀಡಿದ್ದ ಹೇಳಿಕೆ ವಿಚಾರವಾಗಿ ನಿಲುವಳಿ ಸೂಚನೆ ಮಂಡಿಸಿದ್ದರು. ಕಾನೂನು ಸಚಿವರು ಅದಕ್ಕೆ ಪ್ರತ್ಯತ್ತರ ಕೊಟ್ಟಿದ್ದಾರೆ. ಆದರೂ ತೃಪ್ತರಾಗದ ಅವರು ಸದನಕ್ಕೆ ತ್ರಿವರ್ಣ ದ್ವಜಗಳನ್ನು ತಂದು ರಾಜಕೀಯಕ್ಕೆ ಬಳಕೆ ಮಾಡಿಕೊಂಡಿದ್ದು ಸರಿಯಲ್ಲ. ಇದು ಅಕ್ಷಮ್ಯ.

ಮೊಳಕೆಯಲ್ಲೇ ಚುವುಟಿ ಹಾಕಬೇಕಿತ್ತು:

ರಾಜ್ಯದಲ್ಲಿ ಹಿಜಾಬ್ ವಿವಾದ ಒಂದು ಭಾಗದಲ್ಲಿ ಮಾತ್ರ ಶುರುವಾಗಿತ್ತು. ಅದನ್ನು ಮೊಳಕೆಯಲ್ಲೇ ಚಿವುಟಿ ಹಾಕಬೇಕಿತ್ತು. ಹಾಗೆ ಮಾಡದೆ ಸರಕಾರವೂ ವಿಫಲವಾದ ಪರಿಣಾಮ ಇಡೀ ವಿವಾದ ರಾಜ್ಯ, ದೇಶ ಹಾಗೂ ವಿದೇಶಗಳಿಗೂ ವ್ಯಾಪಿಸುವಂತೆ ಆಯಿತು. ಇದರಲ್ಲಿ ಸರಕಾರ ವೈಫಲ್ಯವು ಇದೆ.

ಹಿಜಾಬ್ ಎನ್ನುವುದು ಅನೇಕ ವರ್ಷಗಳಿಂದ ಇದೆ. ಆದರೆ ಕೆಲ ಮಕ್ಕಳಿಗೆ ಇತ್ತಿಚೆಗೆ ಯಾವುದೋ ಸಂಘಟನೆ ಹಿಜಾಬ್ ಧರಿಸಿ ಶಾಲೆಗೆ ತೆರಳಲು ಸೂಚಿಸಿತ್ತು. ಅದೇ ಈ ವಿವಾದಕ್ಕೆ ಮೂಲ. ಸರಕಾರ ಮೊದಲು ಆ ಮೂಲವನ್ನು ಪತ್ತೆ ಹಚ್ಚಬೇಕು. ಅಲ್ಲದೆ, ಪೋಷಕರಿಗೆ ಶಿಕ್ಷಕರು ಸಮವಸ್ತ್ರದ ಮಹತ್ವ ಹಾಗೂ ನ್ಯಾಯಾಲಯದ ಆದೇಶದ ಬಗ್ಗೆ ತಿಳಿ ಹೇಳಿದ ಮೇಲೆ ಕೆಲ ಮಕ್ಕಳು ಹಿಜಾಬ್ ಧರಿಸುವುದನ್ನು ಬಿಟ್ಟಿದ್ದಾರೆ. ಹಿಜಾಬ್ ಹಿಂದೆ ಯಾರಿದ್ದಾರೆ ಎಂಬುದನ್ನು ಸರಕಾರ ಮೊದಲೇ ಪತ್ತೆ ಮಾಡಿದ್ದರೆ ಇಂಥ ಪರಿಸ್ಥಿತಿ ಬರುತ್ತಿರಲ್ಲ.

ಶಿಕ್ಷಣ ಕ್ಷೇತ್ರವೇ ನಾಶ ಆಗುತ್ತಿದೆ:

ಕುಂದಾಪುರದ ಶಾಲೆಯಲ್ಲಿ 1000 ವಿದ್ಯಾರ್ಥಿಗಳು ಓದುತ್ತಿದ್ದಾರೆ. ಇತ್ತಿಚೆಗೆ ಎರಡು ಸಂಘಟನೆಗಳು ಈ ಹಿಜಾಬ್ ರಗಳೆಯನ್ನು ಪ್ರಾರಂಭ ಮಾಡಿದವು. ಪಾಲಕರು ಮತ್ತು ಮಕ್ಕಳು ಅವರ ಹಿತಾಸಕ್ತಿಗೆ ಬಲಿಯಾಗಬಾರದು. ಈ ಘಟನೆಗಳಿಂದ ಶಿಕ್ಷಣ ಕ್ಷೇತ್ರವೇ ನಾಶ ಆಗುವಂತಿದೆ. ಕಳೆದ ಎರಡು ವರ್ಷಗಳಿಂದ ಕೋವಿಡ್ ಕಾರಣಕ್ಕೆ ಇಡೀ ಶಿಕ್ಷಣ ವ್ಯವಸ್ಥೆ ಸಂಕಷ್ಟಕ್ಕೆ ಸಿಲುಕಿದೆ. ಈಗ ಹಿಜಾಬ್ ಮತ್ತು ಕೇಸರಿ ಶಾಲು ವಿವಾದಗಳಿಂದ ಮತ್ತಷ್ಟು ಹಾಳಾಗುತ್ತಿದೆ.

ಕಲ್ಮಷ ಇಲ್ಲದ ಮಕ್ಕಳ ಹೃದಯದಲ್ಲಿ ದ್ವೇಷ ಭಿತ್ತುತ್ತಿದ್ದಾರೆ. ಇಂಥ ವಿಚಾರವನ್ನು ಚರ್ಚೆ ಮಾಡುವುದು ಬಿಟ್ಟು ಕಾಂಗ್ರೆಸ್ ನಾಯಕರು ರಾಷ್ಟ್ರಧ್ವಜ ಹೇಳಿಕೆ ಮುಂದೆ ಇಟ್ಟುಕೊಂಡು ಸಮಯ ಹಾಳು ಮಾಡುತ್ತಿದ್ದಾರೆ. ಯಾವ ಪುರುಷಾರ್ಥಕ್ಕಾಗಿ ಅವರು ಅಹೋರಾತ್ರಿ ಧರಣಿ ಮಾಡುತ್ತಾರೆ?

ಎರಡು ರಾಷ್ತ್ರೀಯ ಪಕ್ಷಗಳು 2023ರ ಚುನಾವಣೆ ದೃಷ್ಟಿ ಮುಂದಿಟ್ಟುಕೊಂಡು ವೋಟ್ ಬ್ಯಾಂಕ್ ರಾಜಕೀಯ ಮಾಡುತ್ತಿವೆ. ಇವತ್ತು ಬೆಳಗ್ಗೆ ಕಾಂಗ್ರೆಸ್ ನಾಯಕರು ರಾಷ್ಟ್ರಧ್ವಜ ಕೈಗೆತ್ತಿಕೊಂಡರೆ ಮೈಯೆಲ್ಲಾ ರೋಮಾಂಚನ ಆಗುತ್ತೆ ಎಂದು ಹೇಳಿದರು. ರೋಮಾಂಚನ ಎಂದರೆ ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವುದಾ? ಮಕ್ಕಳ ವಿಚಾರವಾಗಿ ಅವರ ಮೈ ರೋಮಾಂಚನ ಆಗಿದ್ದರೆ ನಾನು ಮೆಚ್ಚುತ್ತಿದ್ದೆ. ಆದರೆ ಕಾಂಗ್ರೆಸ್ ನಾಯಕರು ನಡೆದುಕೊಂಡ ರೀತಿ ನೋಡಿದರೆ‌ ರೋಮಾಂಚನದ ಮಾತಿರಲಿ, ಈ ರಾಜ್ಯದ ಭವಿಷ್ಯದ ಬಗ್ಗೆಯೇ ಆತಂಕವಾಗುತ್ತದೆ. ಜನಪರ ವಿಷಯಗಳು ಕೈಗೆತ್ತಿಕೊಳ್ಳ ಬೇಕು ಎನ್ನುವುದು ನನ್ನ ಕಾಳಜಿ.

ಈ ಸಂದರ್ಭದಲ್ಲಿ ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡೆಪ್ಪ ಕಾಷೆಂಪೂರ್, ಶಾಸಕರಾದ ಎಂ.ಕೃಷ್ಣಾರೆಡ್ಡಿ, ಮಂಜುನಾಥ, ವೆಂಕಟರಾವ್ ನಾಡಗೌಡ ಮುಂತಾದವರು ಇದ್ದರು.