ವೈದ್ಯರು, ತಜ್ಞರ ಕೊರತೆ ನೀಗಿಸಲು ವೈದ್ಯಕೀಯ ಶಿಕ್ಷಣಕ್ಕೆ ಆದ್ಯತೆ, ಹೊಸ ಕಾಲೇಜುಗಳ ನಿರ್ಮಾಣ:ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್
ಫಿಸಿಯೋಥೆರಪಿಯಲ್ಲಿ ಜ್ಞಾನದಷ್ಟೇ ಕೌಶಲ್ಯವೂ ಮುಖ್ಯ
ಮಂಗಳೂರು, ಮಾರ್ಚ್ 25, ಶುಕ್ರವಾರ
ಭಾರತದಲ್ಲಿ 10 ಸಾವಿರ ಜನಸಂಖ್ಯೆಗೆ 0.59 ಫಿಸಿಯೋಥೆರಪಿ ತಜ್ಞರಿದ್ದಾರೆ. ಇದಕ್ಕಾಗಿಯೇ ಕೇಂದ್ರ ಹಾಗೂ ರಾಜ್ಯ ಸರ್ಕಾರ ವೈದ್ಯಕೀಯ ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಹೊಸ ಕಾಲೇಜುಗಳನ್ನು ಆರಂಭಿಸುತ್ತಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.
ಅಂತಾರಾಷ್ಟ್ರೀಯ ಫಿಸಿಯೋಥೆರಪಿ ಸಮ್ಮೇಳನ ‘ಮಂಗಳೂರು ಫಿಸಿಯೋಕಾನ್-2022’ ನಲ್ಲಿ ಮಾತನಾಡಿದ ಸಚಿವರು, ಅಮೆರಿಕದಲ್ಲಿ 10 ಸಾವಿರ ಜನಸಂಖ್ಯೆಗೆ 7 ಫಿಸಿಯೋಥೆರಪಿ ತಜ್ಞರಿದ್ದಾರೆ. ಆದರೆ ಭಾರತದಲ್ಲಿ 10 ಸಾವಿರ ಜನಸಂಖ್ಯೆಗೆ 0.59 ತಜ್ಞರಿದ್ದಾರೆ. ಈ ರೀತಿ ವೈದ್ಯರು, ತಜ್ಞರ ಕೊರತೆ ನಿವಾರಿಸಲೆಂದೇ ಪ್ರಧಾನಿ ನರೇಂದ್ರ ಮೋದಿಯವರು ವೈದ್ಯಕೀಯ ಶಿಕ್ಷಣಕ್ಕೆ ಆದ್ಯತೆ ನೀಡಿ ಹೆಚ್ಚು ಕಾಲೇಜುಗಳನ್ನು ಆರಂಭಿಸಿದ್ದಾರೆ. ಇದರಿಂದಾಗಿ ಹೆಚ್ಚು ವೈದ್ಯರು, ತಜ್ಞರು ಹೊರಬಂದು ಕೊರತೆ ನೀಗಿಸಲು ಸಾಧ್ಯವಾಗುತ್ತದೆ ಎಂದರು.
ಔಷಧಿಗಳು ರೋಗವನ್ನು ಗುಣಪಡಿಸುತ್ತವೆ. ಆದರೆ ಫಿಸಿಯೋಥೆರಪಿಯು ಜೀವನ ನೀಡುತ್ತದೆ. ನರ ಸಂಬಂಧಿ ಸಮಸ್ಯೆ, ಅಂಗವೈಕಲ್ಯ ಮೊದಲಾದವುಗಳಿಗೆ ಫಿಸಿಯೋಥೆರಪಿ ಪರಿಹಾರ ನೀಡುತ್ತದೆ. ಆಧುನಿಕ ಕಾಲದಲ್ಲಿ ಜ್ಞಾನವೇ ಮುಖ್ಯವಾದ ಶಕ್ತಿ. ಅದೇ ರೀತಿಯಲ್ಲಿ ಫಿಸಿಯೋಥೆರಪಿ ಕ್ಷೇತ್ರದಲ್ಲಿ ಜ್ಞಾನದ ಜೊತೆಗೆ ಕೌಶಲ್ಯವೂ ಮುಖ್ಯವಾದ ಶಕ್ತಿ. ಇಂತಹ ಕೌಶಲ್ಯವನ್ನು ತಜ್ಞರು ಅಭಿವೃದ್ಧಿ ಮಾಡಿಕೊಳ್ಳಬೇಕು. ತಂತ್ರಜ್ಞಾನ ಹಾಗೂ ಸಂಶೋಧನೆಗಳು ಇಲ್ಲಿ ಮುಖ್ಯವಾಗುತ್ತದೆ. ಫಿಸಿಯೋಥೆರಪಿ ಬಹಳ ಪುರಾತನವಾದ ಜ್ಞಾನವಾಗಿದೆ. ಭಾರತದ ಆಯುರ್ವೇದದಲ್ಲೂ ಇದಕ್ಕೆ ಸಂಬಂಧಿಸಿದ ಅಂಶಗಳಿವೆ ಎಂದರು.
ಯೋಗ ಹಾಗೂ ಪ್ರಾಣಾಯಾಮವನ್ನು ಪ್ರತಿ ದಿನ ಮಾಡುವವರು ಅನಾರೋಗ್ಯಕ್ಕೊಳಗಾದರೂ ಬೇಗನೆ ಗುಣಮುಖರಾಗುವ ಸಾಮರ್ಥ್ಯ ಹೊಂದಿರುತ್ತಾರೆ. ಇಂತಹ ದೈಹಿಕ ಚಟುವಟಿಕೆಗಳು ಆರೋಗ್ಯ ವೃದ್ಧಿಗೆ ಎಷ್ಟು ಅಗತ್ಯ ಎಂಬುದನ್ನು ಗಮನಿಸಬಹುದು. ಕೋವಿಡ್ ಆರಂಭವಾದ ಸಂದರ್ಭದಲ್ಲಿ ಆರೋಗ್ಯ ಇಲಾಖೆಯು ನಿಮ್ಹಾನ್ಸ್ ಸಹಯೋಗದಲ್ಲಿ ಕೋವಿಡ್ ರೋಗಿಗಳು ಹಾಗೂ ಅವರ ಕುಟುಂಬದವರಿಗೆ ಆಪ್ತ ಸಮಾಲೋಚನೆಯ ಸೇವೆಯನ್ನು ವಿಶೇಷವಾಗಿ ನೀಡಲು ಆರಂಭಿಸಿತು. ಕೆಲ ಕೊರೊನಾ ರೋಗಿಗಳು ರೋಗದ ಭಯದಿಂದಲೇ ಆತ್ಮಹತ್ಯೆಗೆ ಶರಣಾದ ಘಟನೆಗಳೂ ನಡೆದಿತ್ತು. ಆದ್ದರಿಂದ ರೋಗಿಗಳನ್ನು ಮಾನಸಿಕವಾಗಿ ಬಲಗೊಳಿಸಲು ಆಪ್ತ ಸಮಾಲೋಚನೆ ನಡೆಸಲಾಯಿತು. ಈ ಕಾರ್ಯಕ್ರಮದಡಿ ಸುಮಾರು 25 ಲಕ್ಷ ಜನರಿಗೆ ಆಪ್ತ ಸಮಾಲೋಚನೆ ನಡೆಸಲಾಗಿದೆ ಎಂದು ತಿಳಿಸಿದರು.
ಜನರಿಗೆ ದೈಹಿಕ ಆರೋಗ್ಯ ಸೇವೆಗಳ ಜೊತೆಗೆ ಮಾನಸಿಕ ಆರೋಗ್ಯ ಸೇವೆಯನ್ನೂ ನೀಡಬೇಕಿದೆ. ಇದಕ್ಕಾಗಿ ಕೇಂದ್ರ ಆರ್ಥಿಕ ಸಚಿವರು ಈ ಬಾರಿಯ ಬಜೆಟ್ ನಲ್ಲಿ, ಟೆಲಿ ಮೆಂಟಲ್ ಹೆಲ್ತ್ ಕಾರ್ಯಕ್ರಮ ಘೋಷಿಸಿದ್ದಾರೆ. ಇದು ನಿಮ್ಹಾನ್ಸ್ ಸಹಯೋಗದಲ್ಲಿ ನಡೆಯಲಿದ್ದು, ಕರ್ನಾಟಕವೇ ಇದರ ನೇತೃತ್ವ ವಹಿಸಲಿರುವುದು ಸಂತಸದ ಸಂಗತಿ. ಕರ್ನಾಟಕ ಈಗ ವೈದ್ಯಕೀಯ ಶಿಕ್ಷಣದ ಕೇಂದ್ರವಾಗಿದ್ದು, 75 ಫಿಸಿಯೋಥೆರಪಿ ಕಾಲೇಜುಗಳಿವೆ ಎಂದು ಹೇಳಿದರು.
ಉಕ್ರೇನ್ ನಿಂದ ಹಿಂದಿರುಗಿದ ವೈದ್ಯ ವಿದ್ಯಾರ್ಥಿಗಳ ಕಲಿಕೆ ಸ್ಥಗಿತಗೊಳ್ಳದಂತೆ ಕ್ರಮ ವಹಿಸಲಾಗಿದೆ. ಇದಕ್ಕಾಗಿ ಸಮಿತಿ ರಚಿಸಿ ಸಲಹೆ ಪಡೆಯಲಾಗುತ್ತದೆ. ಯುದ್ಧ ನಿಂತ ಬಳಿಕ ವಿದ್ಯಾರ್ಥಿಗಳು ಆ ದೇಶಕ್ಕೆ ಮರಳಲಿದ್ದಾರೆಯೇ ಎಂಬ ಬಗ್ಗೆ ತಿಳಿದಿಲ್ಲ. ಆದ್ದರಿಂದ ಅಲ್ಲಿಯವರೆಗೂ ಕಲಿಕೆ ಮುಂದುವರಿಸಲು ಅವಕಾಶ ನೀಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಖಾಸಗಿ, ಸರ್ಕಾರಿ, ಡೀಮ್ಡ್ ಕಾಲೇಜಿನಲ್ಲಿ ವಿದ್ಯಾರ್ಥಿಗಳ ಕಲಿಕೆ ಮುಂದುವರಿಯಲಿದೆ ಎಂದರು.