ವಿಶ್ವ ಕ್ಷಯರೋಗ ನಿವಾರಣಾ ದಿನಾಚರಣೆ
ಪಾವಗಡ…ಇಂದು ಪಟ್ಟಣದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿಗಳು, ತಾಲ್ಲೂಕು ವೈದ್ಯಾಧಿಕಾರಿಗಳು ಮತ್ತು ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಆರೋಗ್ಯ ಕೇಂದ್ರ ಇವರ ಸಂಯುಕ್ತಾಶ್ರಯದಲ್ಲಿ ಪಾವಗಡದ ಸಾರ್ವಜನಿಕ ಬಸ್ ನಿಲ್ದಾಣದಲ್ಲಿ ಈ ಕಾರ್ಯಕ್ರಮವನ್ನು ಸ್ವಾಮಿ ಜಪಾನಂದಜೀ ರವರು ಉದ್ಘಾಟಿಸಿದರು. ನಂತರ ಅವರು ಮಾತನಾಡುತ್ತಾ, 2025 ವರ್ಷದ ವೇಳೆಗೆ ಭಾರತ ಕ್ಷಯರೋಗ ಮುಕ್ತವಾಗಬೇಕೆಂಬ ಮಹತ್ತರವಾದ ಆಕಾಂಕ್ಷೆಯಿಂದ ಸರ್ಕಾರ ಹಾಗೂ ಸರ್ಕಾರೇತರ ಸಂಸ್ಥೆಗಳ ಮೂಲಕ ನಿರಂತರವಾಗಿ ಕಾರ್ಯ ವಹಿಸಬೇಕೆಂದು ಕರೆಕೊಟ್ಟರು. ಸಾರ್ವಜನಿಕರು ಕ್ಷಯರೋಗದ ಲಕ್ಷಣವಿದ್ದಲ್ಲಿ ತತ್‌ಕ್ಷಣ ಹತ್ತಿರದ ಆಸ್ಪತ್ರೆಯಲ್ಲಿ ಪರೀಕ್ಷೆ ಮಾಡಿಸಿಕೊಂಡಲ್ಲಿ ರೋಗ ಹರಡುವಿಕೆಯನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು ಹಾಗೂ ಸಾರ್ವಜನಿಕರು ಈ ವಿಚಾರದಲ್ಲಿ ಬಹು ಮುಖ್ಯವಾದ ಪಾತ್ರ ವಹಿಸುತ್ತಾರೆ ಎಂದು ತಿಳಿಸಿದರು. ತಮ್ಮ ಸಂಸ್ಥೆಯ ಮೂಲಕ ಈವರೆವಿಗೆ ಸರಿಸುಮಾರು 14000 ಕ್ಷಯರೋಗಿಗಳಿಗೆ ಸಂಪೂರ್ಣ ಉಚಿತ ಔಷಧೋಪಚಾರ ಹಾಗೂ ಅತ್ಯಂತ ನಿತ್ರಾಣರಾಗಿರುವ ಸಹಸ್ರ ಸಹಸ್ರ ರೋಗಿಗಳಿಗೆ ಇಂದಿಗೂ ಸಹ ಪ್ರತೀ ವಾರ ಉಚಿತ ಆಹಾರ ಧಾನ್ಯ ವಿತರಣೆಯ ಯೋಜನೆ ಮಧುಗಿರಿ ಮತ್ತು ಪಾವಗಡ ತಾಲ್ಲೂಕಿನಲ್ಲಿ ನಿರಂತರವಾಗಿ ನಡೆಯುತ್ತಾ ಬರುತ್ತಿರುವುದು ಈ ಯೋಜನೆಗೆ ಒಂದು ಮಹತ್ತರವಾದ ಶಕ್ತಿಯನ್ನು ತುಂಬಿದಂತಿದೆ ಎಂದರು. ನಂತರ ಸ್ವಾಮಿ ವಿವೇಕಾನಂದ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಗಳಾದ ಡಾ.ಚಂದ್ರಕಲಾ ಜಿ.ಆರ್. ಕಾರ್ಯಕ್ರಮ ಉದ್ದೇಶಿಸಿ ಮಾತನಾಡುತ್ತಾ, ಕ್ಷಯರೋಗ ಒಬ್ಬರಿಂದ ಒಬ್ಬರಿಗೆ ಹರಡುವಂತಹ ರೋಗವಾಗಿದ್ದು, ಇದರ ಲಕ್ಷಣಗಳು ಕೆಮ್ಮು ಜ್ವರ ತೂಕ ಕಡಿಮೆಯಾಗುವುದು ಹಸಿವಾಗದೆ ಇರುವುದು ಕಫದಲ್ಲಿ ರಕ್ತ ಬೀಳುವುದು ಎಂದು ಕ್ಷಯರೋಗದ ಎಲ್ಲಾ ಲಕ್ಷಣಗಳ ಬಗ್ಗೆ ಮಾಹಿತಿ ನೀಡಿ ಸಾರ್ವಜನಿಕರ ಜವಾಬ್ಧಾರಿಯನ್ನು ವಿವರಿಸಿದರು. ನಂತರ ತಾಲ್ಲೂಕು ಆರೋಗ್ಯಾಧಿಕಾರಿಗಳಾದ ಡಾ.ತಿರುಪತಯ್ಯ ಮಾತನಾಡುತ್ತಾ, 2025 ವರ್ಷದ ಒಳಗೆ ನಮ್ಮ ದೇಶವನ್ನು ಕ್ಷಯರೋಗ ಮುಕ್ತ ದೇಶವನ್ನಾಗಿಸಲು ನಾವೆಲ್ಲರೂ ಪಣತೊಟ್ಟು ಅತ್ಯಂತ ಶ್ರದ್ಧಾಪೂರ್ವಕವಾಗಿ ಸರ್ಕಾರಿ ಹಾಗೂ ಸರ್ಕಾರೇತರ ಸಂಘ ಸಂಸ್ಥೆಗಳು ಕಾರ್ಯಕ್ಕೆ ಧುಮುಕಬೇಕೆಂದು ಕರೆ ನೀಡಿದರು. ಈ ಕಾರ್ಯಕ್ರಮದಲ್ಲಿ ಪಾವಗಡ ಹಾಗೂ ಮಧುಗಿರಿ ತಾಲ್ಲೂಕಿನ ಕ್ಷಯರೋಗ ನಿಯಂತ್ರಣ ಸಂಯೋಜಕರುಗಳಾದ ತಿಪ್ಪೇಸ್ವಾಮಿ ಹಾಗೂ ಅಶ್ವತ್ಥನಾರಾಯಣ, ಎಂ. ಗಂಗಾಧರ ಹಿರಿಯ ಪ್ರಯೋಗಶಾಲಾ ತಜ್ಞರು, ಚಂದ್ರಶೇಖರ್ ಶಾಮಣ್ಣ. ಇತರರು ಭಾಗವಹಿಸಿದ್ದರು.