ಖಾಶೆಂಪುರ್: ಸಿಡಿಲು ಬಡಿದು ಮೃತಪಟ್ಟ ವ್ಯಕ್ತಿಯ ಕುಟುಂಬಕ್ಕೆ ಚೆಕ್ ವಿತರಿಸಿದ ಶಾಸಕ ಬಂಡೆಪ್ಪ ಖಾಶೆಂಪುರ್
ಬೀದರ್ (ಜೂ.30) ಇತ್ತೀಚೆಗೆ ಸಿಡಿಲು ಬಡಿದು ಮೃತಪಟ್ಟಿದ್ದ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಖಾಶೆಂಪುರ್ (ಪಿ) ಗ್ರಾಮದ ಚಿದಾನಂದ (45)ರವರ ಕುಟುಂಬಕ್ಕೆ ಸರ್ಕಾರದಿಂದ ನೀಡಲಾದ ಐದು ಲಕ್ಷ ರೂ. ಚೆಕ್ ಅನ್ನು ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕರಾಗಿರುವ ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ವಿತರಿಸಿದರು.
ಬೀದರ್ ತಹಶಿಲ್ದಾರ ಗಂಗಮ್ಮ ನೇತೃತ್ವದಲ್ಲಿ ಬುಧವಾರ ಖಾಶೆಂಪುರ್ (ಪಿ) ಗ್ರಾಮಕ್ಕೆ ಭೇಟಿ ನೀಡಿದ ಶಾಸಕರು, ಮೃತ ವ್ಯಕ್ತಿಯ ಮನೆಗೆ ಭೇಟಿ ನೀಡಿ ಕುಟುಂಬಸ್ಥರಿಗೆ ಪರಿಹಾರದ ಚೆಕ್ ನೀಡಿದರು. ಈ ವೇಳೆ ಮಾತನಾಡಿ, ಮೃತ ವ್ಯಕ್ತಿಯ ಪತ್ನಿಗೆ ವಿಧವಾ ವೇತನ, ರಾಷ್ಟ್ರೀಯ ಭದ್ರತಾ ಯೋಜನೆಯ ಪರಿಹಾರ, ಶವ ಸಂಸ್ಕಾರದ ಹಣವನ್ನು ಆದಷ್ಟು ಬೇಗ ದೊರಕಿಸಿಕೊಡಬೇಕು. ಗ್ರಾಮದಲ್ಲಿರುವ ವಯಸ್ಸಾದವರಿಗೆ ನೀಡುವ ವೇತನ, ವಿಧವೆಯರಿಗೆ ನೀಡುವ ವೇತನವನ್ನು ನೀಡಬೇಕು. ಜನರಿಗೆ ಸರ್ಕಾರದ ಸೌಲಭ್ಯಗಳ ಬಗ್ಗೆ ತಿಳುವಳಿಕೆ ನೀಡಬೇಕೆಂದು ಅಧಿಕಾರಿಗಳಿಗೆ ಶಾಸಕ ಬಂಡೆಪ್ಪ ಖಾಶೆಂಪುರ್ ರವರು ಸೂಚಿಸಿದರು.
ಈ ಸಂದರ್ಭದಲ್ಲಿ ತಹಶಿಲ್ದಾರ ಗಂಗಮ್ಮ, ಗ್ರಾಮ ಪಂಚಾಯ್ತಿ ಸದಸ್ಯರಾದ ಭಜರಂಗಿ ತಮಗೊಂಡ್ ವಕೀಲರು, ಶಿವಕುಮಾರ್ ಬಾಲೇಭಾವಿ, ಮಂಜುನಾಥ ಬಾಲೇಭಾವಿ, ಮೋಹನ್ ಸಾಗರ್, ನರಸಪ್ಪ ಬಜಗೊಂಡ್, ಮೃತರ ಕುಟುಂಬಸ್ಥರು, ಗ್ರಾಮಸ್ಥರು ಸೇರಿದಂತೆ ಅನೇಕರಿದ್ದರು.