ಜನತಾ ಜಲದಾರೆ ಸಂಕಲ್ಪ ಸಮಾವೇಶ
ಐದು ವರ್ಷ ಅಧಿಕಾರ ಕೊಡಿ, ಎಲ್ಲ ನೀರಾವರಿ ಯೋಜನೆಗಳನ್ನು ಅನುಷ್ಟಾನ ಮಾಡುವೆ
ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟ ಮಾಡುವೆ
ಆಲಮಟ್ಟಿ: ಜನತಾ ಜಲಧಾರೆ ಕಾರ್ಯಕ್ರಮದಲ್ಲಿ ಬಿಜೆಪಿ, ಕಾಂಗ್ರೆಸ್ ಮೇಲೆ ವಾಗ್ದಾಳಿ
ಆಲಮಟ್ಟಿ: 5 ವರ್ಷ ಪೂರ್ಣ ಪ್ರಮಾಣದ ಜೆಡಿಎಸ್ ಸರಕಾರ ನೀಡಿ. 75 ವರ್ಷಗಳಿಂದ ರಾಜ್ಯಕ್ಕೆ ಆಗಿರುವ ನೀರಾವರಿ ಅನ್ಯಾಯವನ್ನು ಸರಿಪಡಿಸುತ್ತೇನೆ. ಇಲ್ಲವಾದರೆ ಪಕ್ಷವನ್ನು ಬರ್ಕಾಸ್ತು ಮಾಡಿ ಮನೆಗೆ ಹೋಗುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜನತೆಗೆ ನೇರ ಮಾತುಗಳಲ್ಲಿ ಹೇಳಿದರು.
ಜೆಡಿಎಸ್ ಪಕ್ಷ ಈಗಲೂ 30-40 ಸೀಟು ಗೆಲ್ಲುತ್ತದೆ. ಅನುಮಾನ ಬೇಡ. ಆದರೆ ನನಗೆ ಬೇಕಿರುವುದು 120 ಸೀಟು. ಹನುಮ ಜಯಂತಿಯಂದು ನಾನು ಶಪಥ ಮಾಡುತ್ತಿದ್ದೇನೆ. ಪ್ರಾದೇಶಿಕ ಪಕ್ಷಕ್ಕೆ ಅಧಿಕಾರ ಕೊಟ್ಟು ನೋಡಿ, ಕರ್ನಾಟಕವನ್ನು ಸರ್ವ ಜನಾಂಗದ ಶಾಂತಿಯ ತೋಟವಾಗಿ ಮಾಡಿ ತೋರಿಸುವೆ ಎಂದರು.
ಹನುಮ ಜಯಂತಿ ಪುಣ್ಯ ದಿನವಾದ ಇಂದು ಜನತಾ ಜಲಧಾರೆ ಅಂಗವಾಗಿ ಆಲಮಟ್ಟಿ ಜಲಾಶಯದಲ್ಲಿ ಪವಿತ್ರ ಕೃಷ್ಣಾ ನದಿ ಜಲವನ್ನು ಕಲಶಕ್ಕೆ ತುಂಬಿಕೊಂಡ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಅಭಿವೃದ್ಧಿ ವಿಚಾರ ಮುಖ್ಯ:
ಭ್ರಷ್ಟಾಚಾರದ ಬಗ್ಗೆ ಬೇಕಾದಷ್ಟು ಹೇಳಬಹುದು. ಅದರ ನಮಗೆ ಬೇಕಿರುವುದು ಜನರ ಒಳಿತು ಮಾತ್ರ. ಈಗ ಎಲ್ಲೆಡೆ ಭ್ರಷ್ಟಾಚಾರ ತಾಂಡವ ಆಡುತ್ತಿದೆ. ಆದರೆ, ನಾವು ಅಭಿವೃದ್ಧಿ ವಿಷಯಗಳನ್ನು ಮುಂದಿಟ್ಟುಕೊಂಡು ಜನರ ಬಳಿಗೆ ಹೋಗುತ್ತಿದ್ದೇವೆ. ನೀರಾವರಿ, ನಿರುದ್ಯೋಗ, ಶಿಕ್ಷಣ, ಮಹಿಳೆಯರಿಗೆ ಬದುಕು ಕಟ್ಟಿಕೊಡುವ ಅನೇಕ ಯೋಜನೆಗಳ ಬಗ್ಗೆ ಚಿಂತನೆ ಮಾಡಿದ್ದೇವೆ ಎಂದು ಕುಮಾರಸ್ವಾಮಿ ಅವರು ಹೇಳಿದರು.
ನಾಡಿನ ಸಂಪತ್ತು ಉಳಿಯಬೇಕು. ಉಳಿಸುವ ಕೆಲಸ ಮಾಡಬೇಕು. ಆದರೆ, ಕೇಂದ್ರದವರು ನಾಡಿನ ಸಂಪತ್ತು ಲೂಟಿ ಮಾಡುತ್ತಿದ್ದಾರೆ. ಕೃಷ್ಣಾ ಮೇಲ್ದಂಡೆ ಯೋಜನೆಯನ್ನು ರಾಷ್ಟ್ರೀಯ ಯೋಜನೆ ಮಾಡುವುದಾಗಿ ಹೇಳಿದ್ದಾರೆ, ಅದನ್ನು ಮಾಡಲು ಅವರಿಗೆ ಸಾಧ್ಯ ಆಗಿಲ್ಲ. ಆದರೆ ಈ ಭಾಗದ ಜನ ಗುಳೆ ಹೋಗೋದು ಮಾತ್ರ ತಪ್ಪಿಲ್ಲ ಎಂದು ಕುಮಾರಸ್ವಾಮಿ ಕಿಡಿಕಾರಿದರು..
ಹನುಮ ಜಯಂತಿ ದಿನ ಆರಂಭ:
ಹನುಮ ಜಯಂತಿ ದಿನವೇ ಜನತಾ ಜಲದಾರೆ ಆರಂಭವಾಗಿದೆ. ನೀರಾವರಿ ಯೋಜನೆಗಳ ಸಾಕಾರಕ್ಕೆ ಪಕ್ಷದಿಂದ ಸಂಕಲ್ಪ ಮಾಡಿದ್ದೇವೆ. ಕಳೆದ 75 ವರ್ಷಗಳಿಂದ ನೆರೆಯ ರಾಜ್ಯಗಳಂತೆ ನೀರು ಸದ್ಬಳಕೆ ಆಗಿಲ್ಲ. ಆ ಕಾರಣಕ್ಕೆ ಮುಂದಿನ ಚುನಾವಣೆ ದೃಷ್ಟಿಯಿಂದ 15 ಕಡೆ ನೀರು ಸಂಗ್ರಹ ಮಾಡಲು ಹೊರಟಿದ್ದೇವೆ. ಆ
ಮೂಲಕ ಜನರಿಗೆ ನೀರಿನ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದೇವೆ. ಒಂದು ಬಾರಿ ಜೆಡಿಎಸ್‌ಗೆ ಸಂಪೂರ್ಣ ಬಹುಮತ ನೀಡಿ, ಇಡೀ ರಾಜ್ಯದ ಚಿತ್ರಣವನ್ನೇ ಬದಲಾಯಿಸುತ್ತವೆ ಎಂದು ಕುಮಾರಸ್ವಾಮಿ ಭರವಸೆ ನೀಡಿದರು.
ಬಿಜೆಪಿಗೆ ಬಿಸಿ ಮುಟ್ಟಿಸಿದ ಮಾಜಿ ಸಿಎಂ:
ರಾಜಕೀಯ ಮಾಡುವುದಕ್ಕಿಂತ ನಾಡಿನ ಜನರ ಬದುಕು ಕಟ್ಟಿಕೊಡುವ ಕೆಲಸ ಆಗಬೇಕಿದೆ. ಪ್ರಾದೇಶಿಕ ಪಕ್ಷ ಜೆಡಿಎಸ್ ಆ ಕೆಲಸ ಮಾಡಲಿದೆ. ಬಿಜೆಪಿ ಹೊಸಪೇಟೆಯಲ್ಲಿ ಕಾರ್ಯಕಾರಿಣಿ ಸಭೆಯನ್ನು ನಡೆಸುತ್ತಿದೆ. ಆ ಪಕ್ಷ ಅಧಿಕಾರಕ್ಕಾಗಿ ಹಾತೊರೆಯುವ ಪಕ್ಷ. ಅವರಿಗೆ ಬೇಕಿರುವುದು ಜನರ ಒಳಿತಲ್ಲ, ಚುನಾವಣೆ ಎಂದು ಅವರು ಹರಿಹಾಯ್ದರು.
ಭ್ರಷ್ಟಾಚಾರದ ಬಗ್ಗೆ ಕಾಂಗ್ರೆಸ್ ನಾಯಕರು ಈಗ ಬೀದಿಯಲ್ಲಿ ಮಾತನಾಡುತ್ತಿದ್ದಾರೆ. ಅವರಿಗೆ ನಾನು ಕೇಳಲು ಬಯಸುತ್ತೇನೆ, ನೀವು ಅಧಿಕಾರದಲ್ಲಿ ಇದ್ದಾಗ ಭ್ರಷ್ಟಾಚಾರ ಇರಲಿಲ್ಲವೇ? ಅವರು ಮಾತನಾಡುತ್ತಿರುವುದು ಹೇಗಿದೆ ಎಂದರೆ, ಭೂತದ ಬಾಯಲ್ಲಿ ಭಗವದ್ಗೀತೆಯ ಬಂದ ಹಾಗಿದೆ. ಇವತ್ತಿನ ಭ್ರಷ್ಟ ವ್ಯವಸ್ಥೆಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಮಾಜಿ ಮುಖ್ಯಮಂತ್ರಿ ದೂರಿದರು.
ಜನತಾ ಜಲದಾರೆ ಕಾರ್ಯಕ್ರಮವನ್ನು ನಾನು ಮುಖ್ಯಮಂತ್ರಿ ಆಗಲು ಮಾಡುತ್ತಿಲ್ಲ. ನೀರು ಎಲ್ಲರಿಗೂ ಅಗತ್ಯವಾದ ಜೀವದ್ರವ. ಗ್ರಾಮೀಣ ಪ್ರದೇಶದ ಜನರ ಪರಿಹಾರ ವಿಚಾರವಾಗಿದೆ ನೀರಾವರಿ. ಈ ಭಾಗದಲ್ಲಿ ನೀರಾವರಿ ಸೌಲಭ್ಯ ಎಷ್ಟು ಆಗಬೇಕಿದೆಯೋ, ಅಷ್ಟೇ ಬಡತನ ಕೂಡ ಇದೆ. ನೀವು ಮುಗ್ದ ಜನರಿದ್ದೀರಾ, ನಾವು ಕರೆದಾಗ ಬಂದು ಕೇಳಿಸಿಕೊಂಡು ಹೋಗ್ತೀರಿ. ಆದರೆ, ನಾನು ಹೇಳುವ ಎಲ್ಲಾ ಮಾಹಿತಿ ನೀವು ಮನಸ್ಸಿನಲ್ಲಿ ಇಟ್ಟುಕೊಳ್ಳಬೇಕು ಎಂದು ಕುಮಾರಸ್ವಾಮಿ ಅವರು ಮನವಿ ಮಾಡಿದರು.
ಇದು ಮೊದಲ ದಿನದ ಕಾರ್ಯಕ್ರಮ. 15 ಸ್ಥಳಗಳಲ್ಲಿ ನದಿ ನೀರು ಸಂಗ್ರಹ ಮಾಡಲಾಗುತ್ತಿದೆ.150 ಕಡೆ ಕಾರ್ಯಕ್ರಮ ಆಯೋಜಿಸಿ ಜನರಿಗೆ ಅರಿವು ಮೂಡಿಸಲಾಗುತ್ತಿದೆ. 15 ಸ್ಥಳದಲ್ಲಿ ನೀರು ಸಂಗ್ರಹಿಸಿ, ಗಂಗಾಮಾತೆಯನ್ನ ಪೂಜಿಸಿದ್ದೇವೆ. ರಾಜ್ಯದಲ್ಲಿ ನೀರಾವರಿ ವಿಷಯದಲ್ಲಿ ಆಗಿರುವ ಅನ್ಯಾಯದ ಬಗ್ಗೆ ಜನರಿಗೆ ಹೇಳುತ್ತೇವೆ ಎಂದರು ಕುಮಾರಸ್ವಾಮಿ.
ಸ್ವಾತಂತ್ರ್ಯ ಬಂದು 75ವರ್ಷಗಳಾಗಿವೆ. ನಿಮ್ಮ ನೆರವಿನಿಂದ 1983ರವರೆಗೂ ನಿರಂತರವಾಗಿ ಕಾಂಗ್ರೆಸ್ ಆಡಳಿತ ನಡೆಸಿದೆ. ಬಳಿಕ ಜೆಡಿಎಸ್, ಕಾಂಗ್ರೆಸ್ ಹೀಗೆ ಅಧಿಕಾರ ನಡೆಸಲಾಗಿದೆ. ದೇವೇಗೌಡರು ಮುಖ್ಯಮಂತ್ರಿ ಆಗುವ ತನಕ ಬಚಾವತ್ ಕಮೀಷನ್ ವರದಿಯ 10% ಕೆಲಸ ಮಾಡಿರಲಿಲ್ಲ. ಬಚಾವತ್ ಕಮೀಷನ್ ವರದಿಯ ಪ್ರಕಾರ ನೀರು ಬಳಕೆ ಮಾಡದ್ದಿದ್ದರೆ ಆಂಧ್ರ ಪ್ರದೇಶಕ್ಕೆ ನೀರು ಕೊಡಬೇಕಾಗಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ದೇವೇಗೌಡರು ಕಾರ್ಯಯೋಜನೆ ರೂಪಿಸಿದರು. ಆಗಲೇ ಅವರಿಗೆ ಪ್ರಧಾನಿ ಆಗುವ ಅವಕಾಶ ಕೂಡ ಸಿಕ್ಕಿತು. ಅಂದು 18 ಸಾವಿರ ಕೋಟಿ ರೂಪಾಯಿ ಹಣ ನೀಡಿ, ಯೋಜನೆ ರೂಪಿಸಿದರು. ಐಎಎಸ್ ಅಧಿಕಾರಿ ಜಾಮದಾರ್ ಅವರನ್ನು ನೇಮಿಸಿ, ಎಲ್ಲಾ ಸ್ವಾತಂತ್ರ್ಯ ನೀಡಿದರು. ಯೋಜನೆ ಜಾರಿಗೆ ಬಂದ ಮೇಲೆ 130 ಟಿಎಂಸಿ ನೀರು ಬಳಕೆಗೆ ಅವಕಾಶ ಸಿಕ್ಕಿತು ಎಂದು ಅವರು ಹೇಳಿದರು.
ಜನರ ಗುಳೆ ನಿಂತಿಲ್ಲ:
ಇಂದಿಗೂ ವಿಜಯಪುರ ಜಿಲ್ಲೆಯ ಹಲವು ತಾಲ್ಲೂಕುಗಳಲ್ಲಿ ಬರಡು ಭೂಮಿ ಇದೆ. ಜನರೂ ಈಗಲೂ ಗುಳೆ ಹೋಗುತ್ತಿದ್ದಾರೆ.19 ಕುಟುಂಬಗಳು ಗುಳೆ ಹೋಗುವಾಗ ಅಪಘಾತ ಸಂಭವಿಸಿತು. ಆಗ ಅಂದಿನ ಸರ್ಕಾರ ಪರಿಹಾರ ನೀಡಲಿಲ್ಲ. 2018ರಲ್ಲಿ ನಾನು ಸಿಎಂ ಆದಾಗ ಆ ಊರಿಗೆ ತೆರಳಿ ಜನ ಗುಳೆ ಹೋಗುತ್ತಿರುವ ಬಗ್ಗೆ ಮಾಹಿತಿ ಪಡೆದೆ ಎಂದು ಅವರು ಹೇಳಿದರು.
ತುಂಗಭದ್ರಾ ನದಿಯಲ್ಲಿ ಊಳು ತುಂಬಿದೆ, ಆ ನೀರು ಆಂಧ್ರ ಪ್ರದೇಶಕ್ಕೆ ಹೋಗುತ್ತಿದೆ. ನಮ್ಮ ನೀರು ಪಕ್ಕದ ರಾಜ್ಯದ ಪಾಲಾಗುತ್ತಿದೆ. ಐದು ವರ್ಷಗಳ ಕಾಲ ಸಂಪೂರ್ಣ ಬಹುಮತದ ಅಧಿಕಾರ ಜೆಡಿಎಸ್‌ಗೆ ನೀಡಿ. ಈ ಎಲ್ಲ ಸವಾಲುಗಳಿಗೆ ಪರಿಹಾರ ನೀಡುತ್ತೇನೆ. ಕಾಂಗ್ರೆಸ್, ಬಿಜೆಪಿಗೆ ಅಧಿಕಾರ ನೀಡಿದರೆ ಇನ್ನೂ 50 ವರ್ಷವಾದರೂ ನೀರು ಕೊಡೋದಿಲ್ಲ ಎಂದು ಮಾಜಿ ಮುಖ್ಯಮಂತ್ರಿಗಳು ಹೇಳಿದರು.
ಇಂದು ಕೃಷ್ಣಾ ಮೇಲ್ದಂಡೆ ಯೋಜನೆಗೆ ಪರಿಹಾರ ನೀಡಬೇಕಿದೆ. ಅನೇಕ ರೈತರು ಭೂಮಿ ಕಳೆದುಕೊಳ್ತಿದ್ದಾರೆ. ಐದು ವರ್ಷಗಳ ಕಾಲ ನಮಗೆ ಅಧಿಕಾರ ನೀಡಿ. ನಾನು ಲೆಕ್ಕ ಹಾಕಿದ್ದೇನೆ, ಪರಿಹಾರಕ್ಕೆ 5-6 ಲಕ್ಷ ಕೋಟಿ ಹಣ ಬೇಕಿದೆ. ಈಗ ಇವರು ವರ್ಷಕ್ಕೆ 8 ಸಾವಿರ ಕೋಟಿ ಕೊಡುತ್ತಿದ್ದಾರೆ. ಇವರಿಂದ ನೀರಾವರಿ ಯೋಜನೆಗಳ ಸಾಕಾರ ಸಾಧ್ಯವಿಲ್ಲ. ಐದು ವರ್ಷದಲ್ಲಿ ಎಲ್ಲಾ ನೀರಾವರಿ ಯೋಜನೆಗಳನ್ನೂ ನಾನು ಪೂರ್ಣ ಮಾಡುತ್ತೇನೆ. ಒಂದು ವೇಳೆ ಮಾತು ತಪ್ಪಿದರೆ ಜೆಡಿಎಸ್ ಪಕ್ಷವನ್ನ ವಿಸರ್ಜನೆ ಮಾಡುತ್ತೇನೆ ಎಂದು ಮಾಜಿ ಮುಖ್ಯಮಂತ್ರಿಗಳು ಘೋಷಿಸಿದರು.
ಜನರು ಜಾತಿ ಆಧಾರದ ಮೇಲೆ ಮತ ಹಾಕುವುದನ್ನು ನಿಲ್ಲಿಸಬೇಕು. 500-1000 ರೂಪಾಯಿ ಹಣ ಕೊಡುತ್ತಾರೆ ಎಂದು ನೀವು ಮತ ಹಾಕುತ್ತೀರಿ. ಈ ಸಲ ಹಾಗೆ ಮಾಡದೆ ಜೆಡಿಎಸ್ ಪಕ್ಷಕ್ಕೆ ಒಮ್ಮೆ ಅಧಿಕಾರ ನೀಡಿ. ಶಿಕ್ಷಣ, ಆರೋಗ್ಯ, ವಸತಿ, ನೀರಾವರಿ, ಕೃಷಿ ಕ್ಷೇತ್ರಗಳಲ್ಲಿ ಆಮೂಲಾಗ್ರ ಬದಲಾವಣೆ ತರುತ್ತೇನೆ. ನನ್ನ ಪರಿಕಲ್ಪನೆಯ ಪಂಚರತ್ನ ಯೋಜನೆಗಳನ್ನು ಜಾರಿಗೆ ತರುತ್ತೇನೆ ಎಂದು ಅವರು ಪ್ರಕಟಿಸಿದರು.
ಹನುಮ ಜಯಂತಿಯಂದು ಕಾರ್ಯಕ್ರಮ ಆರಂಭಿಸಿದ್ದೇವೆ. ಈ ತಾಯಂದಿರು, ಹೆಣ್ಣು ಮಕ್ಕಳು ಕಣ್ಣೀರು ಹಾಕಬಾರದು. ಇದು ನಮ್ಮ ನಾಡಿಗೆ ಶ್ರೇಯಸ್ಸು ಅಲ್ಲ. ದೇವೇಗೌಡರನ್ನು ಪ್ರಧಾನಿ ಮಾಡಿದಾಗ, ಕೇಂದ್ರವೇ ಇಲ್ಲಿಗೆ ಬಂದಿತ್ತು. ಈಗ ನೋಡಿದರೆ ತಾಂಡಾದಲ್ಲಿ ಹೆಣ್ಣುಮಕ್ಕಳು ಪ್ರತಿಭಟನೆ ಕೂತಿದ್ದಾರೆ. ಗುತ್ತಿ ಬಸವಣ್ಣ ಕಾರ್ಯಕ್ರಮಕ್ಕೆ ನೀರಿಲ್ಲ ಎಂದು ಅವರು ಧರಣಿ ಕೂತಿದ್ದಾರೆ. ಇಂದು ನರೇಂದ್ರ ಮೋದಿ ಚೆನ್ನಾಗಿ ಭಾಷಣ ಮಾಡುತ್ತಾರೆ. ಆದರೆ ಮಾತಿನಿಂದ ಏನೂ ಆಗುವುದಿಲ್ಲ. ಗ್ಯಾಸ್, ಎಣ್ಣೆ, ಪೆಟ್ರೋಲ್ ಬೆಲೆ ಎಲ್ಲಿಗೆ ಹೋಗಿದೆ ಎಂದು ಅವರು ಟೀಕಿಸಿದರು.
ಜಾತಿ ಧರ್ಮದ ಹೆಸರಿನಲ್ಲಿ ಮತ ಕೇಳಿ ಅಧಿಕಾರಕ್ಕೆ ಬಂದ ಬಿಜೆಪಿ ಏನು ಮಾಡಿದೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ಅಧಿಕಾರಕ್ಕೆ ಅಂಟಿಕೊಂಡು ಜನರನ್ನು ಒಡೆದು ಅಳುತ್ತಿದೆ ಎಂದು ಅವರು ಟೀಕಾ ಪ್ರಹಾರ ನಡೆಸಿದರು.
ಆಲಮಟ್ಟಿ ಜಲಾಶಯ ದಂಡೆಯಲ್ಲಿ ನಡೆದ ಜನತಾ ಜಲಧಾರೆ ಕಾರ್ಯಕ್ರಮಕ್ಕೆ ಭಾರೀ ಪ್ರಮಾಣದಲ್ಲಿ ಜನ ಸಾಗರ ಹರಿದು ಬಂದಿತ್ತು.
ಈ ವೇಳೆ ಕುಮಾರಸ್ವಾಮಿ ಅವರು, ಕೃಷ್ಣಾ ನದಿಯ ನೀರನ್ನು ಕಳಸಕ್ಕೆ ತುಂಬಿಕೊಂಡು ಪೂಜೆ ಸಲ್ಲಿಸಿದ ನಂತರ ಅವರು ಬೃಹತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಆಲಮಟ್ಟಿ ಅಣೆಕಟ್ಟಿನಿಂದ ಕಳಸಗಳಿಗೆ ನೀರು ತುಂಬಿಸಿಕೊಂಡ ಜೆಡಿಎಸ್ ಕಾರ್ಯಕರ್ತರು, ಅದನ್ನು ಗಂಗಾ ರಥದ ಕಲಶಕ್ಕೆ ತುಂಬಿದರು. ಮೂರು ಸಾವಿರ ಕಳಸಗಳ ಮೂಲಕ ನೀರು ಸಂಗ್ರಹ ಮಾಡಲಾಯಿತು.
ಆಲಮಟ್ಟಿ ಅಣೆಕಟ್ಟಿನಿಂದ ಸಮಾವೇಶ ನಡೆಯುವ ಸ್ಥಳದವರೆಗೂ ಕಳಸ ಹೊತ್ತು ನಡೆದ ಮಹಿಳೆಯರು ಜಲಧಾರೆ ಕಾರ್ಯಕ್ರಮದ ಕೇಂದ್ರಬಿಂದು ಆಗಿದ್ದರು.
ಶಾಸಕ ದೇವಾನಂದ ಚೌಹಾಣ್ , ಸುನೀತಾ ಚೌಹಾಣ್, ಬಸನಗೌಡ ಸಾಹೇಬ್ ಮಾಡಗಿ, ಹನುಮಂತಪ್ಪ ಮಾವಿನಮರದ, ಅಮರೇಗೌಡ ಪಾಟೀಲ, ವಿರೂಪಾಕ್ಷ ಮುಂತಾದವರು ವೇದಿಕೆಯಲ್ಲಿದ್ದರು.