ಐಐಟಿ ಮಾದರಿಯಲ್ಲಿ ರಾಜ್ಯದ ೭ ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಟಾಸ್ಕ್ ಫೋರ್ಸ್ ರಚನೆಗೆ ಸಿಎಂ ಸೂಚನೆ
ಬೆಂಗಳೂರು, ಮೇ 05: ಐಐಟಿ ಮಾದರಿಯಲ್ಲಿ ರಾಜ್ಯದ 6 ಇಂಜಿನಿಯರಿಂಗ್ ಕಾಲೇಜುಗಳನ್ನು ಮೇಲ್ದರ್ಜೆಗೇರಿಸಲು ಟಾಸ್ಕ್ ಫೋರ್ಸ್ ರಚನೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ ನೀಡಿದರು.
ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಗಳಾಗಿ ಮೇಲ್ದರ್ಜೆಗೇರಿಸುವ ಯೋಜನೆಗೆ ಸಂಬಂಧಿಸಿದಂತೆ ಎನ್ ಐ ಟಿ, ಐಐಟಿಗಳ ನಿವೃತ್ತ ನಿರ್ದೇಶಕರು, ಶಿಕ್ಷಣ ತಜ್ಞರು ಒಳಗೊಂಡಿರುವ ಸಮಿತಿಯನ್ನು ಇನ್ನೆರಡು ದಿನಗಳ ಒಳಗಾಗಿ ರಚಿಸಬೇಕು. ಕೆ ಐ ಟಿಗಳಿಗೆ ಸೂಕ್ತ ಮಾರ್ಗದರ್ಶನ ನೀಡಲು ಪ್ರಮುಖ ಐಟಿ ಕಂಪನಿಗಳು, ಕೈಗಾರಿಕೋದ್ಯಮಿಗಳ ಪ್ರಮುಖರ ಸೇವೆಯನ್ನು ಪಡೆಯಬಹುದು ಎಂದರು.
2022- 23 ರ ಆಯವ್ಯಯದಲ್ಲಿ ಘೋಷಣೆ ಮಾಡಿರುವ ಯೋಜನೆಗಳಿಗೆ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಉನ್ನತ ಶಿಕ್ಷಣ ಇಲಾಖೆಯ ಸಭೆಯ ಮುಖ್ಯಾಂಶಗಳು ಇಂತಿವೆ:
- ರಾಜ್ಯದ ಆಯ್ದ 14 ಇಂಜಿನಿಯರಿಂಗ್ ಕಾಲೇಜುಗಳನ್ನು ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಮೇಲ್ದರ್ಜೆಗೇರಿಸುವ ಯೋಜನೆ ಪ್ರಮುಖವಾದುದು.
- ಈಗಾಗಲೇ ಉತ್ತಮ ರೀತಿಯಲ್ಲಿ ಸ್ಥಾಪಿತವಾಗಿರುವ ಹಾಗೂ ಮೂಲಸೌಲಭ್ಯ, ಶಿಕ್ಷಕ ವರ್ಗ, ಹಾಸ್ಟೆಲ್ ವ್ಯವಸ್ಥೆಯಿರುವಂತಹ ಕಾಲೇಜುಗಳನ್ನು ಕೆಐಟಿ ಗೆ ಮೇಲ್ದರ್ಜೆಗೆ ಏರಿಸಲು ಆಯ್ದುಕೊಳ್ಳಲಾಗುವುದು
- ಗುಲ್ಬರ್ಗಾದ ಇಂಜಿಯರಿಂಗ್ ಕಾಲೇಜನ್ನು ಈ ಯೋಜನೆಯಡಿ ಮೇಲ್ದರ್ಜೆಗೇರಿಸಲು ಸೂಕ್ತ ಪ್ರಸ್ತಾವನೆ ಸಲ್ಲಿಸುವುದು.
- ಕಲ್ಯಾಣ ಕರ್ನಾಟಕದ ಕಲಬುರಗಿ, ಕಿತ್ತೂರು ಕರ್ನಾಟಕ ವಿಭಾಗದಲ್ಲಿ ಹಾವೇರಿ ಹಾಗೂ ಉತ್ತರ ಕನ್ನಡ ( ಕಾರವಾರ) ಇಂಜಿನಿರಿಂಗ್ ಕಾಲೇಜು, ಮೈಸೂರು ವಿಭಾಗದಲ್ಲಿ ಕೆ.ಆರ್.ಪೇಟೆ ಹಾಗೂ ಕೊಡುಗು , ಬೆಂಗಳೂರು ವಿಭಾಗದಲ್ಲಿ ಎಸ್ ಕೆ ಎಸ್ ಜೆ ಟಿ ಐ ಹಾಗೂ ರಾಮನಗರದ ಇಂಜಿನಿಯರಿಂಗ್ ಕಾಲೇಜನ್ನು ಮೇಲ್ದರ್ಜೆಗೇರಿಸಲು ಕ್ರಮ ಕೈಗೊಳ್ಳುವಂತೆ ಸೂಚಿಸಿದರು.
- ಕರ್ನಾಟಕ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿ ಮುಂದಿನ ವರ್ಷದೊಳಗೆ ಎನ್ ಐ ಟಿ ಮಟ್ಟಕ್ಕೆ ಅಭಿವೃದ್ಧಿಯಾಗಬೇಕು. ಕಾಲೇಜುಗಳಲ್ಲಿ ವಿಷಯವಾರು ಕಲಿಕಾ ಉತ್ಕೃಷ್ಟ ಕೇಂದ್ರಗಳನ್ನಾಗಿ ಪರಿವರ್ತಿಸಲು ಪ್ರಾಶಸ್ತ್ಯ ನೀಡಬೇಕು.
- ಕೆಐಟಿಗಳ ನಿರ್ಮಾಣಕ್ಕೆ ವೈಜ್ಞಾನಿಕ ಚಿಂತನೆ ಅಗತ್ಯ. ಆರ್ ಎಂಡ್ ಡಿ ಹಾಗೂ ಉದ್ಯೋಗಾವಕಾಶಗಳಿಗೆ ಇಲ್ಲಿ ಪ್ರಾಮುಖ್ಯತೆ ನೀಡಬೇಕು.
- ಕೆಐಟಿಗಳಿಗಾಗಿ ಇಂಜಿನಿಯರಿಂಗ್ ಕಾಲೇಜುಗಳ ಆಯ್ಕೆ, ಲೋಗೋ, ಬ್ರ್ಯಾಡಿಂಗ್ ಉತ್ತಮ ರೀತಿಯಲ್ಲಿ ಆಗಬೇಕು.