ಪ್ರತಿ ಕಂದಾಯ ವಿಭಾಗಗಳಲ್ಲಿನ ನೂರು ಗ್ರಾಮಗಳಲ್ಲಿ ಹೊಸ ಆರ್.ಟಿ.ಸಿಗಳನ್ನು
ಆಗಸ್ಟ್ ಒಳಗೆ ವಿತರಿಸಲು ಕ್ರಮಕ್ಕೆ ಸೂಚನೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
ಬೆಂಗಳೂರು, ಮೇ 06: ರಾಜ್ಯದ ಎಲ್ಲಾ ಕಂದಾಯ ವಿಭಾಗಗಳ ತಲಾ 100 ಗ್ರಾಮಗಳಲ್ಲಿ ಹೊಸ ಆರ್.ಟಿ.ಸಿಗಳನ್ನು ಆಗಸ್ಟ್ ಮಾಹೆಯೊಳಗೆ ವಿತರಿಸಲು ಕ್ರಮ ವಹಿಸಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚಿಸಿದರು.
2022-23 ನೇ ಸಾಲಿನ ಆಯವ್ಯಯ ಘೋಷಣೆಗಳ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅವರ ಅಧ್ಯಕ್ಷತೆಯಲ್ಲಿ ಇಂದು ನಡೆದ ಕಂದಾಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಸಭೆಯ ಮುಖ್ಯಾಂಶಗಳು:
- ಕೃಷಿ ಜಮೀನು ಮತ್ತು ಇತರೆ ಸ್ವತ್ತುಗಳ ಡ್ರೋನ್ ಆಧಾರಿತ ಸರ್ವೆ ಕಾರ್ಯವನ್ನು ಕೈಗೊಂಡು ದಾಖಲೆಗಳ ಡಿಜಿಟಲೀಕರಣವಾಗಬೇಕು. ಪೋಡಿ ಕೆಲಸಗಳು ಸೂಕ್ತವಾಗಿ ಆಗಬೇಕು.
- ವಿವಿಧ ಸಾಮಾಜಿಕ ಭದ್ರತಾ ಪಿಂಚಣಿ ಯೋಜನೆಗಳಡಿ 59.45 ಲಕ್ಷ ಫಲಾನುಭವಿಗಳಿಗೆ ನೀಡುತ್ತಿರುವ ಮಾಶಾಸನ ಹೆಚ್ಚಳವಾಗಿದೆ. ಅವಿವಾಹಿತ, ವಿಚ್ಛೇದಿತ ಮಹಿಳೆಯರಿಗೆ ಹಾಗೂ ಲಿಂಗತ್ವ ಅಲ್ಪಸಂಖ್ಯಾತರಿಗೆ 1.32 ಲಕ್ಷ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಯೋಜನೆಗಳನ್ನು ಫಲಾನುಭವಿಗಳಿಗೆ ತಲುಪಿಸುವಲ್ಲಿ ಉತ್ತಮ ಕೆಲಸವಾಗಿರುವ ಬಗ್ಗೆ ಮುಖ್ಯಮಂತ್ರಿಗಳು ಮೆಚ್ಚುಗೆ ವ್ಯಕ್ತಪಡಿಸಿದರು.
- ಆರ್.ಟಿ.ಸಿ ಗಳನ್ನು ಅಧಿಕೃತವಾಗಿ ನೀಡದಿದ್ದರೆ ವ್ಯಾಜ್ಯಗಳು ಬಗೆಹರಿಯುವುದಿಲ್ಲ. ಈ ಬಗ್ಗೆ ಪರಿಶೀಲನಾ ಕಾರ್ಯವನ್ನು ಹಂತ ಹಂತವಾಗಿ ಮಾಡಬೇಕು. ಭೂ ವಿವಾದಗಳ ಪ್ರಕರಣಗಳಿಂದ ಜನರಿಗೆ ತೊಂದರೆಯಾಗದಂತೆ ಅಧಿಕಾರಿಗಳು ಸೂಕ್ತ ಗಮನ ಹರಿಸಬೇಕು.
- ಬದಲಾದ ಸನ್ನಿವೇಶದಲ್ಲಿ ಬದಲಾದ ಆಡಳಿತ ವ್ಯವಸ್ಥೆ ಇರಬೇಕು. ಹಳೆ ವ್ಯವಸ್ಥೆಯಲ್ಲಿ ಪ್ರತಿದಿನಕ್ಕೆ 3-4 ನೋಂದಣಿಯಾಗುತ್ತದೆ.
- ರಾಜ್ಯದ ಪ್ರತಿ ವಿಭಾಗದಲ್ಲಿ 4 ಅಥವಾ 5 ತಾಲ್ಲೂಕಗಳಲ್ಲಿ ನೋಂದಣಿ ಪ್ರಕ್ರಿಯೆಯನ್ನು ಕೈಗೊಳ್ಳಲು ಸೂಚಿಸಿದರು.
- ಸಾರ್ವಜನಿಕರಿಗೆ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಬೆಂಗಳೂರಿಗೆ ಹೆಚ್ಚಿನ ಉಪನೋಂದಣಾಧಿಕಾರಿಗಳ ಕಚೇರಿಯನ್ನು ಸ್ಥಾಪಿಸುವ ಬಗ್ಗೆ ಕ್ರಮ ವಹಿಸಬೇಕು.
- ಎಲ್ಲಾ ಪಾರಂಪರಿಕ ನೋಂದಾಯಿತ ಶಾಶ್ವತ ದಾಖಲೆಗಳ ಆಧುನೀಕರಣ ಆಗಬೇಕು.
- ಪಂಡರಾಪುರದಲ್ಲಿ 7.50 ಕೋಟಿ ರೂ.ಗಳ ವೆಚ್ಚದಲ್ಲಿ ಅತಿಥಿಗೃಹ ನಿರ್ಮಾಣದಲ್ಲಿ ಕರ್ನಾಟಕದ ಸ್ಥಳ ಲಭ್ಯವಿದ್ದು, ಡಾರ್ಮಿಟರಿಗಳನ್ನು ಕಟ್ಟಲು ಹೆಚ್ಚಿನ ಆದ್ಯತೆ ನೀಡುವುದು. ಪ್ರಸ್ತಾವನೆ ಮರು ಯೋಜಿಸಿ ಜುಲೈ 2 ರೊಳಗೆ ಶಂಕುಸ್ಥಾಪನೆ ನೆರವೇರಿಸಲು ಕ್ರಮ ವಹಿಸುವುದು.
- ಸಣ್ಣ ತಾಲ್ಲೂಕುಗಳಿಗೆ ಮಿನಿವಿಧಾನಸೌಧ ವಿನ್ಯಾಸಗೊಳಿಸುವಾಗ ಅಗತ್ಯವಿರುವ ಇಲಾಖೆಗಳನ್ನು ಗಮನದಲ್ಲಿ ಇಟ್ಟುಕೊಳ್ಳುವುದು. ಲಭ್ಯವಿರುವ ಸ್ಥಳಗಳ ಪಟ್ಟಿ ನೀಡುವುದು ಹಾಗೂ ಎರಡು ವರ್ಷಗಳ ಅವಧಿಗೆ ಕಟ್ಟಡ ನಿರ್ಮಾಣ ಪೂರ್ಣಗೊಳ್ಳಬೇಕು. ಪ್ರಮುಖ ಇಲಾಖೆಗಳು ಕಟ್ಟಡದಲ್ಲಿ ಕಾರ್ಯನಿರ್ವಹಿಸಬೇಕು.