ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶ ರವಾನಿಸಿದ ರಾಜಭವನ
ಬೆಂಗಳೂರು ಮೇ 30, 2022: ‘ಸಂವಿಧಾನಾತ್ಮಕ ಮಾರ್ಗಗಳ ಹಾದಿಯಲ್ಲಿ ಹೆಜ್ಜೆ ಹಾಕಿದಾಗಲೇ ಸಾಮಾಜಿಕ ಮತ್ತು ಆರ್ಥಿಕ ಧ್ಯೇಯಗಳ ಸಾಧನೆ ಸಾಧ್ಯ’ ಎನ್ನುವಂತಹ ಅನೇಕ ಮಹತ್ತರ ಸಮಾಜಮುಖಿ ಆಶಯಗಳನ್ನು ನಾಡಿನ ಜನರೆದೆಯಲ್ಲಿ ಬಿತ್ತಿದ ಡಾ.ಬಿ.ಆರ್.ಅಂಬೇಡ್ಕರ ಅವರು ಬರೀ ವ್ಯಕ್ತಿಯಲ್ಲ, ಒಂದು ಶಕ್ತಿ. ಅನೇಕ ರಾಷ್ಟ್ರಗಳ ಕಾನೂನು ಅಧ್ಯಯನ ನಡೆಸಿ ಸಮಾನತೆಯ ಸಂದೇಶದ ಸಂವಿಧಾನ ನಿರ್ಮಿಸಿದ ಕಾರಣಕ್ಕೆ ಡಾ.ಅಂಬೇಡ್ಕರ ಇಡೀ ಜಾಗತಿಕ ಮಟ್ಟದಲ್ಲಿ ವಿಶೇಷ ಗೌರವಕ್ಕೆ ಪಾತ್ರರಾಗಿದ್ದಾರೆ. ಏಪ್ರೀಲ್ 14ರಂದು ಆಚರಿಸಲ್ಪಡುವ ಡಾ.ಬಿ.ಆರ್.ಅಂಬೇಡ್ಕರ ಅವರ ಜಯಂತಿಯನ್ನು ವಿಶ್ವ ಜ್ಞಾನದ ದಿನವನ್ನಾಗಿ ಆಚರಿಸಲು ಅವರ 125ನೇ ಜನ್ಮದಿನದ ಮುನ್ನಾ ದಿನದಂದು ಯುನೈಟೆಡ್ ನೇಷನ್ ಘೋಷಿಸಿದ್ದು ಈ ವೇಳೆ ಸ್ಮರಣೀಯ.
ಇಂತಹ ಮಹಾನ್ ಮಾನವತಾವಾದಿ, ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ ಅವರ ಪುತ್ಥಳಿಯು ಈಗ ರಾಜಧಾನಿ ಬೆಂಗಳೂರಿನ ರಾಜಭವನ ಅಂಗಳದಲ್ಲೂ ನಿರ್ಮಾಣಗೊಂಡಿದೆ.
ಕರ್ನಾಟಕದ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಸನ್ಮಾನ್ಯ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಉಪಸ್ಥಿತಿಯಲ್ಲಿ ಸೋಮವಾರ ಸಾಮಾಜಿಕ ನ್ಯಾಯದ ಹರಿಕಾರ ಡಾ.ಅಂಬೇಡ್ಕರ ಅವರ ಕಂಚಿನ ಪುತ್ಥಳಿಯನ್ನು ಅನಾವರಣಗೊಳಿಸಿ, ಪುಷ್ಪನಮನ ಸಲ್ಲಿಸಿ ನಾಡಿನ ಜನತೆಗೆ ಸಮರ್ಪಿಸಿದರು.
ಡಾ.ಬಿ.ಆರ್.ಅಂಬೇಡ್ಕರ ಅವರ 125ನೇ ಜಯಂತಿ ವರ್ಷಾಚರಣೆಯ ಸಂದರ್ಭದಿಂದಲೇ ದೇಶದೆಲ್ಲೆಡೆ ಡಾ.ಅಂಬೇಡ್ಕರ ಅವರ ಬದುಕು-ಸಾಧನೆ ಸ್ಮರಣೆಯ ಕಾರ್ಯಕ್ರಮಗಳು ವಿಭಿನ್ನವಾಗಿ ನಡೆಯುತ್ತಲೇ ಇವೆ.
ಅಂತೆಯೇ ರಾಜಧಾನಿ ಬೆಂಗಳೂರಿನ ರಾಜಭವನ ಅಂಗಳದಲ್ಲಿಯೂ ಡಾ.ಅಂಬೇಡ್ಕರ ಪುತ್ಥಳಿ ಅನಾವರಣಗೊಳಿಸುವ ಮೂಲಕ ರಾಜಭವನವು ಈ ನಾಡಿಗೆ ಸಾಮಾಜಿಕ ನ್ಯಾಯದ ಸಂದೇಶವನ್ನು ರವಾನಿಸಿ, ಭಾರತ ರತ್ನಕ್ಕೆ ತನ್ನ ಗೌರವವನ್ನು ಸಮರ್ಪಿಸಿದೆ.
ಡಾ.ಬಿ.ಆರ್ ಅಂಬೇಡ್ಕರ್ ಅವರ ಪುತ್ಥಳಿಗೆ ಕರ್ನಾಟಕ ವಿಧಾನಸಭೆಯ ಸನ್ಮಾನ್ಯ ಸಭಾಧ್ಯಕ್ಷರಾದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿ ಹಾಗೂ ಸನ್ಮಾನ್ಯ ವಿಧಾನಪರಿಷತ್ ಸಭಾಪತಿ ಶ್ರೀ ರಘುನಾಥ್‌ರಾವ್ ಮಲ್ಕಾಪೂರೆ, ಸನ್ಮಾನ್ಯ ಮುಖ್ಯಮಂತ್ರಿಗಳು, ಮಾಲಾರ್ಪಣೆ ಮಾಡಿ ಪುಷ್ಪನಮನ ಸಲ್ಲಿಸಿದರು. ರಾಜಭವನದ ಅಂಗಳದಲ್ಲಿರುವ ಗಾಂಧಿ ಪುತ್ಥಳಿಗೂ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.