IMG 20220531 WA0029

ಮೋದಿ ಯ ಗುಣಗಾನ…

Genaral STATE

ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಮೋದಿಯವರದ್ದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ಮೇ 31- ಸಮಾಜದ ಕಟ್ಟಕಡೆಯ ಜನರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕೆಲಸವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ಎಂಟು ವರ್ಷಗಳಲ್ಲಿ ಮಾಡಿದ್ದಾರೆ. ಸಮಾಜದ ಕಟ್ಟಕಡೆಯ ವ್ಯಕ್ತಿಗಾಗಿ ಮಿಡಿಯುವ ಹೃದಯ ಶ್ರೀಮಂತಿಕೆ ಮೋದಿಯವರದ್ದು. ಹಿಂದೆಂದೂ ಈ ಪ್ರಮಾಣದಲ್ಲಿ ಇಂತಹ ಕೆಲಸ ಆಗಿರಲಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯಪಟ್ಟರು.

IMG 20220531 WA0026

ಅವರು ಇಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಏರ್ಪಡಿಸಲಾಗಿದ್ದ ಕೇಂದ್ರ ಪುರಸ್ಕೃತ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ದುಡಿಯುವ ವರ್ಗ ದೇಶ ಕಟ್ಟುತ್ತಿದೆ. ಇಂತಹ ರೈತರು, ವಿವಿಧ ಕೈಗಾರಿಕೆ, ನಿರ್ಮಾಣ ಕಾರ್ಮಿಕರು, ದುಡಿಯುವ ಮಹಿಳೆಯರು ದೇಶ ನಿರ್ಮಾಣದ ಕಾಯಕದಲ್ಲಿ ತೊಡಗಿದ್ದಾರೆ. ಇಂತಹ ಸಮಾಜದ ಕಟ್ಟ ಕಡೆಯ ಜನರಿಗೆ ಉತ್ತಮ ಶಿಕ್ಷಣ ನೀಡುವ ಮೂಲಕ, ಅವರು ಸ್ವಾವಲಂಬಿ, ಸ್ವಾಭಿಮಾನಿ ಬದುಕು ಕಟ್ಟಿಕೊಳ್ಳಲು ನೆರವಾಗುವ ಜನಧನ, ಸ್ವಚ್ಛ ಭಾರತ್, ಪಿಎಂ ಸ್ವನಿಧಿ, ಪಿಎಂ ಕಿಸಾನ್ ಸಮ್ಮಾನ್ ಯೋಜನೆ, ಆಯುಷ್ಮಾನ್ ಭಾರತ್ ಮುಂತಾದ ಯೋಜನೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅವರು ಜಾರಿಗೆ ತಂದಿದ್ದಾರೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಯೋಜನೆಗಳನ್ನು ತಳದಿಂದ ಮೇಲಕ್ಕೆ ರೂಪಿಸಬೇಕು. ಅಂತೆಯೇ ಇದರ ಯೋಜನೆ, ಹಣಕಾಸು ನೆರವು ಮೇಲಿನಿಂದ ತಳಕ್ಕೆ ಹರಿದುಬರಬೇಕು. ಹಿಂದೆ ಯೋಜನೆಗಳನ್ನು ರೂಪಿಸಿದರೂ ಅನುದಾನ ತಳಹಂತದ ವರೆಗೆ ತಲುಪುತ್ತಿರಲಿಲ್ಲ. ಆದರೆ ನರೇಂದ್ರ ಮೋದಿಯವರ ನಾಯಕತ್ವದಲ್ಲಿ ನೆರವು ನೇರವಾಗಿ ಫಲಾನುಭವಿಗಳ ಖಾತೆಗೆ ವರ್ಗಾವಣೆಯಾಗುತ್ತಿದೆ. ಪ್ರಧಾನಿಯವರು ಕೆಂಪುಕೋಟೆಯಲ್ಲಿ ಭಾಷಣ ಮಾಡುವಾಗ ದೇಶವನ್ನು ಸ್ವಚ್ಛ ಭಾರತವನ್ನಾಗಿಸುವುದಾಗಿ ಘೋಷಿಸಿದರು. ಆ ಮೂಲಕ ತಳ ಹಂತದ ಜನರೂ, ಸ್ವಚ್ಛತೆಯಿಂದ ಆರೋಗ್ಯವಂತರಾಗಿ, ಸದೃಢ ಸಮಾಜ ಹಾಗೂ ಆ ಮೂಲಕ ಸದೃಢ ದೇಶ ನಿರ್ಮಾಣ ಮಾಡುವ ವಾತಾವರಣ ನಿರ್ಮಿಸಿದರು. ಹಿಂದಿನ ಯಾವ ಪ್ರಧಾನಿಗಳೂ ಮನೆ ಮನೆಗೆ ನೀರು ಕೊಡುವ ಘೋಷಣೆ ಮಾಡುವ ಧೈರ್ಯ ಮಾಡಿರಲಿಲ್ಲ. ಆದರೆ ನರೇಂದ್ರ ಮೋದಿಯವರು ಪ್ರತಿ ಗ್ರಾಮೀಣ ಮನೆಗೆ ನೀರು ಒದಗಿಸುವ ಘೋಷಣೆ ಮಾಡಿರುವುದಲ್ಲದೆ, ರಾಜ್ಯಗಳನ್ನು ಹುರಿದುಂಬಿಸುತ್ತ, ಮನೆ ಮನೆಗೆ ನೀರು ಒದಗಿಸಲು ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. 2024 ರ ವೇಳೆಗೆ ಪ್ರತಿಯೊಬ್ಬರಿಗೂ ಸೂರು ಒದಗಿಸುವ ದೃಷ್ಟಿಯಿಂದ ಪ್ರಧಾನ ಮಂತ್ರಿ ಆವಾಸ್ ಯೋಜನೆಯನ್ನು ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಜಾರಿಗೊಳಿಸುತ್ತಿದ್ದಾರೆ. ಈ ಯೋಜನೆಯಡಿ ರಾಜ್ಯದಲ್ಲಿ 18 ಲಕ್ಷ ಮನೆಗಳನ್ನು ಮುಂದಿನ ಮೂರು ವರ್ಷಗಳಲ್ಲಿ ನಿರ್ಮಿಸಲು ಅವಕಾಶ ನೀಡಿ, ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ ಎಂದು ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.

IMG 20220531 WA0027

ನರೇಂದ್ರ ಮೋದಿಯವರು ಸರಿಯಾದ ವ್ಯಕ್ತಿಗೆ ಜನಸೇವೆಯ ಅವಕಾಶ ಕೊಟ್ಟರೆ ಏನನ್ನು ಸಾಧಿಸಬಹುದು ಎಂದು ತೋರಿಸಿದ್ದಾರೆ. ಒಬ್ಬ ದಕ್ಷ ಆಡಳಿತಗಾರನಾಗಿ ಜನರಿಗೆ ನ್ಯಾಯಸಮ್ಮತ ಹಕ್ಕುಗಳನ್ನು ಒದಗಿಸಿದ್ದಾರೆ. ಒಬ್ಬ ದಿಟ್ಟನಾಯಕನಾಗಿ ದೇಶದ ಗಡಿ ರಕ್ಷಣೆ ಮಾಡಿದ್ದಾರೆ. ದೂರ ದೃಷ್ಟಿಯ ನಾಯಕನಾಗಿ ಇತರ ರಾಷ್ಟ್ರಗಳು ಭಾರತವನ್ನು ಗೌರವದಿಂದ ಕಾಣುವಂತೆ ಮಾಡಿದ್ದಾರೆ. ಆಡಳಿತದಲ್ಲಿ ತಂತ್ರಜ್ಞಾನದ ಬಳಕೆಯ ಮೂಲಕ ಸುಶಾಸನವನ್ನು ಸಾಧ್ಯವಾಗಿಸಿದ್ದಾರೆ. ಜನಸಂಖ್ಯೆ ದೇಶಕ್ಕೆ ಮಾರಕ ಎಂಬ ಅಭಿಪ್ರಾಯವನ್ನು ಬದಲಿಸಿ, ಮಾನವ ಸಂಪನ್ಮೂಲ ದೇಶದ ಶಕ್ತಿ ಎಂದು ತೋರಿಸಿದ್ದಾರೆ ಎಂದು ಮುಖ್ಯಮಂತ್ರಿಗಳು ಅಭಿಪ್ರಾಯಪಟ್ಟರು.

ನಾವು ಈಗ ಸ್ವಾತಂತ್ರ್ಯದ ಅಮೃತ ಮಹೋತ್ಸವ ವರ್ಷಾಚರಣೆಯ ಸಂಭ್ರಮದಲ್ಲಿದ್ದೇವೆ. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಪ್ರಧಾನಿಯಾಗಿ ನಡೆಸುತ್ತಿರುವ ಜನಪರ ಆಡಳಿತಕ್ಕೆ ಎಂಟು ವರ್ಷಗಳು ತುಂಬಿದೆ. ಆತ್ಮಾವಲೋಕನ ಹಾಗೂ ಸಿಂಹಾವಲೋಕನ ಮಾಡಲು ಇದು ಒಂದು ಸುಸಂದರ್ಭ. ಕಳೆದ 75 ವರ್ಷಗಳಲ್ಲಿ ಪ್ರಜಾಪ್ರಭುತ್ವವನ್ನು ಉಳಿಸಿ, ಬೆಳೆಸಿರುವುದೇ ನಮ್ಮ ದೇಶದ ದೊಡ್ಡ ಸಾಧನೆ. ಆದರೆ ತುರ್ತು ಪರಿಸ್ಥಿತಿ ಘೋಷಣೆ ನಮ್ಮ ಇತಿಹಾಸದಲ್ಲಿ ಒಂದು ಕಪ್ಪುಚುಕ್ಕೆಯಾಗಿ ಉಳಿದಿದೆ. ತುರ್ತುಪರಿಸ್ಥಿತಿಯ ವಿರುದ್ಧ ಜನಾಂದೋಲನ ನಡೆಸಿ, ಪ್ರಜಾಪ್ರಭುತ್ವವನ್ನು ಮರುಸ್ಥಾಪನೆ ಮಾಡಿರುವುದು, ನಮ್ಮ ಪ್ರಜಾಪ್ರಭುತ್ವದ ಅಂತಃಶಕ್ತಿಗೆ ಸಾಕ್ಷಿ ಎಂದು ಮುಖ್ಯಮಂತ್ರಿಗಳು ವಿವರಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಕೇಂದ್ರ ಪುರಸ್ಕೃತ ವಿವಿಧ ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿದರು. ಸಚಿವರಾದ ಗೋವಿಂದ ಎಂ. ಕಾರಜೋಳ, ಎಸ್.ಟಿ. ಸೋಮಶೇಖರ್, ಆರಗ ಜ್ಞಾನೇಂದ್ರ, ಶಶಿಕಲಾ ಜೊಲ್ಲೆ, ವಿ. ಸೋಮಣ್ಣ, ಬಿ.ಸಿ.ನಾಗೇಶ್, ಸಂಸದ ಪಿ.ಸಿ. ಮೋಹನ್ ಮತ್ತಿತರ ಗಣ್ಯರು ಭಾಗವಹಿಸಿದ್ದರು.