IMG 20220603 WA0017

KSRTC:ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ….!

Genaral STATE

ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಿ: ಸಾರಿಗೆ ನಿಗಮಗಳಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ

ಬೆಂಗಳೂರು, ಜೂನ್ 3- ರಾಜ್ಯದ ಎಲ್ಲ ಸಾರಿಗೆ ನಿಗಮಗಳು ಕಾರ್ಯಾಚರಣೆ ಮತ್ತು ಇತರ ಮೂಲಗಳಿಂದಲೂ ಸಂಪನ್ಮೂಲ ಕ್ರೋಢೀಕರಣಕ್ಕೆ ಒತ್ತು ನೀಡಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಲಹೆ ನೀಡಿದರು.

ಅವರು ಇಂದು ಸಾರಿಗೆ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ಈ ಸೂಚನೆ ನೀಡಿದರು.

ಸಾರಿಗೆ ನಿಗಮಗಳ ಪುನಶ್ಚೇತನಕ್ಕೆ ರಚಿಸಲಾದ ತಜ್ಞರ ಸಮಿತಿಯ ವರದಿಯನ್ನು ನಿರೀಕ್ಷಿಸಲಾಗುತ್ತಿದೆ. ಅದರೊಂದಿಗೆ ಸಂಪನ್ಮೂಲ ಕ್ರೋಢೀಕರಣಕ್ಕೆ ಆದ್ಯತೆ ನೀಡುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ರಾಜ್ಯದ ದೇವನಹಳ್ಳಿ, ಕೋಲಾರ, ಹೊಸಪೇಟೆ, ಗದಗ, ಬಳ್ಳಾರಿ, ವಿಜಯಪುರ, ಬೀದರ್, ಯಾದಗಿರಿ ಮತ್ತು ದಾವಣಗೆರೆಗಳಲ್ಲಿ 80 ಕೋಟಿ ರೂ. ವೆಚ್ಚದಲ್ಲಿ ಸ್ವಯಂ ಚಾಲಿತ ಚಾಲನಾ ಪಥಗಳ ನಿರ್ಮಾಣಕ್ಕೆ ಈಗಾಗಲೇ ತಾತ್ವಿಕ ಅನುಮೋದನೆ ನೀಡಲಾಗಿದೆ. ಶೀಘ್ರವೇ ಡಿ.ಪಿ.ಆರ್. ಗೆ ಅನುಮೋದನೆ ಪಡೆದು ಯೋಜನೆ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

ಸಭೆಯ ಇತರ ಮುಖ್ಯಾಂಶಗಳು:

ರಾಜ್ಯದ ಹೆದ್ದಾರಿಗಳ ಅಕ್ಕಪಕ್ಕ ಪ್ರಯಾಣಿಕರಿಗೆ ಅತ್ಯುತ್ತಮ ಮೂಲಸೌಕರ್ಯ ಒದಗಿಸುವಂತೆ ಸೂಚಿಸಿದರು. ಈ ಸಂಕೀರ್ಣಗಳ ಬ್ರ್ಯಾಂಡಿಂಗ್ ಆಗಬೇಕು. ಹಾಗೂ ಅತ್ಯುತ್ತಮವಾಗಿ ನಿರ್ವಹಿಸಬೇಕು ಎಂದು ಸೂಚಿಸಿದರು.

2022-23ನೇ ವರ್ಷದಲ್ಲಿ ಸಾರಿಗೆ ಇಲಾಖೆಯ ತೆರಿಗೆ ಸಂಗ್ರಹ ಉತ್ತಮಗೊಂಡಿದ್ದು, ಶೇ. 103.73 ರಷ್ಟು ಸಾಧನೆಯಾಗಿದೆ.

IMG 20220603 WA0014

ರಾಜ್ಯದಲ್ಲಿ 30 ಸಾವಿರ ರೂ. ಗಳಿಗಿಂತ ಹೆಚ್ಚು ತ್ರೈಮಾಸಿಕ ತೆರಿಗೆ ಪಾವತಿಸುವ ಸಾರಿಗೆ ವಾಹನಗಳಿಗೆ ಮಾಹೆಯಾನ ತೆರಿಗೆ ಪಾವತಿಸಲು ಕರ್ನಾಟಕ ಮೋಟಾರು ವಾಹನ ತೆರಿಗೆ ಕಾಯ್ದೆಗೆ ತಿದ್ದುಪಡಿ ಮಾಡಲಾಗಿದೆ. ಈ ಯೋಜನೆಯಿಂದ 45,405 ವಾಹನ ಮಾಲೀಕರು ಉಪಯೋಗ ಪಡೆದುಕೊಂಡಿದ್ದಾರೆ.

ಮೋಟಾರು ವಾಹನ ತೆರಿಗೆ ಪಾವತಿಯನ್ನು ತೆರಿಗೆ ಅವಧಿ ಮುಕ್ತಾಯದ ನಂತರ ನೀಡಿರುವ 15 ದಿನಗಳ ಕಾಲಾವಧಿಯನ್ನು ಕಾನೂನು ತಿದ್ದುಪಡಿ ಮೂಲಕ ಒಂದು ತಿಂಗಳಿಗೆ ವಿಸ್ತರಿಸಲಾಗಿದೆ. 1.07 ಲಕ್ಷ ವಾಹನಗಳ ಮಾಲೀಕರು ಈ ಯೋಜನೆಯ ಅನುಕೂಲ ಪಡೆದಿದ್ದಾರೆ.

ಶಿಗ್ಗಾಂವಿ ಬಸ್ ಘಟಕ ಮತ್ತು ಚಾಲನಾ ತರಬೇತಿ ಕೇಂದ್ರ ನಿರ್ಮಾಣಕ್ಕೆ ಆಡಳಿತಾತ್ಮಕ ಅನುಮೋದನೆ ನೀಡಲಾಗಿದ್ದು, ಟೆಂಡರ್ ಪ್ರಕ್ರಿಯೆ ಬೇಗನೆ ಪೂರ್ಣಗೊಳಿಸುವಂತೆ ಮುಖ್ಯಮಂತ್ರಿಗಳು ಸೂಚಿಸಿದರು.

ಯೆಲ್ಲೋ ಬೋರ್ಡ್ ಚಾಲಕರ ಮಕ್ಕಳಿಗೆ ರೈತ ವಿದ್ಯಾನಿಧಿ ಮಾದರಿಯ ವಿದ್ಯಾರ್ಥಿ ವೇತನ ನೀಡಲು ಸಿದ್ಧತೆ ನಡೆಸಲಾಗಿದೆ. ಇ-ಆಡಳಿತ ಇಲಾಖೆಯೊಂದಿಗೆ ಸಮಾಲೋಚಿಸಲು ಸಭೆ ಕರೆಯಲಾಗುವುದು ಎಂದು ತಿಳಿಸಿದರು.

ಸಚಿವ ಬಿ. ಶ್ರೀರಾಮುಲು , ಹಣಕಾಸು ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಐ.ಎಸ್.ಎನ್. ಪ್ರಸಾದ್, ಮುಖ್ಯಮಂತ್ರಿಯವರ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಹಣಕಾಸು ಇಲಾಖೆ ಕಾರ್ಯದರ್ಶಿ ಪಿ.ಸಿ. ಜಾಫರ್, ಸಾರಿಗೆ ಇಲಾಖೆ ಕಾರ್ಯದರ್ಶಿ ಎನ್.ವಿ. ಪ್ರಸಾದ್, ಸಾರಿಗೆ ಇಲಾಖೆ ಆಯುಕ್ತ ಟಿ.ಹೆಚ್.ಎಂ. ಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕರಾದ ಜಿ. ಸತ್ಯವತಿ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.