IMG 20220701 WA0067

ಕನ್ನಡದ ಪತ್ರಿಕೋದ್ಯಮಕ್ಕೆ ಉತ್ತಮ ಭವಿಷ್ಯವಿದೆ…!

Genaral STATE

ಕನ್ನಡದ ಪತ್ರಿಕೋದ್ಯಮಕ್ಕೆ ಉತ್ತಮ ಭವಿಷ್ಯವಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಜುಲೈ 01: ಕನ್ನಡ ನಾಡಿಗೆ ಹೇಗೆ ಉತ್ತಮ ಭವಿಷ್ಯವಿದೆಯೋ ಕನ್ನಡದ ಪತ್ರಿಕೋದ್ಯಮಕ್ಕೂ ಉತ್ತಮ ಭವಿಷ್ಯವಿದೆ. ಕನ್ನಡ ಭಾಷೆ, ಸಾಹಿತ್ಯಕ್ಕೆ ಕನ್ನಡ ಪತ್ರಿಕೋದ್ಯಮದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಕರ್ನಾಟಕ ಮಾಧ್ಯಮದ ಅಕಾಡೆಮಿ ಪ್ರೆಸ್‍ಕ್ಲಬ್ ಆಫ್ ಬೆಂಗಳೂರು ಹಾಗೂ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಕಬ್ಬನ್ ಪಾರ್ಕ್‍ನ ಪ್ರೆಸ್‍ಕ್ಲಬ್‍ನಲ್ಲಿ ಆಯೋಜಿಸಿದ್ದ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಕನ್ನಡ ನಾಡಿನ ಸಂಸ್ಕøತಿಯನ್ನು ಗಮನದಲ್ಲಿಟ್ಟುಕೊಂಡು ನಾವೆಲ್ಲರೂ ಕೆಲಸ ಮಾಡುವುದು ಸಮಸ್ಯೆಗಳಿಗೆ ಪರಿಹಾರ. ಹೊಸ ಓದುಗರು, ಹೊಸ ವೀಕ್ಷಕರು ಮಾಧ್ಯಮಗಳಿಗೆ ಇದ್ದೇ ಇರುತ್ತಾರೆ. ನಾಡಿನ ಭವಿಷ್ಯದೊಂದಿಗೆ ಪತ್ರಿಕೋದ್ಯಮದ ಭವಿಷ್ಯ ಹಾಸುಹೊಕ್ಕಾಗಿದೆ. ನಮ್ಮ ಪಾತ್ರಗಳನ್ನು ಎಷ್ಟು ಜವಾಬ್ದಾರಿಯಿಂದ, ಸುಸಂಸ್ಕøತವಾಗಿ ಮಾಡುತ್ತೇವೆ ಎನ್ನುವುದು ಮುಖ್ಯ. ನಾವು ಇತಿಹಾಸದ ಒಂದು ಭಾಗವಾಗಬೇಕು ಅಥವಾ ಇತಿಹಾಸವನ್ನು ಸೃಷ್ಟಿ ಮಾಡಬೇಕು. ಈ ಕೆಲಸವನ್ನು ಒಂದಾಗಿ ಮಾಡೋಣ. ನಾವು ಬೇರೆಯಲ್ಲ ಎಂದರು.

ರಾಜಕಾರಣಿಗಳು ಹಾಗೂ ಮಾಧ್ಯಮದವರ ನಂಟು ಆರೋಗ್ಯಕರವಾಗಿರಬೇಕು

ರಾಜಕಾರಣಿಗಳು ಮಾಧ್ಯಮದವರಿಗೆ ಅನಿವಾರ್ಯ. ರಾಜಕೀಯದ ಸುದ್ದಿ ಇಲ್ಲದೆ ಪತ್ರಿಕೆಗಳು ಬರುವುದಿಲ್ಲ. ರಾಜಕಾರಣಿಗಳು ಹಾಗೂ ಮಾಧ್ಯಮದವರಿಗೆ ಬಿಡಿಸಲಾರದ ನಂಟಿದೆ. ಅದು ಆರೋಗ್ಯಕರವಾಗಿದ್ದಷ್ಟೂ ಒಳ್ಳೆಯದು. ಟೀಕೆ ಟಿಪ್ಪಣಿಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಬೇಕು. ಯಾರು ಟೀಕೆಗಳನ್ನು ಸ್ವೀಕರಿಸುವುದಿಲ್ಲವೋ ಅವರು ಯಶಸ್ವಿ ರಾಜಕಾರಣಿಯಾಗಲು ಸಾಧ್ಯವಿಲ್ಲ. ಟೀಕೆಗಳಿಂದ ನಮ್ಮ ತಪ್ಪುಗಳನ್ನು ತಿಳಿದುಕೊಳ್ಳಲು ಹಾಗೂ ಅದರಿಂದ ಸುಧಾರಿಸಲು ಸಾಧ್ಯ. ಹೊಗಳಿಕೆಯಿಂದ ಅದು ಸಾಧ್ಯವಾಗುವುದಿಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.

ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಕರ್ತರ ಕೊಡುಗೆ ದೊಡ್ಡದು

ಕನ್ನಡ ಪತ್ರಿಕೋದ್ಯಮದಲ್ಲಿ ಪತ್ರಕರ್ತರ ಕೊಡುಗೆ ಬಹಳ ದೊಡ್ಡದಿದೆ. ಭಾಷೆ, ಸಾಹಿತ್ಯ, ನಾಡಿನ ಅಭಿವೃದ್ಧಿಗೆ, ಜನಜೀವನದ ಗುಣಮಟ್ಟವನ್ನು ಹೆಚ್ಚಿಸಲು, ಕರ್ನಾಟಕವನ್ನು ಪ್ರಗತಿಶೀಲ ರಾಜ್ಯವನ್ನಾಗಿ ಬಿಂಬಿಸಲು, ಸಮಾಜದಲ್ಲಿ ಸಾಮರಸ್ಯ ಮೂಡಿಸಲು ಮತ್ತು ಮೌಲ್ಯಾಧಾರಿತವಾದ ವಿಚಾರಗಳಿಗೆ ಶಕ್ತಿಯನ್ನು ತುಂಬಲು ಪತ್ರಕರ್ತರು ಅದ್ಭುತ ಕೆಲಸವನ್ನು ಮಾಡಿದ್ದಾರೆ. ಸಂಪಾದಕೀಯಗಳು ಅತ್ಯಂತ ಮಹತ್ವದ್ದಿರುತ್ತಿತ್ತು, ಅದ್ಭುತ ವಿಶ್ಲೇಷಣೆಗಳಿರುತ್ತಿದ್ದವು. ಸ್ವಾತಂತ್ರ್ಯಾ ನಂತರ ಕರ್ನಾಟಕದಲ್ಲಿ ಪ್ರಜಾವಾಣಿ, ಸಂಯುಕ್ತ ಕರ್ನಾಟಕ, ಕನ್ನಡ ಪ್ರಭದ ಸಂಗ್ರಹಕ್ಕೆ ಹೋದರೆ ಅದ್ಭುತವಾದ ಲೇಖನಗಳನ್ನು ಕಾಣಬಹುದು. ಅಂದಿನ ಚಿತ್ರಣ ನಮ್ಮ ಮುಂದೆ ಬರುತ್ತದೆ. ಆಧುನಿಕ ಕಾಲದಲ್ಲಿ ಮಕ್ಕಳು, ಮಹಿಳೆಯರಿಗೆ ವಿವಿಧ ಪುರವಣಿಗಳನ್ನು ಹೊರತಂದ ವಿಜಯಕರ್ನಾಟಕ, ವಿಜಯವಾಣಿ ಮುಂತಾದ ಪತ್ರಿಕೆಗಳು ತಮ್ಮದೇ ಪಾತ್ರವನ್ನು ವಹಿಸಿದೆ. ಎಲೆಕ್ಟ್ರಾನಿಕ್ ಮಾಧ್ಯಮ ಬಹಳ ಪರಿಣಾಮಕಾರಿಯಾಗಿ ತನ್ನ ಕೆಲಸವನ್ನು ಮಾಡುತ್ತಿದೆ ಎಂದರು.

IMG 20220701 WA0068

ಟೀಕೆಗಳಿಂದ ಸುಧಾರಣೆ ಸಾಧ್ಯ
ಸುದ್ದಿಯನ್ನು ಯಾವ ರೀತಿ ಕೊಡುತ್ತೇವೆ ಎನ್ನುವುದರ ಮೇಲೆ ಮಾಧ್ಯಮಗಳು ಕೆಲಸ ಮಾಡುತ್ತೇವೆ. ನಮ್ಮ ಭಾಷೆಯ ಮೇಲೆ ನಮಗೆ ಹಿಡಿತವಿಲ್ಲದಿದ್ದರೆ, ಅವರಿಂದ ನಿರೀಕ್ಷೆ ಮಾಡಲು ಸಾಧ್ಯವಿಲ್ಲ. ಟೀಕೆಯನ್ನು ಸುಂದರವಾಗಿ ಮಾಡಬಹುದು. ಕೂಗಾಡಿದರೆ, ಕೆಟ್ಟ ಶಬ್ಧಗಳನ್ನು ಬಳಕೆ ಮಾಡಿದರೆ ಮಾತ್ರ ಟೀಕೆ ಎಂಬ ಭಾವನೆ ಮೂಡಿದೆ. ಟೀಕೆಯನ್ನು ಮೊನಚಾಗಿ, ಪರಿಣಾಮಕಾರಿಯಾಗಿ ಒಳ್ಳೆಯ ಮಾತುಗಳಿಂದ ಮಾಡಬಹುದು. ಅವೆಲ್ಲ ನಮ್ಮ ಹಿರಿಯ ರಾಜಕಾರಣಿಗಳು ಮತ್ತು ಹಿರಿಯ ಪತ್ರಕರ್ತರಿಂದ ಕಲಿಯಬೇಕಾಗಿದೆ.

ತಂತ್ರಜ್ಞಾನದಿಂದ ಅಭಿವೃದ್ಧಿಗೊಂಡ ಪತ್ರಿಕೋದ್ಯಮ :

ಪತ್ರಕರ್ತರ ವೃತ್ತಿ ರೋಚಕವಾಗಿರುತ್ತದೆ. ಪತ್ರಕರ್ತರು ತಮ್ಮ ವರದಿಗಾರಿಕೆಯನ್ನು ತಮ್ಮದೇ ಆದ ಛಾಪನ್ನು ಮೂಡಿಸುತ್ತಾರೆ. ಈಗ ಸುದ್ದಿ ನಿರಂತರವಾಗಿ ಪ್ರಸಾರವಾಗುತ್ತಲೇ ಇರುತ್ತದೆ. ಆಧುನಿಕ ತಂತ್ರಜ್ಞಾನದಿಂದ ಪತ್ರಿಕೋದ್ಯಮದಲ್ಲಿ ಬಹಳಷ್ಟು ಬದಲಾವಣೆಯನ್ನು ಕಂಡಿದೆ. ‘ನಮ್ಮಲ್ಲೇ ಮೊದಲು’ ಎನ್ನುವ ಸ್ಪರ್ಧೆ ಈಗ ಹೆಚ್ಚಾಗಿದೆ ಎಂದರು. ನಾನು 4-5 ಮುಖ್ಯಮಂತ್ರಿಗಳ ಹತ್ತಿರ ಕೆಲಸ ಮಾಡಿದ್ದೇನೆ. ಬೆಳಿಗ್ಗೆ ಗುಪ್ತಚರ ವಿಭಾಗದವರು ಹೇಳುವ ಮಾಹಿತಿ ಕೇಳಬೇಕಿತ್ತು. ಆದರೆ ಈಗ ವಿದ್ಯುನ್ಮಾನ ಮಾಧ್ಯಮಗಳ ಮೂಲಕ ಎಲ್ಲ ಬಲುಬೇಗ ಮಾಹಿತಿಗಳು ದೊರೆಯುತ್ತಿವೆ. ತ್ವರಿತವಾಗಿ ಸಿಗುವ ಇಂತಹ ಮಾಹಿತಿಗಳಿಂದ ಆಡಳಿತ ನಡೆಸಲು ಸಹಾಯವಾಗುತ್ತದೆ. ಯಾವುದಾದರೂ ತುರ್ತು ಪರಿಸ್ಥಿತಿಯಲ್ಲಿ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳಬೇಕಾದರೆ ಮೊದಲು ಅಲ್ಲಿನ ಮಾಹಿತಿ, ವರದಿ ನಮಗೆ ಸಿಗಬೇಕು. ಈ ನಿಟ್ಟಿನಲ್ಲಿ ಪತ್ರಿಕೋದ್ಯಮದಲ್ಲಿ ತಂತ್ರಜ್ಞಾನ ಒಳ್ಳೆಯದನ್ನೇ ಮಾಡಿದೆ ಎಂದರು.

ಅಪರಾಧ ವರದಿಗಾರಿಕೆಯಲ್ಲಿ ಸೂಕ್ಷ್ಮತೆ ಇರಬೇಕು:

ಅಪರಾಧ ವರದಿಗಳು ಯಾರನ್ನು ಗುರಿಯಾಗಿಸಿ ಮಾಡುತ್ತಿರಿ, ಏಕೆಂದರೆ ಟಿವಿ ಕಾರ್ಯಕ್ರಮಗಳನ್ನು ಮಹಿಳೆಯರು, ಮಕ್ಕಳು, ಹಿರಿಯರೂ ವೀಕ್ಷಿಸುತ್ತಾರೆ. ಆದ್ದರಿಂದ ನಿಮ್ಮ ವರದಿಗಳು ವೀಕ್ಷಕರ ಮೇಲೆ ಮಾಡುತ್ತಿರುವ ಪರಿಣಾಮದ ಬಗ್ಗೆ ಚಿಂತನೆ ಅಗತ್ಯ. ಅಪರಾಧ ವರದಿಗಾರಿಕೆಯಲ್ಲಿ ಕ್ರೈಂ ನ್ನು ಎಷ್ಟು ಬಿಂಬಿಸಬೇಕು, ಹೇಗೆ ಬಿಂಬಿಸಬೇಕು ಎಂಬ ಸೂಕ್ಷ್ಮತೆ ಇರಬೇಕು ಎಂದು ಮುಖ್ಯಮಂತ್ರಿಗಳು ಅಭಿಪ್ರಾಯ ಪಟ್ಟರು.

ಸರ್ಕಾರದ ಮತ್ತು ಮಾಧ್ಯಮಗಳದು ಅವಿನಾಭಾವ ಸಂಬಂಧ. ಸರ್ಕಾರದ ವಿಚಾರಗಳು ಜನರಿಗೆ ಮಾಧ್ಯಮಗಳ ಮೂಲಕವೇ ತಲುಪಲು ಸಾಧ್ಯ. ಬೆಳಗಿನ ಚಹಾದೊಂದಿಗೆ ಮಾಧ್ಯಮಗಳ ಸುದ್ದಿ ಬೇಕೇಬೇಕು. ರಾಜಕೀಯ ಸುದ್ದಿಗಳಿಲ್ಲದೇ ಮಾಧ್ಯಮಗಳಿಲ್ಲ ಎಂದು ಮುಖ್ಯಮಂತ್ರಿಗಳು ನುಡಿದರು.