IMG 20220701 WA0029

JD(S) :ಡಿಸೆಂಬರ್’ನಲ್ಲೇ ವಿಧಾನಸಭೆ ಚುನಾವಣೆ:

POLATICAL STATE

ಜೆಡಿಎಸ್ ಜನತಾಮಿತ್ರ ಶುಭಾರಂಭ
ಜುಲೈ 17ಕ್ಕೆ ಬೆಂಗಳೂರಿನಲ್ಲಿ ಬೃಹತ್ ಸಮಾವೇಶ

ಡಿಸೆಂಬರ್’ನಲ್ಲೇ ವಿಧಾನಸಭೆ ಚುನಾವಣೆ: ಹೆಚ್.ಡಿ.ಕುಮಾರಸ್ವಾಮಿ ಭವಿಷ್ಯ


ಬೆಂಗಳೂರು: ವಿಧಾನಸಭೆ ಚುನಾವಣೆ ಡಿಸೆಂಬರ್ ನಲ್ಲೇ ಎದುರಾಗುವ ಸಾಧ್ಯತೆಗಳಿವೆ. ಕಾರ್ಯಕರ್ತರು ಈಗಿನಿಂದಲೇ ಸಜ್ಜಾಗಬೇಕೆಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಜೆಡಿಎಸ್ ಪಕ್ಷದ ಮುಖಂಡರು, ಕಾರ್ಯಕರ್ತರಿಗೆ ಕರೆ ನೀಡಿದರು.

ಪಕ್ಷದ ರಾಜ್ಯ ಕಚೇರಿ ಜೆಪಿ ಭವನದಲ್ಲಿ ಜನತಾಮಿತ್ರ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಬೆಂಗಳೂರಿನಲ್ಲಿ ಕನಿಷ್ಠ ಹದಿನೈದು ಕ್ಷೇತ್ರಗಳನ್ನುಗೆಲ್ಲುವ ವಾತಾವರಣ ಜೆಡಿಎಸ್ ಗೆ ಇದೆ. ವಿಧಾನಸಭೆ ಮತ್ತು ಬಿಬಿಎಂಪಿ ಚುನಾವಣೆಗೆ ಕಾರ್ಯಕರ್ತರು ಸಂಘಟಿತರಾಗಬೇಕು. ಬೆಂಗಳೂರು ಹಂತ ಹಂತವಾಗಿ ಬೆಳೆಯುತ್ತಿದೆ. ಬೆಂಗಳೂರಿನಲ್ಲಿ ನಮ್ಮ ಪಕ್ಷ ಶಕ್ತಿಯುತವಾಗಿಲ್ಲ ಎಂಬ ಭಾವನೆಯನ್ನ ತೆಗೆದುಹಾಕಬೇಕು ಎಂದು ಹೇಳಿದರು.

ರಾಜರಾಜೇಶ್ವರಿ ನಗರದಲ್ಲಿ ಪಕ್ಷದ ಮತಗಳಿವೆ. ಕಾರ್ಯಕರ್ತರು ಇದನ್ನು ಮರೆಯಬಾರದು.‌ ನಾವೇನು ಅಧಿಕಾರ ಇದ್ದಾಗ ಅಕ್ರಮವಾಗಿ ಹಣ ಲೂಟಿ ಮಾಡಿಲ್ಲ. ನಮ್ಮಲ್ಲಿ ಮೂರು ಜನ ಶಾಸಕರು ಪಕ್ಷದಲ್ಲಿ ಇದ್ದರು. ಅವರೂ ಬೇರೆ ಕಡೆ ಹೋಗಿದ್ದಾರೆ. ಚಾಮರಾಜಪೇಟೆಯಲ್ಲಿ ನಮ್ಮ ನಾಯಕರು ಹೋರಾಟ ಮಾಡಿದರು. ಅದರಿಂದಾಗಿ ಚಾಮರಾಜಪೇಟೆ, ಪುಲಕೇಶಿನಗರ, ಮಹಾಲಕ್ಷ್ಮಿ ಲೇಔಟ್ ನಲ್ಲೂ ಗೆದ್ದೆವು. ಪಕ್ಷ ಉಳಿದರೆ ನಾವೆಲ್ಲಾ ಉಳಿಯುತ್ತೇವೆ ಎಂದರು ಅವರು.

ಭಗವಂತನ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿಯಾಗಿ ಇತಿಹಾಸದ ಪುಟ ಸೇರಿದ್ದೇನೆ. ‌ಈಗಿನ ಸರ್ಕಾರ ಲೂಟಿ ಹೊಡೆಯುತ್ತಿದೆ. ಇದನ್ನು ಸಂಪೂರ್ಣವಾಗಿ ಬಂದ್ ಮಾಡಬೇಕು. ನನಗೆ ಒಂದು ಅವಕಾಶ ಕೊಡಲಿ. ನಮಗೆ ಇಪ್ಪತ್ತು ವರ್ಷ ಬೇಡ ಐದು ವರ್ಷದ ಅವಕಾಶ ಕೊಟ್ಟರೆ ಸಾಕು ಎಂದು ಮನವಿ ಮಾಡಿದರು.

ನಮ್ಮ ಕಾರ್ಯಕರ್ತರು ಪ್ರತಿ ಮನೆ ಮನೆಗೂ ಹೋಗಿ, ಅವರ ಆದ್ಯತೆ ಏನು ಎಂಬುದನ್ನು ಅರಿಯುವ ಕೆಲಸ ಮಾಡಿ. ಜನರಿಂದ ಎಲ್ಲಾ ಮಹಿತಿಯನ್ನು ಸಂಗ್ರಹಿಸೋಣ. ಮುಂದೆ ನಮ್ಮ ಸರ್ಕಾರ ಬಂದ ನಂತರ ಜನರ ಸಮಸ್ಯೆಗೆ ಪರಿಹಾರ ಕಲ್ಪಿಸಲು ಅನುಕೂಲವಾಗಲಿದೆ ಎಂದು ಹೇಳಿದರು‌.

ಜನತಾ ಮಿತ್ರ ಕಾರ್ಯಕ್ರಮ ಹದಿನೈದು ದಿನಗಳ ಕಾಲ ನಡೆಯುತ್ತದೆ. ಬೆಂಗಳೂರು ನಗರದ ಕಾರ್ಯಕರ್ತರ ಸಮಾವೇಶವನ್ನು ಜುಲೈ 17 ರಂದು ನಡೆಸುತ್ತೇವೆ. ಸುಮಾರು ಒಂದೂವರೆ ಲಕ್ಷ ಜನ ಇದರಲ್ಲಿ ಭಾಗಿಯಾಗಬೇಕು ಎಂದರು.

ಎರಡೂ ರಾಷ್ಟ್ರೀಯ ಪಕ್ಷಗಳು ಬೆಂಗಳೂರು ಜನರನ್ನು ಹಾದಿ ತಪ್ಪಿಸಿವೆ. ಬೆಂಗಳೂರು ನಗರಕ್ಕೆ ಏನು ಕೊಡುಗೆ ಕೊಟ್ಟಿದ್ದಾರೆ. ಬ್ಯಾಟರಾಯನಪುರ, ಯಲಹಂಕದ ಬಡವಾಣೆಗಳನ್ನು ನೋಡಿದ್ದೇನೆ.‌ಪ್ರಾಣಿಗಳು ಬದಕಲು ಆಗದಂತಹ ಪರಿಸ್ಥಿತಿ ಇದೆ. ಬೆಂಗಳೂರು ನಗರವನ್ನು ಸಿಂಗಾಪುರ ಮಾಡುತ್ತೇವೆ ಅಂತಾ ಪ್ರಚಾರ ಪಡೆದಿದ್ದರು. ಸಿಂಗಾಪುರ ಮಾಡಲು ಹೊರಟಿದ್ದ ಸರ್ಕಾರ ಬೆಂಗಳೂರಿನ ಕೆರೆಕಟ್ಟೆಗಳನ್ನು ನಾಶ ಮಾಡಿದೆ ಎಂದು ವಾಗ್ದಾಳಿ ನಡೆಸಿದರು.

ಅಗಸ್ಟ್ ನಲ್ಲಿ ಪಂಚರತ್ನ ರಥಯಾತ್ರೆ:

ಆಗಸ್ಟ್ ನಲ್ಲಿ ಪಂಚರತ್ನ ರಥಯಾತ್ರೆ ಕಾರ್ಯಕ್ರಮ ಆರಂಭಿಸುತ್ತೇವೆ. ಹಳ್ಳಿ ಹಳ್ಳಿಗೆ ಹೋಗುತ್ತೇನೆ. ಮೂರು ತಿಂಗಳು ಬೆಂಗಳೂರಿಗೆ ಬರುವುದಿಲ್ಲ. ಎಲ್ಲೆಡೆ ಸುತ್ತುತ್ತೇನೆ. ಹದಿನೈದು ದಿನ ಬೆಂಗಳೂರಿಗೆ ಮೀಸಲು ಇಟ್ಟಿದ್ದೇನೆ. ಎಲ್ಲೆಲ್ಲಿ ಜನತಾ ಮಿತ್ರ ಕಾರ್ಯಕ್ರಮ ಮಾಡುತ್ತಾರೋ ಅಲ್ಲಿಗೆ ಹೋಗಿ ಮಾತನಾಡುತ್ತೇನೆ ಎಂದು ತಿಳಿಸಿದರು.

ಇಲ್ಲಿ ಸಂಬಳ ಪಡೆಯುವ ಐಎಎಸ್ ಅಧಿಕಾರಿಗಳು ಬಂಡವಾಳ ಹೂಡಿಕೆದಾರರಿಗೆ ಏನೇನೋ ಹೇಳ್ತಿದ್ದಾರೆ. ಕರ್ನಾಟಕದಲ್ಲಿ ಯಾಕೆ‌ ಬಂಡವಾಳ ಹೂಡುತ್ತೀರಾ. ಗುಜರಾತ್ ಗೆ ಹೋಗಿ ಅಂತಿದ್ದಾರೆ. ಚುನಾವಣೆ ಬರಲಿ ಆಗ ಎಲ್ಲವನ್ನೂ ಮಾತನ್ನಾಡುತ್ತೇನೆ ಎಂದು ಬಿಜೆಪಿ ಸರ್ಕಾರದ ವಿರುದ್ಧ ಗುಡುಗಿದರು.

ಕಾರ್ಯಕ್ರಮದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು, ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ, ಶಾಸಕ ಆರ್. ಮಂಜುನಾಥ್, ಕೇರಳ ರಾಜ್ಯದ ಜೆಡಿಎಸ್ ಪಕ್ಷದ ಸಚಿವ ಕೃಷ್ಣನ್ ಕುಟ್ಟಿ, ಕೇರಳ ಜೆಡಿಎಸ್ ಶಾಸಕ ಥಾಮಸ್ ಟಿ.ಮ್ಯಾಥ್ಯೂ, ಜೆಡಿಎಸ್ ನಗರ ಅಧ್ಯಕ್ಷ ಆರ್ ಪ್ರಕಾಶ, ವಿಧಾನ ಪರಿಷತ್ ಮಾಜಿ ಸದಸ್ಯ ಹೆಚ್.ಎಂ.ರಮೇಶ್ ಗೌಡ, ಮೊಯಿದ್ದಿನ್ ಅಲ್ತಾಫ್ ಸೇರಿದಂತೆ ಪಕ್ಷದ ನೂರಾರು ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.