ಬೆಂಗಳೂರು ಮೇ ೧೧: ಕೊರೋನಾ ಪರಿಸ್ಥಿತಿ ನಿರ್ವಹಣೆ ವಿಚಾರದಲ್ಲಿ ಕರ್ನಾಟಕ ಸರ್ಕಾರ ಸಂಪೂರ್ಣ ವಿಫಲವಾಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಆರೋಪಿಸಿದ್ದಾರೆ.
ಕರ್ನಾಟಕಕ್ಕೆ ವಾಪಸ್ ಮರಳಲು ಇಚ್ಚಿಸುವವರಿಗೆ ರೈಲು ಸೇವೆ ಕಲ್ಪಿಸಿ, ಅವರ ಟಿಕೆಟ್ ದರವನ್ನು ಕಾಂಗ್ರೆಸ್ ಪಕ್ಷ ಭರಿಸಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನೇತೃತ್ವದ ಕಾಂಗ್ರಸ್ ನಿಯೋಗ ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಶಿವಕುಮಾರ್ ಕೊರೊನಾ ಪರಿಸ್ಥಿತಿ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ವಿವರಿಸಿದ್ದು ಹೀಗೆ:
ಸಮಸ್ಯೆ ಆರಂಭವಾದ ಒಂದೂವರೇ ತಿಂಗಳ ಹಿಂದೆಯೇ ಕೇರಳ ಸರ್ಕಾರ 20 ಸಾವಿರ ಕೋಟಿ ರುಪಾಯಿ ವಿಶೇಷ ಪ್ಯಾಕೇಜ್ ಪ್ರಕಟಿಸಿತು. ನಾನು ಕೂಡ ಈ ವಿಚಾರವಾಗಿ ವಿಶೇಷ ಅಧಿವೇಶನ ಕರೆಯಿರಿ, ನಿಮಗೆ ಬೇಕಾದ ಸಹಕಾರವನ್ನು ನಾವು ನೀಡುತ್ತೇವೆ ಎಂದು ಹೇಳಿದ್ದೆ. ವಿಶೇಷ ಅಧಿವೇಶನ ಕರೆದು ಎಲ್ಲ ವರ್ಗದ ಜನರಿಗೆ, ಉದ್ಯೋಗಿಗಳಿಂದ ಹಿಡಿದು, ಉದ್ಯೋಗದಾತರು, ಅಸಂಘಟಿತ ಕಾರ್ಮಿಕರು, ರೈತರು, ಕೈಗಾರಿಕೆಗಳು ಎಲ್ಲರ ಹಿತ ಕಾಯಲು ನೆರವಾಗುವಂತೆ 50 ಸಾವಿರ ಕೋಟಿಯ ವಿಶೇಷ ಪ್ಯಾಕೇಜ್ ಅನ್ನು ಬಜೆಟ್ ನಲ್ಲಿ ಪ್ರಕಟಿಸಿ ಎಂದು ಸರ್ಕಾರಕ್ಕೆ ಕೈಮುಗಿದು ಮನವಿ ಮಾಡಿಕೊಂಡರೂ ಸರ್ಕಾರ ಇದನ್ನು ಕೇಳಿಸಿಕೊಳ್ಳುತ್ತಿಲ್ಲ. ಸರ್ಕಾರದ ಬಳಿ ದುಡ್ಡಿದೆ. ಬಜೆಟ್ ಪುನರ್ ಪರಿಶೀಲಿಸಿ ಅನುದಾನವನ್ನು ನೀಡಲು ಹೆಚ್ಚು ಸಮಸ್ಯೆ ಇಲ್ಲ. ಆಡಳಿತ ಪಕ್ಷದ ನಾಯಕರು ತಮ್ಮ ಜೇಬಿನಿಂದ ದುಡ್ಡು ಹಾಕುವ ಅಗತ್ಯವಿಲ್ಲ. ಈ ಪರಿಸ್ಥಿತಿಯಲ್ಲಿ ಯಾವ ವರ್ಗಕ್ಕೆ ಎಷ್ಟು ಕೊಡಬೇಕು ಎಂಬುದನಷ್ಟೇ ತೀರ್ಮಾನಿಸಬೇಕಿದೆ.
ಕೇಂದ್ರ ಸರ್ಕಾರ ಈಗಾಗಲೇ ಘೋಷಿಸಿರುವ 1.70 ಲಕ್ಷ ಕೋಟಿ ಪ್ಯಾಕೇಜ್ ಇವತ್ತಿನವರೆಗೂ ಯಾರಿಗೆ ತಲುಪಿದೆ ಎಂಬುದು ಸರಿಯಾಗಿ ತಿಳಿದಿಲ್ಲ. ಕೆಲವರ ಖಾತೆಗೆ 2 ಸಾವಿರ ಹಾಕಲಾಗಿದೆ ಎಂಬುದು ಬಿಟ್ಟರೆ ಬೇರೆ ಏನೂ ಆಗಿಲ್ಲ. ಕೇಂದ್ರ ಸರ್ಕಾರ ಕಾರ್ಮಿಕರಿಗೆ ಉದ್ಯೋಗ ಖಾತ್ರಿ ನೀಡಿ, ಯಾರು ಹೊರಗಡೆಯಿಂದ ಬಂದಿದ್ದಾರೋ ಅವರಿಗೆ ಸರಿಯಾಗಿ ಆಹಾರ ಕಿಟ್, ಹಣ ನೀಡಿದ್ದರೆ, ಅವರೇಕೆ ಲಕ್ಷಾಂತರ ಸಂಖ್ಯೆಯಲ್ಲಿ ವಾಪಸ್ ಹೋಗುತ್ತಿದ್ದರು? ಅವರನ್ನು ಸರಿಯಾಗಿ ನೋಡಿಕೊಳ್ಳದೇ, ಆಹಾರ ಕಿಟ್ ಗಳನ್ನು ತಮ್ಮ ಕಾರ್ಯಕರ್ತರಿಗೆ ಹಂಚಿದ ಪರಿಣಾಮ ಇಂದು ಈ ಸ್ಥಿತಿ ನಿರ್ಮಾಣವಾಗಿದೆ. ಈ ಸರ್ಕಾರ ಕೋವಿಡ್ ವಿಚಾರದಲ್ಲೂ ರಾಜಕಾರಣ ಮಾಡಿದೆಯೇ ಹೊರತು, ನಿಜವಾದ ಶ್ರಮಿಕರ ನೆರವಿಗೆ ಧಾವಿಸಲಿಲ್ಲ.
ಕಾರ್ಮಿಕರಿಗೆ ನಮ್ಮ ಅಳಿಲು ಸೇವೆ:
ನಾಳೆಯಿಂದ ರೈಲು ಸೇವೆ ಆರಂಭವಾಗುತ್ತಿದ್ದು, ರಾಜ್ಯದಿಂದಲೂ ಒಂದು ರೈಲು ದೆಹಲಿಗೆ ಹೋಗುತ್ತಿದೆ. ಇದಕ್ಕೆ ರಾಜ್ಯ ಸರ್ಕಾರ 50 ಲಕ್ಷ ರೂಪಾಯಿ ಠೇವಣಿ ಮಾಡಿದ್ದು, ನಮ್ಮ ದೇಶವನ್ನು ಕಟ್ಟುತ್ತಿರುವ ಕಾರ್ಮಿಕರು, ಹೊರ ರಾಜ್ಯಗಳಲ್ಲಿರುವ ಕನ್ನಡಿಗರನ್ನು ವಾಪಸ್ ಕರೆತರಲು ಕಾಂಗ್ರೆಸ್ ಕೂಡ ಅಳಿಲು ಸೇವೆ ಮಾಡಲು ನಿರ್ಧರಿಸಿದೆ. ಹೀಗಾಗಿ ಇಂದು ನೈರುತ್ಯ ರೈಲ್ವೇ ವಿಭಾಗೀಯ ವ್ಯವಸ್ಥಾಪಕ ಅಶೋಕ್ ವರ್ಮಾ ಅವರನ್ನು ಭೇಟಿ ಮಾಡಿ ವಾಪಸ್ ಊರಿಗೆ ಹೋಗಲು ಹಾಗೂ ಹೊರ ರಾಜ್ಯಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ವಾಪಸ್ ಕರೆತರಲು ಅಗತ್ಯ ರೈಲು ಸೇವೆ ನೀಡಿ. ಅದಕ್ಕೆ ತಗಲುವ ವೆಚ್ಚವನ್ನು ಕಾಂಗ್ರೆಸ್ ಭರಿಸಲಿದೆ ಎಂದು ಮನವಿ ಮಾಡಲಾಗಿದೆ. ಇದಕ್ಕೆ ಅಧಿಕಾರಿಗಳು ಸ್ಪಂದಿಸಿದ್ದು, ಮೇಲಾಧಿಕಾರಿಗಳ ಜತೆ ಚರ್ಚಿಸಿ ಮಾಹಿತಿ ನೀಡಲಾಗುವುದು ಎಂದಿದ್ದಾರೆ. ಅವರು ಹೇಳಿದಾಗ ಪಕ್ಷದಿಂದಲೇ ಹಣ ಕಟ್ಟಲಾಗುತ್ತದೆ ಎಂದು ತಿಳಿಸಿದರು.