IMG 20220716 WA0028

ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆ: ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಶಾಸನಗಳಿಗೆ ಅಗತ್ಯ ತಿದ್ದುಪಡಿ

BUSINESS

ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆ: ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಶಾಸನಗಳಿಗೆ ಅಗತ್ಯ ತಿದ್ದುಪಡಿ
ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ (ಕರ್ನಾಟಕ ವಾರ್ತೆ) ಜುಲೈ 16:
ಧಾರವಾಡ ಮತ್ತು ತುಮಕೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆಗೆ ಅಗತ್ಯವಿರುವ ಶಾಸನಗಳಿಗೆ ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ತಿದ್ದುಪಡಿ ತರಲಾಗುವುದು.ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದ ಮೂಲಕ ಮಾರುಕಟ್ಟೆಯನ್ನು ಗಳಿಸಿಕೊಳ್ಳಬಹುದು.ಕಠಿಣ ಪರಿಶ್ರಮದ ಮೂಲಕ ಕನ್ನಡಿಗರು ಉದ್ಯಮರಂಗದಲ್ಲಿ ಪ್ರಗತಿ ಸಾಧಿಸಬೇಕು
ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಇಲ್ಲಿನ ಗೋಕುಲ ರಸ್ತೆಯ ಕೈಗಾರಿಕಾ ಪ್ರದೇಶದಲ್ಲಿ ಕರ್ನಾಟಕ ಮಟಿರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.

ಕೈಗಾರಿಕಾ ಉತ್ಪನ್ನಗಳ ಗುಣಮಟ್ಟದಲ್ಲಿ ಸ್ವಯಂ ಶಿಸ್ತು ತರುವ ಈ ಸಂಸ್ಥೆಗೆ ಎನ್ ಎ ಬಿಎಲ್ ಮಾನ್ಯತೆ ದೊರೆತಿರುವುದು ಸಂತಸ ತಂದಿದೆ. ಮೆಕ್ಯಾನಿಕಲ್ ಹಾಗೂ ಕೆಮಿಕಲ್ ಪರೀಕ್ಷೆ ಸಹ ಆಗುತ್ತದೆ. ನೀರು, ಮಣ್ಣಿನ ಪರೀಕ್ಷೆ ಸಹಾ ಆಗುತ್ತದೆ. ಹುಬ್ಬಳ್ಳಿಯ ಕೆಎಂಟಿಆರ್‌ಸಿ ಅತ್ಯಾಧುನಿಕ ಉಪಕರಣಗಳ ಪೂರೈಕೆಗಾಗಿ 4 ಕೋಟಿ ರೂಪಾಯಿ ಕೋರಿ ಸಂಸ್ಥೆ ಪ್ರಸ್ತಾವನೆ ಸಲ್ಲಿಸಿದೆ.ಸರ್ಕಾರ ಹಣಕಾಸು ನೆರವನ್ನು ಒಂದು ವಾರದೊಳಗೆ ನೀಡಲು ವ್ಯವಸ್ಥೆ ಮಾಡಲಿದೆ ಎಂದು ಭರವಸೆ ನೀಡಿದರು.

ಹುಬ್ಬಳ್ಳಿ ಧಾರವಾಡದಲ್ಲಿ ಎಫ್‌ಎಂಜಿಸಿ ಕ್ಲಸ್ಟರ್ ಸ್ಥಾಪನೆ ಮೂಲಕ ಒಂದು ಲಕ್ಷ ಉದ್ಯೋಗ ಸೃಜನೆಯಾಗಲಿವೆ.ಉತ್ತರ ಕರ್ನಾಟಕದ ಸರ್ವಾಂಗೀಣ ಪ್ರಗತಿಗೆ ಇದು ಮಹತ್ವದ ಪಾತ್ರ ವಹಿಸಲಿದೆ. ಬಜೆಟ್ ಘೋಷಿತ ಈ ಕಾರ್ಯಕ್ರಮಕ್ಕೆ ಈಗಾಗಲೇ ಆದೇಶವನ್ನು ಕೂಡ ಹೊರಡಿಸಲಾಗಿದೆ. ಧಾರವಾಡ ಮತ್ತು ತುಮಕೂರು ವಿಶೇಷ ಹೂಡಿಕೆ ಪ್ರದೇಶಗಳ ಸ್ಥಾಪನೆಗೆ ಶಾಸನಗಳ ತಿದ್ದುಪಡಿ ಅಗತ್ಯವಿದೆ.ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಈ ತಿದ್ದುಪಡಿಗಳನ್ನು ತರಲಾಗುವುದು. ಭವಿಷ್ಯದಲ್ಲಿ ಈ ಭಾಗದ ನಗರಗಳು ಬೃಹತ್ ಕೈಗಾರಿಕಾ ನಗರಗಳಾಗಿ ಅಭಿವೃದ್ಧಿ ಹೊಂದಲಿವೆ. ಕೈಗಾರಿಕಾ ಉತ್ಪನ್ನಗಳು ತಮ್ಮ ಗುಣಮಟ್ಟ ಕಾಯ್ದುಕೊಂಡರೆ ಮಾರುಕಟ್ಟೆ ತಾನಾಗಿಯೇ ಸೃಷ್ಟಿಯಾಗುತ್ತದೆ. ಕಠಿಣ ಪರಿಶ್ರಮದಿಂದ ಸಣ್ಣ ಕೈಗಾರಿಕೆಗಳನ್ನು ಬೃಹತ್ ಪ್ರಮಾಣದಲ್ಲಿ ಅಭಿವೃದ್ಧಿ ಪಡಿಸಬಹುದು. ಉದ್ಯಮಿಗಳು ಸಾಹಸಿಗಳಾಗಬೇಕು.ಸರ್ಕಾರದ ಯೋಜನೆಗಳ ಲಾಭ ಪಡೆಯಬೇಕು. ಬರುವ ನವೆಂಬರ್ 2 ಹಾಗೂ 3 ರಂದು ಬೆಂಗಳೂರಿನಲ್ಲಿ ನಡೆಯುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮ್ಮೇಳನದಲ್ಲಿ ಸ್ಥಳೀಯ ಕನ್ನಡಿಗ ಉದ್ದಿಮೆದಾರರು ಹೆಚ್ಚು ಸಂಖ್ಯೆಯಲ್ಲಿ ಭಾಗವಹಿಸಿ ಪ್ರಯೋಜನ ಪಡೆಯಬೇಕು .ವಿದೇಶಿ ಬಂಡವಾಳ ಹೂಡಿಕೆಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಉದ್ಯಮದ ಎಲ್ಲಾ ರಂಗಗಳಲ್ಲಿ ಕನ್ನಡಿಗರು ಅಗ್ರಸ್ಥಾನದಲ್ಲಿ ಇರಬೇಕು. ವ್ಯವಸ್ಥೆ ಯ ಲಾಭವನ್ನು ಎಲ್ಲರೂ ಸರಿಯಾಗಿ ಪಡೆದರೆ ಬೆಳೆಯಲು ಸಾಧ್ಯವಿದೆ. ಶ್ರಮಪಟ್ಟರೆ ಯಶಸ್ವಿಯಾಗಲು ಸಾಧ್ಯವಿದೆ ಎಂದು ಮುಖ್ಯಮಂತ್ರಿಯವರು ಅಭಿಪ್ರಾಯ ವ್ಯಕ್ತಪಡಿಸಿದರು.

IMG 20220716 WA0032

ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ,ಕೃಷಿ ಸಚಿವ ಬಿ.ಸಿ.ಪಾಟೀಲ,ಕೈಮಗ್ಗ ,ಜವಳಿ,ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಶಾಸಕ ಅರವಿಂದ ಬೆಲ್ಲದ ,ಕೆಎಂಆರ್‌ಟಿಸಿ ಪದಾಧಿಕಾರಿಗಳಾದ ಶಿವರಾಮ ಹೆಗಡೆ,ಮಲ್ಲೇಶ ಜಾಡರ್,ಜಯಪ್ರಕಾಶ ತೆಂಗಿನಕಾಯಿ ಮತ್ತಿತರರು ವೇದಿಕೆಯಲ್ಲಿ ಇದ್ದರು.

ಸಂಸ್ಥೆಯ ಅಧ್ಯಕ್ಷ ಎಂ.ಕೆ.ಪಾಟೀಲ ಸ್ವಾಗತಿಸಿದರು.ಉಪಾಧ್ಯಕ್ಷ ನಿಂಗಣ್ಣ ಬಿರಾದಾರ ಮನವಿ ಅರ್ಪಿಸಿದರು.ನರೇಂದ್ರ ಕುಲಕರ್ಣಿ ಕಾರ್ಯಕ್ರಮ ನಿರೂಪಿಸಿದರು.ಮಲ್ಲೇಶ ಜಾಡರ್ ವಂದಿಸಿದರು.

ಕರ್ನಾಟಕ ಮಟೇರಿಯಲ್ ಟೆಸ್ಟಿಂಗ್ ಮತ್ತು ರಿಸರ್ಚ್ ಸೆಂಟರ್
ಸಂಸ್ಥೆಯು ಕೇಂದ್ರ ಮತ್ತು ರಾಜ್ಯ ಸರಕಾರದ ಅನುದನದಡಿಯಲ್ಲಿ ಉತ್ತರ ಕರ್ನಾಟಕ ಸಣ್ಣ ಕೈಗಾರಿಕಾ ಸಂಘ ( NKSSIA ) ಮತ್ತು ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ( KCC & 1 ) ಸಹಯೋಗದೊಂದಿಗೆ , ಕಳೆದ 26 ವರ್ಷಗಳಿಂದ , ಈ ಭಾಗದ ಉದ್ದಿಮೆದಾರರು ಉತ್ಪಾದಿಸುವ ವಸ್ತುಗಳ ಗುಣಮಟ್ಟ ಪರೀಕ್ಷಣೆ ಮಾಡಿಕೊಡುತ್ತಾ ಬಂದಿದೆ .

ಈ ಭಾಗದ ಉದ್ದಿಮೆದಾರರಿಗೆ ಮತ್ತು ರಫ್ತುದಾರರ ಉತ್ಪನ್ನಗಳ ಗುಣಮಟ್ಟ ಪರೀಕ್ಷಣಾ ಸೇವೆಯನ್ನು ಮಾಡುವ ಮುಖಾಂತರ ಹೆಗ್ಗಳಿಕೆಗೆ ಪಾತ್ರವಾಗಿದೆ . ಉತ್ತರ ಕರ್ನಾಟಕದಲ್ಲಿಯೇ ಪ್ರತಿಷ್ಠಿತ ಎನ್.ಎ.ಬಿ.ಎಲ್ ಪ್ರಮಾಣ ಪತ್ರ ಹೊಂದಿದ ಏಕೈಕ ಪರೀಕ್ಷಣಾ ಕೇಂದ್ರವಾಗಿದೆ . ಪರೀಕ್ಷಣಾ ಕೇಂದ್ರದಲ್ಲಿ ವಸ್ತುಗಳ ಗುಣಮಟ್ಟ ಪರೀಕ್ಷಿಸಲು ಮೆಕ್ಯಾನಿಕಲ್ , ಕೆಮಿಕಲ್‌ ಟೆಸ್ಟಿಂಗ್ ವಿಭಾಗಗಳು ಮತ್ತು ಮೆಕ್ಯಾನಿಕಲ್ ಮೆಜರಿಂಗ್ ಇನ್ಸ್ಟ್ರುಮೆಂಟ್ ಕ್ಯಾಲಿಬ್ರೇಷನ್ ವಿಭಾಗ ಹೊಂದಿದೆ . ಇದರೊಂದಿಗೆ ನೀರು , ಮಣ್ಣಿನ ಗುಣಮಟ್ಟ ಪರೀಕ್ಷಿಸುವ ಅತ್ಯಾಧುನಿಕ ಯಂತ್ರೋಪಕರಣಗಳನ್ನು ರಾಜ್ಯ ಸರಕಾರದ ಅನುದಾನದಡಿಯಲ್ಲಿ ಸ್ಥಾಪಿಸಲಾಗಿದೆ . ಈ ಭಾಗದ ಟಾಟಾ ಗ್ರೂಪ್ ಆಫ್ ಕಂಪನೀಸ್ , ಮೈಕ್ರೋಫಿನಿಷ್‌ ಗ್ರೂಪ್ ಆಫ್ ಕಂಪನಿಸ್ , ಸೀಬರ್ಡ , ಕೈಗಾ , ಎನ್.ಪಿ.ಸಿ , ಕೈಗಾ , ಜಿಂದಾಲ್ ಸ್ಟೀಲ್ , ಆರ್.ಎಸ್.ಬಿ. ಟ್ರಾನ್ಸ್‌ಮಿಷನ್ ಸೇರಿದಂತೆ ಹಲವಾರು ಕೈಗಾರಿಕೆಗಳು ಈ ಕೇಂದ್ರದ ಸಹಾಯವನ್ನು ಪಡೆದುಕೊಳ್ಳುತ್ತಿವೆ.