ಭಿಕ್ಷಾಟನೆ ನಿರ್ಮೂಲನೆ ಸಂಬಂಧ ಸಮಾಜ ಕಲ್ಯಾಣ ಸಚಿವರ ನೇತೃತ್ವದಲ್ಲಿ ವಿವಿಧ ಇಲಾಖೆ ಸಚಿವರ ಸಭೆ
ಭಿಕ್ಷಾಟನೆ ನಿಷೇಧ ಕಾಯ್ದೆ ಸಂಪೂರ್ಣ ಜಾರಿಗೆ ಕ್ರಮ: ಸಚಿವ ಕೋಟ ಶ್ರೀನಿವಾಸ ಪೂಜಾರಿ
ಬೆಂಗಳೂರು, ಜುಲೈ 18- ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಸಂಪೂರ್ಣವಾಗಿ ಜಾರಿಗೆ ತರಲಾಗುವುದು ಎಂದು ಸಮಾಜ ಕಲ್ಯಾಣ ಮತ್ತು ಹಿಂದಳಿದ ವರ್ಗಗಳ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.
ಸೋಮವಾರ ವಿಕಾಸಸೌಧದಲ್ಲಿ ಭಿಕ್ಷಾಟನೆ ನಿರ್ಮೂಲನೆ ಸಂಬಂಧ ಗೃಹ ಸಚಿವರು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವರು, ಕಾರ್ಮಿಕ ಇಲಾಖೆ ಸಚಿವರು, ಕಾನೂನು ಸೇವಾ ಪ್ರಾಧಿಕಾರ, ಬೆಂಗಳೂರು ಮಹಾನಗರ ಪಾಲಿಕೆ ಸೇರಿದಂತೆ ವಿವಿಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಬಳಿಕ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದರು.
ಭಿಕ್ಷಾಟನೆ ಹೆಸರಿನಲ್ಲಿ ವಿವಿಧ ಕಾನೂನು ಬಾಹಿರ ಕೃತ್ಯಗಳು ನಡೆಯುವುದನ್ನು ಇಲಾಖೆ ಗುರುತಿಸಿದೆ. ವಿಶೇಷವಾಗಿ ಮಕ್ಕಳಿಗೆ ನಿಷೇಧಿತ ಮತ್ತು ಬರುವ ಮದ್ದು ನೀಡಿ ಭಿಕ್ಷಾಟನೆಗೆ ಬಳಸಿಕೊಳ್ಳುವುದು, ಅಂಗವಿಕಲರನ್ನಾಗಿ ಮಾಡಿ ಭಿಕ್ಷಾಟನೆಗೆ ಬಳಸಿಕೊಳ್ಳುತ್ತಿರುವುದು ಕಂಡು ಬಂದಿದ್ದು, ಇದನ್ನು ಸಂಪೂರ್ಣವಾಗಿ ನಿಯಂತ್ರಿಸಲು ಭಿಕ್ಷಾಟನೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗುವುದು ಎಂದರು.
ಭಿಕ್ಷಾಟನೆಯಲ್ಲಿ ತೊಡಗಿದವರನ್ನು ರಕ್ಷಿಸಿ ಅವರಿಗೆ ಪುನರ್ವಸತಿ ಕಲ್ಪಿಸುವ ಸಂಬಂಧ ಹಾಗೂ ಈ ಚಟುವಟಿಕೆಯಲ್ಲಿ ಗೃಹ ಇಲಾಖೆ, ಮಹಿಳಾ ಮತ್ತು ಮಕ್ಕಳ ಇಲಾಖೆ, ಕಾರ್ಮಿಕ ಇಲಾಖೆಗಳ ಪಾತ್ರ ಹಾಗೂ ಸಹಕಾರದ ಬಗ್ಗೆ ಸಭೆಯಲ್ಲಿ ವಿಸ್ತೃತ ಚರ್ಚೆ ಮಾಡಲಾಗಿದೆ. ಭಿಕ್ಷಾಟನೆ ನಿರ್ಮೂಲನೆಗೆ ಸಂಬಂಧಿಸಿದ ಇಲಾಖೆಗಳು ಸಂಪೂರ್ಣವಾಗಿ ಸಹಕಾರ ನೀಡಲಿವೆ ಎಂದರು.
ಇಲಾಖೆ ಅಧಿಕಾರಿಗಳೊಂದಿಗೆ ಈಗಾಗಲೆ ಐದು ಬಾರಿ ಈ ಕುರಿತು ಚರ್ಚೆ ನಡೆಸಿದ್ದು, ಬೆಂಗಳೂರಿನಲ್ಲಿ 50ರಿಂದ 70ಕಡೆಗಳಲ್ಲಿ ಭಿಕ್ಷಾಟನೆ ವ್ಯಾಪಕವಾಗಿರುವುದನ್ನು ಗುರುತಿಸಲಾಗಿದೆ. ಈಗಾಗಲೇ ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಭಿಕ್ಷಾಟನೆಯಲ್ಲಿ ತೊಡಗಿದ್ದ 101 ಮಕ್ಕಳನ್ನು ವಶಕ್ಕೆ ಪಡೆದಿದ್ದು ಅವರಿಗೆ ಪುನರ್ವಸತಿ ಕಲ್ಪಿಸಲಾಗಿದೆ. ಅಲ್ಲದೆ ಕಾನೂನು ಸೇವಾ ಪ್ರಾಧಿಕಾರದಿಂದ 720 ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ವರದಿ ನೀಡಿದ್ದಾರೆ. ಈ ಎಲ್ಲ ಮಾಹಿತಿಯನ್ನಾಧರಿ ಸೂಕ್ತ ಕ್ರಮ ವಹಿಸಲಾಗುವುದು ಎಂದು ಸಚಿವರು ತಿಳಿಸಿದರು.
ಬೆಂಗಳೂರಿನಲ್ಲಿ ಭಿಕ್ಷಾಟನೆ ಸಂಬಂಧ ವ್ಯಾಪಕವಾಗಿರುವುದನ್ನು ಗಮನಿಸಲಾಗಿದ್ದು ಭಿಕ್ಷಾಟನೆ ನಿಯಂತ್ರಣಕ್ಕೆ ನಿರ್ಧಾಕ್ಷಿಣ್ಯವಾಗಿ ಕ್ರಮಗಳನ್ನು ಕೈಗೊಳ್ಳಲಾಗುವುದು. ಈಗಾಗಲೆ ಬೆಂಗಳೂರಿನ ಎಂಟು ಪೊಲೀಸ್ ವಿಭಾಗಗಳಲ್ಲಿ ತಂಡಗಳನ್ನು ರಚಿಸಿ ಈ ಬಗ್ಗೆ ಕಾರ್ಯಯೋಜನೆಯನ್ನು ಸಿದ್ಧಪಡಿಸಲಾಗಿದೆ. ಮಕ್ಕಳನ್ನು ಭಿಕ್ಷಾಟನೆಗಾಗಿ ಬೀದಿಗೆ ಬಿಡುವವರ ವಿರುದ್ಧವೂ ಕೇಸು ದಾಖಲಿಸಲಾಗುವುದು ಎಂದರು.
ಅಲ್ಲದೆ ವಶಕ್ಕೆ ಪಡೆದ ಮಕ್ಕಳು ಹಾಗೂ ತಾಯಿಯರಿಗೆ ಪುನರ್ವಸತಿ ಕಲ್ಪಿಸಲು ಇಲಾಖೆಯಿಂದ ಪ್ರತ್ಯೇಕವಾಗಿ ಕಟ್ಟಡವೊಂದನ್ನು ವ್ಯವಸ್ಥೆ ಮಾಡಲಾಗುವುದು. ಇದಕ್ಕಾಗಿ ಯಾವುದೇ ಹಣಕಾಸಿನ ಕೊರತೆ ಇರುವುದಿಲ್ಲ ಎಂದರು.
ಮಕ್ಕಳ ರಕ್ಷಣಾ ನಿರ್ದೇಶನಾಲಯದಿಂದ ಈಗಾಗಲೆ ‘ಈ ಗುರುತು’ ಎಂಬ ಮೊಬೈಲ್ ಆಪ್ ಅನ್ನು ಬಿಡುಗಡೆ ಮಾಡಿದ್ದು ಮಕ್ಕಳು ಭಿಕ್ಷಾಟನೆಯಲ್ಲಿ ತೊಡಗಿರುವ ಬಗ್ಗೆ ಕಂಡುಬಂದಲ್ಲಿ ಸಾರ್ವಜನಿಕರು ತಕ್ಷಣ 1098 ಗೆ ಕರೆ ಮಾಡಿ ಮಾಹಿತಿ ನೀಡಬೇಕು ಎಂದರು.
ಗೃಹಸಚಿವ ಅರಗ ಜ್ಞಾನೇಂದ್ರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವ ಹಾಲಪ್ಪ ಆಚಾರ್, ಕಾರ್ಮಿಕ ಸಚಿವ ಶಿವರಾಮ ಹೆಬ್ಬಾರ್, ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತ ತುಷಾರ್ ಗಿರಿನಾಥ್, ಸಮಾಜ ಕಲ್ಯಾಣ ಇಲಾಖೆ ಕಾರ್ಯದರ್ಶಿ ಮೇಜರ್ ಮಣಿವಣ್ಣನ್, ಆಯುಕ್ತ ಡಾ.ಕೆ.ರಾಕೇಶ್ ಕುಮಾರ್, ಡಿಸಿಪಿ ಶರಣಪ್ಪ, ಮಕ್ಕಳ ರಕ್ಷಣಾ ನಿರ್ದೇಶನಾಲಯ ನಿರ್ದೇಶಕಿ ಲತಾಕುಮಾರಿ, ಕೇಂದ್ರ ಪರಿಹಾರ ಸಮಿತಿ ನಿರ್ದೇಶಕಿ ಅರ್ಚನಾ ಸೇರಿದಂತೆ ವಿವಿಧ ಹಂತದ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.