16ರಿಂದ ಜಿಲ್ಲೆಗಳಿಗೆ ಬಿಜೆಪಿ ಮುಖಂಡರ ಜೊತೆ ಪ್ರವಾಸ, ಪಕ್ಷದಿಂದ ಹೋರಾಟ: ಬಿ.ಎಸ್.ಯಡಿಯೂರಪ್ಪ
ಬೆಂಗಳೂರು: ರೈತ ವಿರೋಧಿ ಕಾಂಗ್ರೆಸ್ ಸರಕಾರವು ದಿನೇದಿನೇ ಹೆಚ್ಚು ಹೆಚ್ಚು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ರೈತ ನಾಯಕ, ಬಿಜೆಪಿ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಆಕ್ಷೇಪಿಸಿದರು.
ರಾಜ್ಯದ ಕಾಂಗ್ರೆಸ್ ಸರಕಾರದ ಜನವಿರೋಧಿ ಮತ್ತು ರೈತವಿರೋಧಿ ನೀತಿಯನ್ನು ಖಂಡಿಸಿ ಇಂದು ಬೆಂಗಳೂರಿನಲ್ಲಿ ಬಿಜೆಪಿ ವತಿಯಿಂದ ಬೃಹತ್ ಪ್ರತಿಭಟನೆ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಇದೇ 16ರಂದು ಕೋಲಾರದ ಕೂಡುಮಲೆ ಶ್ರೀ ವಿನಾಯಕನ ದರ್ಶನ ಪಡೆದು ರಾಜ್ಯದ ಪ್ರತಿ ಜಿಲ್ಲೆಗೆ ನಮ್ಮೆಲ್ಲ ಮುಖಂಡರ ಜೊತೆ ಪ್ರವಾಸ ಆರಂಭಿಸಲಿದ್ದೇವೆ. ಜಿಲ್ಲೆಗಳಲ್ಲಿ ಸರಕಾರದ ವಿರುದ್ಧ ತೀವ್ರ ಹೋರಾಟ ಮುಂದುವರೆಯಲಿದೆ. ಈ ಸರಕಾರ ಅಧಿಕಾರ ಬಿಡುವವರೆಗೂ ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಪ್ರಕಟಿಸಿದರು.
ಈ ಭ್ರಷ್ಟ ಸರಕಾರ ಅಧಿಕಾರದಲ್ಲಿ ಮುಂದುವರೆಯುವ ನೈತಿಕ ಹಕ್ಕನ್ನು ಕಳೆದುಕೊಂಡಿದೆ. ಇದು ಜನವಿರೋಧಿ ಮತ್ತು ರೈತವಿರೋಧಿ ಸರಕಾರ ಎಂದು ಟೀಕಿಸಿದರು. ಸರಕಾರದ ವಿರುದ್ಧ ಹೋರಾಟದಲ್ಲಿ ಜನರೆಲ್ಲರೂ ಒಗ್ಗಟ್ಟಾಗಿ ಭಾಗವಹಿಸಬೇಕು ಎಂದು ಅವರು ಮನವಿ ಮಾಡಿದರು. ಈ ಸರಕಾರ ಜನಹಿತವನ್ನು ಸಂಪೂರ್ಣ ಮರೆತಿದೆ. ಇದರ ವಿರುದ್ಧ ಎಲ್ಲ ತಾಲ್ಲೂಕು ಮತ್ತು ಜಿಲ್ಲಾ ಕೇಂದ್ರಗಳಲ್ಲಿ ಹೋರಾಟ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ವಿದ್ಯುತ್ ಅಭಾವದಿಂದ ರೈತರ ಪಂಪ್‍ಸೆಟ್ ಆನ್ ಮಾಡಲಾಗುತ್ತಿಲ್ಲ. ದಿನಕ್ಕೆ ಮೂರ್ನಾಲ್ಕು ಗಂಟೆ ವಿದ್ಯುತ್ ಸಹ ಕೊಡುತ್ತಿಲ್ಲ. ನೀರಾವರಿ ಯೋಜನೆಗಳು ಸ್ಥಗಿತಗೊಂಡಿವೆ. ಜನಹಿತವನ್ನು ಸಂಪೂರ್ಣ ಮರೆತ ಭ್ರಷ್ಟ ಸರಕಾರದ ವಿರುದ್ಧ ಹೋರಾಟ ಪ್ರಾರಂಭವಾಗಿದೆ ಎಂದರು.
ಮಳೆ ವಿಫಲವಾಗಿದೆ. ಕಾವೇರಿ ನದಿಯಲ್ಲಿ ನೀರಿನ ಕೊರತೆ ಕುರಿತು ಕಾವೇರಿ ಪ್ರಾಧಿಕಾರಕ್ಕೆ ತಿಳಿಸುವಲ್ಲಿ ಈ ಸರಕಾರವು ವಿಫಲವಾಗಿದೆ. ನಾವು ಕಾವೇರಿ ನೀರಿನ ವಿಚಾರವಾಗಿ ಹೋರಾಟವನ್ನು ತೀವ್ರಗೊಳಿಸಲಿದ್ದೇವೆ. ರೈತರ ಪರವಾಗಿ ನಿಲ್ಲುತ್ತೇವೆ ಎಂದು ಅವರು ತಿಳಿಸಿದರು.
ರಾಜ್ಯದ 180- 190 ತಾಲ್ಲೂಕುಗಳು ಬರದ ಪರಿಸ್ಥಿತಿ ಅನುಭವಿಸುತ್ತಿದ್ದು, ದನಕರುಗಳಿಗೆ ಮೇವಿಲ್ಲದ ದುಸ್ಥಿತಿ ಇದೆ. ರಾಜ್ಯದ ಜನರಿಗೆ ಶುದ್ಧ ನೀರು ಸಿಗುತ್ತಿಲ್ಲ. ರಾಜ್ಯ ಸರಕಾರವು ರಾಜ್ಯವನ್ನು ಬರಪೀಡಿತ ಪ್ರದೇಶ ಎಂದು ಘೋಷಿಸಲು ಮೀನಮೇಷ ಮಾಡುತ್ತಿದೆ. ಇದು ಅತ್ಯಂತ ಖಂಡನೀಯ ಎಂದು ತಿಳಿಸಿದರು.
ವಿದ್ಯುತ್ ಬಿಲ್ ದುಪ್ಪಟ್ಟಾಗಿದೆ. 2 ಸಾವಿರ ಬಿಲ್ ಇದ್ದುದು 4 ಸಾವಿರವಾಗಿದೆ. ವಿದ್ಯುತ್ ದರವನ್ನು ತೀವ್ರವಾಗಿ ಏರಿಸಿದ್ದೇ ಇದಕ್ಕೆ ಕಾರಣ ಎಂದು ಆಕ್ಷೇಪಿಸಿದರು. ಒಂದು ಕಡೆ ಜನರಿಗೆ ಸೌಕರ್ಯ ಕೊಡುವುದಾಗಿ ಹೇಳಿ ಇನ್ನೊಂದೆಡೆ ಜನರ ಜೀವನದ ಜೊತೆ ಈ ಸರಕಾರ ಚೆಲ್ಲಾಟ ಆಡುತ್ತಿದೆ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಡಿ.ವಿ.ಸದಾನಂದಗೌಡ, ಮಾಜಿ ಡಿಸಿಎಂ ಗೋವಿಂದ ಕಾರಜೋಳ, ಮಾಜಿ ಸಚಿವರಾದ ಆರ್.ಅಶೋಕ್, ಡಾ.ಸಿ.ಎನ್.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್, ಬೆಂಗಳೂರಿನ ಸಂಸದರು, ಶಾಸಕರು, ಹಾಲಿ – ಮಾಜಿ ಜನಪ್ರತಿನಿಧಿಗಳು ಭಾಗವಹಿಸಿದ್ದರು.