ಸರ್ವರ ವಿಕಾಸಕ್ಕೆ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು,ಜುಲೈ 28 :
ರಾಜ್ಯದ ಎಲ್ಲ ವರ್ಗದವರ ಅಭಿವೃದ್ಧಿಗೆ ಸಮಗ್ರವಾದ ಯೋಜನೆಗಳ ಮೂಲಕ ರಾಜ್ಯದ ಆರ್ಥಿಕತೆಯನ್ನು ಹೆಚ್ಚಿಸಿ, ಅದರ ಲಾಭವನ್ನು ಎಲ್ಲರಿಗೂ ತಲುಪಿಸುವ ಸದುದ್ದೇಶದಿಂದ ಸರ್ವರ ವಿಕಾಸವಾಗುವ ಸಮೃದ್ಧ ಕರ್ನಾಟಕವನ್ನು ಕಟ್ಟುವ ಸಂಕಲ್ಪ ಮಾಡಲಾಗಿದೆ ಎಂದು ತಿಳಿಸಿದರು.
ಅವರು ಇಂದು ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಪತ್ರಿಕಾಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದರು.
ನಾಲ್ಕು ತಿಂಗಳೊಳಗೆ ಬಜೆಟ್ ಅನುಷ್ಠಾನ:
ಬಜೆಟ್ನಲ್ಲಿ ಘೋಷಿಸಲಾದ ಕಾರ್ಯಕ್ರಮಗಳಿಗೆ ಒಂದೇ ತಿಂಗಳ ಅವಧಿಯಲ್ಲಿ ಸರ್ಕಾರದ ಆದೇಶವನ್ನು ಹೊರಡಿಸಿ, ಪ್ರಥಮ ಬಾರಿಗೆ 4 ತಿಂಗಳ ಅವಧಿಯಲ್ಲಿ ಕಾರ್ಯಕ್ರಮಗಳ ಅನುಷ್ಠಾನಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆಡಳಿತದಲ್ಲಿ ದಕ್ಷತೆಯನ್ನು ತರಲಾಗಿದೆ. ಪ್ರಗತಿಪರವಾಗಿರುವ ಉದ್ಯಮವನ್ನು ಸ್ಥಾಪಿಸಿ, ಯುವಕರಿಗೆ ಉದ್ಯೋಗ ನೀಡುವುದರಿಂದ ಹಿಡಿದು ಹೊಲದಲ್ಲಿ ದುಡಿಯುವ ರೈತನವರೆಗೂ, ಕೂಲಿಕಾರರಿಗೆ, ಮಹಿಳೆಯರಿಗೆ, ಎಸ್ ಸಿ /ಎಸ್ ಟಿ ಗಳಿಗೆ, ಓಬಿಸಿಗಳ ಅಭಿವೃದ್ಧಿಗೆ ಯೋಜನೆಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದರು.
ಪ್ರಾದೇಶಿಕ ಅಸಮಾನತೆ ನಿವಾರಣೆಗೆ ಕ್ರಮ:
ಈ ವರ್ಷ ವಿನೂತನ ಯೋಜನೆಗಳನ್ನು ಮಾಡಲಾಗಿದೆ. ಕಲ್ಯಾಣ ಕರ್ನಾಟಕ ಭಾಗದಲ್ಲಿ 14,000 ಖಾಲಿ ಹುದ್ದೆಗಳ ಭರ್ತಿಗೆ ಕ್ರಮ, ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ 3000 ಕೋಟಿ ರೂ. ಅನುದಾನ. ಪ್ರಾದೇಶಿಕ ಅಸಮಾನತೆಯನ್ನು ನಿವಾರಿಸಲು ಈ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ 5 ಹೊಸ ಇಂಟೆಗ್ರೇಟೆಡ್ ಟೌನ್ ಷಿಪ್ ಗಳನ್ನು ಕಟ್ಟುವ ಪ್ರಕ್ರಿಯೆ ಪ್ರಾರಂಭವಾಗಿದೆ. 6 ಇಂಜಿನಿಯರಿಂಗ್ ಕಾಲೇಜುಗಳನ್ನು ಐಐಟಿ ಮಾದರಿಯಲ್ಲಿ ಅಭಿವೃದ್ಧಿಪಡಿಸಲು ಕ್ರಮ ಕೈಗೊಳ್ಳಲಾಗಿದೆ. ಬಡವರಿಗೆ ಆರೋಗ್ಯ ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಡಯಾಲಿಸಿಸ್ ಸೈಕಲ್ನ್ನು 60,000 ಕ್ಕೆ ಏರಿಸಲು ಆದೇಶಿಸಲಾಗಿದೆ. ಕ್ಯಾನ್ಸರ್ರೋಗಿಗಳಿಗೆ ಕೀಮೋಥೆರಪಿ ಚಿಕಿತ್ಸೆಯನ್ನು 10 ಕಾಲೇಜುಗಳಲ್ಲಿ ಒದಗಿಸಲು ಈಗಾಗಲೇ ಅನುಮತಿಯನ್ನು ನೀಡಲಾಗಿದೆ ಎಂದು ತಿಳಿಸಿದರು.
ಆ್ಯಸಿಡ್ ದಾಳಿಗೊಳಗಾದವರಿಗೆ ನೀಡುವ ಭತ್ಯೆಯನ್ನು 10,000 ರೂ. ಗಳಿಗೆ ಹೆಚ್ಚಳ, ಆಶಾ ಕಾರ್ಯಕರ್ತರಿಗೆ, ಸಫಾಯಿ ಕರ್ಮಚಾರಿ, ಗ್ರಾಮ ಸಹಾಯಕರಿಗೆ ಮಾಸಿಕ ಭತ್ಯೆ ಹೆಚ್ಚಳ ಮಾಡಲು ಆದೇಶ ಈಗಾಗಲೇ ನೀಡಲಾಗಿದೆ. ಅತಿಥಿ ಉಪನ್ಯಾಸಕರ ಗೌರವಧನ ಹೆಚ್ಚಳ, ಈ ಎಲ್ಲ ಸಾಧನೆಗಳು ಜನರನ್ನು ತಲುಪುತ್ತಿದ್ದು, ಸಕಾರಾತ್ಮಕ ಪ್ರತಿಕ್ರಿಯೆ ದೊರೆಯುತ್ತಿದೆ. ಇನ್ನೂ ಹೆಚ್ಚಿನ ಪ್ರಮಾಣದಲ್ಲಿ ರಾಜ್ಯದ ಅಭಿವೃದ್ಧಿಗೆ ಎಲ್ಲ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು ಎಂದರು.
ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ :
ಸವಾಲುಗಳ ಬಗ್ಗೆಯೂ ಚಿಂತನೆ ನಡೆಸಲಾಗುತ್ತಿದೆ. ಕೋಮುಸೌಹಾರ್ದತೆಯನ್ನು ಕದಡಿಸುವ ಘಾತುಕ ಶಕ್ತಿಗಳು ಕೇರಳ, ಕರ್ನಾಟಕ, ಮಧ್ಯಪ್ರದೇಶ, ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಇಡೀ ದೇಶದಲ್ಲಿ ಅಶಾಂತಿಯನ್ನು ಹಬ್ಬಿಸಲು ಪ್ರಯತ್ನಿಸುತ್ತಿವೆ. ಕರ್ನಾಟಕದಲ್ಲಿ ಕಳೆದ 10 ವರ್ಷಗಳಿಂದ ಸಮಾಜಘಾತುಕ ಶಕ್ತಿಗಳು ತಲೆಎತ್ತಿವೆ. 2014 ರಿಂದ ಇಲ್ಲಿಯವರೆಗೂ ಈ ಪರಿಸ್ಥಿತಿಯನ್ನು ನೋಡುತ್ತಿದ್ದೇವೆ. ರಾಜ್ಯದ ದಕ್ಷ ಪೊಲೀಸ್ ಅಧಿಕಾರಿಗಳ ಶ್ರಮದಿಂದ ಸ್ಲೀಪರ್ ಸೆಲ್ ಭಯೋತ್ಪಾದಕರು, ಅವರ ಸಂಘಟನೆಗಳಲ್ಲಿರುವ ಅನೇಕ ಅಪರಾಧಿಗಳನ್ನು ತಿಹಾರ್ ಜೈಲಿಗೆ ಕಳಿಸಲಾಗಿದೆ. ಡಿ.ಜೆ ಹಳ್ಳಿ ಪ್ರಕರಣ, ಮಂಗಳೂರು ಪ್ರಕರಣಗಳಲ್ಲಿ ನಿಷ್ಠೆಯಿಂದ ಕಾರ್ಯನಿರ್ವಹಿಸಿದ್ದಾರೆ. ದಕ್ಷಿಣ ಕನ್ನಡದಲ್ಲಿ ನಡೆದ ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ, 5 ತನಿಖಾ ತಂಡಗಳನ್ನು ರಚಿಸಿ ಕೇರಳ ರಾಜ್ಯಕ್ಕೂ ಕಳುಹಿಸಲಾಗಿದೆ. ಆರೋಪಿಗಳನ್ನು ಕೂಡಲೇ ಬಂಧನಕ್ಕೆ ಒಳಪಡಿಸುವ ವಿಶ್ವಾಸ ನಮಗಿದೆ ಎಂದು ನುಡಿದರು.
ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಯಾವುದೇ ರಾಜಿ ಇಲ್ಲ. ರಾಜ್ಯದಲ್ಲಿ ಶಾಂತಿ ಹಾಗೂ ಕೋಮುಸೌಹಾರ್ದತೆಯನ್ನು ಕದಡುವ ಸಮಾಜದ್ರೋಹಿ ಶಕ್ತಿಗಳ ವಿರುದ್ಧ ಸರ್ಕಾರ ಸಮರವನ್ನು ಸಾರಿದೆ. ಇಂತಹ ಸಂದರ್ಭದಲ್ಲಿ ಜನರು ಸಂಯಮದಿಂದ ವರ್ತಿಸಬೇಕೆಂದು ಮುಖ್ಯಮಂತ್ರಿಗಳು ಮನವಿ ಮಾಡಿದರು.
ಸರ್ಕಾರದ ಕಠಿಣ ಕ್ರಮ ಕೇವಲ ಬಾಯಿ ಮಾತಲ್ಲ :
ಮಾಧ್ಯಮದವರ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದ ಮುಖ್ಯಮಂತ್ರಿಗಳು, ಶಿವಮೊಗ್ಗದಲ್ಲಿ ಹರ್ಷನ ಕೊಲೆ ಪ್ರಕರಣದಲ್ಲಿ ಸರ್ಕಾರ 24 ಗಂಟೆಯಲ್ಲಿ ಕ್ರಮ ತೆಗೆದುಕೊಳ್ಳಲಾಯಿತು. ಡಿಜಿ ಹಳ್ಳಿ- ಕೆಜಿಹಳ್ಳಿ ಪ್ರಕರಣ,ಪಾಂಡವಪುರ ಪ್ರಕರಣದಲ್ಲಿಯೂ ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡಿದೆ. ಕೇವಲ ಬಾಯಿಮಾತಲ್ಲ, ಸರ್ಕಾರ ಕಠಿಣ ಕ್ರಮವನ್ನು ತೆಗೆದುಕೊಂಡಂತೆ ಬಿಜೆಪಿ ಮುಖಂಡ ಪ್ರವೀಣ್ ಕೊಲೆ ಪ್ರಕರಣದಲ್ಲಿಯೂ ಕಠಿಣ ಕ್ರಮ ತೆಗೆದುಕೊಳ್ಳಲಾಗುವುದು. ಕರ್ನಾಟಕದಲ್ಲಿ ಅಹಿತಕರ ಘಟನೆಗಳನ್ನು ನಿಯಂತ್ರಣ ಮಾಡಲು ಹಲವು ವಿಧಾನಗಳನ್ನು ಪ್ರಯೋಗ ಮಾಡಲಾಗುತ್ತಿದೆ. ಪರಿಸ್ಥಿತಿ ಒದಗಿಬಂದರೆ ಕರ್ನಾಟಕದಲ್ಲಿಯೂ ಯೋಗಿ ಮಾಡೆಲ್ ಬರಲಿದೆ ಎಂದು ತಿಳಿಸಿದರು.
ವಿವಾದಗಳ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಲಾಗಿದೆ :
ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕದಡಲೆಂದೇ ಕೆಲವೊಂದು ಸಂಘಟನೆಗಳು ರಾಜ್ಯದಲ್ಲಿ ಹುಟ್ಟಿಕೊಂಡಿವೆ. 5 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಹಿಜಾಬ್ ವಿವಾದವನ್ನು ವ್ಯವಸ್ಥಿತವಾಗಿ ರಾಜ್ಯದೆಲ್ಲೆಡೆ ಹಬ್ಬಿಸಲು ಪ್ರಯತ್ನಿಸಲಾಯಿತು. ಈ ಪರಿಸ್ಥಿತಿಯನ್ನು ನಿಯಂತ್ರಿಸಿ, ಕಾನೂನಿನ ಆದೇಶವನ್ನು ಜಾರಿಗೊಳಿಸಿದ್ದರ ಪರಿಣಾಮ, ಇಂದು ಬಹುತೇಕ ಎಲ್ಲರೂ ಹಿಜಾಬ್ ಸಂಬಂಧಿಸಿದ ನಿಯಮವನ್ನು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.
ಮಸೀದಿಗಳಲ್ಲಿ ಆಜಾನ್ ಬಗ್ಗೆಯೂ ಸುಪ್ರೀಂ ಕೋರ್ಟ್ ಆದೇಶವನ್ನು ಪರಿಪಾಲಿಸಿ ವಿವಾದವನ್ನು ಬಗೆಹರಿಸಲಾಗಿದೆ. ವಿವಾದಗಳ ಸವಾಲುಗಳನ್ನು ಸಮರ್ಥವಾಗಿ ನಿಭಾಯಿಸಿ, ಅಭಿವೃದ್ಧಿಯ ಪಥದಲ್ಲಿ ಮುನ್ನಡೆಯಲಾಗಿದೆ. ಪಿಎಫ್ಐ, ಎಸ್ಡಿಪಿಐ ದೇಶಾದ್ಯಂತ ನಿಷೇಧಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕಾಗುತ್ತದೆ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಸಂದರ್ಭಾನುಸಾರ ವರದಿಗಳನ್ನು ಕಳುಹಿಸಲಾಗಿದ್ದು, ಪ್ರಕ್ರಿಯೆ ಪ್ರಾರಂಭವಾಗಿದೆ.
ಸರ್ಕಾರದ ಮೇಲೆ 40 % ಕಮಿಷನ್ ಪಡೆಯುವ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಪತ್ರಕರ್ತರ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಮುಖ್ಯಮಂತ್ರಿಯವರು 40% ಕಮಿಷನ್ ತೆಗೆದುಕೊಳ್ಳುವ ಬಗ್ಗೆ ಸಂಪೂರ್ಣ ವಿವರವನ್ನು ನೀಡಿದರೆ, ಕ್ರಮ ತೆಗೆದುಕೊಳ್ಳಲಾಗುವುದು. ಅಭಿವೃದ್ಧಿ ಕಾರ್ಯಕ್ರಮಗಳಿಗೆ ಸಂಬಂಧಪಟ್ಟ ಎಲ್ಲ ಕಡತಗಳು ವಿಲೇವಾರಿಯಾಗಿದೆ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ದುಡಿಯುವ ವರ್ಗ, ಬಡವರ ವರ್ಗ, ಎಸ್ ಸಿ ಎಸ್ ಟಿ, ಹಿಂದುಳಿದ ವರ್ಗಗಳಿಗೂ ಇಂದು ಅನುಕೂಲ ಕಲ್ಪಿಸಲಾಗಿದೆ. ಪರಿಶಿಷ್ಟ ಪಂಗಡಗಳಿಗೆ ವಿಶೇಷ ಇಲಾಖೆಯನ್ನು ಸ್ಥಾಪಿಸಿ, ಹೆಚ್ಚಿನ ಅನುದಾನ ನೀಡಲಾಗಿದೆ. ಸಾಮಾಜಿಕ ಕೆಲಸಗಳಲ್ಲಿ ತೊಡಗಿರುವ ಎಲ್ಲ ಸಮುದಾಯದ ಮಠಗಳಿಗೂ ಧನಸಹಾಯ ಮಾಡಲಾಗಿದೆ ಎಂದು ತಿಳಿಸಿದರು.