IMG 20200723 WA0046

ಕೊರೋನಾ ನಿರ್ವಹಣೆಯಲ್ಲಿ 2000ಕೋಟಿ ಅವ್ಯವಹಾರ…?

STATE POLATICAL

ಕೊರೋನಾ ನಿರ್ವಹಣೆಯಲ್ಲಿ 2000ಕೋಟಿ ಅವ್ಯವಹಾರ…?

ದಾಖಲೆ ಬಿಡುಗಡೆ ಮಾಡಿದ ಪ್ರತಿಪಕ್ಷ ಕಾಂಗ್ರೆಸ್

ಬೆಂಗಳೂರು: ಕೊರೋನಾ ನಿರ್ವಹಣೆಯಲ್ಲಿ ಎರಡು ಸಾವಿರ ಕೋಟಿ ರೂ.ಗಳಿಗೂ ಅಧಿಕ ಮೊತ್ತದ ಅವ್ಯವಹಾರವಾಗಿದ್ದು ಈ ಕುರಿತು ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳಿಂದ ತನಿಖೆ ನಡೆಸುವಂತೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಅವರೊಂದಿಗೆ ಪಕ್ಷದ ಕಚೇರಿಯಲ್ಲಿ ಇಂದು ಜಂಟಿ ಪತ್ರಿಕಾಗೋಷ್ಠಿ‌ ನಡೆಸಿದ ಅವರು ವೈದ್ಯಕೀಯ ಸಲಕರಣೆಗಳ ಖರೀದಿಯಲ್ಲಿ ಆಗಿರುವ ಅವ್ಯವಾರವನ್ನು ದಾಖಲೆಗಳ ಸಮೇತ ಎಳೆ ಎಳೆಯಾಗಿ ಬಿಡಿಸಿಟ್ಟರು.

ಸಿದ್ದರಾಮಯ್ಯ ಅವರು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದು : IMG 20200723 WA0045

ಕೋವಿಡ್-19 ಮನುಕುಲದ ಭೀಕರ ಸಂಕಷ್ಟಕ್ಕೆ ಕಾರಣವಾಗಿದೆ. ಇದನ್ನು ಎದುರಿಸಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪಕ್ಷಾತೀತವಾಗಿ ಬೆಂಬಲ ನೀಡಲಾಯಿತು. ಮಾರ್ಚ್ 24ರಂದು ಪ್ರಧಾನ ಮಂತ್ರಿಗಳು ಲಾಕ್‍ಡೌನ್ ಘೋಷಣೆ ಮಾಡಿದಾಗ ದೇಶಾದ್ಯಂತ ಕೋರೊನಾ ಸೋಂಕಿತರ ಸಂಖ್ಯೆ ಕೇವಲ 564 ಆಗಿತ್ತು. ಆ ಅವದಿಯಲ್ಲಿ ಕರ್ನಾಟಕದಲ್ಲಿ ಕೇವಲ ಒಂದು(1) ಪ್ರಕರಣ ಮಾತ್ರ ಪತ್ತೆಯಾಗಿತ್ತು.

ಲಾಕ್‍ಡೌನ್ ಘೋಷಣೆ ಮಾಡಿದ ಸಂದರ್ಭದಲ್ಲಿ ಪ್ರಧಾನ ಮಂತ್ರಿಗಳು ಕುರುಕ್ಷೇತ್ರ 18 ದಿನದಲ್ಲಿ ಮುಗಿಯಿತು. ನಾವು 21 ದಿನಗಳಲ್ಲಿ ಕೊರೋನ ವಿರುದ್ದ ಜಯಿಸುತ್ತೇವೆ, ಮುಂದೆ ನೆಮ್ಮದಿಯಿಂದ ಜೀವನ ಸಾಗಿಸೋಣ ಎಂದು ದೇಶದ ಜನತೆಗೆ ಪ್ರಧಾನಿಗಳು ಆಶ್ವಾಸನೆಯನ್ನು ನೀಡಿದ್ದರು. ಪ್ರಧಾನಿಯವರ ಮಾತಿನಂತೆ ದೇಶದ ಜನತೆ ಚಪ್ಪಾಳೆ ತಟ್ಟಿದರು. ಜಾಗಟೆ ಬಾರಿಸಿದರು. ಹೂಮಳೆಗರೆದರು.

ಆದರೂ ದೇಶದಲ್ಲಿ ಸೋಂಕು ನಿಯಂತ್ರಣಕ್ಕೆ ಬಾರದೆ ಈಗ ಸೋಂಕಿತರ ಸಂಖ್ಯೆ 12 ಲಕ್ಷ ಮೀರಿದೆ. ಸೋಂಕಿನಿಂದ ಸತ್ತವರ ಸಂಖ್ಯೆ ಈವರೆಗೆ 28,732 ಅದೇ ರೀತಿ ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 71,069 ಮೀರಿದೆ. ಸತ್ತವರ ಸಂಖ್ಯೆ 1464.

ಇಷ್ಟೆಲ್ಲ ಆದರೂ ಪ್ರಧಾನಿಯವರಾಗಲಿ ಕೇಂದ್ರದ ಮಂತ್ರಿಗಳಾಗಲಿ ಅಥವಾ ರಾಜ್ಯದ ಮುಖ್ಯಮಂತ್ರಿಗಳು ಮತ್ತವರ ಸಂಪುಟ ಸಹದ್ಯೋಗಿಗಳು ಅನುಕ್ರಮವಾಗಿ ದೆಹಲಿ ಮತ್ತು ಬೆಂಗಳೂರು ಬಿಟ್ಟು ಯಾರೂ ಹೊರಗೆ ಹೋಗಿಲ್ಲ. ಜನರ ಸಮಸ್ಯೆಗಳನ್ನು ಪರಿಹರಿಸಲು ಪರಿಣಾಮಕಾರಿಯಾಗಿ ಕೆಲಸ ಮಾಡಿಲ್ಲ.

ಲಾಕ್‍ಡೌನ್ ಅವದಿಯಲ್ಲಿ ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ಹೋಗಲು ನರಕ ಯಾತನೆ ಅನುಭವಿಸಿದರು. ಇದಕ್ಕಾಗಿ ಸುಪ್ರೀಂಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳು ಕೇಂದ್ರ, ರಾಜ್ಯ ಸರ್ಕಾರಗಳಿಗೆ ಛೀಮಾರಿ ಹಾಕಿದ್ದಾವೆ.

ಕೋವಿಡ್-19ರ ನಿಯಂತ್ರಣದ ಹಿನ್ನೆಲೆಯಲ್ಲಿ 4000 ಕೋಟಿಗೂ ಹೆಚ್ಚಿನ ಮೊತ್ತವನ್ನು ವೆಚ್ಚ ಮಾಡಿದ್ದಾರೆ. ಇದರಲ್ಲಿ 2000 ಕೋಟಿಗೂ ಹೆಚ್ಚ ಭ್ರಷ್ಟಚಾರ ನಡೆಸಿ ರೋಗಿಗಳು ಪರದಾಡುವಂತೆ ಮಾಡಿದ್ದಾರೆ.

ಭ್ರಷ್ಟಚಾರದ ವಿಚಾರವನ್ನು ವಿರೋಧ ಪಕ್ಷಗಳು ಹಾಗೂ ಮಾಧ್ಯಮಗಳು ಬಯಲಿಗೆ ತರಲು ಪ್ರಯತ್ನಿಸಿದ ಹಿನ್ನೆಲೆಯಲ್ಲಿ
ಮೂರು ದಿನಗಳ ಹಿಂದೆ ಉಪ-ಮುಖ್ಯಮಂತ್ರಿಗಳು ಹಾಗೂ ಆರೋಗ್ಯ ಸಚಿವರು ಪತ್ರಿಕಾಗೋಷ್ಠಿ ನಡೆಸಿ 324 ಕೋಟಿ ರೂ.ಗಳನ್ನು ಮಾತ್ರ ಕೊರೊನಾ ಉಪಕರಣಗಳ ಖರೀದಿಗೆ ಖರ್ಚು ಮಾಡಲಾಗಿದೆ ಎಂದು ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.

 

 

ಸಾಮಗ್ರಿಗಳ ದರ ಒಪ್ಪಂದಗಳನ್ನು ಸರ್ಕಾರ ಮಾಡಿಕೊಂಡು, ಖರೀದಿ ಆದೇಶಗಳನ್ನು ನೀಡಿ, ಸಾಮಗ್ರಿಗಳನ್ನು ಸ್ವೀಕರಿಸಿ ಕೆಲವು ಇಲಾಖೆಗಳು ಕೆಲವು ಸಾಮಾಗ್ರಿಗಳಿಗೆ ಪಾವತಿಸಿದ್ದಾರೆ.

ದರ ಒಪ್ಪಂದ ಮಾಡಿಕೊಂಡು ಇನ್ನು ಅಸಂಖ್ಯಾತ ಸಾಮಾಗ್ರಿಗಳಿಗೆ ಹಣವನ್ನು ಪಾವತಿಸಿಲ್ಲ. ದುಬಾರಿ ದರಗಳಿಗೆ ಒಪ್ಪಂದ ಮಾಡಿಕೊಂಡಿದ್ದಾರೆ. ಸಾಮಾಗ್ರಿ ಸರಬರಾಜಾಗಿದೆ.
ಇನ್ನು ಕೆಲವು ಸರಬರಾಜಾಗಬೇಕಾಗಿದೆ. ಆದರೆ ಒಪ್ಪಂದ ಮಾಡಿಕೊಂಡಿರುವುದರಿಂದ ಹಣ ಪಾವತಿಸಬೇಕಾಗುತ್ತದೆ.

ಸಚಿವರು ಆರೋಗ್ಯ ಇಲಾಖೆಯಲ್ಲಿ ಪಾವತಿಸಿರುವ ಹಣದ ಬಗ್ಗೆ ಮಾತ್ರ ಮಾತನಾಡಿದ್ದಾರೆ. ಪಾವತಿ ಆಗಬೇಕಾದ ಹಣದ ಬಗ್ಗೆ ಬಾಯ್ಬಿಟ್ಟಿಲ್ಲ. ಪಾವತಿಸಿರುವ ಸಾಮಾಗ್ರಿಗಳಲ್ಲೂ ಬ್ರಹ್ಮಂಡ ಭ್ರಷ್ಟಚಾರ ನಡೆದಿದೆ.

IMG 20200723 WA0044

ಅಧಿಕೃತ ಮಾಹಿತಿ ಪ್ರಕಾರ ಈ ವಿವಿಧ ಇಲಾಖೆಗಳಲ್ಲಿ 4167 ಕೋಟಿ ರೂ. ವೆಚ್ಚ ಮಾಡಿರುತ್ತಾರೆ.

ಇಷ್ಟೇ ಅಲ್ಲದೆ, ಖರೀದಿ ಆದೇಶಗಳನ್ನು ಮಾಡಿ ಹಣ ಪಾವತಿ ಮಾಡಬೇಕಾದ ಮೊತ್ತಕ್ಕೆ ಇನ್ನೂ ಲೆಕ್ಕ ಸಿಗಬೇಕಿದೆ. ಉಪ ಮುಖ್ಯಮಂತ್ರಿ ಹಾಗೂ ಆರೋಗ್ಯ ಮಂತ್ರಿಗಳು ಇಬ್ಬರೂ ಅಧಿಕಾರಿಗಳೊಂದಿಗೆ ಸೇರಿ ನಡೆಸಿರುವ ಪತ್ರಿಕಾಗೋಷ್ಠಿಯಲ್ಲಿ ಕ್ವಾರಂಟೈನ್ ಕೇಂದ್ರಗಳು, ಆಂಬ್ಯುಲೆನ್ಸ್‍ಗಳು, ಪೌಷ್ಠಿಕ ಆಹಾರ, ಪರೀಕ್ಷೆ, ರೋಗ ಪತ್ತೆ ಮುಂತಾದವುಗಳ ಬಗ್ಗೆ ಪ್ರಸ್ತಾಪ ಮಾಡಿಲ್ಲ.

ಆರೋಗ್ಯ ಇಲಾಖೆಯಲ್ಲಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಾಡಿರುವ ಮೊತ್ತ 3500 ಕೋಟಿಗಳೆಂದು ಕೆ.ಡಿ.ಪಿ. ಸಭೆಯ ನಡವಳಿಗಳಲ್ಲಿ ಪ್ರಸ್ತಾಪಿಸಲಾಗಿದೆ (ಅನೆಕ್ಸ್-4)

ವೆಚ್ಚದ ಬಗ್ಗೆ ಮಾಹಿತಿ ನೀಡುವಂತೆ ಕೋರಿ ದಿನಾಂಕ : 09.06.2020, 03.07.2020 ಮತ್ತು 10.07.2020ರಂದು ಸುಮಾರು 20 ಪತ್ರಗಳನ್ನು ಸರ್ಕಾರಕ್ಕೆ ಬರೆಯಲಾಗಿದೆ. ಇದುವರೆಗೂ ಯಾವುದೇ ರೀತಿಯ ಮಾಹಿತಿಯನ್ನು ನೀಡಿಲ್ಲ. ಮುಖ್ಯಮಂತ್ರಿಗಳು ಮಾಧ್ಯಮದ ಮುಂದೆ ಕುಳಿತು ಮಾಹಿತಿ ನೀಡುತ್ತೇವೆ ಸಹಕರಿಸಿ ಎಂದು ಪದೇ ಪದೇ ಹೇಳಿ ಜನರನ್ನು ದಾರಿ ತಪ್ಪಿಸುತ್ತಿದ್ದಾರೆ.

ನಾವು ಹಿಂದೆ ನಡೆಸಿದ ಪತ್ರಿಕಾಗೋಷ್ಠಿಗಳಲ್ಲಿ ಶ್ವೇತಪತ್ರ ಹೊರಡಿಸಿ ಎಂದು ಆಗ್ರಹಿಸಿದೆವು. ಲೆಕ್ಕ ಕೊಡಿ ಎಂದು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ನಡೆಸಿದೆವು. ಆದರೆ, ಮುಖ್ಯಮಂತ್ರಿಗಳು ಮಾಧ್ಯಮಗಳ ಮುಂದೆ ನೀಡುವ ಹೇಳಿಕೆಗಳು ಮಾಹಿತಿಯೇ?

ಸುಮಾರು 85 ಲಕ್ಷ ಜನರಿಗೆ ಲಾಕ್‍ಡೌನ್ ಸಮಯದಲ್ಲಿ ಆಹಾರದ ಪಾಕೇಟ್‍ಗಳನ್ನು ನೀಡಲಾಗಿದೆ ಎಂದು ಮಾಹಿತಿ ಇದೆ. ಸುಮಾರು 5 ಲಕ್ಷ ಕಾರ್ಮಿಕರನ್ನು ರೈಲು ಮತ್ತು ಬಸ್ಸುಗಳಲ್ಲಿ ಆಹಾರದ ಪೊಟ್ಟಣಗಳನ್ನು ನೀಡಿ ಅವರ ಸ್ವಂತ ಊರುಗಳಿಗೆ ಕಳುಹಿಸಲಾಗಿದೆ ಎಂದು ಮಾಹಿತಿ ಇದೆ. 2.80 ಲಕ್ಷ ಆಹಾರದ ಕಿಟ್‍ಗಳನ್ನು ವಿವಿಧ ಕ್ಷೇತ್ರಗಳ ಶಾಸಕರಿಗೆ ನೀಡಲಾಗಿದೆ ಎಂಬ ಮಾಹಿತಿ ಇದೆ. ಆದರೆ, ಇವುಗಳಿಗೆ ಖರ್ಚಾದ ಹಣ ಎಷ್ಟು ಎಂಬ ಬಗ್ಗೆ ಮಾಹಿತಿ ನೀಡುತ್ತಿಲ್ಲ.

ನಮಗಿರುವ ಮಾಹಿತಿ ಪ್ರಕಾರ, ವಿವಿಧ ಕಂಪನಿಗಳು ಮತ್ತು ಸೇವಾ ಸಂಸ್ಥೆಗಳವರು ನೀಡಿದ ಆಹಾರ ಮತ್ತು ಆಹಾರದ ಕಿಟ್‍ಗಳನ್ನು ತಾವು ನೀಡಿದ್ದೇವೆ ಎಂದು ಲೆಕ್ಕ ಬರೆದು ಹಣ ದೋಚಲಾಗಿದೆ.

ಸರ್ಕಾರದ ವಿವಿಧ ಇಲಾಖೆಗಳು ಖರ್ಚು ಮಾಡಿರುವ ನಾಲ್ಕು ಸಾವಿರ ಕೋಟಿಗೂ ಹೆಚ್ಚಿನ ಹಣದಲ್ಲಿ ಅರ್ಧಕ್ಕಿಂತ ಹೆಚ್ಚು ಹಣವನ್ನು ಮಂತ್ರಿಗಳು ಮತ್ತು ಅಧಿಕಾರಿಗಳು ಜೇಬಿಗಿಳಿಸಿದ್ದಾರೆ.

ಇದಕ್ಕೆ ಪೂರಕ ಎಂಬಂತೆ ಭ್ರಷ್ಟಾಚಾರ ನಡೆದಿದೆ ಎಂಬುದನ್ನು ಸರ್ಕಾರದ ಕಡತ ಸಂಖ್ಯೆ ಎಂಇಡಿ-52, ಆರ್‍ಜಿಯು-2020ರ ಕಂಡಿಕೆ, 36 ರಲ್ಲಿ ಪ್ರಸ್ತಾಪಿಸಿರುವಂತೆ 815 ಕೋಟಿಯ ದುಪ್ಪಟ್ಟು ದರಗಳಿಗೆ ಖರೀದಿಸಿರುವ ಮಾಹಿತಿ ಇದೆ. ಇದರಲ್ಲಿ ಅಧಿಕಾರಿಗಳೇ ಟಿಪ್ಪಣಿ ಬರೆದಿರುವಂತೆ ದುಪ್ಪಟ್ಟು ದರಗಳನ್ನು ಉಪಕರಣಗಳ ಖರೀದಿಗೆ ನಮೂದು ಮಾಡಲಾಗಿದೆ. (ಅನೆಕ್ಸ್-5)

ವೆಂಟಿಲೇಟರ್
ಪತ್ರಿಕಾಗೋಷ್ಠಿಯಲ್ಲಿ ಪ್ರಸ್ತಾಪ ಮಾಡಿರುವ 323 ಕೋಟಿ ರೂ. ವೆಚ್ಚದಲ್ಲಿ ಖರೀದಿ ಮಾಡಿರುವ ವೆಂಟಿಲೇಟರ್‍ಗಳ ಕುರಿತಾದ ಮಾಹಿತಿಯನ್ನೇ ನೋಡಿದರೆ ಇವರು ಜನರಿಗೆ ಯಾವ ರೀತಿ ಸುಳ್ಳು ಹೇಳುತ್ತಿದ್ದಾರೆ ಎಂಬುದು ಸಾಬೀತಾಗುತ್ತದೆ. sಕೇಂದ್ರ ಸರ್ಕಾರ ಸುಮಾರು 50 ಸಾವಿರ ವೆಂಟಿಲೇಟರ್‍ಗಳನ್ನು ಪಿಎಂ ಕೇರ್ಸ್ ನಿಧಿಯಿಂದ ತಲಾ 4 ಲಕ್ಷ ರೂ.ಗಳಂತೆ ಒಟ್ಟು 2 ಸಾವಿರ ಕೋಟಿ ರೂ.ಗಳಲ್ಲಿ ಖರೀದಿ ಮಾಡಿ ಸರಬರಾಜು ಮಾಡುತ್ತಿದೆ. (ಅನೆಕ್ಸ್-6)

ತಮಿಳುನಾಡು ಸರ್ಕಾರ ತಲಾ 4.78 ಲಕ್ಷ ರೂ.ಗಳಿಗೆ 100 ವೆಂಟಿಲೇಟರ್‍ಗಳನ್ನು ಖರೀದಿಸಿದೆ. (ಅನೆಕ್ಸ್-7)

ಸಂಪನ್ಮೂಲಗಳೂ ಇಲ್ಲದೇ ಪರದಾಡುತ್ತಿರುವ ರಾಜ್ಯ ಸರ್ಕಾರವು ಕನಿಷ್ಠ 5.6 ಲಕ್ಷ ರೂ.ಗಳಿಂದ 18.20 ಲಕ್ಷ ರೂ.ಗಳವರೆಗೆ ಹಣ ಕೊಟ್ಟು ಖರೀದಿ ಮಾಡಿದೆ. (ಅನೆಕ್ಸ್-8).
ಖರೀದಿ ಮಾಡಿರುವ ವೆಂಟಿಲೇಟರ್‍ಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಮತ್ತು ಅವುಗಳನ್ನು ಈಗಾಗಲೇ ಬಳಸಲಾಗಿದೆ.

ಈ ಹಿನ್ನೆಲೆಯಲ್ಲಿ ಆಡಳಿತ ಪಕ್ಷದ ಮಾಜಿ ಶಾಸಕರಾದ ಡಾ|| ಸಾರ್ವಭೌಮ ಬಗಲಿಯವರು ಲೋಕಾಯುಕ್ತಕ್ಕೆ ದೂರು ನೀಡಿದ್ದಾರೆ.. ಸದರಿಯವರು ವೃತ್ತಿಯಲ್ಲಿ ವೈದ್ಯರೂ ಆಗಿದ್ದವರು.

ಮಾರುಕಟ್ಟೆ ದರಕ್ಕಿಂತ ನೂರಾರು ಪಟ್ಟು ಹೆಚ್ಚಿನ ದರಗಳಿಗೆ ಉಪಕರಣಗಳನ್ನು ಖರೀದಿ ಮಾಡಿ ಭ್ರಷ್ಟಾಚಾರ ಎಸಗಿರುವುದು ಒಂದು ಮಾದರಿಯಾದರೆ ಈಗಾಗಲೇ ಬೇರೆ ಬೇರೆ ಕಡೆ ಉಪಯೋಗಿಸಿ ನಿರುಪಯುಕ್ತವಾದ ವೆಂಟಿಲೇಟರ್‍ಗಳಂಥ ಸಾಮಗ್ರಿಗಳನ್ನು ಖರೀದಿ ಮಾಡಿರುವುದು. ಇದು ರಾಜ್ಯದ ಜನರಿಗೆ ಮಾಡಿರುವ ದ್ರೋಹ ಅಲ್ಲವೇ ? ಬಿ.ಜೆ.ಪಿ ಯವರ ಭ್ರಷ್ಟಚಾರದ ಹೊಸ ಅವತಾರ ಇದು.

ಪಿಪಿಇ ಕಿಟ್
ಆರೋಗ್ಯ ಸಚಿವರ ಪ್ರಕಾರ, 9.65 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಲಾಗಿದೆ. ಇದರಲ್ಲಿ ಮಹಾರಾಷ್ಟ್ರದ ಪ್ಲಾಸ್ಟ್ ಸರ್ಜಿ ಎಂಬ ಕಂಪನಿಯೊಂದರಿಂದ ಸುಮಾರು 3.50 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿ ಮಾಡಿದ್ದಾರೆ. ಇವುಗಳು ಕಳಪೆ ದರ್ಜೆಯವು ಎಂದು ರಾಜ್ಯಾದ್ಯಂತ ತೀವ್ರ ಆರೋಪ ಬಂತು. ಅನೇಕ ಕಡೆ ವೈದ್ಯರು ಪ್ರತಿಭಟನೆಯನ್ನೂ ಮಾಡಿದರು.

ದೂರುಗಳು ಬಂದ ಬಳಿಕ 1.25 ಲಕ್ಷ ಪಿಪಿಇ ಕಿಟ್‍ಗಳನ್ನು ಸರ್ಕಾರ ವಾಪಸ್ ಪಡೆಯಿತು. ಉಳಿದವುಗಳನ್ನು ಈಗಾಗಲೇ ಬಳಸಲಾಗಿದೆ ಎಂದು ಅಪರ ನಿರ್ದೇಶಕರು ಆರೋಗ್ಯ ಇಲಾಖೆ ಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ನಮೂದಿಸಿದ್ದಾರೆ. ಸದರಿ ಕಂಪನಿಯಿಂದ 2-4.2020ರಂದು ಸುಮಾರು 1 ಲಕ್ಷ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ. ಪಾವತಿಸಿರುವ ದರ ಕಿಟ್ ಒಂದಕ್ಕೆ 2,117.53 ರೂ.ಗಳು. ಇದೇ ಕಂಪನಿಗೆ 330 ರೂ.ಗಳನ್ನು ನೀಡಿಯೂ ಕಿಟ್‍ಗಳನ್ನು ಖರೀದಿ ಮಾಡಲಾಗಿದೆ. (ಆಯುಕ್ತರಿಗೆ ಬರೆದಿರುವ ಪತ್ರ : ಅನೆಕ್ಸ್-09)

ಡಾ. ಸಾರ್ವಭೌಮ ಬಗಲಿಯವರು ಮಾಜಿ ಶಾಸಕರು ಲೋಕಾಯುಕ್ತರಿಗೆ ನೀಡಿರುವ ದೂರಿನಲ್ಲಿ ಕಳಪೆ ಕಿಟ್‍ಗಳನ್ನು ದುಬಾರಿ ದರಕ್ಕೆ ಖರೀದಿ ಮಾಡಿರುವ ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.
ಕಳಪೆ ಗುಣಮಟ್ಟದ 2.25 ಲಕ್ಷ ಪಿಪಿಇ ಕಿಟ್‍ಗಳನ್ನು ವೈದ್ಯರು ಮತ್ತು ಅರೆ ವೈದ್ಯ ಸಿಬ್ಬಂದಿಗೆ ಅವರಲ್ಲಿ ಅನೇಕರು ಸೋಂಕಿಗೆ ಒಳಪಟ್ಟು ಅನಾಹುತಗಳಿಗೆ ಈಡಾಗಿದ್ದಾರೆ ಅದರ ಜವಾಬ್ದಾರಿ ಹೊರುವವರು ಯಾರು? ಬಳ್ಳಾರಿ ವಿಮ್ಸ್ ಮೆಡಿಕಲ್ ಕಾಲೇಜು ಮತ್ತು ಆಸ್ಪತ್ರೆಯಲ್ಲಿ 1200 ರೂ.ಗಳ ವರೆಗೆ ನೀಡಿ ಪಿಪಿಇ ಕಿಟ್‍ಗಳನ್ನು ಖರೀದಿಸಿದ್ದಾರೆ.(ಅನೆಕ್ಸ್-10)

ಇಲಾಖೆಯ ಒಳಗಿನ ಮಾಹಿತಿ ಪ್ರಕಾರ, ಇವರು ಹೇಳುತ್ತಿರುವಷ್ಟು ಪಿಪಿಇ ಕಿಟ್‍ಗಳೇ ಇಲ್ಲ. ಆದರೂ ಹಣ ಪಾವತಿಸಲಾಗಿದೆ ಎಂಬ ಮಾಹಿತಿ ಇದೆ.

ಮಾಸ್ಕ್
ಮಾಸ್ಕ್ ದರ ಮಾರುಕಟ್ಟೆಯಲ್ಲಿ 50-60 ರೂ. ಇದ್ದರೂ ಸುಮಾರು ಹತ್ತು ಲಕ್ಷ ಮಾಸ್ಕ್‍ಗಳನ್ನು 126 ರೂ.ಗಳಿಂದ 150 ರೂ.ಗಳ ವರೆಗೆ ಖರೀದಿ ಮಾಡಲಾಗಿದೆ. ಇದರಲ್ಲಿ ನಿಯಮಬಾಹಿರವಾಗಿ ಹಾಗೂ ಕಳಪೆ ಗುಣಮಟ್ಟದ ಮಾಸ್ಕ್‍ಗಳನ್ನು ಖರೀದಿ ಮಾಡಲಾಗಿದೆ ಎಂದು ಕಂದಾಯ ಇಲಾಖೆಯು ಬೆಂಗಳೂರು ನಗರ ಜಿಲ್ಲಾಧಿಕಾರಿಗೆ ನೋಟಿಸ್ ನೀಡಿದೆ

ಥರ್ಮಲ್ ಸ್ಕ್ಯಾನರ್
ಮಾರುಕಟ್ಟೆಯಲ್ಲಿ ಉತ್ತಮ ಗುಣಮಟ್ಟದ ಥರ್ಮಲ್ ಸ್ಕ್ಯಾನರ್‍ಗಳು ಸುಮಾರು 2 ರಿಂದ 3 ಸಾವಿರ ರೂ.ಗಳಿದ್ದರೂ ಸರ್ಕಾರದ ಆರೋಗ್ಯ ಇಲಾಖೆ 5945 ರೂ.ಗಳನ್ನು ನೀಡಿ ಖರೀದಿಸಿದೆ. ಇದೇ ಥರ್ಮಲ್ ಸ್ಕ್ಯಾನರ್‍ಗಳನ್ನು ಸಮಾಜ ಕಲ್ಯಾಣ ಇಲಾಖೆಯು 9 ಸಾವಿರ ರೂ.ಗಳನ್ನು ನೀಡಿ ಖರೀದಿಸಿದೆ. (ಅನೆಕ್ಸ್ 11).

ಸ್ಯಾನಿಟೈಸರ್ಸ್
500 ಎಂಎಲ್ ಸ್ಯಾನಿಟೈಸರ್‍ಗೆ ಮಾರುಕಟ್ಟೆಯಲ್ಲಿ 80-100 ಗಳಿದ್ದು ಇದಕ್ಕೆ 250 ರೂ. ನೀಡಿ ಖರೀದಿಸಿದ್ದಾರೆ. ಆದರೆ, ಸಮಾಜ ಕಲ್ಯಾಣ ಇಲಾಖೆಯವರು ಇದೇ 500 ಎಂಎಲ್ ಬಾಟಲಿಗೆ 600 ರೂ.ಗಳನ್ನು ನೀಡಿದೆ. (ಅನೆಕ್ಸ್ : 12).

ಆಕ್ಸಿಜನ್ ಉಪಕರಣ:-
ಪಕ್ಕದ ಕೇರಳ ರಾಜ್ಯದಲ್ಲಿ ಆಮ್ಲಜನಕ ಕೊರತೆಯಿಂದ ಬಳಲುತ್ತಿರುವ ಮಕ್ಕಳಿಗೆ ಕೊಳವೆ ಮೂಲಕ ಶ್ವಾಸಕೋಶಗಳಿಗೆ ಆಮ್ಲಜನಕ ಪೂರೈಕೆ ಮಾಡುವ ಸಾಧನಗಳನ್ನು [ ಹೆಚ್.ಎಫ್.ಎನ್.ಸಿ. ಥೆರಪಿ ಡಿವೈಸ್] ಕರ್ನಾಟಕ ಸ್ಟೇಟ್ ಡ್ರಗ್ ಲಾಜಿಸ್ಟಿಕ್ ಮತ್ತು ವೇರ್ ಹೌಸಿಂಗ್ ಸೊಸೈಟಿ 300 ಡಿವೈಸ್ ಗಳ ದರ ಮತ್ತು ಕೇರಳ ಮೆಡಿಕಲ್ ಸರ್ವಿಸ್ ಕಾರ್ಪೋರೇಷನ್ ಖರೀದಿಸಿರುವ ದರದ ಮಧ್ಯೆ ಸಾಕಷ್ಟು ವ್ಯತ್ಯಾಸವಿದೆ. ಕೇರಳದಲ್ಲಿ 2,86,961.18 ರೂಗಳಿಗೆ ಖರೀದಿಸಿದೆ. ಕರ್ನಾಟಕದಲ್ಲಿ 4,36,800 ರೂ.ಗಳಿಗೆ ಖರೀದಿಸಿದೆ. (ಅನೇಕ್ಸ್-13)

ಎಸ್.ಎಂ. ಫಾರ್ಮಸ್ಯುಟಿಕಲ್ ಪ್ರೈವೇಟ್ ಲಿಮಿಟೆಡ್ ಕಂಪನಿಯವರು ಕಲಬುರ್ಗಿ ಮತ್ತು ರಾಮನಗರ ಜಿಲ್ಲೆಗಳಿಗೆ ಮನುಷ್ಯರ ಆರೋಗ್ಯಕ್ಕೆ ಹಾನಿಕರವಾದ ಅತ್ಯಂತ ಕಳಪೆ ಗುಣಮಟ್ಟದ ಸ್ಯಾನಿಟೈಸರ್‍ಗಳನ್ನು ಸರಬರಾಜು ಮಾಡಿದ್ದಾರೆ ಎಂದು ಸರ್ಕಾರದ ಇಲಾಖೆ ಪರೀಕ್ಷಾ ವರದಿಯಲ್ಲಿ ನಮೂದಿಸಿದೆ. (ಅನೆಕ್ಸ್-14).

ಇದು ಒಂದೆಡೆಯಾದರೆ ಕೇಂದ್ರ ಸರ್ಕಾರ ಸ್ಯಾನಿಟೈಸರ್‍ಗಳ ಮೇಲಿನ ಜಿಎಸ್‍ಟಿಯನ್ನು ಶೇ.12ರಿಂದ ಶೇ.18ಕ್ಕೆ ಏರಿಸಿ ಸಂಕಷ್ಟ ಸಮಯದಲ್ಲೂ ಜನರನ್ನು ಶೋಷಿಸಲು ಯತ್ನಿಸುತ್ತಿದೆ.

ನಮಗೆ ಲಭ್ಯವಾಗಿರುವ ಮಾಹಿತಿ ಪ್ರಕಾರ ಸರ್ಕಾರ, ಸ್ಯಾನಿಟೈಸರ್‍ಗಳನ್ನು ಖರೀದಿ ಮಾಡಿದ್ದಕ್ಕಿಂತ ಸಿಎಸ್‍ಆರ್‍ನಲ್ಲಿ ದೇಣಿಗೆ ನೀಡಿರುವ ಪ್ರಮಾಣವೇ ಹೆಚ್ಚಾಗಿದೆ.

ಆವರು ನೀಡಿರುವ ಸಾಮಗ್ರಿಗಳನ್ನು ಸರ್ಕಾರ ಲೆಕ್ಕ ಬರೆದು ಹಣ ದೋಚಿದೆ ಎಂಬ ಮಾಹಿತಿ ಇದೆ.
ಅಕ್ಸಿಜನ್ ಸಿಲಿಂಡರ್‍ಗಳು, ರ್ಯಾಪಿಡ್ ಟೆಸ್ಟ್ ಕಿಟ್‍ಗಳು, ಹಾಸಿಗೆ, ದಿಂಬು ಬಾಡಿಗೆ/ಖರೀದಿ ಕಿಯಾಸ್ಕ್‍ಗಳ ನಿರ್ಮಾಣ, ಹಾಲು, ಆಹಾರ ವಿತರಣೆ ಇತ್ಯಾದಿಗಳ ಮಾಹಿತಿಯನ್ನು ಉಪ ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರು ಯಾವ ಕಾರಣದಿಂದಲೋ ಏನೋ ಪ್ರಸ್ತಾಪ ಮಾಡಿಲ್ಲ.

ಈ ಎಲ್ಲ ಅಂಕಿ-ಅಂಶಗಳನ್ನು ನೋಡಿದರೆ ಉಪಕರಣಗಳ ಖರೀದಿಯಲ್ಲಿ ಭಾರಿ ಭ್ರಷ್ಟಾಚಾರ ನಡೆದಿದೆ ಎಂಬುದು ಅರ್ಥವಾಗುತ್ತದೆ.

ಕೊರೊನಾ ವೈರಸ್ ರಾಜ್ಯದಲ್ಲಿ ತಾಂಡವ ನೃತ್ಯವಾಡುತ್ತಿದ್ದರೂ ಹುಚ್ಚರ ಮದುವೆಯಲ್ಲಿ ಉಂಡವನೇ ಜಾಣ ಎಂಬ ರೀತಿಯಲ್ಲಿ ರಾಜ್ಯ ಸರ್ಕಾರದ ಕಾರ್ಯವೈಖರಿ ಕಾಣುತ್ತಿದೆ.

ಸುಮಾರು 2 ಸಾವಿರ ಕೋಟಿಗೂ ಹೆಚ್ಚು ಭ್ರಷ್ಟಾಚಾರವನ್ನು ರಾಜ್ಯ ಸರ್ಕಾರದ ವಿವಿಧ ಇಲಾಖೆಗಳು ನಡೆಸಿವೆ. ಈ ಮೂಲಕ ರಾಜ್ಯದ ಜನತೆಗೆ ದ್ರೋಹ ಎಸಗಿದೆ. ಈ ಭ್ರಷ್ಟಾಚಾರದ ಲೆಕ್ಕ ಕೊಡಿ ಎಂದು ಆಗ್ರಹಿಸುತ್ತಾ ಬಂದಿದ್ದೇವೆ.

ಮೇಲಿನ ಅಂಶಗಳನ್ನು ಗಮನಿಸಿದರೆ
ಸರಬರಾಜು ಆಗಿರುವ ಸಾಮಗ್ರಿಗಳು ಕಳಪೆಯಾಗಿವೆ,
ವಸ್ತುಗಳು ಸರಬರಾಜು ಆಗದೆ ಹಣ ಪಾವತಿಸಲಾಗಿದೆ,
ಮಾರುಕಟ್ಟೆಯಲ್ಲಿ ಕಡಿಮೆ ದರ ಇದ್ದರೂ ದುಬಾರಿ ದರಗಳನ್ನು ನೀಡಲಾಗಿದೆ.
ಸಚಿವರು ಅಷ್ಟು ಹಣವೇ ಇಲ್ಲ, ಖರ್ಚು ಮಾಡಿಯೇ ಇಲ್ಲ ಎಂದಿದ್ದಾರೆ. ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಆರೋಗ್ಯ ಇಲಾಖೆಯಿಂದ ಖರ್ಚು ಮಾಡಿರುವ ಒಟ್ಟು ಪ್ರಮಾಣ 3,500 ಕೋಟಿ ರೂ.ಗಳು. ಇದು ಸರ್ಕಾರದ ಅಧಿಕೃತ ಮಾಹಿತಿ. ಬಿಡುಗಡೆ ಮಾಡಿರುವುದು 1527 ಕೋಟಿ ರೂ. ಬಿಡುಗಡೆ ಮಾಡಿರುವುದಕ್ಕಿಂತ ಶೇ.217 ರಷ್ಟು ಖರ್ಚು ಮಾಡಲಾಗಿದೆ ಎಂಬ ಮಾಹಿತಿ ಇದೆ.

ಇದರ ಜೊತೆಗೆ ಆಯುಷ್ಮಾನ್ ಭಾರತ್, ಆರೋಗ್ಯ ಕರ್ನಾಟಕ ಯೋಜನೆಯಲ್ಲಿ 133 ಕೋಟಿ ರೂ.ಗಳನ್ನು ಖರ್ಚು ಮಾಡಲಾಗಿದೆ. ಇದು ಒಂದು ಇಲಾಖೆಯ ಮಾಹಿತಿ ಮಾತ್ರ.
ಸಂಪನ್ಮೂಲಗಳ ಕೊರತೆಯ ನೆಪದಲ್ಲಿ ಸರ್ಕಾರದ ಆಸ್ತಿ ಹರಾಜು ಹಾಕುತ್ತಿದ್ದಾರೆ.

ಗುತ್ತಿಗೆಗೆ ನೀಡಿರುವ ಆಸ್ತಿಗಳನ್ನು ಮಾರಾಟ ಮಾಡುತ್ತಿದ್ದಾರೆ. ಇದಲ್ಲದೆ, 8 ಸಾವಿರ ಕೋಟಿ ರೂ. ಭಾರತೀಯ ರಿಸರ್ವ್ ಬ್ಯಾಂಕ್‍ನಿಂದ ಸಾಲ ಮಾಡಿ ರಾಜ್ಯವನ್ನು ಸಾಲದ ಸುಳಿಗೆ ಸಿಲುಕಿಸಿದ್ದಾರೆ.

ಈ ಹಣವನ್ನು ಸದ್ಭಳಕೆ ಮಾಡಿಕೊಂಡು ಜನರ ಆರೋಗ್ಯ ಸುಧಾರಿಸುವ ಬದಲು ನಿರಂತರವಾಗಿ ಭ್ರಷ್ಟಚಾರದಲ್ಲಿ ತೊಡಗಿದ್ದಾರೆ. ನಾಲ್ಕು ಸಾವಿರ ಕೋಟಿಗೂ ಹೆಚ್ಚು ಹಣವನ್ನು ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ವೆಚ್ಚ ಮಾಡಿದೆ.

ಈ ವೆಚ್ಚದಲ್ಲಿ 2000 ಕೋಟಿಗೂ ಹೆಚ್ಚು ಹಣವನ್ನು ಲೂಟಿ ಮಾಡಲಾಗಿದೆ. ಹಣ ದುರ್ಬಳಕೆ ಮಾಡಿಕೊಂಡು ಮಂತ್ರಿಗಳು, ಅಧಿಕಾರಿಗಳು ಜೇಬು ತುಂಬಿಸಿಕೊಂಡಿದ್ದಾರೆ. ವಲಸೆ ಕಾರ್ಮಿಕರು, ಬಡವರಿಗೆ ಆಹಾರ ಕಿಟ್ ನೀಡುವುದಕ್ಕೆ ವೆಚ್ಚ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ. ಈ ಪ್ರಕರಣಗಳಲ್ಲಿ ವ್ಯಾಪಕವಾದ ಭ್ರಷ್ಟಾಚಾರ ನಡೆದಿರುತ್ತದೆ.
ಈ ಪ್ರಮಾಣದಲ್ಲಿ ಭ್ರಷ್ಟಾಚಾರ ನಡೆದಿರುವುದರಿಂದ ವಿಶೇಷ ವಿಧಾನ ಮಂಡಲ ಅಧಿವೇಶನ ಕರೆಯಬೇಕೆಂದು ಒತ್ತಾಯಿಸುತ್ತೇವೆ.

ಹಗರಣದ ಸತ್ಯಾಸತ್ಯತೆಯನ್ನು ಒರೆಗೆ ಹಚ್ಚಿ ಭ್ರಷ್ಟರಿಗೆ ಶಿಕ್ಷೆ ನೀಡುವ ದೃಷ್ಟಿಯಿಂದ ಕೂಡಲೇ ಉಚ್ಛ ನ್ಯಾಯಾಲಯದ ಹಾಲಿ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆ ನಡೆಸಬೇಕೆಂದು ಆಗ್ರಹಿಸುತ್ತೇವೆ.

ಪ್ರಸ್ತುತ ರಾಜ್ಯ ಸರ್ಕಾರವು ಇತಿಹಾಸದಲ್ಲೇ ಅತ್ಯಂತ ಹೆಚ್ಚು ಭ್ರಷ್ಟ ಸರ್ಕಾರವಾಗಿದೆ. ಕೋವಿಡ್ ನಿಯಂತ್ರಣದಲ್ಲಿಯೂ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಸೋಂಕಿತರಿಗೆ ಸಮರ್ಥ ಚಿಕಿತ್ಸೆಯನ್ನೂ ನೀಡದೆ ಅವರನ್ನು ಕೊಲ್ಲುತ್ತಿರುವ ಸರ್ಕಾರ ಇದಾಗಿದೆ. ಮಡಿದವರಿಗೆ ಗೌರವಯುತವಾದ ಶವ ಸಂಸ್ಕಾರವನ್ನೂ ನಡೆಸದೆ ಮಾನವ ಹಕ್ಕುಗಳ ದಮನಕ್ಕೂ ಕಾರಣವಾಗಿದೆ.

ಇದು ಭ್ರಷ್ಟ ಸರ್ಕಾರ, ಅಷ್ಟೇ ಅಲ್ಲ, ಅಮಾನವೀಯವಾದ ಸರ್ಕಾರವೂ ಆಗಿದೆ.