ಪಾವಗಡ ತಾಲ್ಲೂಕಿನ ಹುಸೇನ್‍ಪುರ ಗ್ರಾಮದಲ್ಲಿ ನೆರೆ ಪರಿಹಾರ ಯೋಜನೆ
ಪಾವಗಡ ತಾಲ್ಲೂಕಿನ ಹುಸೇನ್‍ಪುರ ಗ್ರಾಮದಲ್ಲಿ 30ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಸರಿಸುಮಾರು 4 ಅಡಿಯಷ್ಟು ನೀರು ನಿಂತಿದ್ದ ಮನೆಗಳು ಅನೇಕವು ಶಿಥಿಲವಾಗಿದ್ದು ಅತ್ಯಂತ ದುಃಸ್ಥಿತಿಯಲ್ಲಿವೆ. ಈ ನಿಟ್ಟಿನಲ್ಲಿ ಸಂತ್ರಸ್ತರಿಗೆ ಅದರಲ್ಲಿಯೂ ವಯಸ್ಸಾದ ಹಾಗೂ ದುರ್ಬಲ ವರ್ಗದವರಿಗೆ ಶ್ರೀರಾಮಕೃಷ್ಣ ಸೇವಾಶ್ರಮದ ವತಿಯಿಂದ ತತ್‍ಕ್ಷಣದ ಪರಿಹಾರ ಕಾರ್ಯ ನಡೆಯಿತು. ಈ ಒಂದು ಕಾರ್ಯಕ್ರಮಕ್ಕೆ ಅಧಿಕೃತವಾಗಿ ಭೇಟಿ ನೀಡುತ್ತಿದ್ದ ಪಾವಗಡ ತಾಲ್ಲೂಕಿನ ತಹಶೀಲ್ದಾರ್ ರವರಾದ ಶ್ರೀ ವರದರಾಜು ರವರೂ ಸಹ ಈ ಕಾರ್ಯದಲ್ಲಿ ಭಾಗಿಯಾಗಿದ್ದರು. ಪೂಜ್ಯ ಸ್ವಾಮಿ ಜಪಾನಂದಜೀ ರವರು ನೆರೆ ಪೀಡಿತರ ಪ್ರತಿಯೊಂದು ಮನೆಗಳಿಗೂ ಭೇಟಿ ನೀಡಿ ಅವರ ಸಂಕಷ್ಟದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ ಇದೆ ಎಂದು ತಿಳಿಸಿ ಮನವರಿಕೆ ಮಾಡಿಕೊಟ್ಟರು.
ಧೈರ್ಯ ಮತ್ತು ಸ್ಥೈರ್ಯದ ನುಡಿಗಳನ್ನು ತಿಳಿಸಿದರು. ನೆರೆಯ ಹೊಡೆತದಿಂದ ಮನೆಗಳಲ್ಲಿದ್ದ ಅಲ್ಪ ಸ್ವಲ್ಪ ಧಾನ್ಯಗಳು, ಬಿತ್ತನೆ ಬೀಜಗಳು ಮತ್ತು ಮನೆಯ ಪಾತ್ರೆ ಸರಂಜಾಮುಗಳು ಸಂಪೂರ್ಣವಾಗಿ ಹಾಳಾಗಿದ್ದುದನ್ನು ಕಾಣಬಹುದಾಗಿತ್ತು. ನಿನ್ನೆ ತಾನೆ ಈ ಒಂದು ವಿಚಾರವನ್ನು ಪೂಜ್ಯ ಸ್ವಾಮಿ ಜಪಾನಂದಜೀ ರವರು ತಿಳಿದಾಕ್ಷಣ ಇಂದು ಬೆಳಿಗ್ಗೆಯೇ ಸ್ಥಳಕ್ಕೆ ಪರಿಹಾರ ಸಾಮಗ್ರಿಗಳೊಂದಿಗೆ ಜೊತೆಯಲ್ಲಿಯೇ ತಹಶೀಲ್ದಾರ್ ರವರನ್ನು ಕೂಡಿಕೊಂಡು ಆ ಪ್ರದೇಶಗಳಲ್ಲಿ ಸಂಚರಿಸಿ ನೊಂದವರಿಗೆ ಪರಿಹಾರ ಸಾಮಗ್ರಿಗಳನ್ನು ಸಂಪೂರ್ಣ ಶಿಥಿಲವಾದ ಮನೆಗಳಿಗೆ ಟಾರ್ಪಾಲು ಹಾಗೂ ಸುಮಾರು 30ಕ್ಕೂ ಹೆಚ್ಚು ಜನರಿಗೆ ತತ್‍ಕ್ಷಣಕ್ಕೆ ಬೇಕಾಗುವಂತಹ ದವಸ ಧಾನ್ಯಗಳು, ಹೊದಿಕೆ, ಸೀರೆ, ಪಂಚೆ, ಟವೆಲ್ ಹಾಗೂ ಶುಚಿತ್ವವನ್ನು ಕಾಪಾಡಿಕೊಳ್ಳಲು ರೆಡ್ ಕ್ರಾಸ್ ಸಂಸ್ಥೆಯ ಶುಚಿತ್ವ ಕಿಟ್ ಅನ್ನು ನೀಡಿದರು.
ಒಟ್ಟಿನಲ್ಲಿ ಎಲ್ಲಿ ನೈಸರ್ಗಿಕ ವೈಪರೀತ್ಯ ಕಂಡು ಬಂದಲ್ಲಿ ಶ್ರೀರಾಮಕೃಷ್ಣ ಸೇವಾಶ್ರಮ, ಇನ್ಫೋಸಿಸ್ ಫೌಂಡೇಷನ್ ರವರ ಸಹಕಾರದೊಂದಿಗೆ ಸೇವಾ ಪರಿಹಾರ ಕಾರ್ಯಗಳನ್ನು ನಿರಂತರವಾಗಿ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ಸೇವಾ ಕಾರ್ಯ ವ್ಯಾಪಿಸಿರುವುದು ನಿಜಕ್ಕೂ ಶ್ಲಾಘನೀಯವಾದುದೇ ಸರಿ. ಇದೇ ಸಂದರ್ಭದಲ್ಲಿ ಪೂಜ್ಯ ಸ್ವಾಮೀಜಿಯವರು ಮುಂದಿನ ವಾರ ಮತ್ತೆ ಕೇರಳ ರಾಜ್ಯಕ್ಕೆ ಭೇಟಿ ಅಲ್ಲಿಯ ಇಡುಕ್ಕಿ, ಪಟ್ಟಣಂತಿಟ್ಟ ಮುಂತಾದ ಪ್ರದೇಶಗಳಲ್ಲಿ ಮತ್ತೆ ನೆರೆ ಹಾವಳಿಯಾಗಿದ್ದು ಪರಿಹಾರ ಸಾಮಗ್ರಿಗಳೊಂದಿಗೆ ತೆರಳುತ್ತಿದ್ದಾರೆ ಎಂಬುದನ್ನು ಆಶ್ರಮದ ಪ್ರಕಟಣೆ ತಿಳಿಸಿದೆ.