ಬೆಂಗಳೂರು ಮಳೆ ಹಾಗೂ ಮೂಲಸೌಲಭ್ಯ ನಿರ್ವಹಣೆ 300 ಕೋಟಿ ರೂ. ಒದಗಿಸಲು ತೀರ್ಮಾನ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಂಗಳೂರು, ಸೆಪ್ಟೆಂಬರ್ 9 :
ಬೆಂಗಳೂರಿನಲ್ಲಿನ ಮಳೆ ಪರಿಸ್ಥಿತಿ ಹಾಗೂ ಮೂಲಸೌಲಭ್ಯ ನಿರ್ವಹಣೆಗೆ 300 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರು ಜಲಮಂಡಳಿ, ರಾಜ್ಯ ಮಳೆ ಹಾಗೂ ಪ್ರವಾಹದ ಹಾನಿ ಕುರಿತು ಸಚಿವರು , ಅಧಿಕಾರಿಗಳು, ಜಿಲ್ಲಾಧಿಕಾರಿಗಳೊಂದಿಗೆ ವಿಡಿಯೋ ಸಂವಾದದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದರು.
ಬೆಂಗಳೂರು ಮತ್ತು ರಾಜ್ಯದ ಪ್ರವಾಹ ನಿರ್ವಹಣೆಗೆ, ವಿಶೇಷವಾಗಿ ರಸ್ತೆ, ಸೇತುವೆ, ವಿದ್ಯುತ್ ಕಂಬ, ಟ್ರಾನ್ಸ್ಫಾರ್ಮರ್, ಶಾಲಾ ಕೊಠಡಿ ದುರಸ್ತಿ ಸೇರಿದಂತೆ ಮೂಲಸೌಲಭ್ಯದ ನಿರ್ವಹಣೆಗೆ ರಾಜ್ಯ ಸರ್ಕಾರ 600 ಕೋಟಿ ರೂ.ಗಳ ಬಿಡುಗಡೆ ಮಾಡಲು ತೀರ್ಮಾನಿಸಲಾಗಿದೆ. ಬೆಂಗಳೂರಿಗೆ 300 ರೂ.ಗಳನ್ನು ನೀಡಲಾಗಿದ್ದು, 664 ಕೋಟಿ ಡಿ.ಸಿಗಳ ಬಳಿ ಇದ್ದು, ಮೂಲಭೂತ ಸೌಕರ್ಯಕ್ಕೆ 500 ಕೋಟಿ ರೂ.ಗಳನ್ನು ಈಗಾಗಲೇ ನೀಡಲಾಗಿದೆ. ಬೆಂಗಳೂರಿನ ಪರಿಸ್ಥಿತಿಗೆ ಸಂಬಂಧಿಸಿದಂತೆ, 1500 ಕೋಟಿ ರೂ.ಗಳನ್ನು ರಾಜಕಾಲುವೆಗಳ ನಿರ್ಮಾಣಕ್ಕೆ ಈಗಾಗಲೇ ನೀಡಲಾಗಿದ್ದು, ಮಳೆ ನಿಂತ ತಕ್ಷಣ ಕೆಲಸ ಪ್ರಾರಂಭಿಸಲಾಗುವುದು ಎಂದರು.
ಬೆಂಗಳೂರು ನಗರಕ್ಕೆ ಪ್ರತ್ಯೇಕ ಎಸ್ ಡಿ ಆರ್ ಎಫ್ ಕಂಪನಿ :
ಬೆಂಗಳೂರಿನ ಪ್ರವಾಹದ ಪರಿಸ್ಥಿತಿಯನ್ನು ಅವಲೋಕಿಸಿ ಬೆಂಗಳೂರಿನಲ್ಲಿ ಒಂದು ಎಸ್ ಡಿ ಆರ್ ಎಫ್ ಕಂಪನಿಯನ್ನು ಸ್ಥಾಪಿಸಲು , ಸಲಕರಣೆಗಳನ್ನು ಒದಗಿಸಲು 9.50 ಕೋಟಿ ರೂ.ಗಳನ್ನು ಬಿಡುಗಡೆ ಮಾಡಲಾಗಿದ್ದು, ಈ ಎಸ್ ಡಿ ಆರ್ ಎಫ್ ಕಂಪನಿ ಬೆಂಗಳೂರಿಗೆ ಸೀಮಿತವಾಗಿ ಕೆಲಸ ಮಾಡಲಿದೆ. ಇಡೀ ರಾಜ್ಯದಲ್ಲಿ ಮಾಜಿ ಯೋಧರನ್ನು ಒಳಗೊಂಡಂತೆ ಇನ್ನೆರಡು ಕಂಪನಿಗಳನ್ನು ಮುಂದಿನ ತಿಂಗಳಲ್ಲಿ ಸ್ಥಾಪಿಸಲಾಗುವುದು ಎಂದರು.
ಕೇಂದ್ರ ಅಧ್ಯಯನ ತಂಡ :
ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹ ಪರಿಸ್ಥಿತಿ ಅಧ್ಯಯನಕ್ಕಾಗಿ ಕೇಂದ್ರ ತಂಡ ನಾಳೆ ರಾತ್ರಿ ಬೆಂಗಳೂರಿಗೆ ಆಗಮಿಸಲಿದ್ದು, ಪ್ರಸ್ತುತ ಆಗಿರುವ ಹಾನಿಯ ಬಗ್ಗೆ ಮೆಮೊರೆಂಡಂ ನೀಡಲಾಗುವುದು. ಕೆಲವು ಜಿಲ್ಲೆಗಳಲ್ಲಿ ತಂಡ ಅಧ್ಯಯನದ ನಂತರ ರಾಜ್ಯ ಸರ್ಕಾರ, ತಂಡದೊಂದಿಗೆ ಸಭೆ ನಡೆಸಲಿದೆ ಎಂದರು.
ಟಿ ಕೆ ಹಳ್ಳಿ ಪಂಪ್ ಹೌಸ್ ಎರಡು ದಿನಗಳೊಳಗೆ ಕಾರ್ಯಾರಂಭ :
ಟಿಕೆಹಳ್ಳಿಗೆ ಪರಿಶೀಲನೆಗೆ ತೆರಳಲಾಗಿದ್ದು, ಬೆಂಗಳೂರು ನಗರ ಕಾವೇರಿ ನೀರನ್ನು ಪಂಪ್ ಮಾಡುವ ಕುಡಿಯುವ ನೀರಿನ ಘಟಕ ಇದಾಗಿದೆ. ಅದರ ಬಳಿ ಇರುವ ಭೀಮೇಶ್ವರ ನದಿ ಉಕ್ಕಿ ಹರಿದು, ಸುತ್ತಮುತ್ತಲಿನ ಕೆರೆಗಳು ತುಂಬಿ ಟಿ ಕೆ ಹಳ್ಳಿ ಪಂಪ್ ಹೌಸ್ ಗೆ ನುಗ್ಗಿದೆ. 2 ಪಂಪ್ ಹೌಸ್ ಗಳಿಗೆ ನೀರು ತುಂಬಿ ಹಾನಿಯಾಗಿದೆ. ಈಗಾಗಲೇ ನೀರನ್ನು ತೆರವುಗೊಳಿಸಲು ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾವೇರಿ 4ನೇ ಸ್ಟೇಜ್ 2ನೇ ಫೇಸ್ ಪಂಪ್ ಹೌಸ್, 550 ಎಂಎಲ್ಡಿ ನೀರು ಸಾಮರ್ಥ್ಯವಿರುವ ಪಂಪ್ ಹೌಸ್ ನಲ್ಲಿ ನಾಳೆ ಬೆಳಿಗ್ಗೆಯೊಳಗೆ ನೀರನ್ನು ತೆಗೆದು, ಯಂತ್ರಗಳನ್ನು ದುರಸ್ತಿಗೊಳಿಸಲಾಗುವುದು. ಕಾವೇರಿ ಸ್ಟೇಜ್ 3 ರ ನೀರು ಪಂಪ್ ಹೌಸ್ ನಲ್ಲಿ ನೀರನ್ನು ತೆಗೆದು 2 ದಿನಗಳಲ್ಲಿ ಕೆಲಸ ಪ್ರಾರಂಭಿಸಲು ಕ್ರಮ ಕೈಗೊಳ್ಳಲಾಗಿದೆ. ಇದಕ್ಕೆ ಬೇಕಾದ ವ್ಯವಸ್ಥೆಗಳನ್ನು ಮಾಡಲಾಗಿದೆ ಎಂದರು.
ಬೆಂಗಳೂರಿನ ನೀರು ಸರಬರಾಜು ವ್ಯತ್ಯಯವಾಗದಂತೆ ಸರ್ಕಾರ ಸರ್ವಪ್ರಯತ್ನ :
ಬೆಂಗಳೂರಿನ ನೀರಿನ ಸರಬರಾಜಿಗೆ ಪರ್ಯಾಯ ವ್ಯವಸ್ಥೆಯಾಗಿ ಯೋಜನೆಯನ್ನು ರೂಪಿಸಲಾಗಿದೆ. ಸುಮಾರು 8000 ಬೋರ್ ವೆಲ್ ಗಳು ಬೆಂಗಳೂರು ಜಲಮಂಡಳಿಯ ಅಧೀನದಲ್ಲಿದ್ದು, ಅವುಗಳನ್ನು ಪುನ:ಪ್ರಾರಂಭಿಸಿ, ಪಂಪ್ ಹೌಸ್ ನಿಂದ ಕಾವೇರಿ ನೀರಿಗೆ ವ್ಯತ್ಯಯವಾಗುವ ಸಮಯದಲ್ಲಿ ಇವುಗಳಿಂದ ನೀರು ಸರಬರಾಜು ಮಾಡುವ ವ್ಯವಸ್ಥೆ ಮಾಡಬೇಕು. ನೀರು ಸರಬರಾಜು ವ್ಯತ್ಯಯವಾದ ಪ್ರದೇಶಗಳಿಗೆ ಬಿಬಿಎಂಪಿ ಯ ಬೋರ್ ವೆಲ್ ಗಳಿಂದಲೂ ನೀರನ್ನು ಸರಬರಾಜು ಮಾಡಲು ಸೂಚಿಸಲಾಗಿದೆ. ಬೋರ್ ವೆಲ್ ನೀರು ಇಲ್ಲದಿರುವ ಕಡೆಗಳಲ್ಲಿ ಸರ್ಕಾರದಿಂದಲೇ ಟ್ಯಾಂಕರ್ ಗಳನ್ನು ಸರಬರಾಜು ಮಾಡಲು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬೆಂಗಳೂರಿನ ಯಾವುದೇ ಭಾಗದಲ್ಲಿ ನೀರು ಸರಬರಾಜು ವ್ಯತ್ಯಯವಾಗದಂತೆ ಸರ್ಕಾರ ಸರ್ವಪ್ರಯತ್ನ ಮಾಡಲಿದೆ ಎಂದರು.
ಯುದ್ಧೋಪಾದಿಯಲ್ಲಿ ಕಾರ್ಯನಿರ್ವಹಿಸಲಾಗುತ್ತಿದೆ :
ಬೆಂಗಳೂರು ವಿಸ್ತಾರವಾಗಿದೆ. ಟಿಎಂಸಿ, 110 ಹಳ್ಳಿಗಳು ಸೇರ್ಪಡೆಯಾಗಿದ್ದು, ಅಲ್ಲಿನ ಮೂಲಸೌಲಭ್ಯಗಳೂ ಬೆಂಗಳೂರಿನ ವ್ಯಾಪ್ತಿಗೆ ಬಂದಿರುವುದರಿಂದ ಹಲವು ಸಮಸ್ಯೆಗಳು ಈಗ ತಲೆಎತ್ತಿವೆ. ಬೆಂಗಳೂರಿನ ವಿವಿಧ ವಲಯಗಳನ್ನು ಸಚಿವರುಗಳಿಗೆ ನೀಡಲಾಗಿದೆ. ಸಮಸ್ಯೆಗಳ ನಿವಾರಣೆಗೆ ಸಚಿವರು, ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಭಾರೀ ಮಳೆಯ ಈ ಸಂದರ್ಭದಲ್ಲಿ ಬೆಂಗಳೂರಿನ ಮಹಾಜನತೆ ಸರ್ಕಾರದೊಂದಿಗೆ ಸಹಕರಿಸಬೇಕು. ಸರ್ಕಾರ ಇವೆಲ್ಲವನ್ನೂ ಸಮರ್ಥವಾಗಿ ನಿರ್ವಹಿಸಲಿದೆ. ರಸ್ತೆ,ಕಾಲುವೆಗಳು, ರಾಜಕಾಲುವೆ ಒತ್ತುವರಿ ತೆರವು, ಕೆರೆಗಳಿಗೆ ಗೇಟ್ ಹಾಕಿಸುವುದು ಸೇರಿದಂತೆ ನಗರದ ಮೂಲಸೌಲಭ್ಯಗಳನ್ನು ದುರಸ್ತಿಗೊಳಿಸಲಾಗುವುದು. ಬೆಂಗಳೂರಿಗೆ ಅಲ್ಪಸಮಯದಲ್ಲಿ ದೊಡ್ಡ ಪ್ರಮಾಣ ಮಳೆ ಬಂದಿರುವ ಈ ಸವಾಲನ್ನು ನಾವೆಲ್ಲರೂ ಸೇರಿ ಎದುರಿಸಬೇಕಿದೆ ಎಂದು ತಿಳಿಸಿದರು.
ಬರಪೀಡಿತ ಪ್ರದೇಶಗಳ ಅಂತರ್ಜಲ ಮಟ್ಟ ಏರಿಕೆ
ರಾಜ್ಯ ದಲ್ಲಿ ಸತತ ಮಳೆಯಿಂದ
ಅತ್ಯಂತ ಬರಪೀಡಿತ ಪ್ರದೇಶಗಳ ಅಂತರ್ಜಲ ಮಟ್ಟ ಮೇಲೇರಿದೆ ಹಾಗೂ ಎಲ್ಲಾ ಸಣ್ಣ ನೀರಾವರಿ ಹಾಗೂ ಅಚ್ಚುಕಟ್ಟು ಪ್ರದೇಶದ ಕೆರೆಗಳು ತುಂಬಿವೆ ಎಂದು.ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಚಿಕ್ಕಬಳ್ಳಾಪುರ, ಕೋಲಾರ, ಚಿತ್ರದುರ್ಗ, ಚಾಮರಾಜನಗರ, ಗುಲ್ಬರ್ಗಾ, ಬೀದರ್, ಕೊಪ್ಪಳ ಎಲ್ಲಾ ಪ್ರದೇಶಗಳಲ್ಲಿ ಕೆರೆಗಳು ತುಂಬಿರುವುದು ದಾಖಲೆ. ರಾಜ್ಯ ದಲ್ಲಿ ಆಗಸ್ಟ್ ಕೊನೆ ವಾರದಲ್ಲಿ ಒಟ್ಟಾರೆ ಶೇ 144 ರಷ್ಟು ಹೆಚ್ಚುವರಿ ಮಳೆಯಾಗಿದೆ. ಸೆಪ್ಟೆಂಬರ್ 5 ದಿನಗಳಲ್ಲಿಯೇ ಶೇ 51ರಷ್ಟು ಮಳೆ ಹೆಚ್ಚಾಗಿದೆ. ಮುಂದಿನ ನಾಲ್ಕು ದಿನಗಳಲ್ಲಿ ಮತ್ತೆ ಮಳೆ ಹೆಚ್ಚಾಗುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆಯಾಗುವ ಸೂಚನೆ ಇದೆ ಎಂದರು.
ವಾಡಿಕೆಗಿಂತ ಶೇ 150 ರಷ್ಟು ಹೆಚ್ಚು ಮಳೆ
ಬೆಂಗಳೂರು ನಗರದಲ್ಲಿ ಸೆಪ್ಟೆಂಬರ್ 1 ರಿಂದ 5 ರವರೆಗೆ ಕೆಲವು ಪ್ರದೇಶಗಳಲ್ಲಿ ಶೇ 150 ರಷ್ಟು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ಮಹದೇವಪುರ, ಬೊಮ್ಮನಹಳ್ಳಿ, ಕೆ.ಆರ್.ಪುರಂ ಭಾಗದಲ್ಲಿ ಶೇ. 307 ರಷ್ಟು ಹೆಚ್ವು ಮಳೆಯಾಗಿದೆ. ಕಳೆದ 42 ವರ್ಷಗಳಲ್ಲಿಯೇ ಆಗಿರುವ ಅತಿ ಹೆಚ್ಚಿನ ಮಳೆ ಇದು. ಬೆಂಗಳೂರಿನ 164 ಕೆರೆಗಳೆಲ್ಲವೂ ತುಂಬಿ ಹರಿಯುತ್ತಿವೆ. ಆದರೆ ಜೊತೆಗೆ ಮಳೆಯಾಗಿ ದೊಡ್ಡ ಪ್ರಮಾಣದ ಪ್ರವಾಹ ದಕ್ಷಿಣ ವಲಯದಲ್ಲಿ ಆಗಿದೆ. ಹಲವಾರು ಪ್ರದೇಶಗಳಿಗೆ ಭೇಟಿಯನ್ನೂ ನೀಡಲಾಗಿದೆ ಎಂದರು.
ದೊಡ್ಡ ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನ
ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳಿಲ್ಲ. ನೀರು ಹೊರಬಿಡಲು , ಹಿಡಿದಿಟ್ಟುಕೊಳ್ಳುವುದು ಹಾಗೂ ಕೆರೆ ನಿರ್ವಹಣೆಗೆ ಸ್ಲೂಯೀಸ್ ಗೇಟ್ ಅವಶ್ಯಕ. ಬೆಂಗಳೂರಿನಾದ್ಯಂತ ದೊಡ್ಡ ಕೆರೆಗಳಿಗೆ ಸ್ಲೂಯೀಸ್ ಗೇಟ್ ಗಳನ್ನು ಅಳವಡಿಸಲು ತೀರ್ಮಾನ ಕೈಗೊಳ್ಳಲಾಗಿದೆ ಎಂದರು.
ಒತ್ತುವರಿ ತೆರವಿಗೆ ಸೂಚನೆ
ಕೆಲವು ಪ್ರದೇಶಗಳಲ್ಲಿ ಅತಿಕ್ರಮಣ ಮಾಡಿ ಕಾಂಪೌಂಡ್, ಕಟ್ಟಡಗಳನ್ನು ಕಟ್ಟಿಕೊಂಡಿದ್ದಾರೆ. ರಸ್ತೆಯ ಮೇಲೆ ನೀರು ನಿಲ್ಲುವ ಪರಿಸ್ಥಿತಿ ಬಂದಿದೆ. ಅವುಗಳನ್ನು ತೆರವು ಮಾಡಲು ಆದೇಶ ನೀಡಿದ್ದೇನೆ. ಇನ್ನೂ ನಾಲ್ಕು ದಿನ ಮಳೆಯಿರುವುದರಿಂದ ಕಾರ್ಯಾಚರಣೆ ತೀವ್ರವಾಗಿ ಆಗಬೇಕು ಎಂದು ಸೂಚಿಸಲಾಗಿದೆ.
ರಾಜ್ಯದ 17 ಜಿಲ್ಲೆಗಳ ಮಾಹಿತಿ ಪಡೆದಿದ್ದು, ಕಳೆದ 5 ದಿನಗಳಲ್ಲಿ 5092 ಜನ ಕಾಳಜಿ ಕೇಂದ್ರಗಳಲ್ಲಿ ಇದ್ದಾರೆ. 14717 ಹೆಕ್ಟೇರ್ ಪ್ರದೇಶ ಕೃಷಿ ಬೆಳೆ ಹಾಗೂ 1374 ಹೆಕ್ಟೇರ್ ಪ್ರದೇಶದ ತೋಟಗಾರಿಕಾ ಬೆಳೆ ಹಾನಿಯಾಗಿದೆ.
5 ದಿನಗಳ ಮಳೆಗೆ 430 ಮನೆಗಳು ತೀವ್ರವಾಗಿ ಹಾನಿಯಾಗಿವೆ ಹಾಗೂ 2188 ಮನೆಗಳು ಭಾಗಶ: ಹಾನಿಯಾಗಿವೆ. 255 ಕಿಮೀ ರಸ್ತೆಗಳು, ಸೇತುವೆಗಳು ಹಾಗೂ ಕಲ್ವರ್ಟ್ , ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ ಎಂದರು.
ಪಿ.ಡಿ.ಖಾತೆಯಲ್ಲಿ 664 ಕೋಟಿ ರೂ.ಗಳು ಲಭ್ಯ
ಮನೆಗಳ ಹಾನಿಯಾಗಿರುವುದನ್ನು ಕೂಡಲೇ ಸಮೀಕ್ಷೆ ಮಾಡಿ, ಮನೆಗಳಿಗೆ ನೀರು ನುಗ್ಗಿದ್ದರೆ 10 ಸಾವಿರ ರೂ.ತೀವ್ರವಾಗಿ ಹಾನಿಯಾಗಿದೆ ಕೂಡಲೇ 95 ಸಾವಿರ ರೂ. ಹಾಗೂ ಕಡಿಮೆ ಹಾನಿಯಾಗಿದ್ದಾರೆ 50 ಸಾವಿರ ರೂ.ಗಳನ್ನು ನೀಡಲು ಕೂಡಲೇ ಕ್ರಮ ತೆಗೆದುಕೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದೆ. ಜಿಲ್ಲಾಧಿಕಾರಿಗಳ
ಪಿ.ಡಿ.ಖಾತೆಯಲ್ಲಿ 664 ಕೋಟಿ ರೂ.ಗಳು ಲಭ್ಯವಿದೆ ಎಂದರು.
ಬೆಳೆ ಹಾನಿಗೆ ಜಂಟಿ ಸಮೀಕ್ಷೆ
ಕೃಷಿ ಬೆಳೆ ಹಾನಿಯಾಗಿರುವುದಕ್ಕೆ ಮಳೆ ನಿಂತ ಕೂಡಲೇ ಜಂಟಿ ಸಮೀಕ್ಷೆ ಕೂಡಲೇ ಪ್ರಾರಂಭಿಸಲು ಪರಿಹಾರ ಆಪ್ ನಲ್ಲಿ ಅಪ್ ಲೋಡ್ ಮಾಡುವಂತೆ ತಿಳಿಸಿದೆ. ಈಗಾಗಲೆ ಘೋಷಿಸಿದಂತೆ ಪೂರ್ತಿ ಬಿದ್ದುಹೋದ ಮನೆಗಳಿಗೆ 5 ಲಕ್ಷ, ತೀವ್ರವಾಗಿ ಹಾನಿಯಾದರೆ 3 ಲಕ್ಷ ಹಾಗೂ ಅಲ್ಪ ಹಾನಿಯಾಗಿದ್ದರೆ 50 ಸಾವಿರ ರೂ. ನೀಡಲು ಸೂಚಿಸಿದೆ. ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಹೆಚ್ಚಿನ ಮೊತ್ತವಿದೆ. ಕೃಷಿ ಬೆಳೆ ಪರಿಹಾರವನ್ನು ಕೂಡ ಎನ್.ಡಿ.ಆರ್.ಎಫ್ ನಿಯಮಗಳಿಗಿಂತ ಹೆಚ್ಚಿದೆ. ಒಣಬೇಸಾಯಕ್ಕೆ 13600 ಸಾವಿರ, ನೀರಾವರಿ ಜಮೀನುಗಳಿಗೆ 25 ಸಾವಿರ ರೂ., ಹಾಗೂ ತೋಟಗಾರಿಕೆ ಗೆ 28 ಸಾವಿರ ರೂ.ಗಳು ನೀಡಲು ಸೂಚಿಸಿದೆ. ಅದರ ಪ್ರಕಾರ ಪರಿಹಾರ ಒದಗಿಸಲಾಗುವುದು ಎಂದರು.
ದುರಸ್ತಿಗೆ 500 ಕೋಟಿ ರೂ.
ಮೂಲಸೌಕರ್ಯ ಹಾನಿಯನ್ನು ದುರಸ್ತಿ ಮಾಡಲು ಹಣ ಬಿಡುಗಡೆ ಮಾಡಿದ್ದೇವೆ. ಶಾಶ್ವತವಾಗಿ ದುರಸ್ತಿ ಮಾಡಲು ಅಂದಾಜು ಪಟ್ಟಿ ಸಿದ್ಧ ಪಡಿಸಲು ಸೂಚಿಸಲಾಗಿದೆ. ಲೋಕೋಪಯೋಗಿ ಹಾಗೂ ಆರ್.ಡಿ.ಪಿ.ಆರ್ ಇಲಾಖೆಗೆ 500 ಕೋಟಿ ರೂ.ಗಳನ್ನು ರಸ್ತೆಗಳಿಗೆ ಬಿಡುಗಡೆ ಮಾಡಿದ್ದು, ಅಂದಾಜು ಪಟ್ಟಿ ಬಂದ ಕೂಡಲೇ ಇನ್ನೂ ಹೆಚ್ಚಿನ ಹಣ ಬಿಡುಗಡೆ ಮಾಡಲಾಗುವುದು ಎಂದರು.
ಪಡಿತರ ವಿತರಣೆ
ಸಂಬಂಧಿಕರ ಮನೆಯಲ್ಲಿ ಉಳಿದುಕೊಂಡಿರುವ ಸಂತ್ರಸ್ತರಿಗೆ ಪಡಿತರ ವಿತರಿಸಲು ಸೂಚಿಸಿದೆ ಎಂದು ತಿಳಿಸಿದರು.
ಹಾನಿಯಾದ ಅಂಗಡಿ ಮುಗ್ಗಟ್ಟುಗಳಿಗೆ ಪರಿಹಾರ
ಅಂಗಡಿಗಳಿಗೆ, ವಾಣಿಜ್ಯ ಕೇಂದ್ರಗಳಿಗೆ ಹಾನಿಯಾಗಿದ್ದರೆ ಎನ್.ಡಿ.ಆರ್.ಎಫ್ ನಡಿ ಪರಿಹಾರ ನೀಡಲು ಅವಕಾಶ ಇಲ್ಲ. ಆದರೆ ಕಾರವಾರ, ರಾಮನಗರಕ್ಕೆ ಹೋದಾಗ ಅಂಗಡಿಗಳಿಗೆ ಪರಿಹಾರ ನೀಡಬೇಕೆನ್ನುವ ತೀರ್ಮಾನ ಮಾಡಿದ್ದು, ರಾಜ್ಯ ಸರ್ಕಾರ ವೇ ಹಣ ಭರಿಸಲಿದೆ. ಹಾನಿಯ ಆಧಾರದ ಮೇಲೆ ಪರಿಹಾರ ನೀಡಲಾಗುವುದು. ಪ್ರಥಮ ಬಾರಿಗೆ ಪ್ರವಾಹಕ್ಕೆ ರಾಜ್ಯದ ವಾಣಿಜ್ಯ ಕೇಂದ್ರಗಳಿಗೆ ಪರಿಹಾರ ನೀಡಲಾಗುತ್ತಿದೆ ಎಂದರು.