ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರು ದೇಶ ಕಂಡ ಅಪರೂಪದ ದೇಶಪ್ರೇಮಿ: ಸಿಎಂ ಬೊಮ್ಮಾಯಿ
ಬೆಂಗಳೂರು, ಸೆಪ್ಟೆಂಬರ್ 25: ಪಂಡಿತ್ ದೀನ್ ದಯಾಳ ಉಪಾಧ್ಯಾಯ ಅವರು ದೇಶ ಕಂಡ ಅಪರೂಪದ ದೇಶಪ್ರೇಮಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬಿ.ಬಿ.ಎಂ.ಪಿ.ಯ ವಾರ್ಡ್ ನಂ: 9ರ ವಿರೂಪಾಕ್ಷಪುರದಲ್ಲಿರುವ ಉದ್ಯಾನವನಕ್ಕೆ ಪಂಡಿತ್ ದೀನ್‍ದಯಾಳ್ ಉಪಾಧ್ಯಾಯ ಉದ್ಯಾನವನ ಎಂದು ನಾಮಕರಣ ಮಾಡುವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಅಂತ್ಯೋದಯ ಪರಿಕಲ್ಪನೆ
ವ್ಯವಸ್ಥೆ ಯನ್ನು ಆಳವಾಗಿ ಅಧ್ಯಯನ ಮಾಡಿ ಪರ್ಯಾಯ ವ್ಯವಸ್ಥೆ ಯನ್ನು ತೋರಿಸಿ, ಪ್ರತಿಪಾದಿಸಿ, ನಾಡಿಗೆ ಮತ್ತೊಂದು ಕಲ್ಪವನ್ನು ನೀಡಿದ ಚಿಂತಕ ಹಾಗೂ ಧೀಮಂತ ನಾಯಕರು. ಅವರು ಮೇಷ್ಟ್ರಾಗಿ, ಪತ್ರಕರ್ತರಾಗಿ, ರಾಷ್ಟ್ರಸೇವೆಗೆ ಧುಮುಕಿದರು. ಆ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟ ಉತ್ತುಂಗದಲ್ಲಿತ್ತು. ವಿಭಿನ್ನ ಅಭಿಪ್ರಾಯಗಳಿದ್ದವು. ಕೆಲವರು ಪಾಶ್ಚಿಮಾತ್ಯ ದೇಶದ ಪ್ರಭಾವದಲ್ಲಿದ್ದರು, ಇನ್ನು ಕೆಲವರು ಕಮ್ಯುನಿಸ್ಟ್ ನೆಲೆಯ ಪ್ರಭಾವದಲ್ಲಿದ್ದರು. ಈ ಎರಡರ ಮಧ್ಯೆ ನಮ್ಮ ಭಾರತೀಯರು ಹಾಗೂ ಅವರ ಬದುಕನ್ನು ಗುರುತಿಸಲಿಲ್ಲ ಎನ್ನುವ ನೋವು ದೀನ್ ದಯಾಳ್ ಉಪಾಧ್ಯಾಯ ಅವರಿಗಿತ್ತು. ಪ್ರತಿ ದೇಶಕ್ಕೆ ತನ್ನತನವಿದೆ, ತನ್ನದೇ ಆದ ಸಂಸ್ಕೃತಿ, ಸಂಸ್ಕಾರ, ಚಿಂತನೆ, ಬದುಕಿದೆ ಭಾರತೀಯರ ಬದುಕು, ಮೌಲ್ಯಗಳು,ಆದರ್ಶಗಳು ಬೇರೆ ದೇಶದವರಿಗಿಂತ ವಿಭಿನ್ನವಾಗಿದೆ ಎಂದು ಗಟ್ಟಿಯಾಗಿ ಪ್ರತಿಪಾದಿಸಿದ್ದು, ದೀನ್ ದಯಾಳ್ ಉಪಾಧ್ಯಾಯ ಅವರು. ಅಂತ್ಯೋದಯ ಪರಿಕಲ್ಪನೆ ನೀಡಿದರು. ಈ ಸಮಾಜದ ಕಟ್ಟಕಡೆಯ ವ್ಯಕ್ತಿ ಉದ್ಧಾರವಾಗಲು ಅಂತ್ಯೋದಯ ಕಾರ್ಯಕ್ರಮ ಆಗಲೇಬೇಕು ಎಂದರು.
ಏಕಾತ್ಮ ಚಿಂತನೆ
ಏಕಾತ್ಮಮಾನಾರ್ಥವಾದ ಚಿಂತನೆ ನೀಡಿದರು. ಎಲ್ಲಾ ಮಾನವ ಆತ್ಮಗಳ ಚಿಂತನೆ ಏಕಾತ್ಮ ಭಗವಂತನನ್ನು ಓಲೈಸುವ, ಕೃಪೆ ಪಡೆದು ಸತ್ಯದ ಮಾರ್ಗದಲ್ಲಿ ನಡೆಯಬೇಕೆನ್ನುವ ಚಿಂತನೆಯನ್ನು ಬೋಧನೆ ಮಾಡಿದರು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ದೀನ್ ದಯಾಳ್ ಉಪಾಧ್ಯಕ್ಷ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು
ಈ ದೇಶದ ಏಕತೆ, ಅಖಂಡತೆಯ ಬಗ್ಗೆ ಸದಾ ಕಾಲ ಚಿಂತನೆ ಮಾಡಿದರು. ಅಂತ್ಯೋದಯದ ಮುಖಾಂತರ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗಗಳ ಏಳಿಗೆಗೆ ನಿರಂತರವಾಗಿ ಶ್ರಮಿಸಿದರು. ಅವರ ಹೆಸರಿನಲ್ಲಿಯೇ ದೀನ, ದಯಾಳು, ಶಿಕ್ಷಕ ಮೂರು ಇದೆ. ಅವರ ಹೆಸರಿನ ತಕ್ಕಂತೆ ಅವರು ಬದುಕಿದರು. ಭಾರತೀಯ ಜನತಾ ಪಕ್ಷ ಹುಟ್ಟುಹಾಕಿದ ಪ್ರಮುಖರಲ್ಲಿ ಅವರೂ ಒಬ್ಬರು. ಮುಂದೆ ಭಾರತೀಯ ಜನ ಸಂಘದ ಅಧ್ಯಕ್ಷರಾಗಿ ಕೆಲಸ ಮಾಡಿದರು. ಅವರ ಎಲ್ಲಾ ಆದರ್ಶಗಳು ಪ್ರಸ್ತುತವಾಗಿದೆ. ಅವರ ಹೆಸರಿನಲ್ಲಿ ಉದ್ಯಾನವನ ಆಗಿರುವುದು ಒಳ್ಳೆ ಕೆಲಸ. ಚಕ್ರಪಾಣಿ ಅವರು ಒಳ್ಳೆಯ ಕೆಲಸ ಮಾಡಿದ್ದಾರೆ. ಈ ಭಾಗದ ಅವರ ಹೆಸರಿನ ಜನರಿಗೆ ಸ್ಪೂರ್ತಿದಾಯಕವಾಗಿದೆ. ದೀನ್ ದಯಾಳ್ ಉಪಾಧ್ಯಕ್ಷ ಅವರ ಆದರ್ಶಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕು. ದೀನ್ ದಯಾಳ ಅವರ ಮೂರ್ತಿ ಸ್ಥಾಪನೆಗೆ ಬಿಬಿಎಂಪಿ ಆದೇಶವನ್ನು ಪಡೆಯುವಂತೆ ಸೂಚಿಸಿದರು. ದೊಡ್ಡವರ ಹೆಸರಿಗೆ ಯಾವುದೇ ಚ್ಯುತಿ ಬರದಂತೆ ನಡೆದುಕೊಳ್ಳಬೇಕು. ಆ ನಿಟ್ಟಿನಲ್ಲಿ ಅನುಮತಿಗಳನ್ನು ಪಡೆದೇ ಮುಂದಿನ ಕಾರ್ಯಮಾಡಬೇಕು. ದೀನ್ ದಯಾಳ ಅವರದ್ದು ಬಹಳ ದೊಡ್ಡ ವ್ಯಕ್ತಿತ್ವ ಎಂದರು.
ಭಾರತೀಯ ಸಂಸ್ಕೃತಿ ಯನ್ನು ಉಳಿಸಿ ಬೆಳಸಬೇಕಿದೆ
ಸರ್ಕಾರ ಈ ವರ್ಷ 5 ಮಹಾನಗರಗಳಲ್ಲಿ ಬೆಂಗಳೂರು, ಮೈಸೂರು, ಹುಬ್ಬಳ್ಳಿ, ಮಂಗಳೂರು, ಕಲಬುರಗಿಯಲ್ಲಿ ಒಂದು ಸಾವಿರ ಎಸ್.ಸಿ.ಎಸ್.ಟಿ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ನಿಲಯಗಳನ್ನು ಇದೆ ವರ್ಷ ನಿರ್ಮಾಣ ಮಾಡುತ್ತಿದ್ದೇವೆ.ಅಲ್ಲಿ ಕಲಿಯುವ ವಿದ್ಯಾರ್ಥಿಗಳಿಗೆ ಅವರ ಆದರ್ಶಗಳ ಸ್ಫೂರ್ತಿ ಸಿಗಲಿ ಎಂಬ ಕಾರಣದಿಂದ 5 ವಿದ್ಯಾರ್ಥಿನಿಲಯಗಳಿಗೆ ದೀನ್ ದಯಾಳ್ ಉಪಾಧ್ಯಾಯರ ಹೆಸರನ್ನು ಇಡಲಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹೆಸರಿನಲ್ಲಿ ಎಸ್.ಸಿ.ಎಸ್.ಟಿ ವಿದ್ಯಾರ್ಥಿನಿಲಯಗಳನ್ನು ನಿರ್ಮಿಸಲಾಗುತ್ತಿದೆ. 50 ಹಿಂದುಳಿದ ವರ್ಗಗಳ ಹಾಸ್ಟೆಲ್ ಗಳನ್ನು ಕನಕದಾಸರ ಹೆಸರಿನಲ್ಲಿ ನಿರ್ಮಿಸುತ್ತಿದ್ದೇವೆ. ನಮ್ಮ ಸಂಸ್ಕೃತಿ, ಪರಂಪರೆಯನ್ನು ಮುಂದುವರೆಸುತ್ತಿದ್ದೇವೆ. ನಾಗರೀಕತೆ ಯ ಜೊತೆಗೆ ಸಂಸ್ಕೃತಿ ಬೆಳೆಯಬೇಕಾಗಿದೆ. ನಾವೇನಾಗಿದ್ದೇವೆ ಎಂಬ ಪ್ರಶ್ನೆಗೆ ಉತ್ತರ ಕಂಡುಕೊಳ್ಳಬೇಕಾದರೆ ಉತ್ತಮ ಆದರ್ಶ, ನೈತಿಕ ಬದುಕಿನ ಭಾರತೀಯ ಸಂಸ್ಕೃತಿ ಯನ್ನು ಉಳಿಸಿ ಬೆಳಸಿಕೊಂಡು ಹೋಗಬೇಕಿದೆ. ಅದು ಈ ರೀತಿಯ ಕೆಲಸಗಳಿಂದ ಆಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ವಸತಿ ಸಚಿವ ವಿ. ಸೋಮಣ್ಣ, ಮಾಜಿ ಕಾರ್ಪೊರೇಟರ್ ಚಕ್ರಪಾಣಿ ಹಾಜರಿದ್ದರು.