ಪ್ರಮುಖ ಪ್ರದೇಶಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಣೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೂಚನೆ
ಬೆಂಗಳೂರು, ಜೂನ್ 25-
ಬೆಂಗಳೂರಿನ ಹೆಬ್ಬಾಳ, ಮಹದೇವಪುರ ಹೊರವರ್ತುಲ ರಸ್ತೆ, ಸಿಲ್ಕ್ ಬೋರ್ಡ್ ಜಂಕ್ಷನ್, ಸೆಂಟ್ ಜಾನ್ಸ್ ಆಸ್ಪತ್ರೆ, ಭಟ್ಟರಹಳ್ಳಿ ಜಂಕ್ಷನ್, ವೈಟ್‍ಫೀಲ್ಡ್ ರಸ್ತೆ ಗಳು ಸೇರಿದಂತೆ 10 ಪ್ರಮುಖ ಪ್ರದೇಶಗಳಲ್ಲಿನ ವಾಹನ ಸಂಚಾರ ದಟ್ಟಣೆ ನಿವಾರಿಸುವುದರ ಜತೆ ಟ್ರಾಫಿಕ್ ಸಿಗ್ನಲ್ ಗಳನ್ನು ಸಿಂಕ್ರೋನೈಜ್ ಮಾಡಲು ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸೂಚಿಸಿದರು.
ಈ ಕೆಲಸದ ಮೇಲುಸ್ತುವಾರಿಯನ್ನು ಖುದ್ದು ಡಿಸಿಪಿ ಗಳೇ ವಹಿಸಿಕೊಳ್ಳಬೇಕೆಂದು ಅವರು ಸೂಚಿಸಿದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಬೆಂಗಳೂರು ನಗರದ ಸಂಚಾರ ಸುವ್ಯವಸ್ಥೆ ಕುರಿತು ಬಿಬಿಎಂಪಿ, BWSSB ಹಾಗೂ ಬೆಂಗಳೂರು ನಗರ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸಂಚಾರ ದಟ್ಟಣೆ ನಿವಾರಣೆಗೆ, ನಗರಾಭಿವೃದ್ಧಿ ಮತ್ತು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ಬಿಬಿಎಂಪಿ ಮುಖ್ಯ ಆಯುಕ್ತರು, ಪೊಲೀಸ್ ಆಯುಕ್ತರು, ಬಿಎಂಆರ್‍ಸಿಎಲ್, ಬಿಡಬ್ಲ್ಯುಎಸ್ಎಸ್ ಬಿ ಅಧಿಕಾರಿಗಳು ಒಟ್ಟಾಗಿ ಪರಿಹಾರ ಕ್ರಮಗಳನ್ನು ರೂಪಿಸಿ ಕ್ರಮ ಕೈಗೊಳ್ಳುವಂತೆ ಸಿಎಂ ಸೂಚಿಸಿದರು.
ಬಿಬಿಎಂಪಿ ವ್ಯಾಪ್ತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಸಂಪರ್ಕಿಸುವ ರಸ್ತೆಗಳಲ್ಲಿನ ಗುಂಡಿ ಮುಚ್ಚಿ ಸುಗಮ ವಾಹನ ಸಂಚಾರಕ್ಕೆ ಕ್ರಮ ವಹಿಸುವಂತೆ ಕಟ್ಟುನಿಟ್ಟಿನ ಸೂಚನೆ ನೀಡಿದರು.
ಮಳೆಯಾದಾಗ ನೀರುನುಗ್ಗಿ ಸಂಚಾರ ದಟ್ಟಣೆಯಾಗುತ್ತಿರುವ 50 ಸ್ಥಳಗಳನ್ನು ತಕ್ಷಣ ದುರಸ್ತಿ ಮಾಡಲು ಸೂಚಿಸಿದರು.
ಸಿಗ್ನಲ್ ಸಿಂಕರ್ ನೈಜ್
ಸಿಬಿಡಿ, ಹೈಡೆನ್ಸಿಟಿ ಕಾರಿಡಾರ್ ನಲ್ಲಿ 48 ಕೋಟಿ ರೂ. ವೆಚ್ಚದಲ್ಲಿ ಸಿಗ್ನಲ್ ಗಳ ಸಿಂಕ್ರೊನೈಸೇಷನ್ ಕಾಮಗಾರಿಯನ್ನು ಶೀಘ್ರವೇ ಪ್ರಾರಂಭಿಸಲು ಸಿಎಂ ಸೂಚಿಸಿದರು. ಇದರಿಂದ ಜನರಿಗೆ ಅನುಕೂಲ ಆಗುತ್ತದೆ.
ರಸ್ತೆ ಗುಂಡಿಗಳನ್ನು ಆದ್ಯತೆಯ ಮೇರೆಗೆ ಮುಚ್ಚಲು ಸಿಎಂ ಬಸವರಾಜ ಬೊಮ್ಮಾಯಿ ಸೂಚಿಸಿದರು.
ಬಿಡಬ್ಲ್ಯುಎಸ್ ಎಸ್ ಬಿ, BMRCL ನವರು ಕಾಮಗಾರಿಗಾಗಿ ಅಗೆದ ರಸ್ತೆ ಹಾಗೆಯೇ ಇವೆ. ಈ ಕಾಮಗಾರಿ ಪೂರ್ಣಗೊಂಡ ತಕ್ಷಣವೇ ಆ ರಸ್ತೆಗಳ ದುರಸ್ತಿ ನಡೆಸುವಂತೆ ಸಿಎಂ ಸೂಚಿಸಿದರು.
ಸಂಚಾರ ಪೊಲೀಸರ ಸಂಖ್ಯಾಬಲ ಹೆಚ್ಚಿಸಿ. ವಾಹನ ದಟ್ಟಣೆ ನಿಯಂತ್ರಣ ಕ್ಕೆ ಆದ್ಯತೆ ನೀಡಿ ಎಂದು ಡಿಜಿಪಿ ಪ್ರವೀಣ್ ಸೂದ್ ಅವರಿಗೆ ಮುಖ್ಯಮಂತ್ರಿ ಬೊಮ್ಮಾಯಿ ಸೂಚಿಸಿದರು.
ರಾಷ್ಟ್ರೀಯ ಹೆದ್ದಾರಿಯಿಂದ ನಗರ ಪ್ರವೇಶಿಸುವ ಪ್ರಮುಖ ರಸ್ತೆಗಳಲ್ಲಿ ಸುಗಮ ಸಂಚಾರ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಬೊಮ್ಮಾಯಿ ಸೂಚಿಸಿದರು.
ನಿರ್ಭಯಾ ಯೋಜನೆಯಲ್ಲಿ ಅಳವಡಿಸುವ ಕ್ಯಾಮರಾಗಳಲ್ಲಿ ಟ್ರಾಫಿಕ್ ಸಿಗ್ನಲ್‍್ಗಳಲ್ಲಿ ಆದ್ಯತೆ ಮೇರೆಗೆ ಕ್ಯಾಮರಾ ಅಳವಡಿಸಲು ಸೂಚಿಸಿದರು.
ಆರ್ಟಿರಿಯಲ್, ಸಬ್ ಆರ್ಟಿರಿಯಲ್ ಮತ್ತು ಹೈಡೆನ್ಸಿಟಿ ರಸ್ತೆಗಳ ಒತ್ತುವರಿ, ಅಡೆತಡೆಗಳನ್ನು ಮುಲಾಜಿಲ್ಲದೆ ತೆರವುಗೊಳಿಸಿ. ನಗರ ಪ್ರದೇಶದಲ್ಲಿ ಭಾರಿ ವಾಹನಗಳ ಸಂಚಾರವನ್ನು ನಿಯಂತ್ರಿಸಲು ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಿ. ಈ ಕುರಿತು ಕೈಗೊಂಡ ಕ್ರಮಗಳ ಕುರಿತು ತಮಗೆ ವರದಿ ಸಲ್ಲಿಸುವಂತೆ ಸೂಚಿಸಿದ ಸಿಎಂ, ತಾವೇ ಖುದ್ದು ವಲಯವಾರು ಸಭೆ ನಡೆಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿಗಳ ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್ ಪ್ರಸಾದ್, ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ‍್ ಸಿಂಗ್, ಮುಖ್ಯ ಆಯುಕ್ತ ತುಷಾರ್ ಗಿರಿನಾಥ್, ರಾಜ್ಯ ಪೊಲೀಸ್ ಮಹಾನಿರ್ದೇಶಕ ಪ್ರವೀಣ ಸೂದ್, ಬೆಂಗಳೂರು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಜಂಟಿ ಆಯುಕ್ತ ಬಿ.ಆರ್. ರವಿಕಾಂತೇಗೌಡ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.