IMG 20221014 WA0035

ಬನ್ನಿ ಕರ್ನಾಟಕದಲ್ಲಿ ಬಂಡವಾಳ ಹೂಡಿ’, ಆಂಧ್ರ, ತೆಲಂಗಾಣ ಉದ್ಯಮಿಗಳಿಗೆ ಕರೆ….!

BUSINESS

ಬನ್ನಿ ಕರ್ನಾಟಕದಲ್ಲಿ ಬಂಡವಾಳ ಹೂಡಿ’, ಆಂಧ್ರ, ತೆಲಂಗಾಣ ಉದ್ಯಮಿಗಳಿಗೆ ಸಚಿವ ನಿರಾಣಿ ಕರೆ

ಹೈದರಾಬಾದ್‌ ರೋಡ್‌ ಶೋ ಯಶಸ್ವಿ
5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ

ಹೈದರಾಬಾದ್‌, ಅ.14: ನವೆಂಬರ್‌ 2ರಿಂದ 4ರವರೆಗೆ ಬೆಂಗಳೂರಿನಲ್ಲಿ ನಡೆಯಲಿರುವ ಜಾಗತಿಕ‌ ಬಂಡವಾಳ ಹೂಡಿಕೆದಾರರ ಸಮಾವೇಶದ ಭಾಗವಾಗಿ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಸಚಿವ ಮುರುಗೇಶ ಆರ್. ನಿರಾಣಿ ಅವರು ಹೈದರಾಬಾದ್‌ನಲ್ಲಿ ಶುಕ್ರವಾರ ನಡೆಸಿದ ರೋಡ್‌ಶೋ ಯಶಸ್ವಿಯಾಗಿದೆ.

ಹೈದರಾಬಾದ್‌ನ ಖಾಸಗಿ ಹೋಟೆಲ್‌ನಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಮಾತನಾಡಿದ ಸಚಿವ ನಿರಾಣಿ,” ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶಕ್ಕೆ ಪೂರ್ವಭಾಗವಾಗಿ ದಿಲ್ಲಿಯಲ್ಲಿ ಚಾಲನೆ ನೀಡಿದ ದೇಶೀಯ ರೋಡ್‌ ಶೋ ಯಶಸ್ವಿಯಾಗಿದೆ. ಅದೇ ರೀತಿ, ಹೈದ್ರಬಾದ್‌ ರೋಡ್‌ ಶೋ ವೇಳೆ ಉದ್ಯಮಿಗಳ ಜತೆ ಇಂದು ನಡೆಸಿದ ಮಾತುಕತೆ ಫಲಪ್ರದವಾಗಿದೆ,”ಎಂದಿದ್ದಾರೆ.

“ರಾಜ್ಯದಲ್ಲಿ ಹೂಡಿಕೆಗೆ ಇರುವ ಅವಕಾಶಗಳು ನಮ್ಮ ಕೈಗಾರಿಕಾ ನೀತಿ ಕುರಿತು ಆಂಧ್ರ ಹಾಗೂ ತೆಲಂಗಾಣದ ಉದ್ಯಮಿಗಳಿಗೆ ಮಾಹಿತಿ ನೀಡಲಾಗಿದೆ. ರಾಜ್ಯದಲ್ಲಿ ಬಂಡವಾಳ ಹೂಡಲು ಹಾಗೂ ಉದ್ಯಮ ವಿಸ್ತರಣೆಗೆ ಹಲವು ಕಂಪನಿಗಳ ಮುಖ್ಯಸ್ಥರು ಒಲವು ತೋರಿದ್ದಾರೆ,” ಎಂದು ಸಚಿವ ನಿರಾಣಿ ಹೇಳಿದರು.

“ಜಾಗತಿ ಹೂಡಿಕೆದಾರರ ಸಮಾವೇಶದ ಅಂತಾರಾಷ್ಟ್ರೀಯ ರೋಡ್‌ಶೋನ ಭಾಗವಾಗಿ ಜಪಾನ್‌, ದಕ್ಷಿಣ ಕೊರಿಯಾ, ಅಮೆರಿಕ ಹಾಗೂ ಯೂರೋಪ್‌ಗೆ ಭೇಟಿ ನೀಡಲಾಗಿದೆ. ಈ ದೇಶಗಳಿಂದ ದೊಡ್ಡ ಮಟ್ಟದ ವಿದೇಶಿ ಬಂಡವಾಳ ಹರಿದು ಬರುವ ನಿರೀಕ್ಷೆ ಇದೆ. ದೇಶೀಯ ರೋಡ್‌ ಶೋಮುಂಬಯಿನಲ್ಲಿ ಮುಕ್ತವಾಗಲಿದೆ,”ಎಂದು ಅವರು ತಿಳಿಸಿದರು.

” ಜಾಗತಿಕ ಹೂಡಿಕೆದಾರರ ಸಮಾವೇಶದಲ್ಲಿ 5000ಕ್ಕೂ ಹೆಚ್ಚು ಗಣ್ಯರು ಭಾಗವಹಿಸುವ ನಿರೀಕ್ಷೆ ಇದೆ. 5 ಲಕ್ಷ ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆ ಇದ್ದು, ಇದರಿಂದ 5 ಲಕ್ಷ ಜನರಿಗೆ ಉದ್ಯೋಗ ದೊರೆಯಲಿದೆ. ಜಾಗತಿಕ ಹೂಡಿಕೆದಾರರ ಸಮಾವೇಶ ‘ಬ್ಯುಲ್ಡ್‌ ಫಾರ್‌ ದ ವರ್ಲ್ಡ್‌’ ಎಂಬ ಪರಿಕಲ್ಪನೆಯಡಿ ಅನಾವರಣಗೊಳ್ಳುತ್ತಿದೆ. ಅತ್ಯುತ್ತಮ ಕೈಗಾರಿಕಾ ಪರಿಸರ ವ್ಯವಸ್ಥೆ ಹೊಂದಿರುವ ಕರ್ನಾಟಕ, ಜಾಗತಿಕ ಹೂಡಿಕೆದಾರರ ನೆಚ್ಚಿನ ತಾಣ,”ಎಂದರು.

“ನಮ್ಮ ಸರ್ಕಾರದ ಹಲವು ಸುಧಾರಣಾ ಕ್ರಮಗಳ ಪರಿಣಾಮವಾಗಿ ಕರ್ನಾಟಕವು ದೇಶದ ಆಕರ್ಷಕ ಹೂಡಿಕೆ ತಾಣವಾಗಿ ಹೊರಹೊಮ್ಮಿದೆ. 2021ರ ಜುಲೈನಿಂದೀಚೆಗೆ ಬರೋಬ್ಬರಿ 3 ಲಕ್ಷ ಕೋಟಿ ರೂಪಾಯಿಗೂ ಹೆಚ್ಚು ಹೂಡಿಕೆ ಪ್ರಸ್ತಾವನೆಗಳು ರಾಜ್ಯಕ್ಕೆ ಬಂದಿವೆ. ದೇಶದ ಒಟ್ಟಾರೆ ವಿದೇಶಿ ಹೂಡಿಕೆಯಲ್ಲಿ ರಾಜ್ಯದ ಪಾಲು 38%. ಬರೋಬ್ಬರಿ 22 ಶತಕೋಟಿ ಡಾಲರ್ ವಿದೇಶಿ ನೇರ ಹೂಡಿಕೆ ರಾಜ್ಯಕ್ಕೆ ಹರಿದು ಬಂದಿದೆ.,” ಎಂದು ಅವರು ವಿವರಿಸಿದರು.

“ಸುಲಲಿತ ವ್ಯವಹಾರಕ್ಕೆ ಅಫಿಡವಿಟ್‌ ಬೇಸ್ಡ್‌ ಕ್ಲಿಯರೆನ್ಸ್‌ ಯೋಜನೆಯ ಜಾರಿಗೊಳಿಸಿರುವ ಕರ್ನಾಟಕ, ಈಸ್‌ ಆಫ್‌ ಡೂಯಿಂಗ್‌ ಬ್ಯುಸಿನೆಸ್‌ಗೆ ಶ್ರೇಯಾಂಕ ಪಟ್ಟಿಯಲ್ಲಿ “ಟಾಪ್‌ ಅಚೀವರ್” ಆಗಿ ಹೊರಹೊಮ್ಮಿದೆ. ಜತೆಗೆ, ಹೂಡಿಕೆದಾರರಿಗೆ ಭೂ ಹಂಚಿಕೆಗೆ ಅನುಕೂಲವಾಗುವಂತೆ ‘ಈಸ್ ಆಫ್ ಲ್ಯಾಂಡ್ ಅಲಾಟ್‌ಮೆಂಟ್’ ಕ್ರಮ ಜಾರಿಗೊಳಿಸಲಾಗಿದೆ.

“ಜಾಗತಿಕ ಹೂಡಿಕೆದಾರರ ಸಮಾವೇಶದ ಸಂದರ್ಭದಲ್ಲಿ ಭೂ ಹಂಚಿಕೆಗೆ ಅನುಕೂಲವಾಗುವಂತೆ ರಾಜ್ಯದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಹೆಚ್ಚುವರಿಯಾಗಿ 50 ಸಾವಿರ ಎಕರೆ ಭೂ ಸ್ವಾಧೀನ ಪಡಿಸಿಕೊಳ್ಳಲಾಗುತ್ತಿದೆ. ಬೆಂಗಳೂರಿನಲ್ಲಿ 20 ಸಾವಿರ ಮತ್ತು ಇತರ ಜಿಲ್ಲೆಗಳಲ್ಲಿ 30 ಸಾವಿರ ಎಕರೆ ಭೂಮಿ ಸ್ವಾಧೀನಕ್ಕೆ ಕ್ರಮ ವಹಿಸಲಾಗಿದೆ,”ಎಂದು ಸಚಿವರು ತಿಳಿಸಿದರು.

ಸಂಭಾವ್ಯ ಹೂಡಿಕೆದಾರರ ಜತೆ ಚರ್ಚೆ
” ಹೈದರಾಬಾದ್‌ ರೋಡ್‌ಶೋನಲ್ಲಿ ಭಾರತ್ ಬಯೋಟೆಕ್, ವಿಮತ ಲ್ಯಾಬ್ಸ್, ಲೌರಸ್ ಲ್ಯಾಬ್ಸ್, ಪೆಂಟಗನ್ ರಗ್ಗಡ್ ಸಿಸ್ಟಮ್, ವೈಬ್ರೆಂಟ್ ಎನರ್ಜಿ‌ ಸೇರಿದಂತೆ ಹಲವು ಕಂಪನಿಗಳ ಪ್ರತಿನಿಧಿಗಳ ಜತೆ ಮಾತುಕತೆ ನಡೆಸಲಾಗಿದೆ,”ಎಂದು ಅವರು ತಿಳಿಸಿದರು.

ವೈನ್‌ ಮತ್ತು ಆಹಾರ ಮೇಳ
“ಈ ಸಮಾವೇಶ ಬಂಡವಾಳ ಹೂಡಿಕೆಗಷ್ಟೇ ಸೀಮಿತವಾಗಿಲ್ಲ. ಕರ್ನಾಟಕದ ಸಾಂಸ್ಕೃತಿ ಲೋಕ ಅಲ್ಲಿ ಅನಾವರಣಗೊಳ್ಳಲ್ಲಿದೆ. ವೈನ್ ಮತ್ತು ಆಹಾರ‌ ಮೇಳದಲ್ಲಿ ಕರ್ನಾಟಕದ ವಿಶೇಷ ಖಾದ್ಯಗಳನ್ನು ಸವಿಯಬಹುದು,” ಎಂದು ಸಚಿವರು ವಿವವರಿಸಿದರು.

ಅಸೋಚಾಮ್‌ ತೆಲಂಗಾಣ ರಾಜ್ಯ ಅಭಿವೃದ್ಧಿ ಮಂಡಳಿ ಅಧ್ಯಕ್ಷ ರವಿ ಕುಮಾರ್‌ ರೆಡ್ಡಿ, ಅಸೋಚಾಮ್ ಪ್ರಧಾನ ಕಾರ್ಯದರ್ಶಿ ಪೂಜಾ ಅಹ್ಲುವಾಲಿಯಾ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಡಾ. ಇ.ವಿ ರಮಣರೆಡ್ಡಿ, ಕೈಗಾರಿಕಾಭಿವೃದ್ಧಿ ಆಯುಕ್ತರಾದ ಗುಂಜನ್‌ ಕೃಷ್ಣ ಹಾ ಗೂ ಹಿರಿಯ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.