IMG 20221101 WA0010

ರಾಜ್ಯದ ಎಲ್ಲ ರಂಗಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ…!

Genaral STATE

ರಾಜ್ಯದ ಎಲ್ಲ ರಂಗಗಳಲ್ಲಿ ಕನ್ನಡ ಬಳಕೆಗೆ ಕಾನೂನು ರಚನೆ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಂಗಳೂರು, ನವೆಂಬರ್ 1 :

ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ ಮಾಡಲು ವಿಧೇಯಕವನ್ನು ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಮಂಡಿಸಿ,ಅನುಮೋದನೆ ಪಡೆಯಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಮತ್ತು ಸಮಗ್ರ ಶಿಕ್ಷಣ ಕರ್ನಾಟಕ ಇವರ ವತಿಯಿಂದ ಶ್ರೀ ಕಂಠೀರವ ಒಳಾಂಗಣ ಕ್ರೀಡಾಂಗಣದಲ್ಲಿ ಆಯೋಜಿಸಿರುವ 67ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ – 2022ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಭಾರತದ ಪ್ರತಿಯೊಂದು ಭಾಷೆ ಮಾತೃಭಾಷೆ. ಎಲ್ಲ ಭಾಷೆಗಳೂ ರಾಷ್ಟ್ರಭಾಷೆ ಎಂದು ತಿಳಿಸಿದ್ದಾರೆ. ಕನ್ನಡ ನಮ್ಮ ಮಾತೃಭಾಷೆಯೂ ಹೌದು, ನಮ್ಮ ರಾಷ್ಟ್ರಭಾಷೆಯೂ ಹೌದು. ಡಿಸೆಂಬರ್ ತಿಂಗಳಲ್ಲಿ ನಡೆಯಲಿರುವ ವಿಧಾನಸಭೆ ಅಧಿವೇಶನದಲ್ಲಿ ಕನ್ನಡದ ಅಭಿವೃದ್ಧಿಗಾಗಿ ರಾಜ್ಯದ ಎಲ್ಲ ರಂಗಗಳಲ್ಲಿಯೂ ಕನ್ನಡದ ಬಳಕೆ ಬಗ್ಗೆ ಕಾನೂನು ರಚನೆ. ಕನ್ನಡಕ್ಕೆ ಕಾನೂನಿನ ಕವಚವನ್ನು ಕೊಟ್ಟಿರುವ ಪ್ರಪ್ರಥಮ ಸರ್ಕಾರ ನಮ್ಮದು. ಈ ಕಾನೂನಿನ ಬಗ್ಗೆ ವ್ಯಾಖ್ಯಾನ, ಸಾರ್ವಜನಿಕವಾಗಿ ಮುಕ್ತಚರ್ಚೆಗಳಾಗಲಿ, ಸರ್ಕಾರ ಎಲ್ಲರ ಸಲಹೆಯನ್ನೂ ಮುಕ್ತವಾಗಿ ಸ್ವೀಕರಿಸಲಾಗುವುದು. ಕನ್ನಡ ಕಾನೂನನ್ನು ಮಾಡುವುದು ಒಂದು ಹಂತವಾದರೆ, ಕನ್ನಡಕ್ಕಾಗಿ ಬದುಕಬೇಕೆನ್ನುವ ಭಾವ ಹೃದಯಾಂತರಾಳದಿಂದ ಬರಬೇಕು. ಕನ್ನಡ ನಮ್ಮ ಅಂತರಂಗದಲ್ಲಿ, ರಾಜ್ಯದೆಲ್ಲೆಡೆ ಡಿಂಡಿಮವನ್ನು ಬಾರಿಸಲಿ. ನವಕರ್ನಾಟಕದ ನಿರ್ಮಾಣದಿಂದ ನವಭಾರತ ನಿರ್ಮಾಣವಾಗಲಿ ಎಂದರು.

IMG 20221101 WA0009

ಕನ್ನಡಕ್ಕಾಗಿ ದುಡಿಯುವ, ಬದುಕುವ ಸಂಕಲ್ಪವನ್ನು ಮಾಡೋಣ :

3-4 ವರ್ಷಗಳಲ್ಲಿ ಖಾಸಗಿ ವಲಯದಲ್ಲಿ 3 ಲಕ್ಷಕ್ಕೂ ಹೆಚ್ಚು ಉದ್ಯೋಗ ಸೃಷ್ಟಿಯಾಗಲಿದೆ. ಕರ್ನಾಟಕ ಪ್ರಗತಿಪರವಾದ ರಾಜ್ಯವಾಗಿದ್ದು,7 ಲಕ್ಷ ಕೋಟಿ ಬಂಡವಾಳ ಹರಿದುಬಂದರೆ , ರಾಜ್ಯ ಅಭಿವೃದ್ಧಿ ಹೊಂದಲಿದೆ. ದೂರದೃಷ್ಟಿಯಿಂದ ರಾಜ್ಯದಲ್ಲಿ ಕೆಲಸ ಮಾಡಲಾಗುತ್ತಿದೆ. ಕನ್ನಡ ಒಂದು ಭಾಷೆಯಾಗದೇ, ಕನ್ನಡ ನಮ್ಮ ಬದುಕಾಗಿಸಿಕೊಳ್ಳಲು ಕನ್ನಡ ನಾಡಿನ ಜನರಿಗೆ ಶಕ್ತಿ ತುಂಬಲಿ ಎಂದು ತಾಯಿ ಭುವನೇಶ್ವರಿಯಲ್ಲಿ ಪ್ರಾರ್ಥಿಸುತ್ತೇನೆ. ಕನ್ನಡದ ಸ್ವಾಭಿಮಾನ, ಅಸ್ಮಿತೆಯನ್ನು ಪ್ರತಿಯೊಬ್ಬರೂ ಎತ್ತಿಹಿಡಿಯಬೇಕು. ನಡೆ ಮುಂದೆ, ನಡೆ ಮುಂದೆ , ನುಗ್ಗಿ ನಡೆ ಮುಂದೆ ಎನ್ನುವಂತೆ ನಾವೆಲ್ಲರೂ ಒಗ್ಗಟ್ಟಾಗಿ ಮುನ್ನಡೆಯಬೇಕು. ಜಗ್ಗದೆ, ಕುಗ್ಗದೇ ಮುನ್ನಡೆಯುವುದು ಕನ್ನಡಿಗರ ಮಂತ್ರವಾಗಬೇಕು. ನಮ್ಮ ಮಕ್ಕಳು ವಿಶ್ವಮಟ್ಟದಲ್ಲಿ ಸಾಧನೆಗಳನ್ನು ಮಾಡಬೇಕು. ಹಿರಿಯರು ನಮಗೆ ಬದುಕಿನ ಬುತ್ತಿಯನ್ನು ಕೊಟ್ಟಿದ್ದಾರೆ. ನಮ್ಮ ಮಕ್ಕಳ ಬದುಕನ್ನು ಉತ್ತಮಗೊಳಿಸಬೇಕಿದೆ. ಕನ್ನಡಕ್ಕಾಗಿ ದುಡಿಯುತ್ತೇವೆ. ಬದುಕುತ್ತೇವೆ ಎಂಬ ಸಂಕಲ್ಪವನ್ನು ಮಾಡೋಣ. ಕನ್ನಡ ನಮ್ಮ ಉಸಿರು, ನಮ್ಮ ಸರ್ವಸ್ವ ಎಂದು ತಿಳಿದು ಎಲ್ಲರೂ ದುಡಿಯೋಣ ಎಂದು ಕರೆ ನೀಡಿದರು.

ಒಂದೇ ವರ್ಷದಲ್ಲಿ 8 ಸಾವಿರ ಶಾಲಾ ಕೊಠಡಿಗಳ ನಿರ್ಮಾಣ
ಶಿಕ್ಷಣದಲ್ಲಿ ಈ ವರ್ಷ 8 ಸಾವಿರ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುತ್ತಿದೆ ಇದೊಂದು ದಾಖಲೆ. 1956 ರಲ್ಲಿ ಕರ್ನಾಟಕ ರಚನೆಯಾದ ಮೇಲೆ ಯಾವುದೇ ಸರ್ಕಾರ ಒಂದು ವರ್ಷದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಶಾಲಾ ಕೊಠಡಿ ಗಳ ನಿರ್ಮಾಣಕ್ಕೆ ಅನುಮತಿ ನೀಡಿರಲಿಲ್ಲ. ಮುಂದಿನ ಮೂರು ವರ್ಷ ಈ ಕೆಲಸ ಮಾಡಿದರೆ ಶಾಲಾ ಕೊಠಡಿಗಳ ಕೊರತೆ ಆಗುವುದಿಲ್ಲ. ‘ವಿವೇಕ’ಎಂಬ ಹೆಸರಿನಿಂದ ಕಾರ್ಯಕ್ರಮ ಜಾರಿಯಾಗುತ್ತಿದೆ ಎಂದರು.

ಇದೇ ವರ್ಷದಲ್ಲಿ ಒಂದು ಲಕ್ಷ ಸರ್ಕಾರಿ ಹುದ್ದೆಗಳ ಭರ್ತಿ
2.5 ಲಕ್ಷ ಸರ್ಕಾರಿ ಹುದ್ದೆಗಳು ಖಾಲಿ ಇವೆ. ಮುಂದಿನ 2 ವರ್ಷಗಳಲ್ಲಿ ಈ ಹುದ್ದೆಗಳನ್ನು ಸಂಪೂರ್ಣವಾಗಿ ಭರ್ತಿ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳು ಭರವಸೆ ನೀಡಿದರು. ಈ ವರ್ಷ ಒಂದು ಲಕ್ಷ ಉದ್ಯೋಗ ನೀಡಲಾಗುವುದು ಎಂದು ತಿಳಿಸಿದರು. ಹುದ್ದೆಗಳು ತುಂಬಿದಾಗ ಕನ್ನಡಿಗರ ಕೈಗಳಿಗೆ ಉದ್ಯೋಗ ದೊರೆತು, ಆರ್ಥಿಕ ಬಲ ತುಂಬಿದಂತಾಗುತ್ತದೆ. ಆ ನಿಟ್ಟಿನಲ್ಲಿ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ರಾಂತಿ ಯಾಗಲಿದೆ ಎಂದರು.

ಉದ್ಯೋಗ ಕ್ರಾಂತಿ
ಬಂಡವಾಳ ಹೂಡಿಕೆದಾರರ ಸಮಾವೇಶದಿಂದ 7 ಲಕ್ಷ ಕೋಟಿ ರೂ.ಗಳ ಬಂಡವಾಳ ಕರ್ನಾಟಕಕ್ಕೆ ಹರಿದು ಬರುತ್ತಿದೆ. ಸುಮಾರು 3 ಲಕ್ಷ ಜನರಿಗೆ ಉದ್ಯೋಗ ಸೃಷ್ಟಿಯಾಗಲಿದೆ ಎಂದರು.

ಸರ್ಕಾರದ ಜೀವಂತಿಕೆ
ಕರ್ನಾಟಕದಲ್ಲಿ ಹತ್ತು ಕೃಷಿ ವಲಯಗಳಿವೆ. ಈ ವರ್ಷ ಕೆರೆಕಟ್ಟೆಗಳು ತುಂಬಿವೆ. ಪ್ರವಾಹದಿಂದ ಜನರಿಗೆ ಅನಾನುಕೂಲವಾಗಿದೆ. ಆದರೆ ದೀರ್ಘಕಾಲ ಅಂತರ್ಜಲ ಕುಸಿಡಿರುವ ಕಡೆಗಳಲ್ಲಿಯೂ ಅಂತರ್ಜಲ ಮೇಲೇರಿದೆ .3-4 ವರ್ಷಗಳ ಕಾಲ ನೀರಿನ ಬವಣೆ ತಪ್ಪಿದೆ. ರೈತರ ನೆರವಿಗೆ ಪರಿಹಾರ ದುಪ್ಪಟ್ಟು ಮಾಡಿದೆ. ಮನೆಗಳಿಗೆ ಪರಿಹಾರ ನೀಡಿದೆ. ಸಂಕಷ್ಟವಿದ್ದ ಕಡೆ ಸರ್ಕಾರ ಧಾವಿಸಿದೆ. ಸರ್ಕಾರದ ಜೀವಂತಿಕೆಯನ್ನು ನಾವು ತೋರಿಸಿದ್ದೇವೆ ಎಂದರು.

ಅತಿ ಹೆಚ್ಚು ಜ್ಞಾನಾಧಾರಿತ ಸಂಸ್ಥೆಗಳು
ಕರ್ನಾಟಕದಲ್ಲಿ ಅತಿ ಹೆಚ್ಚು ಜ್ಞಾನಾಧಾರಿತ ಸಂಸ್ಥೆಗಳು ಇವೆ. ನಾವೀನ್ಯತಾ ಸೂಚ್ಯಂಕದಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಜ್ಞಾನದ ಬೀಡು. ಮಣ್ಣಿನ ಕಣ ಕಣ ದಲ್ಲಿ ಜ್ಞಾನ, ದುಡಿಮೆ, ದುಡಿಮೆಗೆ ಗೌರವವಿದೆ. ದುಡಿಯುವ ಕೈಗಳಿಗೆ ಅತಿ ಹೆಚ್ವು ಮಹತ್ವ ನೀಡಿದ್ದೇವೆ. 6 ಲಕ್ಷ ರೈತ ಕೂಲಿಕಾರರ ಮಕ್ಕಳಿಗೆ, ನೇಕಾರರು, ಟ್ಯಾಕ್ಸಿ ಚಾಲಕರ ಮಕ್ಕಳಿಗೆ ರೈತ ವಿದ್ಯಾ ನಿಧಿಯನ್ನು ವಿಸ್ತರಣೆ ಮಾಡಿದೆ.

ನಾಡಿನ ಕುಶಲಕರ್ಮಿಗಳಿಗೆ 50 ಸಾವಿರ ರೂ.ಗಳ ಹಣಕಾಸಿನ ನೆರವನ್ನು ಪ್ರತಿ ಗ್ರಾಮದಲ್ಲಿಯೂ ಒದಗಿಸಲಾಗುತ್ತಿದೆ. ಔದ್ಯೋಗಿಕ ಕ್ರಾಂತಿ ಮಾಡಬೇಕೆನ್ನುವುದು ನಮ್ಮ ಗುರಿ ಎಂದರು.

5 ಲಕ್ಷ ಮಹಿಳೆಯರಿಗೆ ಸ್ವಯಂ ಉದ್ಯೋಗಕ್ಕಾಗಿ ಯೋಜನೆ ರೂಪಿಸಿದೆ. ಗ್ರಾಮೀಣ ಯುವಕರಿಗೆ ಪ್ರತಿ ಗ್ರಾಮದ ಎರಡು ಸಂಘಗಳಿಗೆ ತರಬೇತಿ ನೀಡಿ ನೆರವು ಒದಗಿಸಲಾಗುತ್ತಿದೆ. ಇದು ನವ ಕರ್ನಾಟಕ ನಿರ್ಮಾಣಕ್ಕೆ ಅಡಿಪಾಯ ಹಾಕಿದೆ ಎಂದು ತಿಳಿಸಿದರು.

ಕನ್ನಡಿಗರದ್ದು ಅಂತ:ಕರಣವುಳ್ಳ ಸಂಸ್ಕೃತಿ

ರಾಜ್ಯದಲ್ಲಿ ಬುದ್ಧಿವಂತಿಕೆಗೆ ಕೊರತೆ ಇಲ್ಲ. ರಾಷ್ಟ್ರದಲ್ಲಿಯೇ ಅತ್ಯಂತ ಹೆಚ್ಚು ಜ್ಞಾನಪೀಠ ಪ್ರಶಸ್ತಿಗಳನ್ನು ಪಡೆದ ನಾಡು ನಮ್ಮದು. ನಮ್ಮ ಹಿರಿಯರು ನಮಗೆ ಮೌಲ್ಯಾಧಾರಿತ , ನೈತಿಕ, ಉತ್ತಮ ಗುಣಮಟ್ಟದ ಬದುಕನ್ನು , ಜ್ಞಾನದ ಬದುಕನ್ನು ಕಟ್ಟಿಕೊಟ್ಟಿದ್ದಾರೆ. ಉದಾರೀಕರಣ,ಖಾಸಗೀಕರಣ ಜಾಗತೀಕರಣವಾದ ಮೇಲೆ ಅಂತ:ಕರಣ ಮರೆತಿರುವ ಈ ಸಂದರ್ಭದಲ್ಲಿ ನಾವು ಇದನ್ನು ಉಳಿಸಿಕೊಂಡು ಹೊಸ ಸವಾಲುಗಳನ್ನು ಎದುರಿಸಬೇಕು. ಕನ್ನಡಿಗರದ್ದು ಅಂತ:ಕರಣವುಳ್ಳ ಸಂಸ್ಕೃತಿ. ವಿಶಾಲತೆ ನಮ್ಮ ಗುಣ, ಎ ಲ್ಲರನ್ನೂ ಅಪ್ಪಿಕೊಳ್ಳುವ ನಮ್ಮಮನೋಧರ್ಮವನ್ನು ನಾವು ಉಳಿಸಿಕೊಂಡು ಕನ್ನಡ ಬಾವುಟವನ್ನು ಎಲ್ಲಾ ರಂಗಗಳಲ್ಲಿ ಹಾರಿಸುವ ಅಗತ್ಯವಿದೆ. ಉತ್ತಮ ಶಿಕ್ಷಣ, ಆರೋಗ್ಯ, ಉದ್ಯೋಗ, ತಂತ್ರಜ್ಞಾನ, ತಂತ್ರಾಂಶ, ವಿಜ್ಞಾನ ಹಾಗೂ ಮೂಲಭೂತ ಸೌಕರ್ಯ ಇರುವ ಭವಿಷ್ಯ ನಿರ್ಮಿಸುವ ಸಂಕಲ್ಪ ಮಾಡುವ ದಿನವಿದು ಎಂದರು.

ಆತ್ಮಾವಲೋಕನ ಮಾಡಿಕೊಳ್ಳುವ ಸಮಯ
ಕನ್ನಡ ಏಕೀಕರಣದ ಹೋರಾಟಕ್ಕೆ ಜಯವಾಗಿ ಕರ್ನಾಟಕವಾಗಿದೆ. ಹೋರಾಟದಿಂದ ಸೃಷ್ಟಿ ಯಾದ ಕನ್ನಡ ನಾಡು, ಹಿರಿಯರು ಕಂಡ ಕನಸು. ಸಂಪದ್ಭರಿತ ಕನ್ನಡ ನಾಡು ಶಿಕ್ಷಣ ಆರೋಗ್ಯ, ಉದ್ಯೋಗ ಸೃಷ್ಟಿ ಮಾಡಬಲ್ಲ ಕನ್ನಡ ನಾಡು, ಭಾರತದ ಭವಿಷ್ಯವನ್ನು ಬರೆಯುವ ಶಕ್ತಿ ಇರುವುದು ಕನ್ನಡ ನಾಡಿಗೆ. ಈ ಎಲ್ಲಾ ಕನಸುಗಳು ಹಂತಹಂತವಾಗಿ ನನಸಾಗುತ್ತಿದೆ. ಆರೂವರೆ ದಶಕಗಳಿಗಿಂತ ಹೆಚ್ಚು ಪ್ರಯಾಣ ಮಾಡಿರುವ ನಾವು ಸಿಂಹಾವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ. ಜೊತೆಗೆ ಪ್ರತಿಯೊಬ್ಬ ಕನ್ನಡಿಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ಕನ್ನಡ ನಾಡನ್ನು ಕಟ್ಟಲು ನನ್ನ ಕಾಣಿಕೆ ಏನು, ನನ್ನ ದುಡಿಮೆ ಏನು ಎನ್ನುವ ಪ್ರಶ್ನೆ ಪ್ರತಿ ಯೊಬ್ಬ ಕನ್ನಡಿಗನೂ ಕೇಳಿಕೊಳ್ಳಬೇಕು. ಪ್ರತಿಯೊಬ್ಬ ಕನ್ನಡಿಗನೂ ಕನ್ನಡ ನಾಡನ್ನು ಕಟ್ಟಲು ತೀರ್ಮಾನಿಸಿದೆ ಇಡೀ ವಿಶ್ವದಲ್ಲಿಯೇ ಕರ್ನಾಟಕ ಅತ್ಯಂತ ಶ್ರೇಷ್ಠ ನಾಡಾಗ ಬಲ್ಲದು ಎಂದರು.

ಪ್ರಾಥಮಿಕ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಸಂಸದ ಪಿ.ಸಿ.ಮೋಹನ್ , ವಿಧಾನ ಪರಿಷತ್ ಸದಸ್ಯರಾದ ಬಸವರಾಜ ಹೊರಟ್ಟಿ, ಗೋವಿಂದರಾಜು, ಶಾಸಕ ರಿಜ್ವಾನ್ ಅರ್ಷದ್, ಈ ಸಮಾರಂಭದಲ್ಲಿ ಉಪಸ್ಥಿತರಿದ್ದರು.