IMG 20221102 WA0031

ಭಾರತೀಯ ಅರ್ಥವ್ಯವಸ್ಥೆ ಸಶಕ್ತ :ಪ್ರಧಾನಿ ನರೇಂದ್ರ ಮೋದಿ…!

BUSINESS Genaral STATE

ಭಾರತೀಯ ಅರ್ಥವ್ಯವಸ್ಥೆ ಸಶಕ್ತ :ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು, ನವೆಂಬರ್ 02 : ಕೋವಿಡ್ ಮಹಾಮಾರಿಯನ್ನು ಎದುರಿಸಿ ಭಾರತೀಯರು ಅರ್ಥ ವ್ಯವಸ್ಥೆ ಸಶಕ್ತವಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಪ್ರಕಟಿಸಿದರು.

IMG 20221102 WA0033

ಇಂದಿನಿಂದ ನಗರದ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ಐದನೇ ಜಾಗತಿಕ ಹೂಡಿಕೆದಾರರ ಸಮಾವೇಶವನ್ನು ವಾಸ್ತವ ವೇದಿಕೆಯ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಕಳೆದ ಎಂಟು ವರ್ಷಗಳ ಅವಧಿಯಲ್ಲಿ ದೇಶದಲ್ಲಿ ಕಾರ್ಯಾಚರಿಸುತ್ತಿದ್ದ ವಿಮಾನ ನಿಲ್ದಾಣಗಳ ಸಂಖ್ಯೆ 70 ರಿಂದ 140 ಕ್ಕೆ ದುಪ್ಪಟ್ಟು ಆಗಿದೆ. ಅಂತೆಯೇ, ಕೇವಲ ಐದು ನಗರಗಳಲ್ಲಿ ಮೆಟ್ರೋ ರೈಲು ಸೇವೆ ಇದ್ದು, ಇದೀಗ ಭಾರತದ 20 ನಗರಗಳಲ್ಲಿ ಮೆಟ್ರೋ ರೈಲು ಸೇವೆ ಲಭ್ಯವಿದೆ. ವಿದೇಶಿ ನೇರ ಬಂಡವಾಳ ಹೂಡಿಕೆಯಲ್ಲಿನ ವಿಫುಲ ಅವಕಾಶಗಳು ಹಾಗೂ ಪಾರದರ್ಶಕತೆ ಇದೆಲ್ಲವನ್ನೂ ಸಾಧ್ಯ ಮಾಡಿದೆ. ರಕ್ಷಣಾ ಕ್ಷೇತ್ರದಿಂದ ಬಾಹ್ಯಾಕಾಶ ಕ್ಷೇತ್ರದವರೆಗೆ ವಿದೇಶಿ ನೇರ ಬಂಡವಾಳಕ್ಕೆ ಅವಕಾಶ ಕಲ್ಪಿಸಲಾಗಿದೆ. ಅಂಕಿತ ಕ್ಷೇತ್ರದಲ್ಲಿ (ಡಿಜಿಟಲ್ ಸೆಕ್ಟರ್) ಮಹಾಕ್ರಾಂತಿಯೇ ಆಗಿದೆ ಎಂದು ಅವರು ವಿವರಿಸಿದರು.

Video

ಪ್ರಧಾನ ಮಂತ್ರಿ ಗತಿಶಕ್ತಿ ರಾಷ್ಟ್ರೀಯ ಪ್ರಧಾನ ಯೋಜನೆ (ಮಾಸ್ಟರ್ ಪ್ಲಾನ್) ಅಡಿ ಮೂಲ ಸೌಕರ್ಯಗಳ ಅಭಿವೃದ್ಧಿ ಹಾಗೂ ಮೂಲ ಸೌಕರ್ಯಗಳ ಹೊಂದಾಣಿಕೆ ಒಳಗೊಂಡಂತೆ ಕೊನೆಯ ಮೈಲಿ ಸಂಪರ್ಕದ ವಿವಿಧ ಯೋಜನೆಗಳಿಗೆ ಚಲನೆ ನೀಡಲಾಗಿದೆ. ಕಳೆದ ಎಂಟು ವರ್ಷಗಳಲ್ಲಿ ದಾಖಲೆಯ ಪ್ರಮಾಣದಲ್ಲಿ ರಫ್ತು ಆಗಿದೆ. ತಾಂತ್ರಿಕ ಮತ್ತು ನಿರ್ವಹಣಾ ವಿಷಯಾಧಾರಿತ ವಿಶ್ವವಿದ್ಯಾಲಯಗಳ ಪ್ರಮಾಣ ಶೇಕಡಾ ಐವತ್ತರಷ್ಟು ಹೆಚ್ಚಿದೆ. ಆರೋಗ್ಯ ವಿಮಾ ಕ್ಷೇತ್ರದಲ್ಲಿಯೂ ಇಡೀ ವಿಶ್ವದಲ್ಲಿಯೇ ದಾಖಲೆಯ ಸಾಧನೆ ಭಾರತದಲ್ಲಾಗಿದೆ. ಆರೋಗ್ಯ ಮತ್ತು ಸೌಖ್ಯ ಚಿಕಿತ್ಸಾಲಯಗಳ ಸಂಖ್ಯೆ ಒಂದೂವರೆ ಲಕ್ಷದಷ್ಟು ದಾಟಿದೆ. ಈ ಎಲ್ಲದರ ಹಿನ್ನಲೆಯಲ್ಲಿ ಕೋವಿಡ್ ಸಂದರ್ಭದಲ್ಲಿಯೂ ಕೂಡಾ ಭಾರತದಲ್ಲಿ ಆರ್ಥಿಕ ಹಿಂಜರಿತ ಅಥವಾ ಆರ್ಥಿಕ ಕುಸಿತ ಉಂಟಾಗಲಿಲ್ಲ. ಅಂತೆಯೇ, ಭಾರತದ ಆರ್ಥಿಕತೆ ಸಶಕ್ತವಾಗಿ ಮತ್ತು ಸದೃಢವಾಗಿ ನಿಂತಿದೆ ಎಂದು ಅವರು ಹೇಳಿದರು.

ನವಭಾರತದ ನಿರ್ಮಾಣಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ದಿಟ್ಟ ಸುಧಾರಣೆಗಳೇ ಕಾರಣ ಎಂದು ಬಣ್ಣಿಸಿದ ಅವರು ನವೀಕೃತ ಇಂಧನ ಕ್ಷೇತ್ರದಲ್ಲಿ ಮುಪ್ಪಟ್ಟು ಹಾಗೂ ಸೌರಶಕ್ತಿ ಕ್ಷೇತ್ರದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಸಾಧನೆಯಾಗಿದೆ ಎಂದರು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಒಂದೇ ಪಕ್ಷ ಇರುವುದರಿಂದ ನಿರ್ದಿಷ್ಟ ಕ್ಷೇತ್ರಗಳಲ್ಲಿ ರಾಷ್ಟ್ರ ವಿಕಾಸದತ್ತ ಮುಂದಡಿ ಇಡಲು ಸಾಧ್ಯವಾಗಿದೆ ಎಂದ ನರೇಂದ್ರ ಮೋದಿ ಅವರು ಕರ್ನಾಟಕವು ಪ್ರಕೃತಿ ಹಾಗೂ ಸಂಸ್ಕೃತಿಯ ಅದ್ಭುತ ಸಂಗಮ ಎಂದು ಬಣ್ಣಿಸಿ, ಬ್ರ್ಯಾಂಡ್ ಬೆಂಗಳೂರು ಎಂದು ಬಣ್ಣಿಸಿ, ವಿಶ್ವದ ನಕ್ಷೆಯಲ್ಲಿ ಅಭಿವೃದ್ಧಿ ಕಕ್ಷೆಯಲ್ಲಿ ಬ್ರ್ಯಾಂಡ್ ಬೆಂಗಳೂರು ಗಮನಾರ್ಹ ಎಂದರಲ್ಲದೇ, ಎಲ್ಲರ ಹೃದಯಗಳನ್ನು ಗೆಲ್ಲುವಂತಹ ಕನ್ನಡಿಗರ ಔದಾರ್ಯವನ್ನು ಸ್ಮರಿಸಿ ದೇಶ ವಿದೇಶಗಳಿಂದ ಆಗಮಿಸಿದ ಹೂಡಿಕೆದಾರರನ್ನು ಕೈಬೀಸಿ ಕರೆಯುತ್ತಿರುವ ಇನ್ವೆಸ್ಟ್ ಕರ್ನಾಟಕದಲ್ಲಿ ಸಾವಿರಾರು ಕೋಟಿ ಹೂಡಿಕೆ ಮಾಡಿ ವಿಫುಲ ಉದ್ಯೋಗಾವಕಾಶಗಳನ್ನು ದೊರಕಿಸಿಕೊಡಲು ಸಹಕರಿಸಿ ಎಂದು ಹೂಡಿಕೆದಾರರಲ್ಲಿ ಮನವಿ ಮಾಡಿದರು. ಇದು ಕೇವಲ ಕರ್ನಾಟಕ ಮಾತ್ರವಲ್ಲದೇ ಭಾರತ ಹಾಗೂ ಇಡೀ ವಿಶ್ವವನ್ನೇ ಅಭಿವೃದ್ಧಿ ಪಥದತ್ತ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದು ಪ್ರಧಾನ ಮಂತ್ರಿ ಅಭಿಪ್ರಾಯ ಪಟ್ಟರು.