DSC 0805 scaled

ತುಮಕೂರು:ಕನ್ನಡ ಭಾಷೆ ನಮಗೆ ವಿಶಾಲವಾದ ಸಂಸ್ಕಾರ ನೀಡಿದೆ…!

DISTRICT NEWS ತುಮಕೂರು

ಕನ್ನಡ ಭಾಷೆ ನಮಗೆ ವಿಶಾಲವಾದ ಸಂಸ್ಕಾರ ನೀಡಿದೆ : ಆರಗ ಜ್ಞಾನೇಂದ್ರ
ತುಮಕೂರು(ಕ.ವಾ)ನ.01: ಮಾತೃ ಭಾಷೆಯಲ್ಲೇ ವೈದ್ಯಕೀಯ ಶಿಕ್ಷಣ, ಇಂಜಿನಿಯರಿಂಗ್ ಶಿಕ್ಷಣ, ಜ್ಞಾನ-ವಿಜ್ಞಾನಗಳನ್ನು ನೀಡಬೇಕು ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತಿಸುತ್ತಿದೆ. ಈ ಮಟ್ಟಕ್ಕೆ ಕನ್ನಡ ಭಾಷೆಯನ್ನು ಬೆಳೆಸುವ, ಪರಿವರ್ತಿಸುವ ಕೆಲಸ ಭಾಷಾ ತಜ್ಞರಿಂದ ಆಗಬೇಕಿದೆ ಎಂದು ಗೃಹ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಶ್ರೀ ಆರಗ ಜ್ಞಾನೇಂದ್ರ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

DSC 1039


ಮುಖ್ಯ ಮಂತ್ರಿಗಳಾದ ಶ್ರೀ ಬಸವರಾಜ ಬೊಮ್ಮಾಯಿ ಅವರು ಕಳೆದ ಅಧಿವೇಶನದಲ್ಲಿ ಸಮಗ್ರ ಕನ್ನಡ ಭಾಷೆಯ ಅಭಿವೃದ್ಧಿಗೆ ವಿಧೇಯಕವನ್ನು ಮಂಡಿಸಿದ್ದಾರೆ. ಕರ್ನಾಟಕದಲ್ಲಿ ಉದ್ಯಮವನ್ನು ಆರಂಭಿಸುವಂತಹ ಪ್ರತಿಯೊಬ್ಬ ಉದ್ಯಮಿಯು ಸಹ ತನ್ನ ಉದ್ಯಮದಲ್ಲಿ ಶೇ. 70ರಷ್ಟು ಹುದ್ದೆಗಳನ್ನು ಅರ್ಹ ಕನ್ನಡಿಗರಿಗೆ ನೀಡಬೇಕು ಎಂಬಂತಹ ನಿಯಮ ಮಾಡಲಾಗಿದೆ ಎಂದರು.
ಜಿಲ್ಲಾಡಳಿತದ ವತಿಯಿಂದ ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ಇಂದು ಏರ್ಪಡಿಸಲಾಗಿದ್ದ 67ನೇ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಿ, ಧ್ವಜಾರೋಹಣ ನೆರವೇರಿಸಿ, ನೆರೆದಿದ್ದವರನ್ನು ಉದ್ದೇಶಿಸಿ ಮಾತನಾಡಿದ ಅವರು, ಕರುನಾಡು ಒಟ್ಟಾಗಿ ‘ಕರ್ನಾಟಕ’ ರಾಜ್ಯ ಆದಂತಹ ಈ ಸಂದರ್ಭವನ್ನು ಕನ್ನಡ ಹಬ್ಬವನ್ನಾಗಿ ನಾಡಿನ ಮೂಲೆ ಮೂಲೆಗಳಲ್ಲಿ ಆಚರಿಸಲಾಗುತ್ತಿದೆ.

DSC 0999

ಕರ್ನಾಟಕ ರಾಜ್ಯ ಉದಯವಾಗಿ 67 ವರ್ಷಗಳು ಸಂದಿದೆ. ಸ್ವಾತಂತ್ರ್ಯ ಪೂರ್ವದಲ್ಲಿ ಮದ್ರಾಸ್, ಹೈದರಾಬಾದ್, ಮುಂಬೈ ಪ್ರಾಂತ್ಯಗಳಲ್ಲಿ ಹರಿದು ಹಂಚಿಹೋಗಿದ್ದ ಕನ್ನಡ ನಾಡಿನ ನೆಲ, ಜಲ ಒಗ್ಗೂಡಿದಂತಹ ಹೆಮ್ಮೆಯ ದಿನ. ಸುಮಾರು 2000 ವರ್ಷಗಳ ಇತಿಹಾಸವಿರುವ ಕನ್ನಡ ನಾಡಿನಲ್ಲಿ ಇಲ್ಲಿಯ ರಾಜರು ಮಹಾರಾಜರು ಅನೇಕ ಸಾಧನೆಗಳನ್ನು ಮಾಡಿದ್ದಾರೆ. ನಾಡು ಕಟ್ಟುವಂತಹ ಭಾಷೆ ಕಟ್ಟುವಂತಹ ಕೆಲಸ ಮಾಡಿದ್ದಾರೆ.

DSC 1149

ವಿಶೇಷ ಸಾಂಸ್ಕøತಿಕ ಕಲೆಗಳಾದ ಶಿಲ್ಪಕಲೆ, ಸಂಗೀತ, ನೃತ್ಯಗಳ ಮೂಲಕ ಹಿರಿಮೆಯನ್ನು ಸಾರಿದ್ದಾರೆ ಎಂದು ತಿಳಿಸಿದರು.
ಮೈಸೂರಿನ ಮಹಾರಾಜರು ವಿಶೇಷವಾಗಿ ನೀರಾವರಿ ಅಚ್ಚುಕಟ್ಟು, ಅಣೆಕಟ್ಟುಗಳನ್ನು ನಿರ್ಮಿಸಿ ರೈತರ ಬದುಕನ್ನು ಹಸನು ಮಾಡಿದ್ದಾರೆ. ಕರ್ನಾಟಕ ರಾಜ್ಯವನ್ನು ಸಾಂಸ್ಕøತಿಕವಾಗಿ ಆರ್ಥಿಕವಾಗಿ ಸುಧಾರಣೆ ಮಾಡಿದವರೆಲ್ಲರಿಗೂ ಸಹ ಈ ಸುಸಂದರ್ಭದಲ್ಲಿ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದರು.

ನಮ್ಮ ಸಾಹಿತಿಗಳು, ಕಲಾವಿದರು ಇವರೆಲ್ಲರೂ ಸಹ ನಾವೆಲ್ಲ ಹೆಮ್ಮೆ ಪಡುವ ರೀತಿಯಲ್ಲಿ ಕನ್ನಡವನ್ನು ಕಟ್ಟುವಂತಹ ಕೆಲಸದಲ್ಲಿ ತಮ್ಮನ್ನು ಅನೇಕ ವರ್ಷಗಳಿಂದ ತೊಡಗಿಸಿಕೊಂಡಿದ್ದಾರೆ. ಹಾಗೆಯೇ ಅನೇಕ ರಾಜ ಮಹಾರಾಜರುಗಳ ಶೌರ್ಯ, ಹೋರಾಟ ಇವುಗಳನ್ನು ಸಹ ನಾವು ನೆನಪು ಮಾಡಿಕೊಳ್ಳಬೇಕಿದೆ ಎಂದರು.
ಭಾಷೆ ಕೇವಲ ಒಂದು ಪ್ರಾಂತ್ಯಕ್ಕಲ್ಲ. ಭಾಷೆ ಜನರನ್ನು ಸಧೃಡಪಡಿಸಬೇಕಾಗುತ್ತದೆ. ಭಾಷೆ ನಮ್ಮನ್ನು ಅತ್ಯಂತ ಎತ್ತರಕ್ಕೆ ಕೊಂಡೊಯ್ಯುವ ಸಾಧನವಾಗಿದೆ. ಈ ನಿಟ್ಟಿನಲ್ಲಿ ಇತ್ತೀಚಿನ ವರ್ಷಗಳಲ್ಲಿ ಕನ್ನಡವನ್ನು ಕಟ್ಟುವಂತಹ ಕನ್ನಡವನ್ನು ಬೆಳೆಸುವಂತಹ ಕೆಲಸ ಸರ್ಕಾರದ ಕಡೆಯಿಂದ ಆಗುತ್ತಿದೆ. ಅದೇ ರೀತಿ ಕನ್ನಡ ಕೇವಲ ಭಾವನೆಯ ಭಾಷೆಯಲ್ಲ. ನವೆಂಬರ್ ತಿಂಗಳಲ್ಲಿ ಮಾತ್ರ ನಾವು ಭಾವುಕರಾಗುವ ಅವಶ್ಯಕತೆ ಇಲ್ಲ. ಒಂದು ಭೂ ಭಾಗದಲ್ಲಿ ಬದುಕುವ ಜನರ ಬದುಕನ್ನು ಅಲ್ಲಿನ ಭಾಷೆ ಕಟ್ಟಿ ಕೊಡುತ್ತದೆ ಎಂದು ತಿಳಿಸಿದರು.

ಆಂಗ್ಲರು ತಾವು ಹೋದಡೆಯಲ್ಲೆಲ್ಲ ತಮ್ಮ ಭಾಷೆಯನ್ನು ಸಹ ಕೊಂಡೊಯ್ದು ಅದನ್ನು ವಿಶ್ವದೆಲ್ಲೆಡೆ ಪ್ರಸರಿಸಿದ್ದಾರೆ. ಇಂಗ್ಲೀಷರು ಭಾರತ ಬಿಟ್ಟು 75 ವರ್ಷಗಳಾದರು ಸಹ ಅವರ ಭಾಷೆಗೆ ನಾವುಗಳು ದಾಸರಾಗಿದ್ದೇವೆ. ಇಡೀ ಜಗತ್ತಿನ ಜನಸಮುದಾಯವನ್ನು ತನ್ನ ಭಾಷೆಯ ದಾಸರನ್ನಾಗಿ ಮಾಡಿರುವುದು ಕೇವಲ 3 ಕೋಟಿ ಜನಸಂಖ್ಯೆ ಇರುವಂತಹ ಆಂಗ್ಲರು ಎಂಬುದನ್ನು ನಾವು ಮರೆಯಬಾರದು ಎಂದು ಸಚಿವರು ನುಡಿದರು.

DSC 0721

ನನ್ನ ಭಾಷೆಯನ್ನು ನಾನು ಸಮಗ್ರವಾಗಿ ಕಲಿಯುತ್ತೇನೆ. ನನ್ನ ಭಾಷೆಯನ್ನು ಇನ್ನೊಬ್ಬರು ಕಲಿಯುವ ಹಾಗೆ ಅತ್ಯಂತ ಪ್ರೀತಿಯಿಂದ ಹೇಳುತ್ತೇನೆ ಎಂಬಂತಹ ಕೆಲಸವನ್ನು ನಾವೆಲ್ಲರೂ ಸಹ ಇಂದು ಮಾಡಬೇಕಿದೆ. ಸ್ವಾಭಿಮಾನ ಕೆಚ್ಚು ಯಾರಲ್ಲಿರುತ್ತದೆಯೋ ಅಲ್ಲಿಯ ಭಾಷೆ ಬೆಳೆಯುತ್ತದೆ. ಅಂತೆಯೇ ಕನ್ನಡಿಗರಾದ ನಮಗೆ ಒಂದು ಬದ್ಧತೆ ಮತ್ತು ಸ್ವಾಭಿಮಾನ ಬೇಕಾಗುತ್ತದೆ. ಕನ್ನಡ ನಾಡಿನ ಆರೂವರೆ ಕೋಟಿ ಕನ್ನಡಿಗರೆಲ್ಲರೂ ಕನ್ನಡ ನಾಡನ್ನು ಕಟ್ಟುವ, ಕನ್ನಡ ಭಾಷೆಯನ್ನು ಬೆಳೆಸುವ ಕೆಲಸ ಮಾಡಬೇಕಿದೆ ಎಂದರು.
ಕನ್ನಡ ಭಾಷೆ ನಮಗೆ ವಿಶಾಲವಾದ ಸಂಸ್ಕಾರ ಕೊಟ್ಟಿದೆ. ರಾಷ್ಟ್ರಕವಿ ಕುವೆಂಪು ಅವರು ಹೇಳಿರುವಂತೆ ‘ಜಯ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ’ ಅಂದರೆ, ಕನ್ನಡಾಂಬೆ ಭಾರತ ಮಾತೆಯ ಮಗಳು ಎಂದು ಹೇಳುವಂತಹ ವಿಶಾಲವಾದ ಹೃದಯವಂತರು ನಾವುಗಳು.
ಕನ್ನಡ ರಾಜ್ಯೋತ್ಸವ ಕೇವಲ ನವೆಂಬರ್ ತಿಂಗಳ ಹಬ್ಬವಾಗಬಾರದು. ಪ್ರ್ರತಿ ದಿನದ ಹಬ್ಬವಾಗಬೇಕು. ಪ್ರತಿ ದಿನವೂ ಕನ್ನಡವನ್ನು ಕಟ್ಟಲು ನಾವು ಶ್ರಮಿಸಬೇಕು. ಅತ್ಯಂತ ಸ್ವಾಭಿಮಾನದಿಂದ ಕನ್ನಡ ಭಾಷೆಯನ್ನು ನಾವೆಲ್ಲರೂ ಸೇರಿ ಬೆಳೆಸುವಂತಹ ಅವಶ್ಯಕತೆ ಇದೆ.
ನಾಡು ನುಡಿಗಾಗಿ ಶ್ರಮಿಸಿದಂತಹ ಈ ಜಿಲ್ಲೆಯ 41 ಸಾಧಕರನ್ನು ಗೌರವಿಸುವ ಕೆಲಸ ಆಗಿದೆ. ತುಮಕೂರು ಅತ್ಯಂತ ಒಳ್ಳೆಯ ಜಿಲ್ಲೆ, ಕನ್ನಡಕ್ಕೆ ಬಹಳ ದೊಡ್ಡ ಕಾಣಿಕೆ ಕೊಟ್ಟಿರುವ ಜಿಲ್ಲೆ. ಈ ಜಿಲ್ಲೆಗೆ ಉಸ್ತುವಾರಿ ಸಚಿವನಾಗಿರುವುದು ನನಗೆ ಹೆಮ್ಮೆ ತರುವಂತಹ ವಿಷಯವಾಗಿದೆ ಎಂದರು.

DSC 0944

ಇದಕ್ಕೂ ಮುನ್ನ ಜಿಲ್ಲಾಧಿಕಾರಿ ಕಚೇರಿ ಆವರಣದಿಂದ ಜೂನಿಯರ್ ಕಾಲೇಜು ಮೈದಾನ ಆವರಣದವರೆಗೆ ಕನ್ನಡಾಂಬೆ ತಾಯಿ ಭುವನೇಶ್ವರಿ ದೇವಿಯ ಬೆಳ್ಳಿ ರಥದ ಅದ್ದೂರಿ ಮೆರವಣಿಗೆ ಜರುಗಿತು. ವಿವಿಧ ಇಲಾಖೆಗಳ ಸ್ತಬ್ಧ ಚಿತ್ರ ಸಹ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಕಣ್ಮನ ಸೆಳೆಯಿತು.
ಸಮಾರಂಭದಲ್ಲಿ ಶಾಸಕರುಗಳಾದ ಜಿ.ಬಿ. ಜ್ಯೋತಿ ಗಣೇಶ್, ಆರ್. ರಾಜೇಂದ್ರ, ಮಹಾನಗರಪಾಲಿಕೆ ಮಹಾ ಪೌರರಾದ ಎಂ. ಪ್ರಭಾವತಿ, ಜಿಲ್ಲಾಧಿಕಾರಿ ವೈ.ಎಸ್. ಪಾಟೀಲ, ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕೆ. ವಿದ್ಯಾಕುಮಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಕುಮಾರ್ ಷಹಪೂರ್‍ವಾಡ್, ಅಪರ ಜಿಲ್ಲಾಧಿಕಾರಿ ಕೆ. ಚನ್ನಬಸಪ್ಪ, ಉಪ ವಿಭಾಗಾಧಿಕಾರಿ ವಿ. ಅಜಯ್, ವಾರ್ತಾಧಿಕಾರಿ ಎಂ.ಆರ್. ಮಮತ, ಡಿಡಿಪಿಐ ನಂಜಯ್ಯ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.