20221127 231942

ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಬದ್ಧ….!

Genaral STATE

ಜನಿಸುವಾಗಲೇ ಕಿವುಡುತನದ ಸಮಸ್ಯೆ ಇದ್ದ 500 ಮಕ್ಕಳಿಗೆ ಕಾಕ್ಲಿಯರ್ ಇಂಪ್ಲಾಂಟ್ ಗೆ ಕ್ರಮ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್

ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ಸರ್ಕಾರ ಬದ್ಧ

ಬೆಂಗಳೂರು : ಎಲ್ಲರಿಗೂ ಆರೋಗ್ಯ ಎಂಬ ಘೋಷಣೆಯನ್ನು ಸಾಕಾರಗೊಳಿಸಲು ಹಾಗೂ ಶ್ರವಣ ದೋಷ ಮುಕ್ತ ಕರ್ನಾಟಕ ನಿರ್ಮಾಣಕ್ಕೆ ವ್ಯಾಪಕ ಕ್ರಮಗಳನ್ನು ಕೈಗೊಂಡಿದ್ದು, 6 ವರ್ಷದೊಳಗಿನ ಮಕ್ಕಳ ಶ್ರವಣ ದೋಷ ನಿವಾರಣೆಗೆ ವಿಶೇಷ ಗಮನ ಹರಿಸಲಾಗಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು 2022-23 ನೇ ಸಾಲಿನ ಬಜೆಟ್ ನಲ್ಲಿ ‘ಶ್ರವಣ ದೋಷ ಮುಕ್ತ ಕರ್ನಾಟಕ” ನಿರ್ಮಾಣ ಮಾಡುವ ಘೋಷಣೆ ಮಾಡಿದ್ದು, ಈ ಯೋಜನೆ ಕುರಿತು ಸಚಿವರು ಪ್ರಗತಿ ಪರಿಶೀಲನೆ ನಡೆಸಿ ಮಾಹಿತಿ ನೀಡಿದರು.

ಈ ವರ್ಷ ಎಲ್ಲಾ ಜನ್ಮಜಾತ ಶ್ರವಣ ದೋಷ ಸಮಸ್ಯೆ ಇರುವ ಮಕ್ಕಳ ಸಮಸ್ಯೆ ನಿವಾರಣೆಗೆ ವಿಶೇಷ ಗಮನಹರಿಸಲಾಗಿದ್ದು, ಶ್ರವಣ ದೋಷ ಸಮಸ್ಯೆ ಇರುವ ಮಕ್ಕಳಲ್ಲಿ ಮಾತು ಮತ್ತು ಶ್ರವಣ ಸಾಮರ್ಥ್ಯ ಸುಧಾರಿಸಲು 500 ಮಕ್ಕಳಿಗೆ ಉಚಿತವಾಗಿ ಕಾಕ್ಲಿಯರ್ ಇಂಪ್ಲಾಂಟ್ ಮಾಡಲು ಸರ್ಕಾರ ಎಲ್ಲಾ ವ್ಯವಸ್ಥೆ ಮಾಡಿದೆ ಎಂದರು.

ಪ್ರಸಕ್ತ ಆರ್ಥಿಕ ವರ್ಷದಲ್ಲಿ 6 ವರ್ಷದೊಳಗಿನ 1,939 ಮಕ್ಕಳು ಶ್ರವಣ ದೋಷಕ್ಕೊಳಗಾಗಿದ್ದಾರೆ ಎಂದು ಗುರುತಿಸಲಾಗಿದೆ. ಈ ಪೈಕಿ ಹೆಚ್ಚಿನವರು ಜನ್ಮಜಾತ ಕಿವುಡು ಸಮಸ್ಯೆಗೆ ಸಿಲುಕಿದ್ದು, ಪ್ರಸವಪೂರ್ವ ಅವಧಿಯಲ್ಲಿ ಔಷಧ ಸೇವನೆ, ವೈರಾಣು ಸೋಂಕು, ಉಸಿರುಗಟ್ಟುವಿಕೆ, ಆಘಾತದಂತಹ ಸಮಸ್ಯೆಗಳು ಇದಕ್ಕೆ ಮೂಲ ಕಾರಣ ಎಂದು ಹೇಳಿದರು.

20221127 231843

ಕಾಕ್ಲಿಯರ್ ಇಂಪ್ಲಾಂಟ್ ಒಂದು ಸಣ್ಣ ಎಲೆಕ್ಟ್ರಾನಿಕ್ ಸಾಧನವಾಗಿದ್ದು, ಈ ಸಾಧನವು ತೀವ್ರ ಮತ್ತು ಆಳವಾದ ಶ್ರವಣ ದೋಷ ಹೊಂದಿರುವ ಮಕ್ಕಳಿಗೆ ಶಬ್ದಗಳನ್ನು ಕೇಳಲು ಸಹಾಯ ಮಾಡುತ್ತದೆ. ಒಳ ಕಿವಿಯ ಕಾಕ್ಲಿಯಾಗೆ ಸೇರಿಸಿ ಇಂಪ್ಲಾಂಟ್ ಅಳವಡಿಸಿದ ನಂತರ ಪ್ರೊಸೆಸರ್ ಅನ್ನು ಕಿವಿಯ ಹಿಂದೆ ಇರಿಸಲಾಗುತ್ತದೆ, ನಿಷ್ಕ್ರಿಯ ಶ್ರವಣ ಸಾಧನ ಕಾರ್ಯನಿರ್ವಹಿಸಲು ಪ್ರಾರಂಭಿಸುತ್ತದೆ ಮತ್ತು ಆಡಿಯೋ ಸಂಕೇತಗಳನ್ನು ಮೆದುಳಿಗೆ ರವಾನಿಸುತ್ತದೆ ಎಂದು ಸಚಿವರು ವಿವರ ನೀಡಿದರು.

ಸರ್ಕಾರದಿಂದ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದು, ಶಸ್ತ್ರಚಿಕಿತ್ಸೆಗೆ ನೆರವಾಗುವ ಆಶಾ ಕಾರ್ಯಕರ್ತೆಯರಿಗೆ 250 ರೂ. ಗೌರವಧನ ನೀಡಲಾಗುತ್ತಿದೆ. ಇಂತಹ ಶಸ್ತ್ರ ಚಿಕಿತ್ಸೆಯನ್ನು ಕೆ.ಸಿ. ಜನರಲ್ ಆಸ್ಪತ್ರೆ, ಇಂದಿರಾಗಾಂಧಿ ಮಕ್ಕಳ ಸಂಸ್ಥೆ, ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆ, ಬೆಂಗಳೂರು ಮೆಡಿಕಲ್ ಕಾಲೇಜು – ಬಿಎಂಸಿಆರ್ ಐ, ಹುಬ್ಬಳ್ಳಿಯ ಕಿಮ್ಸ್ ಸೇರಿದಂತೆ 20 ಆಸ್ಪತ್ರೆಗಳಲ್ಲಿ ಸುಸಜ್ಜಿತ ಶಸ್ತ್ರಚಿಕಿತ್ಸೆಗೆ ಸೂಕ್ತ ವ್ಯವಸ್ಥೆ ಮಾಡಲಾಗಿದೆ. ಇನ್ನಷ್ಟು ಆಸ್ಪತ್ರೆಗಳನ್ನು ಉಚಿತ ಶಸ್ತ್ರಚಿಕಿತ್ಸೆಗಾಗಿ ಸೇರ್ಪಡೆ ಮಾಡಲಾಗುವುದು ಎಂದು ಹೇಳಿದರು.

ಕಿವುಡುತನ ತಡೆಗಟ್ಟುವಿಕೆ ಮತ್ತು ನಿಯಂತ್ರಣಕ್ಕಾಗಿ ರಾಷ್ಟ್ರೀಯ ಕಾರ್ಯಕ್ರಮ (ಎನ್.ಪಿ.ಪಿ.ಸಿ.ಡಿ.)ದಡಿ ಕಾರ್ಯನಿರ್ವಹಿಸುವ ಶ್ರವಣಶಾಸ್ತ್ರ ತಂಡಗಳು ರಾಷ್ಟ್ರೀಯ ಬಾಲ ಸುರಕ್ಷಾ ಕಾರ್ಯಕ್ರಮ (ಆರ್.ಬಿ.ಎಸ್.ಕೆ.)ದಡಿ ಸಂಚಾರಿ ಆರೋಗ್ಯ ತಂಡಗಳ ಸಹಯೋಗದೊಂದಿಗೆ ಫಲಾನುಭವಿಗಳನ್ನು ಗುರುತಿಸಲಾಗುತ್ತದೆ. ಗುರುತಿಸಲಾದ ಅರ್ಹ ಮಕ್ಕಳನ್ನು ಹೆಚ್ಚಿನ ಮೌಲ್ಯಮಾಪನ ಮತ್ತು ನಿರ್ವಹಣೆಗಾಗಿ ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.

62 ಮಕ್ಕಳಿಗೆ ಶಸ್ತ್ರಚಿಕಿತ್ಸೆ

ರಾಜ್ಯದಲ್ಲಿ ಪ್ರಸ್ತುತ ಇಂತಹ 652 ಮಕ್ಕಳನ್ನು ಗುರುತಿಸಿದ್ದು, ಈ ಪೈಕಿ 586 ಮಕ್ಕಳು ವಿವಿಧ ಹಂತಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈವರೆಗೆ 62 ಮಕ್ಕಳಿಗೆ ಶಸ್ತ್ರಚಿಕಿತ್ಸೆ ಮಾಡಿದ್ದು, 258 ಮಕ್ಕಳ ಮೇಲೆ ನಿಗಾ ವಹಿಸಲಾಗಿದೆ. 142 ಮಕ್ಕಳು ಶ್ರವಣ ಸಾಧನ ಅಳವಡಿಕೆ ಚಿಕಿತ್ಸೆ ಪಡೆಯುತ್ತಿವೆ ಎಂದು ಸಚಿವರು ಮಾಹಿತಿ ನೀಡಿದರು.