IMG 20221207 WA0025

ಕಾಂಗ್ರೆಸ್ : ಜ.8ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’…!

POLATICAL STATE

ಕಾಂಗ್ರೆಸ್ ನಿಂದ ಜ.8ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’

:

ಬೆಂಗಳೂರು: ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ‘ಐಕ್ಯತಾ ಸಮಾವೇಶ’ವನ್ನು ಕಾಂಗ್ರೆಸ್ ಪಕ್ಷ ಜ.8ರಂದು ಚಿತ್ರದುರ್ಗದಲ್ಲಿ ನಡೆಸಲು ತೀರ್ಮಾನಿಸಿದೆ’ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಮಾಜಿ ಅಧ್ಯಕ್ಷರಾದ ಡಾ.ಜಿ. ಪರಮೇಶ್ವರ್ ಅವರು ತಿಳಿಸಿದ್ದಾರೆ.

ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಬುಧವಾರ ಪತ್ರಿಕಾಗೋಷ್ಠಿ ನಡೆಸಿ ಈ ವಿಚಾರವನ್ನು ಪ್ರಕಟಿಸಿದರು. ಈ ಸಂದರ್ಭದಲ್ಲಿ ಕೇಂದ್ರದ ಮಾಜಿ ಸಚಿವರಾದ ಕೆ.ಎಚ್ ಮುನಿಯಪ್ಪ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಸತೀಶ್ ಜಾರಕಿಹೊಳಿ, ಮಾಜಿ ಸಚಿವರಾದ ಹೆಚ್.ಸಿ ಮಹದೇವಪ್ಪ, ಹೆಚ್. ಆಂಜನೇಯ, ಕೊಪ್ಪಳ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಶಿವರಾಜ್ ತಂಗಡಗಿ ಸೇರಿದಂತೆ ಹಲವು ಮುಖಂಡರು ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಸಮಾವೇಶದ ಕುರಿತು ಮಾಹಿತಿ ನೀಡಿದ ಪರಮೇಶ್ವರ್ ಅವರು ಹೇಳಿದ್ದಿಷ್ಟು;

‘ಸ್ವಾತಂತ್ರ್ಯ ಪೂರ್ವದಲ್ಲಿ ಹಾಗೂ ಸ್ವಾತಂತ್ರ್ಯದ ನಂತರ ಸಮಾಜದಲ್ಲಿ ಶೋಷಿತ ವರ್ಗಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ವ್ಯಕ್ತಪಡಿಸಿವೆ. ಅಂದಿನಿಂದ ಇಲ್ಲಿಯವರೆಗೂ ಈ ಸಮುದಾಯಗಳು ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುತ್ತಲೇ ಬಂದಿವೆ. ಕಾಂಗ್ರೆಸ್ ಪಕ್ಷ ಕೂಡ ಅವರ ಕ್ಷೇಮಾಭಿವೃದ್ಧಿಗೆ ಕೇಂದ್ರ ಹಾಗೂ ರಾಜ್ಯದಲ್ಲಿ ಅನೇಕ ಕಾನೂನು ತರುವ ಮೂಲಕ ಭಾರತದಲ್ಲಿ ಅಂಬೇಡ್ಕರ್ ಅವರು ಸಂವಿಧಾನದಲ್ಲಿ ಅಳವಡಿಸಿದ್ದಾರೆ. ಅವುಗಳನ್ನು ಜಾರಿಗೆ ತರಲು ಎಲ್ಲ ಪ್ರಯತ್ನ ಮಾಡಿದೆ.

ಕರ್ನಾಟಕದಲ್ಲಿ ಪರಿಶಿಷ್ಟರ ಅಭಿವೃದ್ಧಿಗೆ, ಬಡತನ ರೇಖೆಯಿಂದ ಹೊರಗೆ ಮುಖ್ಯವಾಹಿನಿಗೆ ತರಲು ಕಾನೂನಾತ್ಮಕವಾಗಿ ಕೆಲಸ ಮಾಡಿಕೊಂಡು ಬಂದಿದೆ. ಇಂದು ಬೇರೆ ಬೇರೆ ಪಕ್ಷಗಳು ಅವರ ಮನವೊಲಿಸುವ ಪ್ರಯತ್ನ ಮಾಡುತ್ತಿವೆ. ಯಾವ ಪಕ್ಷಗಳು ಅವರ ಯೋಗಕ್ಷೇಮಕ್ಕೆ ಪ್ರಯತ್ನಿಸಲಿಲ್ಲ. ಪಕ್ಷದ ಕಚೇರಿಗಳಲ್ಲಿ ಅಂಬೇಡ್ಕರ್ ಅವರ ಪೋಟೋಗಳನ್ನು ಹಾಕಿಕೊಳ್ಳದವರು ಇಂದು ದಲಿತರ ಮನೆಗಳಲ್ಲಿ ಮಲಗಲು, ಬೇರೆ ಹೊಟೇಲ್ ನಿಂದ ಊಟ ತಂರಿಸಿ ತಿಂದು ಬರುತ್ತಿದ್ದಾರೆ.

ಈ ಸಮುದಾಯಗಳನ್ನು ತಪ್ಪು ದಾರಿಗೆ ಎಳೆಯುವ ಪ್ರಯತ್ನ ನಡೆಯುತ್ತಿವೆ. ಹೀಗಾಗಿ ಕಾಂಗ್ರೆಸ್ ಪಕ್ಷದ ಎಲ್ಲ ಮುಖಂಡರುಗಳು ನಮ್ಮ ಜನರಿಗೆ ನಿಮ್ಮ ಜತೆ ಇದ್ದೇವೆ. ನಿಮ್ಮ ಕ್ಷೇಮ ಕಾಪಾಡಲು ನಾವು ಇದ್ದೇವೆ ಎಂದು ಮರುಭರವಸೆ ನೀಡಲು ಸಮಾವೇಶ ಮಾಡಲು ನಾವೆಲ್ಲ ಪೂರ್ವಭಾವಿ ಸಭೆ ಮಾಡಿ ನಿರ್ಧರಿಸಿದ್ದೇವೆ.

ಪೂರ್ವಭಾವಿ ಸಭೆಯಲ್ಲಿ ಎಲ್ಲ ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮುದಾಯಗಳ ನಾಯಕರು ಸೇರಿ ಈ ಸಮಾವೇಶವನ್ನು ಮಾಡಿ ಎಲ್ಲ ಸಮುದಾಯಗಳು ಒಟ್ಟಾಗಿ ಸೇರಬೇಕು ನಿರ್ಧರಿಸಿದ್ದೇವೆ. ಪರಿಶಿಷ್ಟ ಜಾತಿಯಲ್ಲಿ 101 ಹಾಗೂ ಪರಿಶಿಷ್ಟ ಪಂಗಡದಲ್ಲಿ 52 ಸಮುದಾಯಗಳಿದ್ದು, ಈ ಎಲ್ಲ ಸಮುದಾಯಗಳನ್ನು ಒಂದು ವೇದಿಕೆ ಮೇಲೆ ತರಬೇಕು. ಎಲ್ಲರಿಗೂ ಸಮಸ್ಯೆ ಒಂದೇ ಆಗಿದ್ದು, ನಮ್ಮಲ್ಲಿ ವ್ಯತ್ಯಾಸ ಇರಬಾರದು. ನಮ್ಮನ್ನು ಒಡೆದು ಆಳುವ ಪ್ರಯತ್ನ ನಡೆಯುತ್ತಿವೆ. ನಮ್ಮ ರಾಜ್ಯದಲ್ಲಿ ಎರಡೂ ಸಮುದಾಯ ಸೇರಿ 24.1% ಜನರಿದ್ದು, ಸುಮಾರು 1.5 ಕೋಟಿ ಜನ ಇದ್ದಾರೆ.

IMG 20221207 WA0028

ಈ ಸಮಾವೇಶವನ್ನು ಚಿತ್ರದುರ್ಗದಲ್ಲಿ ಜ.8ರಂದು ಭಾನುವಾರ ಸಮಾವೇಶ ಮಾಡಲು ತೀರ್ಮಾನಿಸಲಾಗುವುದು. ಬೆಂಗಳೂರಿನಲ್ಲಿ ಮಾಡಿದರೆ ಉತ್ತರ ಕರ್ನಾಟಕದ ಜನರಿಗೆ ದೂರವಾಗುತ್ತದೆ. ಹೀಗಾಗಿ ಎಲ್ಲರಿಗೂ ಅನುಕೂಲವಾಗುವಂತೆ ಮಧ್ಯ ಕರ್ನಾಟಕ ಭಾಗದಲ್ಲಿರುವ ಚಿತ್ರದುರ್ಗದಲ್ಲಿ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ಈ ಕಾರ್ಯಕ್ರಮಕ್ಕೆ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರು ಭಾಗವಹಿಸಲಿದ್ದು, ಅವರ ಜತೆಗೆ ಎಐಸಿಸಿ ಪ್ರಧಾನಕಾರ್ಯದರ್ಶಿಗಳಾದ ರಣದೀಪ್ ಸಿಂಗ್ ಸುರ್ಜೆವಾಲ, ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್, ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ, ಮೇಲ್ಮನೆ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್, ಪ್ರಚಾರ ಸಮಿತಿಯ ಅಧ್ಯಕ್ಷ ಎಂ.ಬಿ ಪಾಟೀಲ್ ಅವರು ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಶ್ರೀಮತಿ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಪ್ರಿಯಾಂಕ ಗಾಂಧಿ ಅವರಲ್ಲಿ ಯಾರಾದರೂ ಒಬ್ಬರು ಭಾಗವಹಿಸಬೇಕು ಎಂದು ನಾವು ಮನವಿ ಮಾಡುತ್ತೇವೆ. ಕಾರ್ಯಕ್ರಮದಲ್ಲಿ ಈ ಸಮುದಾಯದ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲಾಗುವುದು. ಆ ಮೂಲಕ ಜನಸಮುದಾಯಕ್ಕೆ ಅರಿವು ಮೂಡಿಸಲಾಗುವುದು.

ಪರಿಶಿಷ್ಟ ಜಾತಿ ಹಾಗೂ ಪಂಗಡದವರಿಗೆ ಮೀಸಲಾತಿ ಎಂಬುದು ಭಿಕ್ಷೆಯಲ್ಲ. ಅದು ಈ ಸಮುದಾಯದ ಹಕ್ಕು. ಮೀಸಲಾತಿ ವಿಚಾರವಾಗಿ ಯಾರು ಏನುಬೇಕಾದರೂ ಮಾತನಾಡಬಹುದು. ಆದರೆ ಸಮಾಜದಲ್ಲಿ ಆರ್ಥಿಕವಾಗಿ, ಸಾಮಾಜಿಕ ಹಾಗೂ ಶೈಕ್ಷಣಿಕವಾಗಿ ಹಿಂದುಳಿದ ವರ್ಗದವರು, ಶೋಷಿತರನ್ನು ಸಮಾಜದಲ್ಲಿ ಮುಖ್ಯವಾಹಿನಿಗೆ ತರುವ ಉದ್ದೇಶದಿಂದ ಅಂಬೇಡ್ಕರ್ ಅವರು 10 ವರ್ಷಗಳ ಮೀಸಲಾತಿ ನೀಡಿದ್ದರು. ಅವರು 10 ವರ್ಷಗಳಲ್ಲಿ ಈ ಮೀಸಲಾತಿಯಿಂದ ಈ ಸಮುದಾಯದವರು ಬದಲಾವಣೆ ಕಂಡು ಬೇರೆಯವರಂತೆ ಸಮಾಜದಲ್ಲಿ ಮೇಲೆ ಬರಬಹುದು ಎಂದು ಭಾವಿಸಿದ್ದರು. ಇದು ಸಾಧ್ಯವಾಗದ ಹಿನ್ನೆಲೆಯಲ್ಲಿ ಎಲ್ಲ ಸರ್ಕಾರಗಳು ಮೀಸಲಾತಿ ಮುಂದುವರಿಸಿಕೊಂಡು ಹೋಗುತ್ತಿವೆ. ಇತ್ತೀಚೆಗೆ ಅನೇಕ ಟೀಕೆ ಟಿಪ್ಪಣಿ ಬರುತ್ತಿವೆ. ಎಲ್ಲಿಯವರೆಗೆ ಅಸ್ಪೃಷ್ಯತೆ ಇರುತ್ತದೆ, ಈ ಸಮುದಾಯದ ಏಳಿಗೆ ಸಾಧ್ಯವಾಗುವುದಿಲ್ಲವೋ ಅಲ್ಲಿಯವರೆಗೂ ಮೀಸಲಾತಿ ಮುಂದುವರಿಯಬೇಕು ಎಂದು ನಾವು ಆಗ್ರಹಿಸುತ್ತೇವೆ.

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಜನಸಂಖ್ಯೆ ಅನುಗುಣವಾಗಿ ಬಜೆಟ್ ನಲ್ಲಿ 24.1% ಅನುದಾನ ಮೀಸಲಿಡಲು ನಿರ್ಧರಿಸಲಾಯಿತು. ಇದು ಕೇವಲ ಮಾತಾಗಿ ಉಳಿಯದೇ ಕಾನೂನು ತರಲಾಯಿತು. ಈ ಕಾನೂನಿನಲ್ಲಿ ಈ ಅನುದಾನ ಬಳಕೆ ಮಾಡದಿದ್ದರೆ ಸಂಬಂಧಿಸಿದ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಆ ವರ್ಷ ಖರ್ಚಾಗದ ಮೊತ್ತವನ್ನು ಮುಂದಿನ ವರ್ಷಕ್ಕೆ ಮುಂದುವರಿಸಲಾಗುವುದು ಎಂದು ತಿಳಿಸಲಾಗಿತ್ತು.

ಸಿದ್ದರಾಮಯ್ಯ ಅವರ ಸರ್ಕಾರದ ಕೊನೆಯ ಬಜೆಟ್ ನಲ್ಲಿ 30 ಸಾವಿರ ಕೋಟಿಗೂ ಹೆಚ್ಚು ಅನುದಾನವನ್ನು ಎಸ್ ಸಿಎಸ್ ಪಿ- ಟಿಎಸ್ ಪಿ ಮೂಲಕ ನಮೀಡಿತ್ತು. ಆದರೆ ಕಳೆದ ಮೂರು ವರ್ಷಗಳಿಂದ ಬಿಜೆಪಿ ಸರ್ಕಾರ ಕಾನೂನು ಗಾಳಿಗೆ ತೂರಿದೆ. ಕಳೆದ ಬಜೆಟ್ ಮೊತ್ತ 2.63 ಲಕ್ಷ ಕೋಟಿ ಆಗಿದ್ದು, 24% ಎಂದರೆ 42 ಸಾವಿರ ಕೋಟಿ ಅನುದಾನವನ್ನು ಬಿಜೆಪಿ ಸರ್ಕಾರ ನೀಡಬೇಕಿತ್ತು. ಆದರೆ ಕೇವಲ 29 ಸಾವಿರ ಕೋಟಿ ನೀಡಿದೆ. ನೀಡಿರುವ ಕಡಿಮೆ ಅನುದಾನವನ್ನು ಸರಿಯಾಗಿ ಬಳಕೆ ಮಾಡಿಕೊಂಡಿಲ್ಲ.

ಈಗ ಬಿಜೆಪಿ ಸರ್ಕಾರ ಮೀಸಲಾತಿ ಹೆಚ್ಚಳ ವಿಚಾರವಾಗಿ ಪ್ರಯಾರ ಪಡೆಯುತ್ತಿದೆ. ಪರಿಶಿಷ್ಟ ಜಾತಿಯವರಿಗೆ 15% ರಿಂದ 17% ಹಾಗೂ ಪರಿಶಿಷ್ಟ ಪಂಗಡದವರಿಗೆ 3%ರಿಂದ 7% ಮೀಸಲಾತಿ ಹೆಚ್ಚಳ ನಾವು ಮಾಡಿದ್ದೇವೆ ಎಂದು ಬೊಬ್ಬೆ ಹಾಕುತ್ತಿದ್ದಾರೆ. ಆದರೆ ಮೂಲತಃ ಇದಕ್ಕೆ ಅಡಿಗಲ್ಲು ಹಾಕಿದ್ದು ಕಾಂಗ್ರೆಸ್ ಪಕ್ಷ. ಸಮ್ಮಿಶ್ರ ಸರ್ಕಾರ ಅವಧಿಯಲ್ಲಿ ಎಸ್ ಟಿ ಸಮುದಾಯದ ಸ್ವಾಮೀಜಿ ಹಾಗೂ ಶಾಸಕರು ಹೋರಾಟ ಆರಂಭಿಸಿದಾಗ, ನಮ್ಮ ಸರ್ಕಾರ ಭರವಸೆ ನೀಡಿ ನಾಗಮೋಹನ್ ದಾಸ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಿತು. ಈ ಸಮಿತಿ ವರದಿ ಅಷ್ಠಾನ ಮಾಡುವ ಸಮಯಕ್ಕೆ ಸರ್ಕಾರ ಬಿದ್ದು ಹೋಯಿತು. ಅಂದು ನಮ್ಮ ಸರ್ಕಾರ ಮುಂದುವರಿದಿದ್ದರೆ ನಾವೇ ಇದನ್ನು ಜಾರಿ ಮಾಡುತ್ತಿದ್ದೆವು.

ಈಗ ನಮ್ಮ ಒತ್ತಾಯ ಈ ಮೀಸಲಾತಿಯನ್ನು ಕಾನೂನೂ ಚೌಕಟ್ಟಿನಲ್ಲಿ ತರಬೇಕು. ಸಂವಿಧಾನದ 9ನೇ ಷೆಡ್ಯೂಲ್ ನಲ್ಲಿ ಸೇರಿಸಬೇಕು. ಕೇಂದ್ರ ಸರ್ಕಾರ ಇದಕ್ಕೆ ಒಪ್ಪಿಗೆ ನೀಡದಿದ್ದರೆ ಇದು ಅನುಷ್ಠಾನ ಆಗುವುದಿಲ್ಲ. ಕೇವಲ ಹೇಳಿಕೆಗೆ ಇದು ಸೀಮಿತವಾಗುತ್ತದೆ.

ಇನ್ನು ವಸತಿ ನಿರ್ಮಾಣ, ವಿದ್ಯಾರ್ಥಿ ವೇತನ ವಿಚಾರ ಚರ್ಚೆ ಆಗಬೇಕಿದೆ. ಸಾಕಷ್ಟು ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತ್ತಿಲ್ಲ. ಇದರಿಂದ ಹಾಸ್ಟೆಲ್ ಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ತೊಂದರೆ ಆಗುತ್ತಿದೆ. ಮೀಸಲಾತಿ ಹೆಚ್ಚಳದಲ್ಲಿ ಪ್ರಚಾರ ಪಡೆಯುತ್ತಿರುವ ಸರ್ಕಾರ ಈ ಸಮಸ್ಯೆಗಳನ್ನು ಯಾಕೆ ಬಗೆಹರಿಸುತ್ತಿಲ್ಲ. ಕೆಐಡಿಬಿಯಲ್ಲಿ ಮೀಸಲಾತಿ, ಗುತ್ತಿಗೆಯಲ್ಲಿ ಮೀಸಲಾತಿ ನೀಡಬೇಕು ಎಂದು ನಾವು ಕಾನೂನು ಮಾಡಿದ್ದೆವು. ಈಗ ಅದನ್ನು ಪಾಲಿಸುತ್ತಿಲ್ಲ. ಈ ಎಲ್ಲ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಬೇಕಿದೆ.

ನಮ್ಮ ಎಲ್ಲ ಸಮುದಾಯ ಐಕ್ಯತೆಯಿಂದ ಒಂದು ವೇದಿಕೆಗೆ ಬಂದು ಸಮಸ್ಯೆ ಬಗೆಹರಿಸಬೇಕು. ಕಾಂಗ್ರೆಸ್ ಪಕ್ಷ ನಿಮ್ಮ ಜತೆ ಇದ್ದೇವೆ ಎಂದು ಭರವಸೆ ನೀಡಬೇಕು. ಬಿಜೆಪಿ ಹಾಗೂ ಜೆಡಿಎಸ್ ನಾಯಕರು ದಲಿತರ ಮನೆಯಲ್ಲಿ ಮಲಗುವ ನಾಟಕ ಮಾಡುತ್ತಿದ್ದಾರೆ. ಈ ನಾಟಕ ನಂಬಬಾರದು ಎಂದು ನಾವು ಕರೆ ನೀಡಬೇಕಿದೆ.

ಸಮಾವೇಶದ ಸಿದ್ಧತೆಯನ್ನು ಐಕ್ಯತಾ ಸಮಾವೇಶ ಎಂದು ಕರೆಯುತ್ತಿದ್ದೇವೆ. ಕಾರಣ ನಮ್ಮಲ್ಲಿ ಬೇರೆ ಬೇರೆ ಜಾತಿ ಸಮುದಾಯಗಳಿದ್ದು, ಎಲ್ಲ ಸಮುದಾಯಗಳು ಒಂದಾಗಬೇಕು ಎಂದು ಈ ಹೆಸರಿಟ್ಟಿದ್ದೇವೆ. ಈ ಸಮಾವೇಶದ ತಯಾರಿಗೆ ವಿವಿಧ ಸಮಿತಿ ರಚಿಸುತ್ತೇವೆ. ಕಾಂಗ್ರೆಸ್ ಪಕ್ಷದ ಮೂಲಕ ನಮ್ಮ ಐಕ್ಯತೆ ಪ್ರದರ್ಶನವಾಗಬೇಕು ಎಂದು ಈ ಸಮಾವೇಶ ಮಾಡಲಾಗುತ್ತಿದೆ.

IMG 20221207 WA0027

ಕೆ.ಎಚ್. ಮುನಿಯಪ್ಪ:

ನಾವು ಪರಿಶಿಷ್ಟ ಜಾತಿಯಲ್ಲಿ 101, ಪಂಗಡದಲ್ಲಿ 52 ಸಮುದಾಯಗಳಿದ್ದು, ನಮ್ಮನ್ನು ಒಡೆದು ಆಳುವ ವ್ಯವಸ್ಥೆಯನ್ನು ಬಿಜೆಪಿ ರೂಪಿಸುತ್ತಿದೆ. ಹೀಗಾಗಿ ನಾವು ಒಂದಾಗಬೇಕು. ಗಾಂಧೀಜಿ ಅವರ ಸಿದ್ಧಾಂತ, ಅಂಬೇಡ್ಕರ್ ಅವರ ಸಂವಿಧಾನದ ಆಶಯದಂತೆ ಎಲ್ಲರಿಗೂ ಸಮಾನತೆ ನೀಡುವುದು ಕಾಂಗ್ರೆಸ್ ಪಕ್ಷದಿಂದ ಮಾತ್ರ ಸಾಧ್ಯ. ಇದನ್ನು ಎಲ್ಲ ಸಮುದಾಯಗಳಿಗೆ ಅರಿವು ಮೂಡಿಸಬೇಕು.

ಇಂದಿರಾ ಗಾಂಧಿ ಅವರ ಕಾಲದಲ್ಲಿ ನಡೆದ ಕ್ರಾಂತಿಕಾರಕ ಬದಲಾವಣೆಯನ್ನು ಮತ್ತೆ ತರುವ ಮೂಲಕ ದೇಶದಲ್ಲಿ 1.5 ಕೋಟಿ ಜನರನ್ನು ತಲುಪಬೇಕಿದೆ. ಐಕ್ಯತಾ ಸಮಾವೇಶ ಮೂಲಕ ಎಲ್ಲ ಸಮುದಾಯದವರಿಗೆ ಮನವರಿಕೆ ಮಾಡಬೇಕು. ಎಲ್ಲರೂ ಕಾಂಗ್ರೆಸ್ ಬೆಂಬಲಿಸುವಂತೆ ಮಾಡಬೇಕು.

IMG 20221207 WA0026

ಸತೀಶ್ ಜಾರಕಿಹೋಳಿ:

ಚಿತ್ರದುರ್ಗದಲ್ಲಿ ಜ.8ರಂದು ಪರಿಶಿಷ್ಟ ಜಾತಿ ಹಾಗೂ ಪಂಗಡಗಳ ಸಮಾವೇಶ ಮಾಡಲು ತೀರ್ಮಾನಿಸಲಾಗಿದೆ. ನಾವು ಎಲ್ಲ ಸಮುದಾಯ ಒಂದಾಗಬೇಕು ಹಾಗೂ ಒಂದು ವೇದಿಕೆಯಲ್ಲಿ ಸಮಸ್ಯೆ ಬಗ್ಗೆ ಧ್ವನಿ ಎತ್ತಬೇಕು ಎಂದು ತೀರ್ಮಾನಿಸಲಾಗಿದೆ. ಈ ಸಮಾವೇಶಕ್ಕೆ 5 ಲಕ್ಷ ಜನ ಸೇರುವ ನಿರೀಕ್ಷೆ ಇದೆ. ಈ ಐತಿಹಾಸಿಕ ಸಮಾವೇಶ ಜಾಗಕ್ಕೆ ಹೋಗಿ ನಾವು ಪರಿಶೀಲನೆ ಮಾಡುತ್ತೇವೆ.

ಸಿದ್ದರಾಮಯ್ಯ ಅವರ ಕಾಲದಲ್ಲಿ ಈ ವರ್ಗಕ್ಕೆ ಸಿಕ್ಕಿದ್ದ ಯೋಜನೆ ಮತ್ತೆ ಜಾರಿ ಆಗಬೇಕು ಎಂದು ಈ ವೇದಿಕೆ ಮೂಲಕ ಆಗ್ರಹಿಸುತ್ತೇವೆ. ನಾವೆಲ್ಲ ಒಗ್ಗಟ್ಟಾಗಿ ಇರಬೇಕು, ಒಂದೇ ಪಕ್ಷದ ಜತೆ ಇರಬೇಕು ಎಂಬ ಸಂದೇಶ ನೀಡಲು ಸಮಾವೇಶ ಮಾಡುತ್ತಿದ್ದೇವೆ.

ದಲಿತರ ಮೇಲಿನ ದೌರ್ಜನ್ಯ ಪ್ರಕರಣ ಹೆಚ್ಚುತ್ತಿದ್ದು, ಈಗ ದಲಿತರ ಓಲೈಕೆಗೆ ಪಕ್ಷ ಪ್ರಯತ್ನಿಸುತ್ತಿದೆಯೇ ಎಂಬ ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ‘ನಾವೇ ದಲಿತರಾಗಿದ್ದೇವೆ. ನಾವು ಯಾರನ್ನೂ ಓಲೈಸುವ ಅಗತ್ಯವಿಲ್ಲ. ದಲಿತರ ಮೇಲಿನ ದೌರ್ಜನ್ಯ, ಹತ್ಯೆಗಳಾಗಿದ್ದು, ಇವರ ರಕ್ಷಣೆಯಲ್ಲಿ ಸರ್ಕಾರ ವಿಫಲವಾಗಿದೆ. ಕಾಂಗ್ರೆಸ್ ಪಕ್ಷವಾಗಿ ನಮ್ಮ ಅಜೆಂಡಾ ದಲಿತರ ರಕ್ಷಣೆಯಾಗಿವೆ. ಅವರ ರಕ್ಷಣೆಗೆ ಕಾನೂನು ತಂದಿರುವುದು ಕಾಂಗ್ರೆಸ್ ಪಕ್ಷ. ಅದನ್ನು ಅನುಷ್ಠಾನ ಮಾಡುವುದು ಸರ್ಕಾರದ ಕೆಲಸ. ನಮ್ಮ ಸರ್ಕಾರದ ಇದ್ದಾಗ ದೌರ್ಜನ್ಯ ಆದಾಗ ನಾವು ಧ್ವನಿ ಎತ್ತಿದ್ದೇವೆ. ನಾವು ಇಂತಹ ಪ್ರಕರಣದಲ್ಲಿ ಹೇಳಿಕೆ ನೀಡಿ ಸುಮ್ಮನೆ ಕೂತಿಲ್ಲ. ಸಂತ್ರಸ್ತರ ಮನೆಗೆ ಹೋಗಿ ಅವರ ಸಾಂತ್ವಾನ ಹೇಳಿದ್ದೇವೆ’ ಎಂದು ತಿಳಿಸಿದರು.

ಐಕ್ಯತಾ ಸಮಾವೇಶದಲ್ಲಿ ದಲಿತರ ರಾಜಕೀಯ ಆಕಾಂಕ್ಷೆಗಳನ್ನು ವ್ಯಕ್ತಪಡಿಸುತ್ತೀರಾ ಎಂಬ ಪ್ರಶ್ನೆಗೆ, ‘ಮೀಸಲಾತಿ ನಮ್ಮ ಹಕ್ಕು. ರಾಜಕೀಯದಲ್ಲಿ ನಾವು ಅದನ್ನು ಆಗ್ರಹಿಸುತ್ತೇವೆ. ಕಾಂಗ್ರೆಸ್ ಪಕ್ಷದ ಚೌಕಟ್ಟಿನಲ್ಲಿ ನಾವು ಪಕ್ಷದಲ್ಲಿ ಕೋರುತ್ತೇವೆ’ ಎಂದು ತಿಳಿಸಿದರು.

ದಲಿತರಲ್ಲಿ ಮುಖ್ಯಮಂತ್ರಿ ಆಗುವ ಅರ್ಹತೆ ಇಲ್ಲವೆ ಎಂಬ ಪ್ರಶ್ನೆಗೆ, ‘ನಾವೆಲ್ಲರೂ ಅರ್ಹರಿದ್ದು, ಸಮಯ ಬಂದಾಗ ನಾವು ಅದನ್ನು ಹೈಕಮಾಂಡ್ ಗಮನಕ್ಕೆ ತರುತ್ತೇವೆ. ನಾವು ಕಾಂಗ್ರೆಸ್ ಪಕ್ಷದ ನಿಯಮಗಳಿಗೆ ಬದ್ಧರಾಗಿದ್ದು, ಕಾಂಗ್ರೆಸ್ ನಮಗೆ ರಕ್ಷಣೆ ನೀಡಿದೆ. ಸಮಾಜದ ಮುಖ್ಯವಾಹಿನಿಗೆ ತರಲು ಕಾಂಗ್ರೆಸ್ ಶ್ರಮಿಸಿದೆ. ಮೊದಲು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರೋಣ ಮುಖ್ಯಮಂತ್ರಿ ಆಯ್ಕೆ ವಿಚಾರ ಹೈಕಮಾಂಡ್ ಗೆ ಬಿಡೋಣ. ಇಲ್ಲಿ ವೈಯಕ್ತಿಕ ಪ್ರಶ್ನೆ ಉದ್ಭವಿಸುವುದಿಲ್ಲ. ನಮ್ಮ ಪ್ರಶ್ನೆ ನಮ್ಮ ಒಗ್ಗಟ್ಟು ಪ್ರದರ್ಶಿಸಿ ಕಾಂಗ್ರೆಸ್ ಅಧಿಕಾರಕ್ಕೆ ತರಬೇಕು. ಬಡವರಿಗೆ ಅಧಿಕಾರ ಕೊಟ್ಟು ಅವರನ್ನು ಸಧೃಡಗೊಳಿಸಲು ನಾವು ಕಾಂಗ್ರೆಸ್ ಪಕ್ಷ ನಮ್ಮ ಜನರಿಗೆ ನೀಡುವ ಮರುಭರವಸೆ ಇದಾಗಿದೆ. ಇದನ್ನು ಗಮನಿಸಿದ ನಂತರ ಹೈಕಮಾಂಡ್.’ ಎಂದು ತಿಳಿಸಿದರು.

ಗಡಿ ವಿವಾದದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ತ್ತರಿಸಿದ ಸತೀಶ್ ಜಾರಕಿಹೋಳಿ ಅವರು, ‘ಇದು ಆಗಬಾರದಿತ್ತು. ಈ ಬಗ್ಗೆ ಎರಡು ಸರ್ಕಾರಗಳು ಚರ್ಚೆ ಮಾಡಬೇಕು. ಇದರಿಂದ ಜನಸಾಮಾನ್ಯರಿಗೆ ತೊಂದರೆ ಆಗುತ್ತಿದೆ. ಎರಡು ಸರ್ಕಾರಗಳು ಸಮಸ್ಯೆ ಬಗೆಹರಿಸಲು ಪ್ರಯತ್ನಿಸಬೇಕು’ ಎಂದು ಹೇಳಿದರು.

ಮಹಾರಾಷ್ಟ್ರ ಮಂತ್ರಿಗಳು ರಾಜ್ಯದ ಜಿಲ್ಲೆಗೆ ಭೇಟಿ ನೀಡುವ ಬಗ್ಗೆ ಹಠತೊಟ್ಟಿರುವ ಬಗ್ಗೆ ಕೇಳಿದಾಗ, ‘ಅವರು ನಮ್ಮ ಜಿಲ್ಲೆಗೆ ಬರಬಹುದು. ಆದರೆ ಇಲ್ಲಿಗೆ ಬಂದು ಸಭೆ ಮಾಡಿ ಜನರ ಭಾವನೆ ಕೆರಳಿಸುವಂತಿಲ್ಲ. ಅದು ತಪ್ಪಾಗುತ್ತದೆ. ಅವರು ಬಂದು ಸರ್ಕಾರದ ಜತೆ ಸಮಸ್ಯೆ ಬಗ್ಗೆ ಚರ್ಚೆ ಮಾಡಲಿ’ ಎಂದರು.

ಕಾಂಗ್ರೆಸ್ ಕಾಲದಲ್ಲಿ ಗಡಿ ವಿಚಾರವಾಗಿ ರಕ್ತಪಾತ ಆಗಿತ್ತು ಎಂಬ ಗೃಹ ಸಚಿವರ ಹೇಳಿಕೆ ಬಗ್ಗೆ ಕೇಳಿದಾಗ, ’40 ವರ್ಷಗಳ ಹಿಂದೆ ಇದ್ದ ಪರಿಸ್ಥಿತಿ ಬೇರೆ, ಈಗಿನ ಪರಿಸ್ಥಿತಿ ಬೇರೆ. ಹಿಂದೆ ಮರಾಠಿ ಮಾತನಾಡಿದರೆ ಹಲ್ಲೆ ಮಾಡುತ್ತಿದ್ದರು. ಆದರೆ ಈಗ ಅಂತಹ ಪರಿಸ್ಥಿತಿ ಇಲ್ಲ. ಈ ರೀತಿ ಪರಿಸ್ಥಿತಿ ಸುಧಾರಣೆಯಲ್ಲಿ ಕಾಂಗ್ರೆಸ್ ಪಕ್ಷದ ಕೊಡುಗೆ ಇದೆ. ಮರಾಠಿಗರು ಹಾಗೂ ಕನ್ನಡಿಗರ ಮನಸ್ಥಿತಿ ಸುಧಾರಿಸಿದ್ದು, ಕೇವಲ ರಾಜಕೀಯ ಮನಸ್ಥಿತಿ ಮಾತ್ರ ಸುಧಾರಿಸಬೇಕಿದೆ’ ಎಂದು ತಿಳಿಸಿದರು.