IMG 20221226 WA0016

ಬೆಳಗಾವಿ :ಎಸ್.ಸಿ. ಹಾಗೂ ಎಸ್.ಟಿ. ಮೀಸಲು ಹೆಚ್ಚಳ ವಿಧೇಯಕವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ….!

Genaral STATE

ಎಸ್.ಸಿ. ಹಾಗೂ ಎಸ್.ಟಿ. ಮೀಸಲು ಹೆಚ್ಚಳ ವಿಧೇಯವಿಧಾನಸಭೆಯಲ್ಲಿ ಸರ್ವಾನುಮತದ ಅಂಗೀಕಾರ
ಬೆಳಗಾವಿ ಸುವರ್ಣಸೌಧ ಡಿ.26 (ಕರ್ನಾಟಕ ವಾರ್ತೆ): ಶಿಕ್ಷಣ ಮತ್ತು ಉದ್ಯೋಗದಲ್ಲಿ ಪರಿಶಿಷ್ಟ ಜಾತಿಯ ಮೀಸಲು ಪ್ರಮಾಣವನ್ನು ಶೇ. 15 ರಿಂದ 17ಕ್ಕೆ ಹಾಗೂ ಪರಿಶಿಷ್ಟ ಪಂಗಡದ ಮೀಸಲು ಪ್ರಮಾಣವನ್ನು ಶೇ. 3 ರಿಂದ 7ಕ್ಕೆ ಹೆಚ್ಚಿಸುವ 2022ನೇ ಸಾಲಿನ ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳಿಗೆ ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಹಾಗೂ ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಮತ್ತು ಹುದ್ದೆಗಳಲ್ಲಿ ಮೀಸಲಾತಿ ವಿಧೇಯಕಕ್ಕೆ ವಿಧಾನ ಸಭೆಯಲ್ಲಿ ಇಂದು ಸರ್ವಾನುಮತದ ಅಂಗೀಕಾರ ದೊರೆಯಿತು.
ವಿಧಾನಸಭೆಯಲ್ಲಿಂದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಜೆ.ಸಿ. ಮಾಧುಸ್ವಾಮಿ ಅವರು ಮಂಡಿಸಿದ ವಿಧೇಯಕಕ್ಕೆ ಆಡಳಿತ ಹಾಗೂ ಪ್ರತಿಪಕ್ಷಗಳ ಎಲ್ಲಾ ಸದಸ್ಯರ ಒಕ್ಕೋರಲಿನ ಸಹಮತ ವ್ಯಕ್ತಪಡಿಸಿ ಸರ್ವಾನುಮತದ ಬೆಂಬಲ ಸೂಚಿಸಿದರು.
ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಧೇಯಕವು ಸರ್ವಾನುಮತದಿಂದ ಅಂಗೀಕಾರಗೊಂಡು ಅನುಮೋದನೆ ಪಡೆದಿದೆ ಎಂದು ಪ್ರಕಟಿಸಿದರು.

IMG 20221226 WA0035


ಇದಕ್ಕೂ ಮುನ್ನ ನಿಯಮ 69 ರಡಿ ನಡೆದ ಚರ್ಚೆಯಲ್ಲಿ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ, ಸದಸ್ಯರಾದ ಹೆಚ್.ಕೆ. ಪಾಟೀಲ, ಬಂಡೆಪ್ಪ ಕಾಶೆಂಪುರ, ಡಾ. ಕೆ. ಅನ್ನದಾನಿ, ಕೆ.ಎಂ. ಶಿವಲಿಂಗೇಗೌಡ, ಪ್ರಿಯಾಂಕ್ ಖರ್ಗೆ ಅವರು ಮಾತನಾಡಿ, ಮೀಸಲಾತಿಯು ಕೇವಲ ಸರ್ಕಾರಿ ಹುದ್ದೆಗಳಿಗೆ ಸೀಮಿತವಾಗದೇ ಖಾಸಗಿ ಕ್ಷೇತ್ರದ ಉದ್ಯೋಗಗಳು ಮತ್ತು ಸರ್ಕಾರಿ ಹೊರಗುತ್ತಿಗೆ ಹುದ್ದೆಗಳಿಗೂ ಅನ್ವಯವಾಗಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಮಹೇಶಕುಮಾರ, ಸಿ.ಟಿ. ರವಿ ಮೊದಲಾದವರು ಮಾತನಾಡಿದರು.