IMG 20201101 WA0020

R R ಉಪಚುನಾವಣೆ: ಮುನಿರತ್ನಂ ನಾಯ್ಡು ಅನರ್ಹಗೊಳಿಸಿ- ಡಿಕೆಶಿ

STATE Genaral

ವೆಚ್ಚ ಮಿತಿ ದಾಟಿ ಸೆಟ್ಟಾಪ್ ಬಾಕ್ಸ್ ಹಂಚಿಕೆ, ನಕಲಿ ಮತ ಕಾರ್ಡ್ ಸೃಷ್ಟಿ, ಹಣ ಹಂಚಿಕೆ; ಮುನಿರತ್ನಂ ನಾಯ್ಡು ಅನರ್ಹಗೊಳಿಸಲು ಡಿ.ಕೆ ಶಿವಕುಮಾರ್ ಆಗ್ರಹ

ಬೆಂಗಳೂರು :- ರಾಜರಾಜೇಶ್ವರಿ ನಗರ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಮುನಿರತ್ನ ನಾಯ್ಡು ಅವರನ್ನು ವೆಚ್ಚ ಮಿತಿ ದಾಟಿ ಸೆಟ್ ಅಪ್ ಬಾಕ್ಸ್ ವಿತರಣೆ, ನಕಲಿ ಮತದಾರರ ಸೃಷ್ಟಿ, ಅಕ್ರಮ ಹಣ ಹಂಚಿಕೆ ಹಿನ್ನೆಲೆಯಲ್ಲಿ ಈ ಉಪಚುನಾವಣೆ ಕಣದಿಂದ ತಕ್ಷಣ ಅನರ್ಹಗೊಳಿಸಬೇಕು’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಚುನಾವಣಾ ಆಯೋಗವನ್ನು ಆಗ್ರಹಿಸಿದ್ದಾರೆ.

ಸೋಮವಾರ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿದ ಶಿವಕುಮಾರ್ ಅವರು ಈ ಎಲ್ಲ ಅಕ್ರಮಗಳ ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ವೇಳೆ ಅವರು ಹೇಳಿದ್ದಿಷ್ಟು:

‘ರಾಜರಾಜೇಶ್ವರಿ ಚುನಾವಣಾ ಕ್ಷೇತ್ರದಲ್ಲಿ ಅಧಿಕಾರ ದುರ್ಬಳಕೆ ಆಗುತ್ತಿದೆ. ಅದನ್ನು ಎಲ್ಲರೂ ನೋಡಿದ್ದಾರೆ. ನಾವು ಕೂಡ ಸರ್ಕಾರ, ಚುನಾವಣಾ ಆಯೋಗ, ಪೊಲೀಸ್ ಆಯುಕ್ತರ ಗಮನಕ್ಕೆ ತಂದಿದ್ದೇವೆ.

*ವೆಚ್ಚ ಮಿತಿಗೂ ಹೆಚ್ಚು ಖರ್ಚು:*

ಬಿಜೆಪಿ ಅಭ್ಯರ್ಥಿ ಮುನಿರತ್ನಂ ನಾಯ್ಡು ಅವರು ಮಾಧ್ಯಮಗಳ ಜತೆ ಮಾತನಾಡುವಾಗ 34 ಸಾವಿರ ಸೆಟ್ಟಾಪ್ ಬಾಕ್ಸ್ ಹಂಚಿರುವುದಾಗಿ ಒಪ್ಪಿಕೊಂಡಿದ್ದಾರೆ.

ಚುನಾವಣಾ ಆಯೋಗ, ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದು, ತನಿಖೆ ನಡೆಸುವುದಾಗಿ ಹೇಳಿದೆ.

ನಾವು 50 ಸಾವಿರ ಸೆಟ್ ಟಾಪ್ ಬಾಕ್ಸ್ ಅಂತಾ ಹೇಳಿದ್ದೆವು. ಆದರೆ 34 ಸಾವಿರ ಕೊಟ್ಟಿದ್ದೇನೆ ಅಂತಾ ಬಿಜೆಪಿ ಅಭ್ಯರ್ಥಿ ಒಪ್ಪಿಕೊಂಡಿದ್ದಾರೆ.

34 ಸಾವಿರ ಸೆಟ್ ಟಾಪ್ ಬಾಕ್ಸ್ ಗೆ ತಲಾ ಸಾವಿರದಂತೆ ಅಂದಾಜು 3.40 ಕೋಟಿ ರೂಪಾಯಿ ಆಗುತ್ತದೆ. ಇದನ್ನು ಉಚಿತವಾಗಿ ಹಂಚಿದ್ದಾರೆ. ಕನೆಕ್ಷಬ್ ಒಂದು ತಿಂಗಳ ಶುಲ್ಕ 150 ರೂ. ಫ್ರೀ ಕೊಟ್ಟರೂ ಹೆಚ್ಚುವರಿ 51 ಲಕ್ಷ ರುಪಾಯಿ ಆಗುತ್ತದೆ.

ಚುನಾವಣಾ ಆಯೋಗ ಹಾಗೂ ರಿಟರ್ನಿಂಗ್ ಆಫೀಸರ್ ಸೇರಿ ಈ ಬಗ್ಗೆ ಗಂಭೀರವಾಗಿ ಪರಿಗಣಿಸಿ ಜನಪ್ರತಿನಿಧಿ ಕಾಯ್ದೆ ಸೆಕ್ಷನ್ 173 (62) ಪ್ರಕಾರ ಅವರನ್ನು ಇವತ್ತೇ ಚುನಾವಣಾ ಸ್ಪರ್ಧೆಯಿಂದ ಅನರ್ಹಗೊಳಿಸಬೇಕು.

ಅವರ ಪಕ್ಷದಲ್ಲಿರುವ ಪಂಡಿತರಾಗಲಿ ಹಾಗೂ ನಾಯಕರಾಗಲಿ ಇದನ್ನು ಮುಚ್ಚಿಕೊಳ್ಳಲು ಸಾಧ್ಯವಿಲ್ಲ. ಅಭ್ಯರ್ಥಿಯೇ ಈ ಅಕ್ರಮವನ್ನು ಒಪ್ಪಿಕೊಂಡಿದ್ದು, ಸೆಟ್ ಟಾಪ್ ಬಾಕ್ಸ್ ಮೇಲೆ ಅವರ ಫೋಟೋ, ಹೆಸರು ಇದೆ. ಜತೆಗೆ ಟಿವಿ ಆನ್ ಮಾಡಿದ ತಕ್ಷಣ ಬರುವ ಅವರ ಫೋಟೋ ಮತ್ತು ಹೆಸರು ಜಾಹೀರಾತು ವೆಚ್ಚಕ್ಕೆ ಸೇರುತ್ತದೆ.

ರಾಜ್ಯದ ಎಲ್ಲ ರಾಜಕಾರಣಿಗಳು ಈ ಮಟ್ಟದ ಚುನಾವಣಾ ಅಕ್ರಮ ಕಂಡು ಅಚ್ಚರಿಗೊಂಡಿದ್ದಾರೆ. ಇದೊಂದನ್ನು ಬಿಜೆಪಿ ಅಭ್ಯರ್ಥಿ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ.

ಅಕ್ರಮ ಒಪ್ಪಿಕೊಂಡಿರುವ ಅಭ್ಯರ್ಥಿ ಚುನಾವಣಾ ಕಣದಲ್ಲಿ ಇರಬೇಕೆ ಬೇಡವೇ ಎಂಬುದನ್ನು ಪ್ರಜ್ಞಾವಂತ ಮತದಾರ ಯೋಚಿಸಬೇಕು.

*ನಕಲಿ ಮತಗಳು:*

ನನ್ನ 40 ವರ್ಷದ ರಾಜಕಾರಣದಲ್ಲಿ ಅಚ್ಚರಿಯಾಗುವ ರೀತಿ ಬಿಜೆಪಿ ಅಭ್ಯರ್ಥಿ ನಕಲಿ ಮತದಾರರನ್ನು ಮತದಾರರ ಪಟ್ಟಿಯಲ್ಲಿ ಸೇರಿಸಿ ಅಕ್ರಮ ಮಾಡಿದ್ದಾರೆ. ನಮ್ಮ ಕಾರ್ಯಕರ್ತರು ಕಳೆದೊಂದು ತಿಂಗಳಿಂದ ಮನೆ ಮನೆಗೂ ಹೋಗಿ ಸಮೀಕ್ಷೆ ನಡೆಸಿದ್ದು, ಇದರಲ್ಲಿ 42 ಸಾವಿರಕ್ಕೂ ಹೆಚ್ಚು ನಕಲಿ ಮತದಾರರ ಹೆಸರನ್ನು ಪಟ್ಟಿಯಲ್ಲಿ ಸೇರಿಸಲಾಗಿದೆ.

ಖಾಲಿ ನಿವೇಶನಗಳ ವಿಳಾಸದಲ್ಲಿ ನಕಲಿ 5 ರಿಂದ 10 ಮತದಾರರ ಹೆಸರು ಸೇರಿಸಲಾಗಿದೆ. ಕೊಟ್ಟಿಗೆಪಾಳ್ಯದ ಡೋಬಿಘಾಟ್ ನ ಖಾಲಿ ಜಾಗದ ಶೆಡ್ ವೊಂದರಲ್ಲೇ ಬರೋಬ್ಬರಿ 56 ಮಂದಿ ಹೆಸರು ಸೇರಿಸಲಾಗಿದೆ. ಆಂಧ್ರಪ್ರದೇಶದ ಚಿತ್ತೂರು, ತಮಿಳುನಾಡಿನಿಂದ ನಕಲಿ ಮತದಾರರನ್ನು ಕರೆದುಕೊಂಡು ಬಂದು ಇಲ್ಲಿ ಹೆಸರು ಸೇರಿಸಿದ್ದಾರೆ.

ಒಂದು ಮನೆಯಲ್ಲಿ ಇಬ್ಬರು ಮೂವರು ಸದಸ್ಯರಿದ್ದರೆ ಅವರಿಗೆ ಗೊತ್ತಿಲ್ಲದೆ ಸುಮಾರು ಐದು, ಹತ್ತು, ಹದಿನೈದು ಜನರ ಹೆಸರನ್ನು ಹೆಚ್ಚುವರಿಯಾಗಿ ಸೇರಿಸಲಾಗಿದೆ. ನಮ್ಮ ಕಾರ್ಯಕರ್ತರು ನಿಮ್ಮ ಮನೆಯಲ್ಲಿ ಎಂಟು ಮತ ಇದೆ ಎಂದು ಕೇಳಿದರೆ, ಮನೆಯವರೇ ಗಾಬರಿ ಬಿದ್ದು, ಇರುವುದು ಬರೀ ಇಬ್ಬರು, ಮೂವರು ಮಾತ್ರ ಎಂದಿದ್ದಾರೆ.

ಈ ಎಲ್ಲದರ ಬಗ್ಗೆ ನನ್ನ ಬಳಿ ದಾಖಲೆ ಇದೆ. ಇಲ್ಲಿ ಬಂದು ಸುಮ್ಮನೆ ಆರೋಪ ಮಾಡುತ್ತಿಲ್ಲ. ಸಾಕ್ಷಿ ಸಮೇತ ಹೇಳುತ್ತಿದ್ದೇನೆ. ಮಾಧ್ಯಮಗಳು ಅಲ್ಲೆಲ್ಲ ಹೋಗಿ ಪರಿಶೀಲಿಸಬೇಕು. ನಾನು ಹೇಳಿರುವುದು ತಪ್ಪಾಗಿದ್ದರೆ ತಾವು ಬೆಳಕು ಚೆಲ್ಲಬೇಕು.

ಹೀಗೆ ರಾಜರಾಜೇಶ್ವರಿ ವಾರ್ಡ್ 160 ಖಾಲಿ ನಿವೇಶನದಲ್ಲಿ, ಬೂತ್ 362 ಮನೆ ಸಂ.14 ರಲ್ಲಿ 15 ನಕಲಿ ಮತಗಳು ಸೃಷ್ಟಿಯಾಗಿವೆ. ಇವು ಕೇವಲ ಉದಾಹರಣೆ. ಇಂತಹ ನಕಲಿ ಮತಗಳು ಎಲ್ಲೆಡೆ ಇವೆ. ಎಲ್ಲಿ ಎಷ್ಟು ಜನ ಇದ್ದಾರೆ, ಯಾವುದು ಖಾಲಿ ನಿವೇಶನ ಅಂತಾ ವಿಡಿಯೋ ಮಾಡಿಸಿದ್ದೇನೆ.

ಈ ಅಕ್ರಮದಲ್ಲಿ ಅಧಿಕಾರಿಗಳು ಷಾಮೀಲಾಗಿದ್ದಾರೆ. ಅವರ ನೆರವಿಲ್ಲದೆ ಇದನ್ನು ಮಾಡಲು ಸಾಧ್ಯವೇ ಇಲ್ಲ.

ಈ ಎಲ್ಲ ಅಕ್ರಮಗಳ ಹಿನ್ನೆಲೆಯಲ್ಲಿ
ಮತದಾರರು ಮತ ಹಾಕಲು ಹೋದಾಗ ಅಲ್ಲಿನ ಮತದಾರರ ಪಟ್ಟಿಯ ನಿಮ್ಮ ವಿಳಾಸದಲ್ಲಿ ಸೇರಿರುವ ನಕಲಿ ಮತಗಳನ್ನು ಅಲ್ಲೇ ತೆಗೆಸಬೇಕು. ನಿಮ್ಮ ಮನೆ ವಿಳಾಸದಲ್ಲಿ, ನಿಮ್ಮ ವೈಯಕ್ತಿಕ ಆಸ್ತಿಯಲ್ಲಿ ಮುನಿರತ್ನ ಬೋಗಸ್ ಮತ ಸೇರಿಸಿ ಈ ಅಕ್ರಮ ಮಾಡುತ್ತಿದ್ದಾರೆ. ನೀವು ನಿಮ್ಮ ಗೌರವ, ಸಾರ್ವಭೌಮತ್ವ ಕಾಪಾಡಿಕೊಳ್ಳಬೇಕು. ನಿಮ್ಮ ವಿಳಾಸದಲ್ಲಿ ಬೇರೆಯವರು ಮತ ಹಾಕಲು ಅವಕಾಶ ನೀಡಬೇಡಿ.

ನಾನು ಈ ಬಗ್ಗೆ ಆಯೋಗಕ್ಕೆ ದೂರು ನೀಡುತ್ತೇನೆ. ಈ ಅಕ್ರಮದಲ್ಲಿ ಸರ್ಕಾರ ಹಾಗೂ ಅಧಿಕಾರಿಗಳು ಕೈ ಜೋಡಿಸಿದ್ದು, ಸಂಬಂಧಪಟ್ಟವರ ಬಂಧನಕ್ಕೆ ರಿಟರ್ನಿಂಗ್ ಆಫೀಸರ್ ಕ್ರಮ ಕೈಗೊಳ್ಳಬೇಕು.

ಮುನಿರತ್ನ ಅವರ ನಕಲಿ ಮತದಾರರ ಗುರುತಿನ ಚೀಟಿ ಬಗ್ಗೆ ಪ್ರಧಾನಿಯವರು, ಸಿ.ಎಂ ಹಾಗೂ ದೇವೇಗೌಡರು ಮಾತನಾಡಿದ್ದಾರೆ. ಇವರ್ಯಾರು ಸಾಕ್ಷಿ ಇಲ್ಲದೆ ಮಾತನಾಡಿಲ್ಲ. ಒಂದೊಮ್ಮೆ ಅವರು ಸುಳ್ಳು ಹೇಳಿದ್ದರೆ ಮುನಿರತ್ನ ಅವರು ಅವರ ವಿರುದ್ಧ ಕೇಸ್ ಹಾಕಬಹುದಿತ್ತು. ಆದರೆ ಕೇಸ್ ಹಾಕದೇ ಅವರ ಆರೋಪಗಳು ನಿಜ ಎಂದು ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.

*ಪೊಲೀಸ್ ಅಧಿಕಾರಿಗಳ ಕಿರುಕುಳ:*

ಪೊಲೀಸ್ ಇನ್ಸ್ ಪೆಕ್ಟರ್ ಗಳು ಕಾರ್ಯಕರ್ತರಿಗೆ ಕಾಲ್ ಮಾಡಿ ಠಾಣೆಗೆ ಕರೆಸುತ್ತಿದ್ದಾರೆ. ಇಂಥವರ ಪರವಾಗಿ ಕೆಲಸ ಮಾಡಿ ಎಂದು ಹುಕುಂ ಚಲಾಯಿಸುತ್ತಿದ್ದಾರೆ. ಅವರ ಬಗ್ಗೆ ಆಯೋಗಕ್ಕೆ ದೂರು ನೀಡುತ್ತೇನೆ.

ಮತದಾರರು ಜಾಗೃತರಾಗಬೇಕು. ಇವತ್ತು ಹಣ ಹಂಚುತ್ತಿರುವ ಬಗ್ಗೆ ನೂರಾರು ವಿಡಿಯೋಗಳು ಬರುತ್ತಿವೆ. ಮಾಸ್ಕ್ ಒಳಗೆ 1 ಸಾವಿರ ಇಟ್ಟು ಕೊಡುತ್ತಿದ್ದಾರೆ. ಈ ಬಗ್ಗೆ ಚುನಾವಣಾ ಆಯೋಗ ಗಮನ ಹರಿಸಬೇಕು.

*ನಾನು ಅಕ್ರಮದ ಬಗ್ಗೆ ಹೇಳುತ್ತಿದ್ದೇನೆ, ಮತ ಕೇಳಿಲ್ಲ:*

ಒಂದು ಪಕ್ಷದ ಅಧ್ಯಕ್ಷನಾಗಿ ನಾನು ಈ ಚುನಾವಣೆಯಲ್ಲಿ ನಡೆಯುತ್ತಿರುವ ಅಕ್ರಮ, ಕಾನೂನು ಬಾಹಿರ ಚಟುವಟಿಕೆಗಳನ್ನು ಬಹಿರಂಗ ಮಾಡುತ್ತಿದ್ದೇನೆಯೇ ಹೊರತು, ಮತ ಹಾಕಿ ಎಂದು ಹೇಳುತ್ತಿಲ್ಲ. ಪ್ರಚಾರ ಮಾಡುತ್ತಿಲ್ಲ.

*ಆಸ್ತಿ ಹೆಚ್ಚಳದ ಬಗ್ಗೆ ತನಿಖೆ ಯಾಕಿಲ್ಲ?:*

ಮುನಿರತ್ನ ಅವರು ತಮ್ಮ ಆಸ್ತಿ ಅಫೀಡೇವಿಟ್ ನಲ್ಲಿ 78 ಕೋಟಿ ರುಪಾಯಿ ಘೋಷಣೆ ಮಾಡಿದ್ದು, ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಅವರ ಆಸ್ತಿ 35 ರಿಂದ 40 ಕೋಟಿಯಷ್ಟು ಹೆಚ್ಚಾಗಿದೆ. ಈ ಹಣ ಎಲ್ಲಿಂದ ಬಂತು, ಆಪರೇಷನ್ ಕಮಲದ ಹಣವೇ? ಯಾರು ಕೊಟ್ಟರು ಎಂದು ಐಟಿ, ಇಡಿ ತನಿಖೆ ಮಾಡಬೇಕು. ಯಡಿಯೂರಪ್ಪನವರು ನಮ್ಮ ಮೇಲೆ ತನಿಖೆ ಮಾಡಲು ಅನುಮತಿ ಕೊಟ್ಟರಲ್ಲಾ? ಇವರ ವಿರುದ್ಧ ವಿಚಾರಣೆಗೆ ಅನುಮತಿ ಯಾಕೆ ಕೊಟ್ಟಿಲ್ಲ?

*ಚುನಾವಣೆ ಮುಂದೂಡಲು ಹೇಳುತ್ತಿಲ್ಲ:*

ಚುನಾವಣಾ ಅಕ್ರಮ ಮಾಡಿರುವ ಅಭ್ಯರ್ಥಿ ಅನರ್ಹ ಮಾಡಿ ಎಂದು ಆಗ್ರಹಿಸುತ್ತಿದ್ದೇವೆಯೇ ಹೊರತು, ಚುನಾವಣೆ ಮುಂದೂಡಲು ಅಲ್ಲ. ಒಬ್ಬ ಅಭ್ಯರ್ಥಿ ತಪ್ಪಿಗೆ ಬೇರೆ ಅಭ್ಯರ್ಥಿಗಳು ಯಾಕೆ ತೊಂದರೆ ಅನುಭವಿಸಬೇಕು. ಜನತಾದಳದ ಅಭ್ಯರ್ಥಿ ಆಗಲಿ, ಪಕ್ಷೇತರರ ಅಭ್ಯರ್ಥಿಗಳು ಯಾಕೆ ತೊಂದರೆ ಪಡಬೇಕು? ಅವರು ಸ್ಪರ್ಧೆಯಲ್ಲಿ ಇರಲಿ.

*ಚುನಾವಣಾ ಆಯೋಗಕ್ಕೆ ಅಭಿನಂದನೆಗಳು:*

ಚುನಾವಣಾ ಆಯೋಗ ನಾವು ಕೊಟ್ಟ ಮನವಿಗಳಲ್ಲಿ ಕೆಲವಕ್ಕೆ ಸ್ಪಂದಿಸಿದೆ. ಇಂದು ವಿಧಾನ ಪರಿಷತ್ ಚುನಾವಣೆ ಮತ ಎಣಿಕೆ ಇತ್ತು. ಇದು ನಾಳೆ ನಡೆಯಲಿರುವ ಮತದಾನದ ಮೇಲೆ ಪ್ರಭಾವ ಬೀರುವ ಹಿನ್ನೆಲೆಯಲ್ಲಿ ನಾವು ಕೊಟ್ಟ ಮನವಿಯನ್ನು ದೆಹಲಿಗೆ ಶಿಫಾರಸ್ಸು ಮಾಡಿ ಫಲಿತಾಂಶ ಪ್ರಕಟಣೆ ಮುಂದಕ್ಕೆ ಹಾಕಿರುವುದಕ್ಕೆ ಅಭಿನಂದಿಸುತ್ತೇನೆ.’

ಸುದ್ದಿಗೋಷ್ಠಿಯಲ್ಲಿ ಕಾರ್ಯಾಧ್ಯಕ್ಷರಾದ ಸಲೀಂ ಅಹ್ಮದ್, ಮಾಜಿ ಸಚಿವರಾದ ರಾಮಲಿಂಗಾರೆಡ್ಡಿ, ಹೆಚ್.ಎಂ ರೇವಣ್ಣ, ಮಾಜಿ ಸಂಸದರಾದ ವಿ.ಎಸ್ ಉಗ್ರಪ್ಪ, ಧ್ರುವನಾರಾಯಣ, ಕೆಪಿಸಿಸಿ ಮಾಧ್ಯಮ ವಿಭಾಗದ ಸಹ ಅಧ್ಯಕ್ಷ ವಿ.ಆರ್. ಸುದರ್ಶನ್, ರಾಜ್ಯ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಪುಷ್ಪಾ ಅಮರನಾಥ ಅವರು ಇದ್ದರು.