images 27

BJP: ರಾಜ್ಯದಲ್ಲಿ ಅಮಿತ್ ಷಾ ಪ್ರವಾಸ….!

POLATICAL STATE


ಮಂಡ್ಯದಲ್ಲಿ ಅಮಿತ್ ಶಾ ಅವರ ಸಮಾವೇಶಕ್ಕೆ 1 ಲಕ್ಷ
ಜನರ ನಿರೀಕ್ಷೆ- ಎಸ್.ಟಿ. ಸೋಮಶೇಖರ್


ಬೆಂಗಳೂರು: ಮಂಡ್ಯದಲ್ಲಿ ಡಿಸೆಂಬರ್ 30ರಂದು 1 ಲಕ್ಷ ಜನರ ಬೃಹತ್ ಸಮಾವೇಶವನ್ನು ಪಕ್ಷ ಆಯೋಜಿಸಿದ್ದು, ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಅವರು ಸಮಾವೇಶವನ್ನುದ್ದೇಶಿಸಿ ಮಾತನಾಡಲಿದ್ದಾರೆ ಎಂದು ರಾಜ್ಯದ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಅವರು ತಿಳಿಸಿದರು.
ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ “ಜಗನ್ನಾಥ ಭವನ”ದಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ, ಮೈಸೂರು, ಚಾಮರಾಜನಗರ ಮತ್ತು ಹಾಸನಗಳ ಜನರು ಮಂಡ್ಯದ ಸಮಾವೇಶದಲ್ಲಿ ಭಾಗವಹಿಸುವರು. ಅಮಿತ್ ಶಾ ಅವರ ಭೇಟಿಯಿಂದ ಬಿಜೆಪಿ ಬಲ ಹೆಚ್ಚಲಿದೆ. ಈ ಸಮಾವೇಶ 30ರ ಮಧ್ಯಾಹ್ನ ಒಂದು ಗಂಟೆಗೆ ನಡೆಯಲಿದೆ. ಮಂಡ್ಯ ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಭದ್ರಕೋಟೆಯಾಗಿ ಉಳಿಯುವುದಿಲ್ಲ. ಅಲ್ಲಿ ಸಂಸದರ ಸ್ಥಾನವನ್ನು ಸೋತಿದ್ದಾರೆ. ಸಮಾವೇಶದ ಯಶಸ್ಸಿಗಾಗಿ ಸಚಿವರಾದ ಗೋಪಾಲಯ್ಯ ಮತ್ತು ನಾರಾಯಣಗೌಡರು ಶ್ರಮಿಸುತ್ತಿದ್ದಾರೆ ಎಂದು ತಿಳಿಸಿದರು.

20221229 045758
ಪ್ರಸಾಸ ದ ವಿವರ


2023ರ ಅಸೆಂಬ್ಲಿ ಚುನಾವಣೆಯಲ್ಲಿ ಮಂಡ್ಯ, ಮೈಸೂರು, ಚಾಮರಾಜನಗರ, ರಾಮನಗರ ಮತ್ತು ಹಾಸನ ಭಾಗದಲ್ಲಿ ಅತಿ ಹೆಚ್ಚು ಬಿಜೆಪಿ ಶಾಸಕರು ಗೆಲ್ಲಬೇಕೆಂಬ ಗುರಿ ನಮ್ಮದು. ಪಕ್ಷ ಬಲಪಡಿಸಲು ವಿಶೇಷ ಗಮನ ಕೊಡುತ್ತಿದ್ದೇವೆ ಎಂದು ತಿಳಿಸಿದರು.
ನಂತರ ಸಂಜೆ 5.30ಕ್ಕೆ ಬೆಂಗಳೂರಿನ ಪ್ಯಾಲೇಸ್‍ನಲ್ಲಿ ಸಹಕಾರ ಕ್ಷೇತ್ರದಿಂದ 33 ಲಕ್ಷ ರೈತರಿಗೆ ಶೂನ್ಯ ಬಡ್ಡಿದರದಲ್ಲಿ 24 ಸಾವಿರ ಕೋಟಿ ಸಾಲ ನೀಡುವ ಕಾರ್ಯಕ್ರಮ ನಡೆಯಲಿದೆ. ಯಶಸ್ವಿನಿ ಯೋಜನೆಗೆ 20 ಲಕ್ಷ ಜನರು ನೋಂದಾವಣೆ ಆಗಿದ್ದಾರೆ. ಯೋಜನೆಗೆ ಜನವರಿ ಒಂದರಿಂದ ಮರು ಚಾಲನೆ ನೀಡುವ ಕಾರ್ಯವನ್ನು ಅಮಿತ್ ಶಾ ಅವರು ಉದ್ಘಾಟಿಸುತ್ತಾರೆ. ಅಲ್ಲದೆ ಸ್ತ್ರೀಶಕ್ತಿ ಗುಂಪುಗಳಿಗೆ ಸಾಲ ನೀಡುತ್ತಾರೆ ಎಂದರು.
ಸಕ್ಕರೆ ಕ್ಷೇತ್ರ ಬಲಿಷ್ಠಗೊಳಿಸಲು ಅಮಿತ್ ಶಾ ಅವರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದಾರೆ. ಸುಮಾರು 5,700 ವಿಎಸ್‍ಎಸ್‍ಗಳಿಗೆ, ಕೃಷಿ ಪತ್ತಿನ ಸಹಕಾರ ಸಂಘಗಳಿಗೆ ಲಭಿಸಿದ ಪ್ರಯೋಜನವನ್ನು ಪರಿಶೀಲಿಸುವರು. 31ರಂದು ಮಲ್ಲೇಶ್ವರದ ಸೌಹಾರ್ದ ಫೇಡರೇಶನ್‍ಗೆ ಭೇಟಿ ಕೊಡುತ್ತಾರೆ. ಸೌಹಾರ್ದ ಸಹಕಾರಿಗಳ ಸಭೆ ನಡೆಸುತ್ತಾರೆ ಎಂದು ವಿವರಿಸಿದರು. ರಾಜ್ಯದ ಸಹಕಾರ ಇಲಾಖೆ ದೇಶದಲ್ಲಿ 2ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.

20221229 045829


ನಾವೂ ಸಹಕಾರ ಇಲಾಖೆಯಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಮನವಿ ಮಾಡಿದ್ದು, 30ರಂದು ಬೆಳಿಗ್ಗೆ 11 ಗಂಟೆಗೆ ಮದ್ದೂರಿನ ಮೆಗಾ ಡೇರಿಯನ್ನು ಉದ್ಘಾಟಿಸಲು ಒಪ್ಪಿಕೊಂಡಿದ್ದಾರೆ. ಬಳಿಕ ಸಹಕಾರಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ನಬಾರ್ಡ್‍ನಿಂದ ಕೊಡುವ 24 ಸಾವಿರ ಕೋಟಿ ಸಾಲವನ್ನು ದ್ವಿಗುಣಗೊಳಿಸಲು ಮುಖ್ಯಮಂತ್ರಿಯವರು ಯೋಜಿಸಿದ್ದಾರೆ. ಆ ಬಗ್ಗೆ ಕೇಂದ್ರ ಸಚಿವರಿಗೆ ಮನವಿ ಸಲ್ಲಿಸಲಾಗುವುದು ಎಂದರು.
ಹಾಲಿನ ಯೂನಿಯನ್‍ಗಳ ಸಮಸ್ಯೆ ಬಗ್ಗೆ ಸಮಾಲೋಚನೆ ಮಾಡಲಿದ್ದಾರೆ. ಕೃಷಿ ಪತ್ತಿನ ಸಹಕಾರ ಸಂಘಗಳನ್ನು ಹಣಕಾಸು ವ್ಯವಹಾರದಲ್ಲಿ ಬಲಪಡಿಸಲು ಚಿಂತಿಸುತ್ತಿದ್ದು, ರೈತರಿಗೆ ಹೆಚ್ಚಿನ ಸಾಲ ನೀಡುವ ಕುರಿತು ತಿಳಿಸಲಿದ್ದಾರೆ ಎಂದು ವಿವರ ನೀಡಿದರು. ಕೃಷಿ ಪತ್ತಿನ ಸಹಕಾರ ಸಂಘಗಳ ಒಂದು ಸಾವಿರ ನಿರ್ದೇಶಕರು, ಮಿಲ್ಕ್ ಸೊಸೈಟಿಗೆ ಹಾಲು ಹಾಕುವ 1 ಸಾವಿರ ಜನರು, ಸ್ತ್ರೀಶಕ್ತಿ ಸ್ವಸಹಾಯ ಗುಂಪಿನ ಒಂದು ಸಾವಿರ ಜನರು ಈ ಸಭೆಯಲ್ಲಿ ಪಾಲ್ಗೊಳ್ಳುತ್ತಾರೆ ಎಂದು ತಿಳಿಸಿದರು. ಬೆಂಗಳೂರಿನ ವಿವಿಧ ಸಹಕಾರ ಸಂಸ್ಥೆಗಳ ನಿರ್ದೇಶಕರೂ ಭಾಗವಹಿಸಲಿದ್ದಾರೆ ಎಂದರು.
ಪ್ರಧಾನಿಗಳಾದ ನರೇಂದ್ರ ಮೋದಿಯವರು ಮೈಸೂರಿಗೆ ಯೋಗ ದಿನಾಚರಣೆಗೆ ಬಂದ ಬಳಿಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಆದ್ಯತೆ ಲಭಿಸಿದೆ. ಹೆಚ್ಚು ಜನರು ಬರುತ್ತಿದ್ದಾರೆ. ಮೈಸೂರು ಮತ್ತು ಚಾಮರಾಜನಗರಕ್ಕೆ ಹೆಚ್ಚು ವಿದೇಶೀಯರು ಮತ್ತು ಸಾರ್ವಜನಿಕರು ಬರುತ್ತಿದ್ದಾರೆ ಎಂದರು.
ಬಿಜೆಪಿ ರಾಜ್ಯ ಉಪಾಧ್ಯಕ್ಷ ಎಂ. ಶಂಕರಪ್ಪ ಮತ್ತು ಬೆಂಗಳೂರು ಉತ್ತರ ಜಿಲ್ಲಾ ಅಧ್ಯಕ್ಷ ಬಿ. ನಾರಾಯಣಗೌಡ ಅವರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ಪಕ್ಷ ಸಂಘಟನೆ: ಗುರುವಾರ ಅಮಿತ್ ಶಾ ಆಗಮನ

ಬೆಳಗಾವಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗುರುವಾರ ರಾಜ್ಯಕ್ಕೆ ಬಂದಿಳಿಯುತ್ತಿದ್ದು, ಮೂರು ದಿನಗಳ ಕಾಲ ದಕ್ಷಿಣ ಕರ್ನಾಟಕದಲ್ಲಿ ಪಕ್ಷವನ್ನು ಸಂಘಟಿಸುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ ಎಂದು ಉನ್ಬತ ಶಿಕ್ಷಣ ಸಚಿವ ಡಾ.ಸಿ ಎನ್ ಅಶ್ವತ್ಥನಾರಾಯಣ ಹೇಳಿದ್ದಾರೆ.

20221229 051555

ಬುಧವಾರ ಇಲ್ಲಿನ ಸುವರ್ಣ ಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು,
“ಮಂಡ್ಯದಲ್ಲಿ ಶುಕ್ರವಾರ ನಡೆಯಲಿರುವ ಜನಸಂಕಲ್ಪ ಯಾತ್ರೆಯಲ್ಲಿ ಶಾ ಅವರು ಭಾಗವಹಿಸಲಿದ್ದಾರೆ.
ಪಕ್ಷದ ಸಂಘಟನೆಯನ್ನು ಇನ್ನಷ್ಟು ಸದೃಢಗೊಳಿಸಬೇಕು ಹಾಗೂ ಹೆಚ್ಚಿನ ಸಂಖ್ಯೆಯಲ್ಲಿ ಪಕ್ಷದಿಂದ ಶಾಸಕರು ಆಯ್ಕೆಯಾಗಬೇಕು ಎಂಬುದು ಪಕ್ಷದ ವರಿಷ್ಠರ ಗುರಿಯಾಗಿದೆ” ಎಂದರು.

ರಾಜ್ಯದಲ್ಲಿ ಅವಧಿಪೂರ್ವ ಚುನಾವಣೆ ಬಗ್ಗೆ ಯಾವ ಚರ್ಚೆಯೂ ನಡೆದಿಲ್ಲ. ಇದು ಚುನಾವಣಾ ಆಯೋಗಕ್ಕೆ ಸಂಬಂಧಪಟ್ಟ ವಿಷಯ ಎಂದು ಅವರು ತಿಳಿಸಿದರು.

ದಕ್ಷಿಣದ ಅಯೋಧ್ಯೆಯಾಗಿ ರಾಮದೇವರ ಬೆಟ್ಟ

ರಾಮನಗರದ ರಾಮದೇವರ ಬೆಟ್ಟದಲ್ಲಿ ಅಯೋಧ್ಯೆಯ ಮಾದರಿಯಲ್ಲಿ ರಾಮಮಂದಿರ ನಿರ್ಮಿಸುವ ಆಲೋಚನೆ ಇದೆ. ಮುಂಬರುವ ರಾಜ್ಯ ಬಜೆಟ್ ನಲ್ಲಿ ಈ ಬಗ್ಗೆ ಘೋಷಣೆ ಹೊರಬೀಳಬಹುದು ಎಂದು ಅಶ್ವತ್ಥನಾರಾಯಣ ವಿಶ್ವಾಸ ವ್ಯಕ್ತಪಡಿಸಿದರು.

ರಾಮದೇವರ ಬೆಟ್ಟವನ್ನು ಅಯೋಧ್ಯೆಯಂತೆ ಅಭಿವೃದ್ಧಿ ಪಡಿಸಬೇಕೆಂಬುದು ಅಲ್ಲಿನ ಜನರ ಭಾವನೆಯಾಗಿದೆ. ದೇವಸ್ಥಾನ ಅಭಿವೃದ್ಧಿಗೆ ಯೋಜನೆ ರೂಪಿಸಲು ಮುಖ್ಯಮಂತ್ರಿಗಳು ಈಗಾಗಲೇ ಸೂಚನೆ ನೀಡಿದ್ದಾರೆ ಎಂದು ಅವರು ತಿಳಿಸಿದರು.

ರಾಮದೇವರ ಬೆಟ್ಟ ಜೀರ್ಣೋದ್ಧಾರದಲ್ಲಿ ಪಾಲ್ಗೊಳ್ಳುವಂತೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಆಹ್ವಾನಿಸಲಾಗಿದೆ ಎಂದು ಅವರು ಹೇಳಿದರು.

ಮಂಡ್ಯ ಅಭಿವೃದ್ಧಿಯಲ್ಲಿ ಹಿಂದೆ ಬೀಳಲು ಜೆಡಿಎಸ್, ಕಾಂಗ್ರೆಸ್ ಕಾರಣ

ಒಂದು ಕಾಲದಲ್ಲಿ ಅಭಿವೃದ್ಧಿಯಲ್ಲಿ ಮುಂದಿದ್ದ ಮಂಡ್ಯ ಜಿಲ್ಲೆಯು ಹಿಂದೆ ಬೀಳುವುದಕ್ಕೆ ಜೆಡಿಎಸ್ ಮತ್ತು ಕಾಂಗ್ರೆಸ್ ಕಾರಣವಾಗಿದೆ. ಆ ಎರಡೂ ಪಕ್ಷಗಳನ್ನು ಮೂಲೋತ್ಪಾಟನೆ ಮಾಡುವುದು ಅನಿವಾರ್ಯವಾಗಿದೆ
ಎಂದು ಅವರು ಇದೇ ಸಂದರ್ಭದಲ್ಲಿ ವಾಗ್ದಾಳಿ ನಡೆಸಿದರು.

ಮೈಷುಗರ್ ಕಾರ್ಖಾನೆಯನ್ನು ಈ ಎರಡೂ ಪಕ್ಷಗಳ ಸರ್ಕಾರಗಳು ಸರಿಯಾಗಿ ನಿರ್ವಹಣೆ ಮಾಡದೆ ಇದ್ದುದರಿಂದ ಇಂದು ರೈತರು ಸಮಸ್ಯೆಗೆ ಸಿಲುಕಿದ್ದಾರೆ ಎಂದರು.

ಮಂಡ್ಯ ಜಿಲ್ಲೆಯ ಅಗತ್ಯಗಳನ್ನು ಮನಗಂಡು ನಮ್ಮ ಸರ್ಕಾರವು ಮೂಲ ಸೌಕರ್ಯ ಒದಗಿಸುತ್ತಿದೆ. ಆ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಬಿಜೆಪಿ ಸರ್ಕಾರವು ಒತ್ತು ನೀಡಿದೆ. ಜೆಡಿಎಸ್ ಪಕ್ಷವನ್ನು ನಂಬಿಕೊಂಡಿದ್ದರೆ ಅಭಿವೃದ್ಧಿಯಲ್ಲಿ ಹಿಂದೆ ಬೀಳಬೇಕಾಗುತ್ತದೆ ಎಂಬುದು ಅಲ್ಲಿನ ಜನರಿಗೆ ಮನವರಿಕೆಯಾಗಿದೆ. ಜೆಡಿಎಸ್ ಕೇವಲ ರಾಜಕೀಯ ಮಾಡುವುದಕ್ಕೋಸ್ಕರ ರಾಜಕಾರಣದಲ್ಲಿ ಉಳಿದುಕೊಂಡಿದೆ ಎಂದು ಅವರು ವ್ಯಂಗ್ಯವಾಡಿದರು.

ಬಿಜೆಪಿಯು ಎಲ್ಲಾ ವರ್ಗಗಳನ್ನು ಸಮರ್ಥವಾಗಿ ಪ್ರತಿನಿಧಿಸುವ ಪಕ್ಷವಾಗಿದೆ. ಅಂಬೇಡ್ಕರ್, ಕೆಂಪೇಗೌಡ ಸಂಗೊಳ್ಳಿ ರಾಯಣ್ಣ, ನಾರಾಯಣ ಗುರು ಸೇರಿದಂತೆ ಎಲ್ಲಾ ಮಹಾಪುರುಷರನ್ನು ಗೌರವದಿಂದ ಸ್ಮರಿಸುವ ಕಾರ್ಯವನ್ನು ನಾವು ಮಾಡುತ್ತಿದ್ದೇವೆ. ಹಾಗೆಯೇ, ಕಿತ್ತೂರು ಕರ್ನಾಟಕ, ಕಲ್ಯಾಣ ಕರ್ನಾಟಕ ಎಂಬ ಹೆಸರುಗಳನ್ನು ಘೋಷಣೆ ಮಾಡಿದ ಶ್ರೇಯಸ್ಸು ನಮ್ಮ ಪಕ್ಷದ್ದಾಗಿದೆ ಎಂದರು.

ಬಿಜೆಪಿ ಯಾವುದೇ ಕುಟುಂಬದ ಪಕ್ಷವಲ್ಲ. ಇದು ಜನರ ಪಕ್ಷವಾಗಿದೆ. ನಮ್ಮ ಪಕ್ಷದ ನಾಯಕರು ಹೆಚ್ಚಿನ ಸಮನ್ವತೆಯಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಮುಖ್ಯಮಂತ್ರಿಯವರ ಅಧ್ಯಕ್ಷತೆಯಲ್ಲಿ ಕೋವಿಡ್ ನಿರ್ವಹಣೆ ನಡೆಯುತ್ತಿದೆ. ಇದಕ್ಕೆ ಸಂಪುಟ ಸಹೋದ್ಯೋಗಿಗಳು ಸಹಕಾರ ನೀಡುತ್ತಿದ್ದಾರೆ ಎಂದು ಹೇಳಿದರು.