ರಿಪೋರ್ಟ್ ಕಾರ್ಡ್ ಮುಂದಿಟ್ಟು ಬಹುಮತ ಸಾಧಿಸಲಿದ್ದೇವೆ: ಜೆ.ಪಿ.ನಡ್ಡಾ
ತುಮಕೂರು: ಕರ್ನಾಟಕದ ಚುನಾವಣೆಗೆ ಬಿಜೆಪಿ ತನ್ನ ರಿಪೋರ್ಟ್ ಕಾರ್ಡ್‍ನೊಂದಿಗೆ ತೆರಳಲಿದೆ ಮತ್ತು ಬಹುಮತ ಸಾಧಿಸಲಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ವಿಶ್ವಾಸ ವ್ಯಕ್ತಪಡಿಸಿದರು.
ತುಮಕೂರಿನಲ್ಲಿ ಇಂದು ತುಮಕೂರು ಮತ್ತು ಮಧುಗಿರಿಯ ಶಕ್ತಿ ಕೇಂದ್ರಗಳ ಪ್ರಮುಖರ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕಾಂಗ್ರೆಸ್ಸಿನ ಕಪಟತೆಯನ್ನು ಜನರಿಗೆ ತಿಳಿಸಿ ಎಂದ ಅವರು, ಸಿದ್ದರಾಮಯ್ಯ ಅವರ ಮಾತನ್ನು ಖಂಡಿಸಿದರು. ನಾವು ಬೇರೆ ಪಕ್ಷದ ಮುಖ್ಯಮಂತ್ರಿಗಳನ್ನೂ ಗೌರವಿಸುವವರು. ಅಭಿವೃದ್ಧಿ ವಿಚಾರದ ಆಧಾರದಲ್ಲಿ ಚುನಾವಣೆ ಎದುರಿಸಿ ಎಂದು ಕಾಂಗ್ರೆಸ್ಸಿಗರಿಗೆ ಸವಾಲೆಸೆದರು.
ಮೋದಿಜಿ, ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ಅವರ ನೇತೃತ್ವದಲ್ಲಿ ಮಾಡಿದ ಸಾಧನೆಯನ್ನು ಜನರಿಗೆ ತಿಳಿಸಲು ಮನವಿ ಮಾಡಿದರು. ಮುಂದಿನ ಚುನಾವಣೆಗೆ ಬಿಜೆಪಿ ಸನ್ನದ್ಧವಾಗಿದೆ. ಪ್ರಧಾನಿ ನರೇಂದ್ರ ಮೋದಿಜಿ ಅವರು ಜಾಗತಿಕ ನಾಯಕರಾಗಿ ಹೊರಹೊಮ್ಮಿದ್ದಾರೆ. ದೇಶದ ಸರ್ವಾಂಗೀಣ ಅಭಿವೃದ್ಧಿಗೆ ಅವರು ಪ್ರಯತ್ನ ಮಾಡಿದ್ದಾರೆ. ಶಕ್ತಿ ಕೇಂದ್ರಗಳ ಪದಾಧಿಕಾರಿಗಳು ಮೋದಿಜಿ ಮತ್ತು ಬೊಮ್ಮಾಯಿಯವರ ಸರಕಾರದ ಸಾಧನೆಗಳನ್ನು ತಿಳಿಸಿ ಮತ ಕೇಳಬೇಕು ಎಂದರು.
ಸ್ವಾತಂತ್ರ್ಯ ಉತ್ಸವದ ಅಮೃತ ಕಾಲದಲ್ಲಿ ನಾವಿದ್ದೇವೆ. ಕರ್ನಾಟಕವು ಸಮಗ್ರ ಅಭಿವೃದ್ಧಿಯತ್ತ ಮುನ್ನಡೆಯಲು ಬಿಜೆಪಿಗೆ ಮತ ನೀಡಿ ಬಿಜೆಪಿ ಶಾಸÀಕರನ್ನು ಚುನಾಯಿಸಬೇಕು ಎಂದು ಮನವಿ ಮಾಡಿದರು. ಸಮಾಜದ ಎಲ್ಲರನ್ನು ಜೊತೆಗೂಡಿಸಲು ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಅವರು ನುಡಿದರು.
ಕಾಂಗ್ರೆಸ್ ಪಕ್ಷವು ಕುಟುಂಬವಾದ, ಭ್ರಷ್ಟಾಚಾರಕ್ಕೆ ನಿರಂತರ ಪೋಷಣೆ ನೀಡಿದೆ. ತುಷ್ಟೀಕರಣದ ರಾಜಕೀಯ ಕಾಂಗ್ರೆಸ್‍ನದು ಎಂದು ಟೀಕಿಸಿದರು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಕುಟುಂಬವಾದ, ಭ್ರಷ್ಟಾಚಾರ ಮಾತ್ರವಲ್ಲದೆ ಭಯೋತ್ಪಾದನೆ ದೂರ ಮಾಡಿದ್ದಾರೆ ಎಂದು ತಿಳಿಸಿದರು.
ಔಷಧ, ರಾಸಾಯನಿಕ, ರಕ್ಷಣಾ ಕ್ಷೇತ್ರ, ಇಲೆಕ್ಟ್ರಾನಿಕ್ಸ್ ಸೇರಿ ಹಲವಾರು ಕ್ಷೇತ್ರಗಳಲ್ಲಿ ಭಾರತದ ರಫ್ತು ಗರಿಷ್ಠ ಪ್ರಮಾಣದತ್ತ ನಡೆದಿದೆ. ವಿದ್ಯುತ್, ರೈತರಿಗೆ ವಿವಿಧ ಯೋಜನೆ ತಲುಪಿದೆಯೇ ಎಂಬುದನ್ನು ಜನರಿಗೆ ಪ್ರಶ್ನಿಸಿ ಉತ್ತರ ಪಡೆಯಿರಿ. ಉಜ್ವಲ, ಉಜಾಲ ಮತ್ತಿತರ ಯೋಜನೆಗಳು ಮಹಿಳೆಯರ ಸಶಕ್ತೀಕರಣಕ್ಕೆ ಕಾರಣವಾಗಿವೆ ಎಂದರು.
ರಾಜೀವ್ ಗಾಂಧಿ ಅವರ ಕಾಲದಲ್ಲಿ 100 ರೂಪಾಯಿ ಅನುದಾನದಲ್ಲಿ ಕೇವಲ 15 ರೂಪಾಯಿ ನೈಜ ಫಲಾನುಭವಿಗೆ ತಲುಪುತ್ತಿದ್ದುದನ್ನು ನೆನಪಿಸಿದ ಅವರು, ನಾವು ಎಲ್ಲ ಯೋಜನೆಗಳನ್ನು ಕೋಟಿಗಟ್ಟಲೆ ಜನರ ಬ್ಯಾಂಕ್ ಖಾತೆಗೆ ನೇರ ಹಣ ಹಾಕುತ್ತಿದ್ದೇವೆ. ಮಹಿಳೆಯರ ಕಷ್ಟವನ್ನು ಅರಿತ ನಾವು 12 ಕೋಟಿ ಶೌಚಾಲಯ ನೀಡಿದ್ದೇವೆ. ಮಹಿಳೆಯರ ಸಂಕಷ್ಟ ಅರಿವಿದ್ದರೂ ಕಾಂಗ್ರೆಸ್ಸಿಗರು ಯಾಕೆ ಸುಮ್ಮನಿದ್ದರು ಎಂದು ಪ್ರಶ್ನಿಸಿದರು.
ಶಕ್ತಿ ಕೇಂದ್ರದಲ್ಲಿ ಮಹಿಳೆಯರು, ಎಸ್‍ಸಿ, ಎಸ್‍ಟಿ, ಹಿಂದುಳಿದ ವರ್ಗದವರು, ಯುವಕರನ್ನು ಜೋಡಿಸಿ. ಮೋದಿಜಿ 8 ವರ್ಷಗಳ ಆಡಳಿತದ ಅವರ ಸಾಧನೆಯ ವಿವರವನ್ನು ಮನನ ಮಾಡಿಕೊಂಡು ಅದನ್ನು ಜನರಿಗೆ ತಿಳಿಸಬೇಕಿದೆ. ಜಾತಿವಾದ, ಕೋಮುವಾದ, ತುಷ್ಟೀಕರಣವನ್ನು ದೂರ ಮಾಡಲು ನಾವು ಶ್ರಮಿಸಬೇಕು. ಪಕ್ಷದ ವಿಚಾರಧಾರೆಯನ್ನು ಜನರಿಗೆ ತಲುಪಿಸಿ ಎಂದು ತಿಳಿಸಿದರು.
ಕೋವಿಡ್, ಉಕ್ರೇನ್ ಯುದ್ಧದ ಬಳಿಕ ದೊಡ್ಡ ಸಶಕ್ತ ರಾಷ್ಟ್ರಗಳಲ್ಲಿ ನಿರುದ್ಯೋಗ ಮತ್ತು ಹಣದುಬ್ಬರ ಹೆಚ್ಚಾಗಿದೆ. ಆದರೆ, ಸಶಕ್ತ ರಾಷ್ಟ್ರವಾಗಿ ನಿಂತಿದೆ. ಭಾರತವು ವಿಶ್ವದ 5ನೇ ಅತ್ಯಂತ ಸಶಕ್ತ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಿದೆ. ಅಮೇರಿಕದಲ್ಲಿ ಎಲ್ಲರಿಗೂ ಕೋವಿಡ್ ಲಸಿಕೆ ನೀಡಲಾಗಿಲ್ಲ. ಆದರೆ ಭಾರತವು 130 ಕೋಟಿ ಜನರಿಗೂ ಲಸಿಕೆ ನೀಡಿ ಸುರಕ್ಷಾ ಕವಚದೊಂದಿಗೆ ಪ್ರಮುಖ ರಾಷ್ಟ್ರವಾಗಿದೆ ಎಂದು ವಿಶ್ಲೇಷಿಸಿದರು.
ಟಿಬಿ, ಪೋಲಿಯೋ ಸೇರಿ ಹಲವು ರೋಗಗಳನ್ನು ನಿಯಂತ್ರಿಸಲು ಕಾಂಗ್ರೆಸ್ ಸೋತಿತ್ತು. ಆದರೆ, ಮೋದಿಜಿ ಅವರು ವಿಜ್ಞಾನಿಗಳಿಗೆ ಮತ್ತು ಉತ್ಪಾದನಾ ಕಂಪೆನಿಗಳಿಗೆ ಪ್ರೋತ್ಸಾಹ ನೀಡಿದ್ದರಿಂದ ಕೆಲವೇ ತಿಂಗಳಲ್ಲಿ ಲಸಿಕೆ ತಯಾರಿಕೆ ಸಾಧ್ಯವಾಯಿತು. ಇಂಥ ಧನಾತ್ಮಕ ವಿಚಾರಗಳನ್ನು ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲಿಸಬೇಕು ಎಂದು ಮನವಿ ಮಾಡಿದರು. ಶೇ 40ರಷ್ಟು ವಿವಿಧ ಯೋಜನೆಗಳ ಪ್ರಯೋಜನ ಲಭಿಸಿದೆ. ಅದನ್ನು ಜನರಿಗೆ ತಿಳಿಸಿ ಮನನ ಮಾಡಬೇಕಿದೆ ಎಂದು ತಿಳಿಸಿದರು. ವಿಮಾ ಯೋಜನೆ, ಜಲ್ ಜೀವನ್ ಯೋಜನೆಗಳ ಕುರಿತು ಅವರು ಮಾಹಿತಿ ನೀಡಿದರು.
ಕಾಂಗ್ರೆಸ್ ಭ್ರಷ್ಟಾಚಾರ, ಜಾತಿವಾದ ಮತ್ತು ಭಯೋತ್ಪಾದನೆಯನ್ನು ಪ್ರೋತ್ಸಾಹಿಸುವ ಪಕ್ಷ. ಅವರನ್ನು ಮನೆಯಲ್ಲಿ ಕೂರಿಸಿ, ಜನರ ಸೇವೆ ಮಾಡುವ ಪಕ್ಷ ಬಿಜೆಪಿಗೆ ಅಧಿಕಾರ ನೀಡಬೇಕು ಎಂದರು. ಡಾ. ಅಂಬೇಡ್ಕರ್ ಅವರಿಗೆ ಭಾರತ ರತ್ನವನ್ನು ಕಾಂಗ್ರೆಸ್ ಯಾಕೆ ನೀಡಲಿಲ್ಲ? ಅದನ್ನು ವಾಜಪೇಯಿ ಅವರು ಮಾಡಬೇಕಿತ್ತೇ ಎಂದು ಪ್ರಶ್ನಿಸಿದರು. ದಲಿತರನ್ನು, ಬುಡಕಟ್ಟು ಜನಾಂಗದವರನ್ನು ರಾಷ್ಟ್ರಪತಿ ಮಾಡಲು ಮೋದಿಜಿ ಮುಂದಾದರು ಎಂದು ವಿವರಿಸಿದರು.
ರಾಜ್ಯ ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಮಾತನಾಡಿ, ತುಮಕೂರು ಇವತ್ತು ನಿನ್ನೆಯಿಂದ ಬಿಜೆಪಿ ಭದ್ರಕೋಟೆ ಅಲ್ಲ. ಅದು ಮುಂದೆಯೂ ಬಿಜೆಪಿ ಭದ್ರಕೋಟೆಯಾಗಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಬಾರಿಯ ಚುನಾವಣೆಯಲ್ಲಿ ಪಕ್ಷವು 150 ಸ್ಥಾನಗಳನ್ನು ಪಡೆಯಲಿದೆ ಎಂದು ನುಡಿದರು. ವಿಜಯಿ ಯಾತ್ರೆಗೆ ಅಮಿತ್ ಶಾ ಅವರು ಚಾಲನೆ ನೀಡಿದ್ದಾರೆ ಎಂದು ತಿಳಿಸಿದರು. ಬೂತ್ ವಿಜಯ ಅಭಿಯಾನವು ಪಕ್ಷದ ಗೆಲುವಿಗೆ ಪೂರಕ ಆಗಲಿದೆ ಎಂದು ನುಡಿದರು. ಬಿಜೆಪಿಯಂತೆ ಕೆಲಸ ಮಾಡಲು ನಮ್ಮಿಂದ ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಮುಖಂಡರೇ ಹೇಳುತ್ತಾರೆ. ನಾವು ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಿ ಮುಂದುವರಿಯಬೇಕು ಎಂದು ಕಿವಿಮಾತು ಹೇಳಿದರು.
ರಾಜ್ಯ ಪ್ರಭಾರಿ ಅರುಣ್ ಸಿಂಗ್, ಕೇಂದ್ರ ಸಚಿವ ನಾರಾಯಣ ಸ್ವಾಮಿ, ರಾಜ್ಯ ಸರ್ಕಾರದ ಸಚಿವರಾದ ಮಾಧುಸ್ವಾಮಿ, ಅರಗ ಜ್ಞಾನೇಂದ್ರ, ಬಿ.ಸಿ ನಾಗೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಅಶ್ವತ್ಥ್ ನಾರಾಯಣ, ಶಾಸಕರಾದ ಜ್ಯೋತಿ ಗಣೇಶ್, ರಾಜೇಶ್ ಗೌಡ, ಚಿದಾನಂದ್ ಗೌಡ, ಮಸಾಲೆ ಜಯರಾಂ, ರಾಜ್ಯ ಉಪಾಧ್ಯಕ್ಷ ನಂದೀಶ್, ಹುಲಿನಾಯ್ಕಾರ್, ತುಮಕೂರು ಜಿಲ್ಲಾಧ್ಯಕ್ಷ ರವಿಶಂಕರ್ ಹೆಬ್ಬಾಕ, ಮಾಜಿ ಸಚಿವ ಸೊಗಡು ಶಿವಣ್ಣ, ಮಧುಗಿರಿ ಜಿಲ್ಲಾಧ್ಯಕ್ಷ ಬಿ ಕೆ ಮಂಜುನಾಥ್, ಮಾಜಿ ಶಾಸಕ ಸುರೇಶ್ ಗೌಡ, ಇತರ ಮುಖಂಡರು ಭಾಗವಹಿಸಿದ್ದರು.