ಹುಬ್ಬಳ್ಳಿ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಸಿ.ಎಸ್.ಆರ್ ಮೂಲಕ 5 ಕೋಟಿ ರೂ ಸಿಎಂ.ಬೊಮ್ಮಾಯಿ
ಹುಬ್ಬಳ್ಳಿ, ಜನವರಿ 10: ಹುಬ್ಬಳ್ಳಿ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಗೆ ಸಿ.ಎಸ್.ಆರ್ ಮೂಲಕ 5 ಕೋಟಿ ರೂ .ಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕರ್ನಾಟಕ ಕ್ಯಾನ್ಸರ್ ಥೆರಪಿ ಮತ್ತು ಸಂಶೋಧನಾ ಸಂಸ್ಥೆಯ ವತಿಯಿಂದ ನವನಗರದ ಆಸ್ಪತ್ರೆಯ ಆವರಣದಲ್ಲಿ ಆಯೋಜಿಸಿರುವ “ಪದ್ಮಶ್ರೀ ಡಾ. ಆರ್.ಬಿ. ಪಾಟೀಲ ಅವರ ಕಂಚಿನ ಪುತ್ಥಳಿ ಅನಾವರಣ” ಹಾಗೂ “ನವೀಕರಣಗೊಂಡ ಭಾನಜಿ ಡಿ. ಖಿಮಜಿ ಒಪಿಡಿ ಉದ್ಘಾಟಿಸಿ ಮಾತನಾಡಿದರು.
ಉತ್ತರ ಕರ್ನಾಟಕದ ಸೇವೆ ನೀಡುವ ಸಂಸ್ಥೆಯಾಗಿ ಕ್ಯಾನ್ಸರ್ ಸಂಸ್ಥೆಯನ್ನು ಬೆಳೆಸಬೇಕಿದೆ. ವಿಜ್ಞಾನ ಪ್ರಯೋಗಾಲಯ ಹಾಗೂ ಆಯುರ್ವೇದ ಚಿಕಿತ್ಸೆ ಮೂಲಕ ನೋವಿಲ್ಲದೆ ಚಿಕಿತ್ಸೆ ನೀಡಲು ಪ್ರಯೋಗ ಮಾಡುವ ಕನಸು ಡಾ. ಆರ್.ಬಿ.ಪಾಟೀಲ್ ರದ್ದು. ಸಂಸ್ಥೆ ಬೆಳೆಯಬೇಕು. ಅದಕ್ಕೆ ಸ್ವಯಂಪ್ರೇರಿತವಾಗಿ ಜನ ಮುಂದಾಗಬೇಕು. ಆಯುಷ್ಮಾನ್ ಕಾರ್ಡುಗಳನ್ನು ಹೊಂದಿದವರಿಗೆ ಪಿ.ಹೆಚ್.ಸಿ ಕೇಂದ್ರಗಳಿಂದ ಶಿಫಾರಸು ಮಾಡುವಾಗ ಈ ಸಂಸ್ಥೆಯನ್ನು ಸರ್ಕಾದಿಂದ ಬೆಂಬಲಿತ ಸಂಸ್ಥೆಯಾಗಿ ಪರಿಗಣಿಸಲು ಆದೇಶ ಹೊರಡಿಸಲಾಗುವುದು. ಭರತ್ ಹಾಗೂ ದಾಮ್ಜಿ ಅವರು ಹೆಚ್ಚಿನ ನೆರವು ನೀಡಬೇಕು ಎಂದರು. ಹುಬ್ಬಳ್ಳಿಯಲ್ಲಿ ಒಂದು ಒಳ್ಳೆಯ ಸಂಸ್ಥೆಯಾದರೆ 2-3 ಜಿಲ್ಲೆಗಳಿಗೆ ಪ್ರಯೋಜನವಾಗಲಿದೆ ಎಂದರು.
ಸಂವೇದನಾಶೀಲ ಸರ್ಕಾರ
ನಮ್ಮ ಸರ್ಕಾರ ಸಂವೇದನಾಶೀಲ, ಸೂಕ್ಷ್ಮ ಹಾಗೂ ಸ್ಪಂದಿಸುವ ಸರ್ಕಾರ. ಆರೋಗ್ಯ ಕ್ಷೇತ್ರದಲ್ಲಿ ಉತ್ತಮ ಕೆಲಸ ಮಾಡಿದೆ. ನಿಮ್ಮ ಕ್ಷೇತ್ರದ ಹುಡುಗ ಮುಖ್ಯಮಂತ್ರಿಯಾಗಿದ್ದು ತಪ್ಪು ಮಾಡಿದಾಗ ಕಿವಿ ಹಿಂಡಿ, ಸರಿಯಿದ್ದಾಗ ಬೆನ್ನು ಚಪ್ಪರಿಸಬೇಕು ಎಂದರು. ನಮ್ಮೂರಿನ ಹಿರಿಯರು ಆಶೀರ್ವಾದ ಮಾಡಿದರೆ ಸ್ಫೂರ್ತಿ ಸಿಗುತ್ತದೆ. ಆರೋಗ್ಯ ಕ್ಷೇತ್ರದಲ್ಲಿ 60 ವರ್ಷ ಮೇಲ್ಪಟ್ಟವರಿಗೆ ಆರೋಗ್ಯ ತಪಾಸಣೆ, ಶಾಲಾ ಮಕ್ಕಳಿಗೆ ಆರೋಗ್ಯ ತಪಾಸಣೆ , ಚಿಕಿತ್ಸೆ ನೀಡುವ ವಾತ್ಸಲ್ಯ ಕಾರ್ಯಕ್ರಮ, 60 ಮೇಲ್ಪಟ್ಟವರಿಗೆ ಕಣ್ಣಿನ ಚಿಕಿತ್ಸೆ, ಶಸ್ತ್ರ ಚಿಕಿತ್ಸೆ, ಕಿವಿ ಕೇಳದ ಬಡ ವರಿಗೆ ಕಾಕ್ಲಿಯರ್ ಇಂಪ್ಲಾಂಟ್, ಬುದ್ಧಿಮಾಂದ್ಯ ಮಕ್ಕಳಿಗೆ ಟೆಲಿಮೆಡಿ ಸನ್ ಮೂಲಕ ಚಿಕಿತ್ಸೆ. 430 ನಮ್ಮ್ ಕ್ಲಿನಿಕ್ ತೆರೆಯಲಾಗುತ್ತಿದೆ. 100 ಪಿ.ಹೆಚ್.ಸಿ ಗಳನ್ನು ಸಿ.ಹೆಚ್.ಸಿ.ಕೇಂದ್ರ ಗಳಾಗಿ ಮೇಲ್ದರ್ಜೆಗೇರಿಸುವ ಕೆಲಸ ಆಗುತ್ತಿದೆ. ಹೊಸ ಪಿ.ಹೆಚ್.ಸಿ ಕೇಂದ್ರ, 12 ಕೀಮೋಥೆರಪಿ ಕೇಂದ್ರಗಳನ್ನು ಪ್ರಾರಂಭಿಸಲಾಗಿದೆ. ಡಯಾಲಿಸಿಸ್ ಸೈಕಲ್ ಗಳನ್ನು 60 ಸಾವಿರಕ್ಕೆ ಹೆಚ್ಚಿಸಲಾಗಿದೆ. ನಾಲ್ಕು ಹೊಸ ವೈದ್ಯಕೀಯ ಕಾಲೇಜುಗಳು ಪ್ರಾರಂಭ ವಾಗುತ್ತಿವೆ. ಹುಬ್ಬಳಿಗೆ ಜಯದೇವ ಹೃದ್ರೋಗ ಕೇಂದ್ರ ಮಂಜೂರಾಗಿ ಟೆಂಡರ್ ಆಗಿದೆ. 250 ಕೋಟಿ ವೆಚ್ಚವಾಗಲಿದೆ .ಉಪಕರಣಗಳಿಗೆ ವೆಚ್ಚವಾಗುವ ಅನುದಾನ ನೀಡಲಾಗುವುದು. ಬೆಳಗಾವಿಯಲ್ಲಿ ಕಿದ್ವಾಯಿ ಘಟಕವನ್ನು ಪ್ರಾರಂಭಿಸಲಾಗುತ್ತಿದೆ. ಒಂದು ಕೋಟಿ ಆಯುಷ್ಮಾ ನ್ ಭಾರತ್ ಕಾರ್ಡುಗಳನ್ನು ವಿತರಿಸಲಾಗಿದೆ. ದೇಶದಲ್ಲಿಯೇ ಅತಿ ಹೆಚ್ಚು ಕಾರ್ಡುಗಳನ್ನು ಕರ್ನಾಟಕದಲ್ಲಿ ವಿತರಿಸಲಾಗಿದೆ. 25 ಕೋಟಿ ರೂ.ಗಳ ವೆಚ್ಚದಲ್ಲಿ ಮೊಬೈಲ್ ಕ್ಲಿನಿಕ್ ಗಳನ್ನು ನಾಲ್ಕು ಜಿಲ್ಲೆಯಲ್ಲಿ ಪ್ರಾರಂಭಿಸಿದ್ದೇವೆ ಎಂದರು.
ಮಾನಸಿಕ ಸಧೃಢತೆಯಿದ್ದವರು ಕ್ಯಾನ್ಸರ್ ವಿರೋಧಿಸಬಹುದು
ದೈಹಿಕವಾದ ಸವಾಲನ್ನು ಮಾನಸಿಕ ಒತ್ತಡಕ್ಕೆ ಸಿಲುಕಿಸುವ ಸ್ಥಿತಿ ಕ್ಯಾನ್ಸರ್. ಕ್ಯಾನ್ಸರ್ ಆದ ಕೂಡಲೇ ಮಾನಸಿಕ ಒತ್ತಡಕ್ಕೆ ಸಿಲುಕಿ ಪ್ರತಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಉತ್ತಮ ಜೀವನಶೈಲಿ, ಆಧ್ಯಾತ್ಮಿಕ ಶಕ್ತಿ, ಮಾನಸಿಕ ಸಧೃಢತೆಯಿದ್ದವರು ಕ್ಯಾನ್ಸರ್ ವಿರೋಧಿಸಬಹುದು. ಜೀವಕೋಶಗಳು ಹೆಚ್ಚಾಗಿ ಬೆಳೆದು ವ್ಯಾಪಿಸಿದಾಗ ಕ್ಯಾನ್ಸರ್ ಆಗುತ್ತದೆ.
ತಮ್ಮ ತಾಯಿಗೆ ಕ್ಯಾನ್ಸರ್ ಆಗಿದ್ದನ್ನು ಸ್ಮರಿಸಿದ ಮುಖ್ಯಮಂತ್ರಿಗಳು ಕ್ಯಾನ್ಸರ್ ರೋಗಿ ಹಾಗೂ ಅವರ ಕುಟುಂಬಕ್ಕೆ ಇದರಿಂದ ಬಹಳ ಒತ್ತಡ ಉಂಟಾಗುತ್ತದೆ. ಚಿಕಿತ್ಸೆ ನೀಡಬೇಕೋ ಬೇಡವೋ ಎನ್ನುವುದು ಪ್ರಶ್ನೆ ಹಾಗೂ ಸವಾಲು. ಅನೇಕರು ಕ್ಯಾನ್ಸರ್ ನೊಂದಿಗೆ ಬದುಕುತ್ತಾರೆ. ಭಯಪಡಬೇಕಿಲ್ಲ. ಹತಾಶರಾಗಬೇಕಿಲ್ಲ. ಕ್ಯಾನ್ಸರ್ ವಲಯದಲ್ಲಿ ಆರ್.ಅಂಡ್ ಡಿ ಮೂಲಕ ಅನೇಕ ಉಪಕರಣಗಳು ಹಾಗೂ ಚಿಕಿತ್ಸಾ ವಿಧಾನಗಳು ಬಂದಿವೆ. ನ್ಯೂಕ್ಲಿಯರ್ ವಿಜ್ಞಾನ ವನ್ನೂ ಕ್ಯಾನ್ಸರ್ ಚಿಕಿತ್ಸೆ ಗೆ ಬಳಸಲಾಗುತ್ತದೆ. ಈ ರೋಗದ ಚಿಕಿತ್ಸೆಗೆ ವೈದ್ಯರು ಬಹಳ ಸಮಾಧಾನ, ಮಾನವೀಯತೆ, ಕರುಣೆ ಹಾಗೂ ವಾತ್ಸಲ್ಯದಿಂದ ವರ್ತಿಸಬೇಕು. ಆತ್ಮವಿಶ್ವಾಸ ತುಂಬುವ ಕೆಲಸ ಮಾಡಬೇಕು. ಎಲ್ಲಾ ಹಿರಿಯ ವೈದ್ಯರು ಬಹಳ ಮೃದುವಾಗಿ ಇರುತ್ತಾರೆ. ಮಾತಿನಿಂದಲೇ ಅರ್ಧ ರೋಗ ಗುಣವಾಗುತ್ತದೆ ಎಂದರು.
ಜೀವನಶೈಲಿ ಬದಲಾವಣೆ
ಉತ್ತರ ಕರ್ನಾಟಕದ ಜೀವನಶೈಲಿ ಯಲ್ಲಿ ಜನ ಹೆಚ್ಚು ತಂಬಾಕು ಸೇವನೆ, ಧೂಮಪಾನ, ಆಹಾರಪದ್ಧತಿಯಿಂದ ಬಾಯಿಗೆ ಸಂಬಂಧಿಸಿದ ಕ್ಯಾನ್ಸರ್ ಬರುವುದು ಹೆಚ್ಚು. ಕರ್ನಾಟಕ ಕ್ಯಾನ್ಸರ್ ಸಂಸ್ಥೆ ಪೂರ್ಣಪ್ರಮಾಣದ ಸಂಶೋಧನಾ ಕೇಂದ್ರವಾಗಿ ಪರಿವರ್ತನೆಯಾಗಬೇಕು. ಇದಕ್ಕೆ ಸರ್ಕಾರ ಬೆಂಬಲ ನೀಡುತ್ತದೆ. ಸಮಾಜವೂ ಬೆಂಬಲ ನೀಡಬೇಕಾಗುತ್ತದೆ ಎಂದರು. ಡಾ: ಆರ್.ಬಿ.ಪಾಟೀಲರು ಪ್ರಾರಂಭ ಮಾಡಿದಾಗ ಅವರ ಅನುಭವದಿಂದ ಪ್ರಾರಂಭಿಸಿದರು. ಜನರಿಗೆ ಅವರ ಮೇಲೆ ವಿಶ್ವಾಸಾರ್ಹತೆ ಇತ್ತು ಎಂದರು.
10 ಕೋಟಿ ರೂ.ಗಳ ನೆರವು
ಕ್ಯಾನ್ಸರ್ ರೋಗಿಗಳ ಚಿಕಿತ್ಸೆಗೆ ದೂರದ ಊರುಗಳಿಗೆ ಹೋಗುವುದನ್ನು ತಪ್ಪಿಸಲು ಅನೇಕರು ಸೇರಿ ಒ.ಪಿ.ಡಿ ಪ್ರಾರಂಭಿಸಿದರು. ಈಗಾಗಲೇ ಸರ್ಕಾರ 10 ಕೋಟಿ ರೂ.ಗಳನ್ನು ನೀಡಿದೆ. ಬೆಂಗಳೂರಿನಲ್ಲಿ ಮೇಕ್ ಇನ್ ಇಂಡಿಯಾ ಫಲವಾಗಿ ಅತ್ಯಾಧುನಿಕ ರೆಡಿಯೇಷನ್ ಚಿಕಿತ್ಸೆ, ಸ್ಕ್ಯಾನಿಂಗ್ ಯಂತ್ರ ಇಲ್ಲಿಗೆ ನೀಡಲಾಗಿದೆ. ಮೇಕ್ ಇನ್ ಇಂಡಿಯಾ ಎಲ್ಲಾ ವಲಯಗಳಲ್ಲಿ ಹಲವಾರು ಬದಲಾವಣೆ ತಂದಿದೆ. ರಕ್ಷಣಾ ವಲಯದಲ್ಲಿ ನಾವು ಈಗ ಶೇ 69 ರಷ್ಟು ರಫ್ತು ಮಾಡುತ್ತಿದ್ದೇವೆ. ಇನ್ನೈದು ವರ್ಷಗಳಲ್ಲಿ ಶೇ.ನೂರರಷ್ಟು ಆತ್ಮ ನಿರ್ಭರಗಳು ಸಾಧ್ಯವಿದೆ. ಇದು ನಮ್ಮ ಪ್ರಧಾನಿಗಳ ದೂರದೃಷ್ಟಿಯ ಫಲ. ಕರ್ನಾಟಕ ಶಿಕ್ಷಣ, ಆರೋಗ್ಯ, ರಕ್ಷಣಾ, ಕೃಷಿ, ಆಡಳಿತ ಎಲ್ಲಾ ವಲಯಗಳಲ್ಲಿ ಮುಂಚೂಣಿಯಲ್ಲಿದೆ. ಹನ್ನೊಂದು ಸಾವಿರಕ್ಕೂ ಹೆಚ್ವಿನ ಸ್ಟಾರ್ಟ್ ಅಪ್ ಗಳು ಬೆಂಗಳೂರಿನಲ್ಲಿವೆ. ಶೇ 40 ರಷ್ಟು ಯೂನಿಕಾರ್ನ್ ಗಳು, ಡೆಕಾಕಾರ್ನ್ ಗಳು ಬೆಂಗಳೂರಿನಲ್ಲಿವೆ. ವಿಜ್ಞಾನ, ಆರ್ಥಿಕತೆ ತಂದಿರುವ ಬದಲಾವಣೆಯ ಲಾಭ ಇಲ್ಲಿ ಆಗಿದೆ.
ಹುಬ್ಬಳ್ಳಿ ಧಾರವಾಡ ಮಹಾಪೌರರಾದ ಈರೇಶ ಅಂಚಟಗೇರಿ, ಶಾಸಕರಾದ ಅರವಿಂದ ಬೆಲ್ಲದ್, ಪ್ರಸಾದ್ ಅಬ್ಬಯ್ಯ, ಕರ್ನಾಟಕ ಕ್ಯಾನ್ಸರ್ ಆಸ್ಪತ್ರೆ ಅಧ್ಯಕ್ಷ ಡಾ: ಬಿ.ಆರ್.ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.