IMG 20230117 WA0035

ಅಪಘಾತ ಸಂತ್ರಸ್ತರ ಕಣ್ಣಿನ ಗಾಯಗಳಿಗೆ ಟ್ರಾಮಾ ವಾರ್ಡ್‌ಗಳಲ್ಲಿ ತ್ವರಿತ ಗಮನ ಅಗತ್ಯ…!

BUSINESS Genaral STATE

ಅಪಘಾತ ಸಂತ್ರಸ್ತರ ಕಣ್ಣಿನ ಗಾಯಗಳಿಗೆ ಟ್ರಾಮಾ
ವಾರ್ಡ್‌ಗಳಲ್ಲಿ ತ್ವರಿತ ಗಮನ ಅಗತ್ಯ: ತಜ್ಞರು

ಬೆಂಗಳೂರು/ಜನವರಿ 17, 2023: ರಸ್ತೆ ಅಪಘಾತಗಳಿಂದ ಕಣ್ಣಿಗಳಿಗೆ ಆಗುವ ಗಾಯಗಳ ಪ್ರಮಾಣ ಗಣನೀಯವಾಗಿರುತ್ತದೆ. ಹಲವು ರೋಗಿಗಳು ದೃಷ್ಟಿಯನ್ನೇ ಕಳೆದುಕೊಳ್ಳುತ್ತಾರೆ. ವಾಹನ ಚಾಲನೆಯ ವೇಳೆ ಸರಳವಾದ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವ ಮೂಲಕ ಈ ಗಾಯಗಳನ್ನು ತಡೆಯಬಹುದು ಎಂದು ಬೆಂಗಳೂರಿನ ಡಾ. ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯ ನೇತ್ರ ಶಸ್ತ್ರಚಿಕಿತ್ಸಕರು ಹೇಳಿದ್ದಾರೆ.

ಭಾರತದಲ್ಲಿ ವರದಿಯಾಗುವ ಕಣ್ಣಿನ ಗಾಯಗಳಿಗೆ ರಸ್ತೆ ಅಪಘಾತಗಳ ಕೊಡುಗೆ 34% ದಷ್ಟಿದೆ. [1]ಕಣ್ಣುಗಳು ಬಹಳ ಸಂವೇದನಾತ್ಮಕವಾದ, ಸೂಕ್ಷ್ಮವಾದ ಮತ್ತು ಸಂಕೀರ್ಣವಾದ ಅಂಗಗಳಾಗಿವೆ. ಚಾಲನೆಯ ವೇಳೆ ಅಪಘಾತಗಳು ಮತ್ತು ಆಕಸ್ಮಿಕ ಘಟನೆಗಳಿಂದ ಕಣ್ಣುಗಳು ಹಾನಿಗೊಳಗಾಗುತ್ತವೆ.

ಬೆಂಗಳೂರಿನ ಅಗರ್ವಾಲ್ಸ್ ಕಣ್ಣಿನ ಆಸ್ಪತ್ರೆಯಲ್ಲಿ ವಿಟ್ರಿಯೋ ರೆಟಿನಲ್ ಸರ್ವಿಸಸ್ ವಿಭಾಗದಲ್ಲಿ ಹಿರಿಯ ಸಲಹೆಗಾರರಾಗಿರುವ  ಡಾ. ಮೋಹನರಾಜ್ ಅವರು, “ಆಘಾತದ ಸ್ವರೂಪವನ್ನು ಅವಲಂಬಿಸಿ ರಸ್ತೆ ಅಪಘಾತಗಳಲ್ಲಿ ಅನೇಕ ರೀತಿಯ ಕಣ್ಣಿನ ಗಾಯಗಳು ಸಂಭವಿಸಬಹುದು. ಅಪಘಾತದಲ್ಲಿ ಕಣ್ಣುಗಳು, ಕಣ್ಣುರೆಪ್ಪೆಗಳು, ಕಾರ್ನಿಯಾ, ಸ್ಕ್ಲೆರಾ, ಐರಿಸ್, ಲೆನ್ಸ್, ರೆಟಿನಾ ಮತ್ತು ಕಣ್ಣಿನ ನರಗಳ ಸುತ್ತಲಿನ ಮೂಳೆಗಳ ಮೇಲೆ ಪರಿಣಾಮ ಬೀರುವ ಹಲವಾರು ಗಾಯಗಳನ್ನು ನಮ್ಮ ಆಸ್ಪತ್ರೆಯ ಆಘಾತ ಚಿಕಿತ್ಸಾ ವಿಭಾಗದಲ್ಲಿ ನಾವು ನೋಡುತ್ತೇವೆ. ಕಣ್ಣಿನಲ್ಲಿ ರಕ್ತಸ್ರಾವ, ಕಣ್ಣಿನ ಪೊರೆ ಅಥವಾ ರೆಟಿನಾದ ಆಘಾತಕಾರಿ ಬೇರ್ಪಡುವಿಕೆ ಮುಂತಾದ ಪರಿಸ್ಥಿತಿಗಳೂ ಇರಬಹುದು. ತೀವ್ರತರವಾದ ಪ್ರಕರಣಗಳಲ್ಲಿ, ಕಣ್ಣು ಛಿದ್ರವೂ ಆಗಬಹುದು (ಓಪನ್ ಗ್ಲೋಬ್ ಇಂಜುರಿ). ವಿನಾಶಕಾರಿ ಪರಿಣಾಮಗಳೊಂದಿಗೆ, ಲೋಹದ ಮತ್ತು ಬೇಡವಿಲ್ಲದ ಬಾಹ್ಯ ವಸ್ತುಗಳು ಕಣ್ಣಿನ ಮೇಲ್ಮೈಯಲ್ಲಿ ಅಥವಾ ಕಣ್ಣಿನ ಒಳಭಾಗದಲ್ಲಿ ಇರಬಹುದು. ಇವುಗಳಲ್ಲಿ ಹಲವು ದೃಷ್ಟಿಯನ್ನು ಕಿತ್ತುಕೊಳ್ಳುವ ಅಪಾಯವಿರುತ್ತದೆ” ಎಂದು ವಿವರಿಸಿದರು.

ರಸ್ತೆ ಅಪಘಾತಗಳ ಸಂತ್ರಸ್ತರಿಗೆ ಚಿಕಿತ್ಸೆ ನೀಡುವಾಗ ಆಸ್ಪತ್ರೆಗಳ ತುರ್ತು ವಿಭಾಗದಲ್ಲಿ ಕಣ್ಣಿನ ಗಾಯಗಳ ಬಗ್ಗೆ ಹೆಚ್ಚಿನ ಗಮನವನ್ನು ನೀಡಬೇಕೆಂದು ಕರೆ ನೀಡಿರುವ ಡಾ.ಎನ್. ಮೋಹನರಾಜ್ ಅವರು, “ರಸ್ತೆ ಅಪಘಾತದ ಗಾಯಾಳುಗಳನ್ನು ಆಸ್ಪತ್ರೆಗೆ ಕರೆತಂದಾಗ, ರೋಗಿಯ ಜೀವವನ್ನು ಉಳಿಸಲು ದೈಹಿಕ ಗಾಯಗಳ ಮೇಲೆ ವೈದ್ಯರು ಗಮನ ಹರಿಸುತ್ತಾರೆ. ಕಣ್ಣುಗಳನ್ನು ಆಘಾತ ಚಿಕಿತ್ಸಕರು ಸಾಮಾನ್ಯವಾಗಿ ಕೊನೆಯ ಅಂಗವಾಗಿ ಪರಿಗಣಿಸುತ್ತಾರೆ. ಆದರೆ, ನೇತ್ರ ಶಾಸ್ತ್ರಜ್ಞರಿಂದ ತ್ವರಿತವಾಗಿ ಕಣ್ಣುಗಳ ತಪಾಸಣೆ ಮಾಡಿಸಿಕೊಳ್ಳುವುದು ಸೂಕ್ತ. ವಿಶೇಷವಾಗಿ ರೋಗಿಯ ತಲೆಗೆ ಆಘಾತವಾಗಿದ್ದರೆ, ಅನೇಕ ಕಣ್ಣಿನ ಗಾಯಗಳಿಗೆ ತಕ್ಷಣದ ರೋಗನಿರ್ಣಯ ಮತ್ತು ಚಿಕಿತ್ಸೆಯ ಅಗತ್ಯವಿರುತ್ತದೆ. ಕೋಮಾದಲ್ಲಿದ್ದರೂ ರೋಗಿಯ ಕಣ್ಣಿಗೆ ಹಾನಿಯಾಗಿದೆ ಎಂದು ಶಂಕಿಸಿದರೆ, ನೇತ್ರಶಾಸ್ತ್ರಜ್ಞರಿಗೆ ತಕ್ಷಣವೇ ಕರೆ ಮಾಡಬೇಕಾಗುತ್ತದೆ” ಎಂದರು.

“ರೋಗಿಯು ಬಂದ ತಕ್ಷಣ ಇತರ ಗಾಯಗಳಂತೆ ಕಣ್ಣುಗಳ ಆರೈಕೆಯೂ ಅದೇ ಸಮಯದಲ್ಲಿ ಆಗುವಂತೆ ಆಸ್ಪತ್ರೆಗಳ ಅಪಘಾತ ಚಿಕಿತ್ಸಾ ವಿಭಾಗದ ಶಿಷ್ಟಾಚಾರವನ್ನು ಬದಲಿಸಬೇಕಿದೆ. ಪ್ರಸ್ತುತವಾಗಿ ಹೀಗೆ ನಡೆಯುತ್ತಿಲ್ಲ. ರಸ್ತೆ ಅಪಘಾತದ ಸಂತ್ರಸ್ತರಿಗೆ ಚಿಕಿತ್ಸೆ ನೀಡುವ ವೈದ್ಯರಲ್ಲಿ ಹೆಚ್ಚಿನ ಅರಿವು ಇರಬೇಕು. ಕಣ್ಣಿಗೆ ಆಗಿರುವ ಹಾನಿಯ ಚಿಹ್ನೆಗಳಿಗೆ ಕಣ್ಣಿನ ಆಘಾತ ತಜ್ಞರಿಂದ ಆರಂಭಿಕ ಗಮನ ನೀಡಬೇಕಾಗುತ್ತದೆ” ಎಂದು ಡಾ. ಮೋಹನರಾಜ್ ಹೇಳಿದರು.

ಮಾನವನ ಕಣ್ಣುಗಳಂತೆ ಅವುಗಳಿಗೆ ಆಗುವ ಗಾಯಗಳೂ ತುಂಬಾ ಸಂಕೀರ್ಣವಾಗಿವೆ. ದೀರ್ಘಾವಧಿಯ ಅಂಗವೈಕಲ್ಯವನ್ನು ಕಡಿಮೆ ಮಾಡಲು ಮತ್ತು ಕಣ್ಣುಗಳ ಕಾರ್ಯವನ್ನು ಮರುಸ್ಥಾಪಿಸಲು ಇವುಗಳಿಗೆ ತಜ್ಞರ ಆರೈಕೆಯ ಅಗತ್ಯವಿರುತ್ತದೆ ಎಂದು ವೈದ್ಯರು ಹೇಳಿದರು. “ಕಣ್ಣುಗುಡ್ಡೆಯು ರಕ್ಷಣಾತ್ಮಕ ರಚನೆಯಾಗಿರುವುದರಿಂದ ಅವುಗಳಿಗೆ ಗಾಯವಾಗಿದ್ದರೆ ಸರಿಪಡಿಸಬೇಕಾಗುತ್ತದೆ. ಹಾನಿಯ ತೀವ್ರತೆಯನ್ನು ಅವಲಂಬಿಸಿ ಕಣ್ಣಿನ ಸುತ್ತಲಿನ ಮೂಳೆಯ ಮುರಿತಗಳಿಗೂ ಚಿಕಿತ್ಸೆ ನೀಡಲಾಗುತ್ತದೆ. ಸೋಂಕನ್ನು ತಡೆಗಟ್ಟಲು ಮತ್ತು ಕಣ್ಣುಗುಡ್ಡೆಯ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಕಣ್ಣಿನ ಪದರಗಳ ಗಾಯಗಳನ್ನು ಗುಣಪಡಿಸುವ ಅಗತ್ಯವಿರುತ್ತದೆ. ಕಣ್ಣಿನ ಮಸೂರಕ್ಕೆ ಗಾಯವು ಕಣ್ಣಿನ ಪೊರೆಗೆ ಆಘಾತ ಅಥವಾ ಜೋಡಣೆ ತಪ್ಪುವುದಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭದಲ್ಲಿ, ವಿಶೇಷ ಅಂಟನ್ನು ಬಳಸಿ ಜೋಡಣೆ ತಪ್ಪಿರುವ ಲೆನ್ಸ್ ಅನ್ನು ಸರಿಪಡಿಸಲಾಗುತ್ತದೆ. ಕಣ್ಣುಗಳಲ್ಲಿ ರಕ್ತಸ್ರಾವ ಮತ್ತು ರೆಟಿನಾದ ಜೋಡಣೆ ತಪ್ಪಿದ್ದರೆ ರೆಫರಲ್ ಸೆಂಟರ್‌ನಲ್ಲಿ ವಿಟ್ರೊರೆಟಿನಲ್ ಶಸ್ತ್ರಚಿಕಿತ್ಸೆಯ ಅಗತ್ಯವಿದೆ, ”ಎಂದು ಡಾ. ಮೋಹನ್ ರಾಜ್ ಮಾಹಿತಿ ನೀಡಿದರು.

ತಂತ್ರಜ್ಞಾನವು ಇಂದು ಎಷ್ಟು ಮುಂದುವರಿದಿದೆ ಎಂದರೆ ಕಾರ್ನಿಯಾ ಅಥವಾ ರೆಟಿನಾದ ಕೇಂದ್ರ ಮತ್ತು ಆಪ್ಟಿಕ್ ನರವು ಹಾನಿಗೀಡಾಗಿದ್ದರೆ, ರೋಗಿಯ ದೃಷ್ಟಿಯನ್ನು ಮರುಸ್ಥಾಪಿಸುವ ಸಾಧ್ಯತೆಗಳು ಸಾಕಷ್ಟು ಉತ್ತಮವಾಗಿವೆ ಎಂದು ಹೇಳಿರುವ ಡಾ. ಮೋಹನರಾಜ್, ಸರಳ ಮುನ್ನೆಚ್ಚರಿಕೆಗಳು ಮತ್ತು ಸುರಕ್ಷತಾ ಕ್ರಮಗಳನ್ನು ಅನುಸರಿಸುವುದು ಸೂಕ್ತ. ಚಿಕಿತ್ಸೆಗಿಂತ ಅದನ್ನು ತಡೆಗಟ್ಟುವಿಕೆ ಯಾವಾಗಲೂ ಉತ್ತಮವಾಗಿರಬೇಕು ಎಂದು ಹೇಳಿದರು.

“ಜನರು ವಾಹನ ಚಾಲನೆ ಮಾಡುವಾಗ ಹೆಲ್ಮೆಟ್‌ಗಳು, ಸೀಟ್ ಬೆಲ್ಟ್‌ಗಳು, ಹೆಡ್ ರೆಸ್ಟ್‌ಗಳು ಮತ್ತು ಏರ್‌ಬ್ಯಾಗ್‌ಗಳಂತಹ ರಕ್ಷಣಾತ್ಮಕ ಕ್ರಮಗಳನ್ನು ಸಂಪೂರ್ಣವಾಗಿ ಬಳಸಬೇಕು. ಸಾಧ್ಯವಾದರೆ, ಕನ್ನಡಕವನ್ನು ಧರಿಸಲು ಪ್ರಯತ್ನಿಸಿ. ಚಿಕ್ಕ ಮಗುವನ್ನು ಕಾರಿನ ಮುಂಭಾಗದ ಸೀಟಿನಲ್ಲಿ ಪೋಷಕರ ಮಡಿಲಲ್ಲಿ ಕೂರಿಸಿಕೊಳ್ಳುವ ಸಾಮಾನ್ಯ ಅಭ್ಯಾಸವನ್ನು ಕಟ್ಟುನಿಟ್ಟಾಗಿ ತಪ್ಪಿಸಬೇಕು, ”ಎಂದು ವೈದ್ಯರು ಎಚ್ಚರಿಸಿದ್ದಾರೆ.

*****


[1]https://nhrc.nic.in/media/press-release/nhrc-issues-advisory-centre-states-and-uts-prevent-and-minimize-impact-ocular