ಹೊಸಪೇಟೆಯಲ್ಲಿ ಪ್ರಜಾಧ್ವನಿ ಯಾತ್ರೆಯ ಸಮಾವೇಶದಲ್ಲಿ ಕಾಂಗ್ರೆಸ್ ನಾಯಕರ ಮಾತುಗಳು
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ ವಿವಾದಾತ್ಮಕ ಹೇಳಿಕೆ
ಎಐಸಿಸಿ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ:
ಪ್ರಜಾಧ್ವನಿ ಎಂದರೆ ಬಸ್ ನ ಹೆಸರಲ್ಲ, ಇಲ್ಲಿರುವ ನಾಯಕರ ಹೆಸರಲ್ಲ, ಇದು ರಾಜ್ಯದ ಜನರ ಧ್ವನಿಯ ಹೆಸರಾಗಿದೆ. ವಿಜಯನಗರವಾಗಲಿ, ಬಳ್ಳಾರಿಯಾಗಲಿ ಅಥವಾ ರಾಜ್ಯದ ಇತರ ಪ್ರದೇಶವಾಗಲಿ, ಈ ಬಿಜೆಪಿ ಸರ್ಕಾರದ ಭ್ರಷ್ಟಾಚಾರದಿಂದ ಬೇಸತ್ತಿವೆ. ಹಿಂದೂಸ್ಥಾನದ ಅತ್ಯಂತ ಭ್ರಷ್ಟ ಸರ್ಕಾರ ಎಂದರೆ ಅದು ಬೊಮ್ಮಾಯಿ ಸರ್ಕಾರ. ಹಿಂದೂಸ್ಥಾನದಲ್ಲಿ ರಾಜ್ಯದ ಖಜಾನೆಯನ್ನು ಹೆಚ್ಚಾಗಿ ಲೂಟಿ ಮಾಡಿರುವ ಸರ್ಕಾರ ಎಂದರೆ ಅದು ರಾಜ್ಯ ಬಿಜೆಪಿ ಸರ್ಕಾರ.
ಇದು 40% ಕಮಿಷನ್ ಸರ್ಕಾರ, ಪೇಸಿಎಂ ಸರ್ಕಾರ, ಇವರು ಯಾರನ್ನೂ ಬಿಟ್ಟಿಲ್ಲ. ಬಿಜೆಪಿಯವರನ್ನೇ ಬಿಟ್ಟಿಲ್ಲ. ಇವರಿಗೆ ಪ್ರತಿನಿತ್ಯ ಹಣ ಬೇಕು, ಎರಡೂ ಕೈಗಳಿಂದ ರಾಜ್ಯವನ್ನು ಲೂಟಿ ಮಾಡಿ ಮನೆಗೆ ಹೋಗುತ್ತಾರೆ. ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಇವರ ಹಣದದಾಹಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾರೆ. ಬೆಳಗಾವಿಯಲ್ಲಿ ಬಿಜೆಪಿ ಕಾರ್ಯಕರ್ತ ಸಂತೋಷ್ ಪಾಟೀಲ್ ಬಿಜೆಪಿ ಮಂತ್ರಿಗೆ ಲಂಚ ನೀಡಲಾಗದೇ ಆತ್ಮಹತ್ಯೆ ಮಾಡಿಕೊಂಡ. ನಾನು ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್ ಸೇರಿ ಸಂತೋಷ್ ಪಾಟೀಲ್ ಅವರ ಕುಟುಂಬದವರನ್ನು ಭೇಟಿ ಮಾಡಿದೆವು. ಅವರು ಹೇಳಿದ್ದು ಒಂದೇ. ಆತ ಬಿಜೆಪಿ ಕಾರ್ಯಕರ್ತನಾಗಿದ್ದು, ಆತನ ಜೀವವನ್ನೇ ಈ ಸರ್ಕಾರ ನುಂಗಿಹಾಕಿದೆ. ಇನ್ನು ನಿಮ್ಮನ್ನು ಈ ಸರ್ಕಾರ ಸುಮ್ಮನೇ ಬಿಡುವುದೇ?
ಡಿ.ಎಂ ಪ್ರಶಾಂತ್ ಎಂಬ ಮತ್ತೊಬ್ಬ ಗುತ್ತಿಗೆದಾರ ಗುಂಡು ಹಾರಿಸಿಕೊಂಡು ಸತ್ತಿದ್ದಾನೆ. ಆತನ ಮನೆಗೆ ಹೋದಾಗ ಅವರ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿತ್ತು. ನಾವು ಇದ್ದಷ್ಟು ಕಾಲ ಅಳುತ್ತಿದ್ದರು. ವಯಸ್ಸಾದ ತಂದೆ ತಾಯಿ ನಡೆಯಲು ಸಾಧ್ಯವಾಗಲಿಲ್ಲ. ನಾನು ಈ ವೇದಿಕೆ ಮೂಲಕ ಬೊಮ್ಮಾಯಿ ಅವರು ಸಂತೋಷ್ ಪಾಟೀಲ್, ಪ್ರಸಾದ್ ಹಾಗೂ ರಾಜೇಂದ್ರ ಅವರ ಜೀವವನ್ನು ವಾಪಸ್ ಕರೆತರುತ್ತಾರಾ?
ಇಷ್ಟೇ ಅಲ್ಲ, ಗುತ್ತಿಗೆದಾರರ ಸಂಘದ ಪದಾಧಿಕಾರಿಗಳು ಬಿಜೆಪಿ ಶಾಸಕನ ವಿರುದ್ಧ 90 ಲಕ್ಷ ಲಂಚದ ಆರೋಪ ಮಾಡಿದ್ದಾರೆ. ಗುತ್ತಿಗೆದಾರರ ಸಂಘದ ಆರೋಪ, ಕಾಂಗ್ರೆಸ್ ಪಕ್ಷದ ಆರೋಪವನ್ನು ಬಿಟ್ಟುಬಿಡಿ. ಬಿಜೆಪಿ ಶಾಸಕ ಯತ್ನಾಳ್ ಪ್ರತಿನಿತ್ಯ ಸಾರ್ವಜನಿಕವಾಗಿ ಬಿಜೆಪಿ ಮುಖ್ಯಮಂತ್ರಿ ಹುದ್ದೆಯನ್ನು 2500 ಕೋಟಿಗೆ ಮಾರಾಟ ಮಾಡಿದೆ. ಸಿಎಂ ಕುರ್ಚಿಯನ್ನು ಮಾರಾಟ ಮಾಡಿದರೆ ನಿಮ್ಮನ್ನು ಸುಮ್ಮನೇ ಬಿಡುವರೇ? ಬಿಜೆಪಿಯ ಕೈಗಾರಿಕ ಸಚಿವರನ್ನು ಯತ್ನಾಳ್ ಅವರು ದಳ್ಳಾಳಿ ಎಂದು ಕರೆದರು. ಈ ಸರ್ಕಾರ ಅಧಿಕಾರದಲ್ಲಿ ಕೂತು ದಳ್ಳಾಳಿಗಿರಿ ಮಾಡುತ್ತಿದೆಯೇ? ಇದನ್ನು ಬಿಜೆಪಿ ನಾಯಕರೇ ಹೇಳುತ್ತಿದ್ದಾರೆ.
ಇನ್ನು ಮಾದಕದ್ರವ್ಯ ವಿಚಾರವಾಗಿ ನಡೆದ ದಾಳಿ ಯುವಕರ ಮೇಲೆ, ಸಿನಿಮಾ ತಾರೆಯರ ಮೇಲೆ ನಡೆದ ದಾಳಿ ಅಲ್ಲ. ಅದು ಬಿಜೆಪಿ ನಾಯಕರ ವಿಡಿಯೋ ರಕ್ಷಿಸಲು ಮಾಡಲಾದ ದಾಳಿಯಾಗಿತ್ತು. ಈ ಸರ್ಕಾರ ಎಂತಹ ನೀಚ ಹಂತಕ್ಕೆ ತಲುಪಿದೆ ಎಂದರೆ ವಶ್ಯಾವಾಟಿಕೆ ದಂಧೆ ನಡೆಸುವ ಸ್ಯಾಂಟ್ರೋ ರವಿ ಎಂಬ ವ್ಯಕ್ತಿ ವ್ಯಕ್ತಿ ಪೊಲೀಸ್ ಎಸ್ಪಿ, ಡಿವೈಎಸ್ಪಿಗೆ ಕರೆ ಮಾಡುತ್ತಾರೆ. ಇದು ಸರ್ಕಾರ ನಡೆಸುವ ರೀತಿಯೇ? ಇವರು ನಿಮ್ಮ ಮಕ್ಕಳಿಗೆ ನೆರವು ನೀಡುವರೇ?
ಇನ್ನು ಬಿಜೆಪಿ ನಾಯಕ ಸಿ.ಪಿ ಯೋಗೇಶ್ವರ್ ದೇಶದ ಗೃಹಮಂತ್ರಿ ಅಮಿತ್ ಶಾ ಅವರನ್ನು ರೌಡಿ ಎಂದು ಕರೆದಿದ್ದಾರೆ. ಇದು ರೌಡಿಗಳ ಪಕ್ಷವೇ? ಗೂಂಡಾಗಳ ಸರ್ಕಾರದ ಬಗ್ಗೆ ಮಾತನಾಡುವುದಾದರೆ ಅದರ ಒಂದು ಭಾಗ ಈ ಜಿಲ್ಲೆಯಲ್ಲೂ ಇದೆ. ನಮ್ಮ ಪರಿಶಿಷ್ಟ ಜಾತಿಯ ಸಹೋದರರ ಮೇಲೆ ಮಂತ್ರಿ ಆನಂದ್ ಸಿಂಗ್ ದಬ್ಬಾಳಿಕೆ ನಡೆಸುತ್ತಿದ್ದಾರೆ. ಈ ವಿಚಾರವಾಗಿ ಮೊಕದ್ದಮೆ ದಾಖಲಾದರೂ ಆತ ಜೈಲಿನಲ್ಲಿರುವ ಬದಲು ಮಂತ್ರಿ ಕುರ್ಚಿ ಮೇಲೆ ಕೂತಿದ್ದಾರೆ.
ನಿಮ್ಮ ಆಶೀರ್ವಾದದಿಂದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಈ ಎಲ್ಲ ಭ್ರಷ್ಟ ಮಂತ್ರಿಗಳನ್ನು ಜೈಲಿಗೆ ಅಟ್ಟಲಿದೆ. ಬಡವರು, ದಲಿತರು, ಮಹಿಳೆಯರ ಮೇಲೆ ದಬ್ಬಾಳಿಕೆ ನಡೆಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಇನ್ನು 70 ದಿನಗಳಲ್ಲಿ ಈ ಸರ್ಕಾರ ಅಂತ್ಯವಾಗಿ ನಿಮಗೆ ನ್ಯಾಯ ಸಿಗಲಿದೆ. ಇಲ್ಲಿರುವ ಯುವಕರಿಗೆ ಉದ್ಯೋಗ ನಷ್ಟವಾಗಿದ್ದು, ಬಿಜೆಪಿ ಸರ್ಕಾರದ ನಾಯಕರು ಇಲ್ಲಿನ ಗಣಿಯನ್ನು ಲೂಟಿ ಮಾಡಿದ್ದಾರೆ. ಪರಿಸರ ಕಾಪಾಡುತ್ತಾ ಗಣಿಗಾರಿಕೆ ಮಾಡಿದರೆ ನಮ್ಮ ಲಕ್ಷಾಂತರ ಜನರಿಗೆ ಮತ್ತೆ ಉದ್ಯೋಗ ಸಿಗಲಿದೆ. ಸುಪ್ರೀಂ ಕೋರ್ಟ್ ಮೆಟ್ಟಿಲೇರಿದರೂ ಸರಿ ನಾವು ಗಣಿ ಮಾಫಿಯಾವನ್ನು ಬಿಡುವುದಿಲ್ಲ, ಜತೆಗೆ ನಮ್ಮ ಜನರ ಉದ್ಯೋಗವನ್ನು ಕಿತ್ತುಕೊಳ್ಳಲು ಬಿಡುವುದಿಲ್ಲ. ಇದು ನಮ್ಮ ವಾಗ್ದಾನ.
ಕಾಂಗ್ರೆಸ್ ಪಕ್ಷ ಕೆಲವು ಗ್ಯಾರಂಟಿ ಯೋಜನೆಗಳನ್ನು ಘೋಷಿಸುತ್ತಿದೆ. ಕಾಂಗ್ರೆಸ್ ಕೊಟ್ಟ ವಚನದಂತೆ ನಡೆಯುತ್ತದೆ. ಕಾಂಗ್ರೆಸ್ 200 ಯುನಿಟ್ ವಿದ್ಯುತ್ ಉಚಿತವಾಗಿ ನೀಡಲಾಗುವುದು ಎಂದರೆ ಅದು ಜಾರಿಗೆ ಬರುತ್ತದೆ. ರಾಜ್ಯದ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು 2 ಸಾವಿರ ರೂಪಾಯಿ ಹಣವನ್ನು ನೀಡಲಾಗುವುದು. ಆಮೂಲಕ ನವ ಕರ್ನಾಟಕ ನಿರ್ಮಾಣ ಮಾಡಲಾಗುವುದು. ಈ ನವ ಕರ್ನಾಟಕದಲ್ಲಿ ಯುವಕರು, ಮಹಿಳೆಯರು, ರೈತರು, ಶ್ರಮಜೀವಿ ಕಾರ್ಮಿಕರಿಗೆ ಜಾಗ ಇರುತ್ತದೆ. ರಾಜ್ಯವನ್ನು ಪ್ರಗತಿಯತ್ತ ಮುನ್ನಡೆಸಲಾಗುವುದು.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ
ಪ್ರಜಾಧ್ವನಿ ಯಾತ್ರೆಯ ಮೂಲಕ ನಮ್ಮ ಪಕ್ಷದ ಎಲ್ಲಾ ನಾಯಕರು 22 ಜಿಲ್ಲೆಗಳಲ್ಲಿ ಪ್ರವಾಸ ಮಾಡಿ, ಸಮಾವೇಶಗಳಲ್ಲಿ ಭಾಗವಹಿಸಿ, ಜನರ ಧ್ವನಿಯನ್ನು ಆಲಿಸುವ ಕೆಲಸ ಮಾಡಲಿದ್ದೇವೆ. ಈ ಯಾತ್ರೆಯ ಮೂಲಕ ಜನರ ಧ್ವನಿಯನ್ನು ಆಲಿಸಿ ಮುಂದೆ ಅಧಿಕಾರಕ್ಕೆ ಬಂದರೆ ಅದರಂತೆ ನಡೆಯುವ ಕೆಲಸ ಮಾಡುತ್ತೇವೆ. ನಮ್ಮದು ನುಡಿದಂತೆ ನಡೆಯುವ ಪಕ್ಷ. ನಾವು ಚುನಾವಣಾ ಕಾಲದಲ್ಲಿ ನೀಡುವ ಭರವಸೆಗಳನ್ನು ಪ್ರಾಮಾಣಿಕವಾಗಿ ಈಡೇರಿಸುವ ಕೆಲಸ ಮಾಡುತ್ತೇವೆ. 2013ರ ಚುನಾವಣೆಯಲ್ಲಿ ರಾಜ್ಯದ ಜನರಿಗೆ 165 ಭರವಸೆಗಳನ್ನು ನೀಡಿ, 2013ರಿಂದ 2018 ರವರೆಗೆ ನಾವು ಅಧಿಕಾರದಲ್ಲಿದ್ದಾಗ 158 ಭರವಸೆಗಳನ್ನು ಈಡೇರಿಸಿದ್ದೇವೆ. ಬಿಜೆಪಿ ಅವರು ಬೇಕಾದರೆ ನಮ್ಮ ಪ್ರಣಾಳಿಕೆ ಮತ್ತು ಅವುಗಳನ್ನು ಈಡೇರಿಸಿದ ಮಾಹಿತಿಯನ್ನು ನೋಡಬಹುದು. ಬಿಜೆಪಿ ಪಕ್ಷ 2018ರಲ್ಲಿ 600 ಭರವಸೆಗಳನ್ನು ನೀಡಿತ್ತು, ಬಸವರಾಜ ಬೊಮ್ಮಾಯಿ ಅವರು ಈ 600 ಭರವಸೆಗಳಲ್ಲಿ ಎಷ್ಟು ಈಡೇರಿಸಿದರೆ ಎಂಬುದನ್ನು ಹೇಳಬೇಕು. ಈ ಬಗ್ಗೆ ಹಲವು ಬಾರಿ ನಾನು ಚರ್ಚೆಗೆ ಆಹ್ವಾನವನ್ನು ನೀಡಿದ್ದೇನೆ, ಬೊಮ್ಮಾಯಿ ಅವರಿಗೆ ಧಮ್, ತಾಕತ್ ಇದ್ದರೆ ಒಂದೇ ವೇದಿಕೆ ಮೇಲೆ ಈ ವಿಚಾರವನ್ನು ಚರ್ಚೆ ಮಾಡೋಣ ಬನ್ನಿ. ನಮ್ಮ ಸರ್ಕಾರ ಪ್ರಣಾಳಿಕೆ ಹೊರತಾಗಿ 30 ಹೆಚ್ಚುವರಿ ಕಾರ್ಯಕ್ರಮವನ್ನು ಜನರಿಗೆ ಕೊಟ್ಟಿದ್ದೇವೆ. ಬಿಜೆಪಿಗೆ 600ರಲ್ಲಿ 10% ಭರವಸೆಗಳನ್ನು ಈಡೇರಿಸಲು ಸಾಧ್ಯವಾಗಿಲ್ಲ. ಬೊಮ್ಮಾಯಿ ಅವರೇ ಎಷ್ಟು ಸುಳ್ಳು ಹೇಳುತ್ತೀರಿ? ಬಿಜೆಪಿ ಎಂದರೆ ಸುಳ್ಳಿನ ಫ್ಯಾಕ್ಟರಿ.
ತುಂಗಭದ್ರಾ ಈ ನಾಡಿನ ಜೀವನಾಡಿ. ತುಂಗಭದ್ರಾ ಅಣೆಕಟ್ಟಿನಲ್ಲಿ 130 ಟಿಎಂಸಿ ನೀರು ಸಂಗ್ರಹವಾಗಬೇಕು ಆದರೆ ಹೂಳು ತುಂಬಿರುವುದರಿಂದ 37 ಟಿಎಂಸಿ ನೀರಿನ ಶೇಖರಣೆ ಕಡಿಮೆಯಾಗಿದೆ. ಇಷ್ಟರ ಮಟ್ಟಿಗೆ ಜನರಿಗೆ ಅನ್ಯಾಯ ಆಗಿದೆ. ಆಂದ್ರಪ್ರದೇಶಕ್ಕೆ 200 ಟಿಎಂಸಿ ನೀರು ಹರಿದುಹೋಗುತ್ತಿದೆ, ಅದಕ್ಕೆ ಪರ್ಯಾಯ ಅಣೆಕಟ್ಟು ಕಟ್ಟುತ್ತೇವೆ ಎಂದು ಬಿಜೆಪಿ ಭರವಸೆ ನೀಡಿತ್ತು, ಅವರಿಂದ ಕಟ್ಟಲು ಸಾಧ್ಯವಾಗಿದೆಯಾ? ನಾನು ಇಂದು ಈ ಭಾಗದ ಜನರಿಗೆ ಮಾತು ಕೊಡುತ್ತೇನೆ, ನಾವು ಅಧಿಕಾರಕ್ಕೆ ಬಂದರೆ ಸಮನಾಂತರ ಅಣೆಕಟ್ಟನ್ನು ಕಟ್ಟುತ್ತೇವೆ. ಇದಕ್ಕೆ ಎಷ್ಟು ಹಣ ಬೇಕಾದರೂ ಖರ್ಚಾಗಲಿ ನಾವು ಅದನ್ನು ಒದಗಿಸುತ್ತೇವೆ.
ಬಿಜೆಪಿಯವರು ತಾವು ಅಧಿಕಾರಕ್ಕೆ ಬಂದರೆ ರಾಜ್ಯದ ನೀರಾವರಿಗೆ 5 ವರ್ಷಗಳಲ್ಲಿ 1 ಲಕ್ಷದ 50 ಸಾವಿರ ಕೋಟಿ ಹಣ ಖರ್ಚು ಮಾಡುತ್ತೇವೆ ಎಂದು ಭರವಸೆ ನೀಡಿದ್ದರು. ಎಷ್ಟು ಖರ್ಚು ಮಾಡಿದ್ದೀರಿ ಬೊಮ್ಮಾಯಿ? ಈ ವರ್ಷದ ಕೊನೆಗೆ ಖರ್ಚಾಗುವುದು 45 ಸಾವಿರ ಕೋಟಿ ಮಾತ್ರ. ಇನ್ನೂ 1 ಲಕ್ಷ ಕೋಟಿ ಹಣ ಖರ್ಚು ಮಾಡಲು ಸಾಧ್ಯವಾಗಿಲ್ಲ. ಪಕ್ಷದ ನಾಯಕರ ಜೊತೆ ಈ ಹಿಂದೆ ಹೊಸಪೇಟೆಯಿಂದ ಕೂಡಲಸಂಗಮದ ವರೆಗೆ ಪಾದಯಾತ್ರೆ ಮಾಡಿ, ನಾವು ಅಧಿಕಾರಕ್ಕೆ ಬಂದರೆ ಪ್ರತೀ ವರ್ಷ ನೀರಾವರಿಗೆ 10,000 ಕೋಟಿ ಖರ್ಚು ಮಾಡುತ್ತೇವೆ ಎಂದು ಘೊಷಣೆ ಮಾಡಿದ್ದೆ. ಇದರಂತೆ ನಾವು 5 ವರ್ಷಗಳಲ್ಲಿ 50,000 ಕೋಟಿಗೂ ಅಧಿಕ ಹಣವನ್ನು ಖರ್ಚು ಮಾಡಿ ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಂಡಿದ್ದೇವೆ.
ನಾವು ಹಿಂದೆಯೂ ನುಡಿದಂತೆ ನಡೆದಿದೆ. ಮುಂದೆಯೂ ಇದಕ್ಕೆ ಬದ್ಧವಾಗಿರುತ್ತೇವೆ. ಬಿಜಾಪುರ ಸಮಾವೇಶದಲ್ಲಿ ನಾವೊಂದು ಘೋಷಣೆ ಮಾಡಿದ್ದೇವೆ, ಮುಂದಿನ ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ 5 ವರ್ಷಗಳಲ್ಲಿ 2 ಲಕ್ಷ ಕೋಟಿ ಹಣವನ್ನು ರಾಜ್ಯದ ನೀರಾವರಿ ಯೋಜನೆಗಳಿಗಾಗಿ ಖರ್ಚು ಮಾಡುತ್ತೇವೆ ಎಂಬ ವಾಗ್ದಾನ ನೀಡಿದ್ದೇವೆ. ಇದರಲ್ಲಿ ತುಂಗಭದ್ರಾ ಸಮನಾಂತರ ಅಣೆಕಟ್ಟು ಕೂಡ ಸೇರಿದೆ. ಈ ಭಾಗದ ರೈತರು ವಾರ್ಷಿಕವಾಗಿ ಸುಮಾರು 7 ರಿಂದ 8 ಲಕ್ಷ ಟನ್ ಕಬ್ಬು ಬೆಳೆಯುತ್ತಾರೆ. ಇಲ್ಲಿ ಬೆಳೆದ ಕಬ್ಬನ್ನು ದಾವಣಗೆರೆ, ಹರಪ್ಪನಹಳ್ಳಿ, ಮುಂಡರಗಿಗೆ ಹೋಗಬೇಕು. ಇಲ್ಲಿನ ಐ,ಎಸ್,ಆರ್ ಕಬ್ಬಿನ ಕಾರ್ಖಾನೆ, ಕಂಪ್ಲಿ ಸಕ್ಕರೆ ಕಾರ್ಖಾನೆ ಮುಚ್ಚಿಹೋಗಿದೆ. ಆನಂದ್ ಸಿಂಗ್ ಅವರಿಂದ ಇವುಗಳ ಬಾಗಿಲು ತೆಗೆಸಲು ಆಯಿತಾ? ಇದರಿಂದ 10,000 ಎತ್ತಿನ ಬಂಡಿ ಇಟ್ಟವರು ನಿರುದ್ಯೋಗಿಗಳಾದರು, 40,000 ರೈತ ಕುಟುಂಬಗಳು ಬೀದಿ ಪಾಲಾದವು. ಹೀಗಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಇಲ್ಲಿನ ಸಕ್ಕರೆ ಕಾರ್ಖಾನೆಗಳನ್ನು ಆರಂಭಿಸಿ, ಹತ್ತಿರದಲ್ಲೇ ಕಾರ್ಖಾನೆ ಸಿಗುವಂತ ಕೆಲಸ ಮಾಡುತ್ತೇವೆ. ಸಕ್ಕರೆ ಕಾರ್ಖಾನೆ ಮುಚ್ಚಿಹೋಗಿರುವುದರಿಂದ ಗಾಣಗಳಲ್ಲಿ ಬೆಲ್ಲ ತಯಾರು ಮಾಡುತ್ತಿದ್ದಾರೆ, ಇದರಿಂದ ರೈತರಿಗೆ ಕೊಂಚ ಸಹಾಯವಾಗುತ್ತಿದೆ. ಆದರೆ ಜಿಲ್ಲಾಡಳಿತದವರು ಬೆಲ್ಲ ತಯಾರಿಸುವ ಗಾಣಗಳನ್ನು ಮುಚ್ಚಿಸಲು ನೋಟಿಸ್ ನೀಡುತ್ತಿದ್ದಾರೆ. ಇದಕ್ಕೆ ಆನಂದ್ ಸಿಂಗ್ ಕಾರಣ. ಈ ಸರ್ಕಾರ ಗಾಣಗಳನ್ನು ಮುಚ್ಚಿಸಲು ಹೊರಟರೆ ನಾವು ರೈತರ ಪರವಾಗಿ ಹೋರಾಟ ಮಾಡುತ್ತೇವೆ ಎಂಬ ಎಚ್ಚರಿಕೆಯನ್ನು ಸರ್ಕಾರ ಮತ್ತು ಡಿಸಿ ಗೆ ಎಚ್ಚರಿಕೆ ನೀಡುತ್ತೇನೆ. ಒಂದು ವೇಳೆ ಮುಚ್ಚಿಸಿದ್ರೆ ಮುಂದಿನ ದಿನಗಳಲ್ಲಿ ನಿಮ್ಮ ಮೇಲೆ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ.
ಇದೊಂದು ಐತಿಹಾಸಿಕ ಸ್ಥಳ. ಇಲ್ಲಿನ 25 ವಾರ್ಡ್ ಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆ. ಯಾಕ್ರೀ ಆನಂದ್ ಸಿಂಗ್ ಈ ಸಮಸ್ಯೆಯನ್ನು ಬಗೆಹರಿಸಿಲ್ಲ? ಮಳೆ ಬಂದರೆ ಇಡೀ ಹೊಸಪೇಟೆ ನೀರಿನಿಂದ ತುಂಬಿ ಹೋಗುತ್ತದೆ. ಸರಿಯಾಗಿ ಚರಂಡಿ ವ್ಯವಸ್ಥೆ ಮಾಡಿಲ್ಲ. ಇಂಥವರು ಮತ್ತೆ ಅಧಿಕಾರಕ್ಕೆ ಬರಬೇಕ? ನಾನು ಮುಖ್ಯಮಂತ್ರಿಯಾಗಿರುವಾಗ ಎಲ್ಲಾ ಜಾತಿ ಧರ್ಮದ ಬಡವರಿಗೆ ಉಚಿತವಾಗಿ 7 ಕೆ.ಜಿ ಅಕ್ಕಿಯನ್ನು ನೀಡುತ್ತಿದ್ದೆ, ಈಗ 4 ಕೆ.ಜಿ ಗೆ ಕಡಿಮೆ ಮಾಡಿದ್ದಾರೆ. ಇದು ಯಾರಪ್ಪನ ಮನೆ ಹಣ? ಜನರ ದುಡ್ಡಲ್ಲಿ ಜನರಿಗೆ ಅಕ್ಕಿ ಕೊಡಲು ಏನು ರೋಗ ಇವರಿಗೆ. ಇಂಥವರನ್ನು ಅಧಿಕಾರದಿಂದ ಕಿತ್ತೊಗೆಯಬೇಕು. ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ತಲಾ 5 ವಿಧಾನಸಭಾ ಕ್ಷೇತ್ರಗಳು ಇವೆ. ವಿಜಯನಗರದಲ್ಲಿ 5ಕ್ಕೆ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅನ್ನು ಗೆಲ್ಲಿಸುವ ತೀರ್ಮಾನ ಇಲ್ಲಿನ ಜನ ಮಾಡಬೇಕು.
ಸಂವಿಧಾನಕ್ಕೆ ತಿದ್ದುಪಡಿ ತಂದು 371(ಜೆ) ಮಾಡಿದ್ದು ಕಾಂಗ್ರೆಸ್ ಸರ್ಕಾರ. ಮಲ್ಲಿಕಾರ್ಜುನ ಖರ್ಗೆ, ಧರಂಸಿಂಗ್ ಅವರ ಜೊತೆ ನಾವೆಲ್ಲ ಹೋರಾಟ ಮಾಡಿ ಶ್ರೀಮತಿ ಸೋನಿಯಾ ಗಾಂಧಿ ಮತ್ತು ಮನಮೋಹನ್ ಸಿಂಗ್ ಅವರನ್ನು ಒಪ್ಪಿಸಿ ಇದನ್ನು ಜಾರಿಗೆ ತಂದವರು ನಾವು. ಹೆಚ್.ಕೆ ಪಾಟೀಲ್ ಅವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಿದ್ದೆ, ಈ ಸಮಿತಿ ನೀಡಿದ್ದ ವರದಿಯ ಶಿಫಾರಸನ್ನು ನೂರಕ್ಕೆ ನೂರರಷ್ಟು ಒಪ್ಪಿ ಜಾರಿ ಮಾಡಿದ್ದು ನಾವು. ಹೈದ್ರಾಬಾದ್ ಕರ್ನಾಟಕವನ್ನು ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದ್ದೆ ಬಿಜೆಪಿ ಸಾಧನೆ. 371(ಜೆ) ವಿರೋಧ ಮಾಡಿದ್ದು ಬಿಜೆಪಿಯ ಅಡ್ವಾಣಿ ಅವರು. ಎಸ್,ಎಂ ಕೃಷ್ಣ ಅವರು ಮುಖ್ಯಮಂತ್ರಿಯಾಗಿರುವಾಗ ಲಾಲ್ ಕೃಷ್ಣ ಅಡ್ವಾಣಿ ಅವರು ಗೃಹ ಸಚಿವರಾಗಿದ್ದ ವೇಳೆ ಕೃಷ್ಣ ಅವರಿಗೆ ಪತ್ರ ಬರೆದು 371(ಜೆ) ಮಾಡಲು ಸಾಧ್ಯವಿಲ್ಲ ಎಂದಿದ್ದರು. ವಾಜಪೇಯಿ ಪ್ರಧಾನಿ ಆಗಿದ್ದಾಗ ಇದನ್ನು ಮಾಡಿಸಲು ಸಾಧ್ಯವಾಗಿಲ್ಲ. ಮನಮೋಹನ್ ಸಿಂಗ್ ಅವರ ಸರ್ಕಾರ ಸಂವಿಧಾನಕ್ಕೆ ತಿದ್ದುಪಡಿ ತಂದು ಇಂದು ಈ ಭಾಗದ ಮಕ್ಕಳು ಇಂಜಿನಿಯರ್, ಲಾಯರ್, ಡಾಕ್ಟರ್, ಶಿಕ್ಷಕರಾಗಲು 371(ಜೆ) ವಿಶೇಷ ಮೀಸಲು ಸೌಲಭ್ಯ ಕಾರಣ. ನಮ್ಮ ಸರ್ಕಾರದ ಅವಧಿಯಲ್ಲಿ ಈ ಭಾಗದ 36,000 ಹುದ್ದೆಗಳನ್ನು ಭರ್ತಿ ಮಾಡಿದ್ದೆವು. ಆನಂದ್ ಸಿಂಗ್ ನೀವೆಷ್ಟು ಹುದ್ದೆ ಭರ್ತಿ ಮಾಡಿದ್ದಿಯಪ್ಪ? ಒಂದೇ ಒಂದು ಹುದ್ದೆ ಭರ್ತಿ ಮಾಡಿಲ್ಲ. ನಾವು ಅಧಿಕಾರಕ್ಕೆ ಬಂದರೆ ಹೈದ್ರಾಬಾದ್ ಕರ್ನಾಟಕದ ಅಭಿವೃದ್ಧಿಗೆ ಪ್ರತೀ ವರ್ಷ 5000 ಕೋಟಿ ಹಣ ಖರ್ಚು ಮಾಡುತ್ತೇವೆ ಮತ್ತು ಈ ಭಾಗದ ಎಲ್ಲಾ ಹುದ್ದೆಗಳನ್ನು ಭರ್ತಿ ಮಾಡುತ್ತೇವೆ. ಇದರ ಜೊತೆಗೆ ಈಗ 4 ಕೆ.ಜಿ ಮಾಡಿರುವ ಅಕ್ಕಿಯನ್ನು 10 ಕೆ.ಜಿ ಗೆ ಏರಿಕೆ ಮಾಡುತ್ತೇವೆ. ಈ ನಂಬಿಕೆ ನಿಮಗೆ ಇದೆ ಅಲ್ವಾ?
ಈಗಾಗಲೇ ನಮ್ಮ ಪಕ್ಷ ಪ್ರತೀ ಮನೆಗೆ 200 ಯುನಿಟ್ ಉಚಿತವಾಗಿ ವಿದ್ಯುತ್ ನೀಡುವುದಾಗಿ ಘೊಷಿಸಿದರೆ, ನಿನ್ನೆ ಪ್ರಿಯಾಂಕ ಗಾಂಧಿ ಅವರು ರಾಜ್ಯದ ಪ್ರತೀ ಮನೆಯ ಯಜಮಾನಿಗೆ ತಿಂಗಳಿಗೆ 2000 ರೂಪಾಯಿ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಇದನ್ನು ಕೇಳಿದ ಬಸವರಾಜ ಬೊಮ್ಮಾಯಿಗೆ ನಡುಕ ಶುರುವಾಗಿದೆ. ಇಷ್ಟುದಿನ ಮಲಗಿದ್ದ ಸರ್ಕಾರ ಈಗ ಎಚ್ಚರಗೊಂಡು ನಾವು ಮುಂದಿನ ಬಜೆಟ್ ನಲ್ಲಿ ಮಹಿಳೆಯರಿಗಾಗಿ ಕಾರ್ಯಕ್ರಮ ನೀಡುತ್ತೇವೆ ಎಂದು ಜಾಹಿರಾತು ನೀಡಲು ನಾಚಿಕೆಯಾಗಲ್ವಾ? 2018ರ ಚುನಾವಣೆ ವೇಳೆ ಮಹಿಳೆಯರಿಗಾಗಿ ಬಿಜೆಪಿ 21 ಭರವಸೆಗಳನ್ನು ನೀಡಿತ್ತು, ಇದರಲ್ಲಿ ಒಂದನ್ನೂ ಈಡೇರಿಸಿಲ್ಲ. ಬಿಜೆಪಿ ಅವರು ಮನುಸ್ಮೃತಿಯಲ್ಲಿ ನಂಬಿಕೆ ಇಟ್ಟುಕೊಂಡವರು, ನಾವು ಅಂಬೇಡ್ಕರರ ಸಂವಿಧಾನದಲ್ಲಿ ನಂಬಿಕೆ ಇಟ್ಟುಕೊಂಡವರು.
ನಾವು 5 ವರ್ಷಗಳಲ್ಲಿ ಸೂರಿಲ್ಲದವರಿಗೆ 15 ಲಕ್ಷ ಮನೆಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೆವು. ಬಿಜೆಪಿ ಸರ್ಕಾರ ಹೊಸಪೇಟೆಯಲ್ಲಿ ಒಂದು ಮನೆ ನಿರ್ಮಾಣ ಮಾಡಿ ಕೊಟ್ಟಿದೆಯೇನಪ್ಪಾ ಆನಂದ್ ಸಿಂಗ್? ಹೊಸಪೇಟೆಯಲ್ಲಿ 28,000 ಜನರಿಗೆ ಹಕ್ಕುಪತ್ರ ನೀಡುವುದಾಗಿ ಆನಂದ್ ಸಿಂಗ್ ಹೇಳಿ 10 ವರ್ಷ ಆಗಿದೆ, ಕೊಟ್ಟಿದ್ದಾರ? ಇಂಥವರು ಗೆಲ್ಲಬೇಕ?
ಬಿಜೆಪಿ ಆಡಳಿತದಲ್ಲಿ ಭ್ರಷ್ಟಾಚಾರ ಮುಗಿಲುಮುಟ್ಟಿದೆ. ವಿಧಾನಸೌಧದ ಗೋಡೆಗಳು ಕೂಡ ಲಂಚ, ಲಂಚ ಎಂದು ಪಿಸುಗುಟ್ಟುತ್ತದೆ. ಮೊದಲು ಬಾರಿಗೆ ಬೊಮ್ಮಾಯಿ ಸರ್ಕಾರಕ್ಕೆ 40% ಕಮಿಷನ್ ಸರ್ಕಾರ ಎಂಬ ಹೆಸರು ಬಂದಿದೆ. ಸಂತೋಷ್ ಪಾಟೀಲ್, ಪ್ರಸಾದ್ ಎಂಬ ಗುತ್ತಿಗೆದಾರರು ಆತ್ಮಹತ್ಯೆ ಮಾಡಿಕೊಂಡರು. ಶಿವಕುಮಾರ್ ಎಂಬ ಗುತ್ತಿಗೆದಾರ ದಯಾಮರಣ ಕೋರಿ ರಾಷ್ಟ್ರಪತಿಗಳಿಗೆ ಪತ್ರ ಬರೆದರು. ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ 90 ಲಕ್ಷ ಲಂಚಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂಬ ಆಡಿಯೋ ಅನ್ನು ನಿನ್ನೆ ಮಂಜುನಾಥ್ ಎಂಬ ಗುತ್ತಿಗೆದಾರ ಬಿಡುಗಡೆ ಮಾಡಿದ್ದಾರೆ. ಕಮಿಷನ್ ಆರೋಪಗಳ ಬಗ್ಗೆ ತನಿಖೆ ಮಾಡಿಸಲು ಸಾಕ್ಷಿ ಕೊಡಿ ಎಂದು ಬೊಮ್ಮಾಯಿ ಕೇಳುತ್ತಿದ್ದರು, ಇದಕ್ಕಿಂತ ಇನ್ನೇನು ಸಾಕ್ಷಿ ಬೇಕು ಬೊಮ್ಮಾಯಿ?
ಇಂದಿರಾ ಕ್ಯಾಂಟೀನ್ ಮುಚ್ಚುತ್ತಿದ್ದಾರೆ. ನಾವು ಅಧಿಕಾರಕ್ಕೆ ಬಂದ ಮೇಲೆ ಈಗ ಬಂದ್ ಆಗಿರುವ ಎಲ್ಲಾ ಇಂದಿರಾ ಕ್ಯಾಂಟೀನ್ ಗಳನ್ನು ತೆರೆಯುವ ಕೆಲಸ ಮಾಡುತ್ತೇವೆ. ಹೊಸಪೇಟೆಯಲ್ಲಿ ಕುಡಿಯುವ ನೀರಿನ ಪೈಪ್ ಒಡೆದು ಅದಕ್ಕೆ ಕೊಳಚೆ ನೀರು ಸೇರಿ 200 ಜನ ಅಸ್ವಸ್ಥರಾಗಿದ್ದಾರೆ, ಒಬ್ಬ ಮಹಿಳೆ ಮೃತಪಟ್ಟಿದ್ದಾಳೆ. ಇದನ್ನು ಸಚಿವ ಆನಂದ್ ಸಿಂಗ್ ಕೂಡ ಒಪ್ಪಿಕೊಂಡಿದ್ದಾರೆ. ನಿಮಗೆ ಮಾನ ಮರ್ಯಾದಿ ಇದ್ದರೆ ಪ್ರಕರಣದ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಿ ಎಂದು ಆನಂದ್ ಸಿಂಗ್ ಅವರಿಗೆ ಹೇಳುತ್ತೇನೆ.
ಮುಂಬರುವ ಚುನಾವಣೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ಕಿತ್ತೊಗೆದು ಕಾಂಗ್ರೆಸ್ ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡಬೇಕು ಎಂದು ತಮ್ಮಲ್ಲಿ ಕೈಮುಗಿದು ಮನವಿ ಮಾಡುತ್ತೇನೆ.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್
ಪ್ರಜಾಧ್ವನಿ ಯಾತ್ರೆಯ ಮೂಲ ಉದ್ದೇಶ ಕಳೆದ ನಾಲ್ಕು ವರ್ಷಗಳಿಂದ ಬಿಜೆಪಿ ಸರ್ಕಾರ ಯಾವ ರೀತಿ ಜನರನ್ನು ಶೋಷಣೆ ಮಾಡಿದೆ, ಯಾವ ರೀತಿ ಕರ್ನಾಟಕವನ್ನು ರೋಗಗ್ರಸ್ತ ರಾಜ್ಯ ಮಾಡಲು ಹಮ್ಮಿಕೊಂಡಿರುವ ಕಾರ್ಯಕ್ರಮದ ವಿರುದ್ಧ ಜನಜಾಗೃತಿ ಮೂಡಿಸಲು ನಾವು ಇಲ್ಲಿಗೆ ಬಂದಿದ್ದೇವೆ.
ಪ್ರಧಾನಮಂತ್ರಿಯಾಗಿ 9 ವರ್ಷ ಆಗಿರುವ ಮೋದಿ ಅವರು ಸುಳ್ಳಿನ ಸರದಾರ. ಅವರು ಸುಳ್ಳು ಬಿಟ್ಟರೆ ಬೇರೆ ನಾವು ನೋಡಿಲ್ಲ. ಕಾಂಗ್ರೆಸ್ ಪಕ್ಷ 70 ವರ್ಷಗಳ ಕಾಲ ಏನು ಮಾಡಿಲ್ಲ ಎನ್ನುವ ಸುಳ್ಳಿನ ಸರದಾರ, ರಾಜ್ಯದಲ್ಲಿ ಎರಡು ಬಾರಿ ಅಧಿಕಾರ ನಡೆಸಿರುವ ಬಿಜೆಪಿ ಮಾಡಿರುವ ಯಾವುದಾದರೂ ಒಳ್ಳೆಯ ಕೆಲಸ ಮಾಡಿದ್ದಾರಾ ಎಂದು ಹೇಳಲಿ.
ಸಕ್ಕರೆ ಕಾರ್ಖಾನೆ ಮುಚ್ಚಲಾಗಿದೆ, ಬಳ್ಳಾರಿ ಅವಿಭಾಜ್ಯ ಜಿಲ್ಲೆ ಇದ್ದಾಗ ಸಕ್ಕರೆ, ಎಣ್ಣೆ, ಜವಳಿ ಹಾಗೂ ಬಿಸ್ಕೆಟ್ ಕಾರ್ಖಾನೆ ಇದ್ದ ಊರು ಈಗ ಎಲ್ಲವೂ ಬಂದ್ ಮಾಡಿ ನಿರುದ್ಯೋಗ ಹೆಚ್ಚಿಸಿರುವುದೇ ಬಿಜೆಪಿ ಸರ್ಕಾರದ ಸಾಧನೆ. ಕಾಂಗ್ರೆಸ್ ಪಕ್ಷ 138 ವರ್ಷಗಳ ಇತಿಹಾಸವಿರುವ ಪಕ್ಷ. ಸ್ವಾತಂತ್ರ್ಯ ಪೂರ್ವದಲ್ಲಿ ಬ್ರಿಟೀಷರ ಗುಲಾಮಗಿರಿ ವಿರುದ್ಧ ಹೋರಾಟ ಮಾಡಿ ತ್ಯಾಗ ಬಲಿದಾನ ಕೊಟ್ಟು ನಮಗೆಲ್ಲರಿಗೂ ಸ್ವಾತಂತ್ರ್ಯ, ಸಂವಿಧಾನ ನೀಡಲಾಗಿದೆ.
ಸ್ವಾತಂತ್ರ್ಯ ಬಂದ ನಂತರ ನೆಹರೂ ಅವರ ಸರ್ಕಾರ ಪಂಚವಾರ್ಷಿಕ ಯೋಜನೆಗಳ ಮೂಲಕ ವಿಭಿನ್ನ ಕಾರ್ಯಕ್ರಮ ಹಮ್ಮಿಕೊಂಡು ಇಲ್ಲಿನ ತುಂಗ ಭದ್ರಾ ಆಣೆಕಟ್ಟಿನ ಶಂಕುಸ್ಥಾಪನೆ ಮಾಡಿದ್ದು ನೆಹರೂ ಅವರು. ಆದರೆ ಮೋದಿ ಹಾಗೂ ಬಿಜೆಪಿ ಸರ್ಕಾರ ಯಾವುದಾದರೂ ಒಂದು ಆಣೆಕಟ್ಟಿಗೆ ಅಡಿಗಲಲ್ಲು ಹಾಕಿದ್ದಾರಾ ಕೇಳಿ. ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷ ಕಟ್ಟಿದ ಎಲ್ಲ ಸಾರ್ವಜನಿಕ ಉದ್ಯಮಗಳನ್ನು ಖಾಸಗಿ ಮಾಡಿ ತನ್ನ ಸಾಲಗಾರ ಉದ್ಯಮಿ ಸ್ನೇಹಿತರ ಜೇಬು ತುಂಬಿಸುತ್ತಿದ್ದಾರೆ. ಈ ರಾಷ್ಟ್ರದ ಶೇ.40ರಷ್ಟು ಸಂಪತ್ತು ದೇಶದ ಶೇ.1 ಭಾಗದಷ್ಟು ಜನರ ಬಳಿ ಇದೆ. ಈ ರಾಷ್ಟ್ರದ 70% ಸಂಪತ್ತು ಕೇವಲ ಶೇ.10ರಷ್ಟು ಜನರ ಬಳಿ ಇದೆ.
ನಿಮ್ಮ ಬೆವರಿನ ತೆರಿಗೆ ಹಣವನ್ನು ನಿಮಗಾಗಿ ಖರ್ಚು ಮಾಡದೇ, ತಮ್ಮ ಸ್ನೇಹಿತರ ಕಲ್ಯಾಣಕ್ಕೆ ವೆಚ್ಚ ಮಾಡುತ್ತಿದ್ದಾರೆ. ಅಂಬೇಡ್ಕರ್ ಅವರು ಕೊಟ್ಟಿರುವ ಸಂವಿಧಾನದಲ್ಲಿ ನೀವು ಐದು ವರ್ಷಗಳಲ್ಲಿ ತಮಗೆ ಬೇಕಾದ ಸರ್ಕಾರವನ್ನು ಆರಿಸಿ ಕಳುಹಿಸಬಹುದು. ಹಿಂದೆ ಬಹುಮತ ಬಾರದೆ ಬಿಜೆಪಿಯನ್ನು ನೀವು ತಿರಸ್ಕರಿಸಿದ್ದಾಗ ನಾವು ಸಮ್ಮಿಶ್ರ ಸರ್ಕಾರವನ್ನು ಮಾಡಿದ್ದೆವು. ಆದರೆ ಮೈ ಮಾರಿಕೊಳ್ಳುವ ಮಹಿಳೆಯನ್ನು ವೇಶ್ಯೆ ಎಂದು ಕರೆಯುತ್ತಾರೆ. ಆದರೆ ತಮ್ಮ ಸ್ವಾಭಿಮಾನ ಸೇರಿದಂತೆ ಎಲ್ಲವನ್ನು ಮಾರಟ ಮಾಡಿರುವ ಶಾಸಕರನ್ನು ನೀವು ಏನೆಂದು ಕರೆಯುತ್ತೀರಿ? ಈ ಶಾಸಕರಿಗೆ ನೀವು ಬರುವ ಚುನಾವಣೆಯಲ್ಲಿ ಬುದ್ಧಿ ಕಲಿಸಬೇಕು. ಚುನಾವಣೆಯಲ್ಲಿ ನಾವು ಅಧಿಕಾರಕ್ಕೆ ಬಂದರೆ, ಜನರ ಆರೋಗ್ಯ, ಶಿಕ್ಷಣ, ಉದ್ಯೋಗದ ಬಗ್ಗೆ ನಾವು ಮಾತನಾಡುತ್ತೇವೆ. ಜಾತಿ, ಮತ, ಧರ್ಮ, ಭಾಷೆ ವಿಚಾರವಾಗಿ ಮಾತನಾಡುವುದಿಲ್ಲ. ಆದರೆ ಬಿಜೆಪಿ ಅಧಿಕಾರಕ್ಕೆ ಬಂದ ನಂತರ ರಾಜ್ಯದ ದುರಂತದಂತೆ ಜಾತಿ, ಧರ್ಮ, ಭಾಷೆ ವಿಚಾರ ಪ್ರಮುಖವಾಗಿ ಚರ್ಚೆಯಾಗಿದೆ. ಮುಂದಿನ ದಿನಗಳಲ್ಲಿ ಕರ್ನಾಟಕ ಅಭಿವೃದ್ಧಿಶೀಲ ರಾಜ್ಯ ಎಂದು ಪಡೆದಿದ್ದ ಕೀರ್ತಿಯನ್ನು ಮತ್ತೆ ಪುನಸ್ಥಾಪಿಸಲು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಭಾರಿ ಬಹುಮತದಿಂದ ಆರಿಸಿ ಕಳುಹಿಸಬೇಕು. ಪ್ರಜಾಧ್ವನಿಗೆ ನೀವೆಲ್ಲರೂ ಆಶೀರ್ವಾದ ಮಾಡಬೇಕು.