IMG 20230209 WA0003

ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ: 9ನೇ ಶೆಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭ….!

Genaral STATE

ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳ-

9ನೇ ಶೆಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆ ಪ್ರಾರಂಭ : ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ದಾವಣಗೆರೆ, ಫೆಬ್ರವರಿ 9 :

ಎಸ್ ಸಿ ಎಸ್ ಟಿ ಸಮಾಜಕ್ಕೆ ನ್ಯಾಯ ದೊರಕಿಸುಕೊಡುವುದೇ ನಮ್ಮ ಸರ್ಕಾರದ ಏಕೈಕ ಗುರಿಯಾಗಿದ್ದು, ಎಸ್ ಸಿ ಎಸ್ ಟಿ ಮೀಸಲಾತಿ ಹೆಚ್ಚಳವನ್ನು9ನೇ ಶೆಡ್ಯೂಲ್ ಗೆ ಸೇರಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಅವರು ಇಂದು “ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರಾ ಮಹೋತ್ಸವ” ಅಂಗವಾಗಿ “ಜನಜಾಗೃತಿ ಜಾತ್ರಾ ಮಹೋತ್ಸವದ ಉದ್ಘಾಟನೆ ಹಾಗೂ ಪ್ರಶಸ್ತಿ ಪ್ರದಾನ ಸಮಾರಂಭ”ದಲ್ಲಿ ಪಾಲ್ಗೊಂಡು ಮಾತನಾಡಿದರು.

ನಾಗಮೋಹನ್ ದಾಸ್ ವರದಿಯಂತೆ ತುಳಿತಕ್ಕೊಳಗಾಗಿರುವ ಸಮಾಜದವರ ಪರವಾಗಿ ನ್ಯಾಯ ನೀಡಲಾಗಿದೆ.. ಎಸ್ ಸಿ ವರ್ಗಕ್ಕೆ ಶೇ. 15 ರಿಂದ ಶೇ. 17 ಮತ್ತು ಎಸ್ ಟಿ ಗೆ 3 ರಿಂದ ಶೇ. 7 ಕ್ಕೆ ಹೆಚ್ಚಿಸಲಾಗಿದೆ. ತಳಸಮುದಾಯದ ಯುವಜನತೆಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಹೆಚ್ಚಿನ ಲಾಭ ದೊರೆಯಲಿದೆ. ಈ ಹೆಚ್ಚಳಕ್ಕೆ ಕಾನೂನಿನ ರಕ್ಷಣೆಯನ್ನು ಈಗಾಗಲೇ ಸರ್ಕಾರ ನೀಡಿದೆ.. ಕೇವಲ ಭಾಷಣದಿಂದ ಸಾಮಾಜಿಕ ನ್ಯಾಯ ಸಿಗುವುದಿಲ್ಲ. ಮೀಸಲಾತಿ ಹೆಚ್ಚಳವನ್ನು ಸರ್ಕಾರ ಈಗಾಗಲೇ ಜಾರಿ ಮಾಡಿದ್ದು, ಸರ್ಕಾರದ ನೇಮಕಾತಿಗಳಲ್ಲಿ ಈ ನಿಯಮವನ್ನು ಈಗಾಗಲೇ ಪಾಲಿಸಲಾಗುತ್ತಿದೆ ಎಂದರು.

ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಪ್ರತ್ಯೇಕ ಸಚಿವಾಲಯ :
ನಾನು ಬಯಸಿ ಮುಖ್ಯಮಂತ್ರಿಯಾದವನಲ್ಲ. ನಮ್ಮನಾಯಕರು ಹಾಗೂ ಜನರಿಂದ ಈ ಆಶೀರ್ವಾದ ನನಗೆ ದೊರೆಯಿತು. ಪರಿಶಿಷ್ಟ ಪಂಗಡದ ಸಮುದಾಯಗಳ ಅಭಿವೃದ್ಧಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಅನುಷ್ಠಾನಗೊಳಿಸಲು ಪ್ರತ್ಯೇಕ ಸಚಿವಾಲಯವನ್ನು ಸ್ಥಾಪಿಸಲಾಗಿದೆ. 75 ಯೂನಿಟ್ ಉಚಿತ ವಿದ್ಯುತ್ , ಸಮುದಾಯದ ರೈತರಿಗೆ ಜಮೀನು ಖರೀದಿಗೆ 25 ಲಕ್ಷದವರೆಗೆ ಅನುದಾನ, ಮನೆ ನಿರ್ಮಾಣಕ್ಕೆ 2 ಲಕ್ಷ, ಹಾಸ್ಟೆಲ್ ಗಳ ಹೆಚ್ಚಳ ಮಾಡಲಾಗಿದೆ. ಸಮುದಾಯದ ಯುವಕರಿಗೆ ಸ್ವಯಂ ಉದ್ಯೋಗಕ್ಕೆ ಸಹಕಾರ ನೀಡಲಾಗುತ್ತಿದೆ. ಪರಿಶಿಷ್ಟ ಪಂಗಡದ ಬುಡಕಟ್ಟು ಸಮುದಾಯಗಳಿಗೆ ಹೆಚ್ಚಿನ ಅನುದಾನವನ್ನು ಕೇಂದ್ರ ಸರ್ಕಾರ ನೀಡಿದೆ. ಬುಡಕಟ್ಟು ಜನಾಂಗಕ್ಕೆ ಸೇರಿದ ಶ್ರೀಮತಿ ದ್ರೌಪದಿ ಮುರ್ಮು ಅವರು ಗೌರವಾನ್ವಿತ ರಾಷ್ಟ್ರಪತಿಗಳಾಗಿದ್ದಾರೆ. ಸಮುದಾಯದ ಜನನಾಯಕರಿಗೆ ಸರ್ಕಾರದಲ್ಲಿ ಪ್ರಮುಖ ಸ್ಥಾನಮಾನಗಳನ್ನು ನೀಡಲಾಗಿದೆ ಎಂದರು.

ತಳ ಸಮುದಾಯ ಸದೃಢವಾದರೆ ನಾಡು ಸದೃಢವಾದಂತೆ :
ವಿಜಯನಗರ ಸಾಮ್ರಾಜ್ಯವನ್ನು ರಕ್ಷಣೆ ಮಾಡುವಲ್ಲಿ ವಾಲ್ಮೀಕಿ ಸಮಾಜ ಮಹತ್ವ ಪಾತ್ರ ವಹಿಸಿದೆ. ಮದಕರಿ ನಾಯಕ, ರಾಜ್ಯದ ಇತಿಹಾಸದಲ್ಲಿ ಪ್ರಮುಖರು. ವಾಲ್ಮೀಕಿ ರಚಿಸಿರುವ ರಾಮಾಯಣ ಜಗತ್ತಿನ 10 ಶ್ರೇಷ್ಠ ಗ್ರಂಥಗಳಲ್ಲಿ ಒಂದು. ಮನುಷ್ಯ ಸಂಬಂಧಗಳನ್ನು ಉತ್ತಮವಾಗಿ ಅತ್ಯುತ್ತಮವಾಗಿ ಬಿಂಬಿಸಿ, ದುಷ್ಟಶಕ್ತಿಗಳನ್ನು ಸಂಹರಿಸುವ ಪರಿಯನ್ನು ತೋರಿದ್ದಾರೆ. ವೀರ ಸಿಂಧೂರ ಲಕ್ಷ್ಮಣ, ಬೇಡರ ಕಣ್ಣಪ್ಪ ಈ ಸಮುದಾಯದವರೇ. ತಳಸಮುದಾಯವನ್ನು ಸದೃಢಗೊಳಿಸಿದರೆ , ನಾಡು ಸದೃಢಗೊಳಿಸಿದಂತೆ ಎಂದರು.

ಸಮುದಾಯದವರು ಸಂಘಟಿತರಾಗಬೇಕು :
ಗುರುಪೀಠದ ಶ್ರೀಗುರುಗಳೊಂದಿಗೆ ಭಕ್ತಿಭಾವದ ಸಂಬಂಧವಿದೆ. ಶ್ರೀ ಮಹರ್ಷಿ ವಾಲ್ಮೀಕಿ ಜಾತ್ರೆ ಅರ್ಥಪೂರ್ಣವಾಗಿ ನಡೆಯುತ್ತಿರುವುದು ಸಂತೋಷದ ವಿಷಯ. ವಾಲ್ಮೀಕಿ ಸಮುದಾಯದವರು ಸಂಘಟಿತರಾಗಿರುತ್ತೇವೆ ಎಂಬ ಸಂಕಲ್ಪ ಮಾಡಬೇಕಿದೆ. ತಮ್ಮ ಹಕ್ಕುಗಳನ್ನು ಪಡೆಯುವ ಸಂಕಲ್ಪ ಮಾಡಬೇಕಿದೆ. ಶ್ರೀ ಸುದೀಪ್ ಅವರನ್ನು ನಾನು ಹತ್ತಿರದಿಂದ ಬಲ್ಲೆ. ಅವರು ಕರ್ನಾಟಕದ ಎಲ್ಲರ ಹೃದಯದಲ್ಲಿ ಸ್ಥಾನವನ್ನು ಪಡೆದಿರುವುದು ಹೆಮ್ಮೆಯ ಸಂಗತಿ. ಈ ಸಮುದಾಯದ ಯುವಕರ ಆಶಾಕಿರಣವಾಗಿದ್ದಾರೆ ಎಂದರು.

ಈ ಸಮಾಜದಿಂದ ಸಾಧಕರು ಹೊರಹೊಮ್ಮಬೇಕು :
ವಾಲ್ಮೀಕಿ ಸಮುದಾಯ ಶ್ರೀಮಂತ ಸಮುದಾಯವಾಗಿದೆ. ಹೃದಯ ಶ್ರೀಮಂತಿಕೆಯಿರುವ ಈ ಸಮುದಾಯ ಎಲ್ಲ ರಂಗಗಳಲ್ಲಿಯೂ ದಕ್ಷತೆಯಿಂದ ಕೆಲಸ ಮಾಡುತ್ತಿದೆ. ಅನೇಕ ಸಾಧಕರು ಈ ಸಮಾಜದಿಂದ ಹೊರಹೊಮ್ಮಬೇಕು. ಮಾದರಿ ಸಮಾಜವನ್ನು ನಿರ್ಮಾಣವಾಗಬೇಕು. ಸಮಾಜ ಕಟ್ಟುವ ಕೆಲಸದಲ್ಲಿ ಈ ಸಮಾಜ ಮುಂಚೂಣಿಯಲ್ಲಿ ನಿಲ್ಲಬೇಕೆಂದು ಮುಖ್ಯಮಂತ್ರಿಗಳು ಹಾರೈಸಿದರು.

ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಮಹಾಸ್ವಾಮಿ, ಸಚಿವರಾದ ಆನಂದ್ ಸಿಂಗ್, ಶಾಸಕ ರಾಜು ಗೌಡ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ.ರೇಣುಕಾಚಾರ್ಯ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.