IMG 20230224 WA0132

Bengaluru: ಶಾಸಕರಲ್ಲಿ ಸ್ವಯಂ ಶಿಸ್ತು ಹೆಚ್ಚಾಗಲಿ….!

POLATICAL STATE

ಶಾಸಕರಲ್ಲಿ ಸ್ವಯಂ ಶಿಸ್ತು ಹೆಚ್ಚಾಗಲಿ : ವಿಶ್ವೇಶ್ವರ ಹೆಗಡೆ ಕಾಗೇರಿ

ಬೆಂಗಳೂರು ಮಾರ್ಚ್ 8 ( ಕರ್ನಾಟಕ ವಾರ್ತೆ) :

ಶಾಸಕರಲ್ಲಿ ಸ್ವಯಂ ಶಿಸ್ತು ಮತ್ತಷ್ಟು ಹೆಚ್ಚಾಗಬೇಕು. ಕೋರಂ ಹೆಚ್ಚು ಹೊತ್ತು ಸದ್ದು ಮಾಡುವ ಮುನ್ನವೇ ಸದನ ಕಲಾಪದಲ್ಲಿ ಪಾಲ್ಗೊಳ್ಳುವ ಉತ್ಸುಕತೆ ಮತ್ತು ಜವಾಬ್ದಾರಿಯನ್ನು ತೋರಬೇಕು. ಇದರಲ್ಲಿ ರಾಜಕೀಯ ಪಕ್ಷಗಳ‌ ಪಾತ್ರವೂ ದೊಡ್ಡದು ಎಂದು ರಾಜ್ಯ ವಿಧಾನ ಸಭೆಯ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಇಲ್ಲಿ ಇಂದು ಪತ್ರಿಕಾಗೋಷ್ಠಿಯಲ್ಲಿ ಅಭಿಪ್ರಾಯಪಟ್ಟರು.

ತಮ್ಮ ಅಧಿಕಾರಾವಧಿಯಲ್ಲಿ ಅತ್ಯಂತ ಕಡಿಮೆ ಧರಣಿ ಮತ್ತು ಸಭಾ ತ್ಯಾಗಗಳು ನಡೆದಿವೆ. ಅಂತೆಯೇ, ಕ್ರಿಯಾ ಲೋಪಗಳ ಸಂಖ್ಯೆಯನ್ನು ಗಮನಿಸಿದರೂ ನಗಣ್ಯ ಎಂದೇ ಹೇಳಬಹುದು.

ಅದೇ ರೀತಿ, ಇದೇ ಅವಧಿಯಲ್ಲಿ 69 ನಿಲುವಳಿ ಸೂಚನೆಗಳು ಮಂಡನೆಗೆ ಸ್ವೀಕೃತವಾಗಿದ್ದರೂ, ಯಾವ ಒಂದು ಸೂಚನೆಯನ್ನೂ ತಿರಸ್ಕರಿಸದೆ, ಅದನ್ನು ಪರಿವರ್ತಿಸಿಯಾದರೂ ಮತ್ತೊಂದು ರೂಪದಲ್ಲಿ ಸದಸ್ಯರಿಗೆ ಚರ್ಚೆಗೆ ಅವಕಾಶ ಕಲ್ಪಿಸಲಾಗಿದೆ.

ಅಲ್ಲದೆ, ಹಳೆಯ ಮತ್ತು ಹಿರಿಯ ಹಾಗೂ ಹೊಸ ಮತ್ತು ಕಿರಿಯ ಸದಸ್ಯರು ಎಂದು ಯಾವುದೇ ಬೇಧ ಭಾವ ಮಾಡದೆ, ತಾರತಮ್ಯ ತೋರದೆ ಎಲ್ಲಾ ಸದಸ್ಯರಿಗೂ ಮುಕ್ತ ಚರ್ಚೆಗೆ ಅವಕಾಶ ನೀಡಲಾದ ಹಿನ್ನೆಲೆಯಲ್ಲಿ ತಮ್ಮ ಅಧಿಕಾರಾವಧಿಯಲ್ಲಿ 200 ವಿಧೇಯಕಗಳು ಅಂಗೀಕಾರವಾಗಿದೆ.

ಪ್ರಶ್ನೋತ್ತರ ವೇಳೆಯಲ್ಲಿ ಒಂದು ತಾಸಿನ ಕಾಲ ಮಿತಿಯಲ್ಲಿಯೇ ಅತೀ ಹೆಚ್ಚು ಚುಕ್ಕೆ ಗುರುತಿನ ಪ್ರಶ್ನೆಗಳಿಗೆ ಉತ್ತರ ದೊರಕಿಸಿ ಕೊಡಲಾಗಿದೆ. ಗಂಭೀರ ಸ್ವರೂಪದ ಪ್ರಶ್ನೆಗಳು ಬಂದಾಗ, ಪ್ರಶ್ನೆ ಕೇಳಿದವರು ಮಾತ್ರವಲ್ಲದೆ ಇತರೆ ಸದಸ್ಯರೂ ಕೂಡಾ ಉಪ ಪ್ರಶ್ನೆಗಳನ್ನು ಕೇಳಿ ಚರ್ಚೆಯಲ್ಲಿ ಪಾಲ್ಗೊಂಡು ಮುಖ್ಯಮಂತ್ರಿ ಮತ್ತು ಇತರೆ ಸಚಿವರಿಂದ ಸಮಸ್ಯೆಗೆ ಸ್ಪಂದನೆ ಹಾಗೂ ಪರಿಹಾರ ದೊರಕಿಸಿಕೊಡುವ ಪ್ರಯತ್ನ ಮಾಡಲಾಗಿದೆ.

ಶೂನ್ಯ ವೇಳೆಯಲ್ಲಿನ ಚರ್ಚೆ, ಗಮನ ಸೆಳೆಯುವ ಸೂಚನೆಯ ಪ್ರಸ್ತಾವ, ಆಯವ್ಯಯ ಮೇಲಿನ ಚರ್ಚೆ ಹೀಗೆ ಎಲ್ಲದರಲ್ಲೂ ವಿವಿಧ ವಿಷಯಗಳ ಮೇಲೆ ಸದಸ್ಯರ ಕ್ಷೇತ್ರದ ಭಾವನೆಗಳು ಹಾಗೂ ಸಮಸ್ಯೆಗಳತ್ತ ಬೆಳಕು ಚೆಲ್ಲಿ ಪ್ರತಿಫಲಿಸಲು ಅನುವಾಗುವಂತೆ ಚಿಂತನ-ಮಂಥನ ನಡೆಸುವಂತೆ ಅವಕಾಶ ಕಲ್ಪಿಸಲಾಗಿದೆ. ಇವೆಲ್ಲವೂ ಕೂಡಾ ದಾಖಲೆಯೇ ಸರಿ ಎಂದರು.

ಹದಿನೈದನೇ ವಿಧಾನಸಭೆಯ ಅವಧಿಯಲ್ಲಿ 15 ಉಪವೇಶನಗಳಲ್ಲಿ 167 ದಿನಗಳ ಕಾಲ ಸದನ ಕಲಾಪಗಳು ಅತ್ಯಂತ ಯಶಸ್ವಿಯಾಗಿ ನಡೆದಿವೆ. ಈ ಉಪವೇಶಗಳ ಸಂದರ್ಭದಲ್ಲಿ ಸದನ ಕಾರ್ಯಕಲಾಪಗಳು ಸುಗಮವಾಗಿ ನಡೆಸಲು ಮುಕ್ತ ಮನಸ್ಸಿನಿಂದ ಸಹಕರಿಸಿ ಸದನದ ಕಾರ್ಯ ಕಲಾಪಗಳ ಯಶಸ್ಸಿಗೆ ಕಾರಣಕರ್ತರಾದ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ಎಲ್ಲಾ ಸದಸ್ಯರಿಗೂ ಹೃದಯಪೂರ್ವಕವಾಗಿ ಅಭಿನಂದನೆ ಹಾಗೂ ಮನಃಪೂರ್ವಕವಾಗಿ ವಂದನೆಗಳನ್ನು ಸಲ್ಲಿಸುವುದಾಗಿ ಸಭಾಧ್ಯಕ್ಷರು ತಿಳಿಸಿದರು.

ಇದೇ ಸಂದರ್ಭದಲ್ಲಿ ಸದನ ಕಾರ್ಯ ಕಲಾಪಗಳನ್ನು ನಾಡಿನ ಜನತೆಗೆ ತಿಳಿಸಿ, ಜನ ಸಾಮಾನ್ಯರಲ್ಲಿ ಪ್ರಜಾಪ್ರಭುತ್ವ ಮೌಲ್ಯಗಳ ಕುರಿತು ಅರಿವು ಮತ್ತು ಆಸಕ್ತಿಯನ್ನು ಹೆಚ್ಚಿಸಲು ಕಾರಣವಾದ ಮಾಧ್ಯಮಗಳು ಮತ್ತು ಮಾಧ್ಯಮ ಪ್ರತಿನಿಧಿಗಳಿಗೆ ಹಾಗೂ ಸುಗಮ ಕಲಾಪ ನಿರ್ವಹಣೆಗೆ ನೆರವು ಮತ್ತು ಸಹಕಾರ ನೀಡಿದ ವಿಧಾನಸಭಾ ಸಚಿವಾಲಯದ ಅಧಿಕಾರಿ ಮತ್ತು ಸಿಬ್ಬಂದಿಗೂ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ವಿಶೇಷ ಧನ್ಯವಾದಗಳನ್ನು ಅರ್ಪಿಸಿದರು.

ಹೆಚ್ಚಿದ ಆಸಕ್ತಿ

ಕೊರೋನ ಸಂದರ್ಭದಲ್ಲಿ ಅಧಿವೇಶನದ ವೀಕ್ಷಣೆಗೆ ಸಾರ್ವಜನಿಕರಿಗೆ ಅವಕಾಶ ಕಲ್ಪಿಸಿರಲಿಲ್ಲ. ಆದರೂ, ಅಧಿವೇಶನ ಅವಧಿಯಲ್ಲಿ ಈವರೆಗೆ ಒಂದು ಲಕ್ಷದ ಎಂಟು ಸಾವಿರ ಮಂದಿ, ವಿಶೇಷವಾಗಿ ಯುವ ಜನತೆ ಮತ್ತು ವಿದ್ಯಾರ್ಥಿಗಳು, ಸದನ ಕಲಾಪವನ್ನು ವೀಕ್ಷಿಸಿದ್ದಾರೆ. ಇದನ್ನು ಮಾಧ್ಯಮಗಳ, ವಿಶೇಷವಾಗಿ ಸಾಮಾಜಿಕ ಮಾಧ್ಯಮಗಳ, ಪ್ರಭಾವ ಎಂದೇ ಬಣ್ಣಿಸಬಹುದಾಗಿದೆ.

ಜನ ಸಾಮಾನ್ಯರು ಧಾರಾವಾಹಿಗಳನ್ನು ಬಿಟ್ಟು ಮಾಧ್ಯಮಗಳಲ್ಲಿ ನೇರ ಪ್ರಸಾರದಲ್ಲಿ ಬಿತ್ತರವಾಗುತ್ತಿದ್ದ ಸದನದ ಕಲಾಪಗಳನ್ನು ನೋಡಿದ್ದಾರೆ ಎಂಬುದು ಹೆಮ್ಮೆತರುವಂತಹುದಾಗಿದೆ ಎಂದೂ ಸಭಾಧ್ಯಕ್ಷರು ಹೇಳಿದರು.

ರಾಜ್ಯ ವಿಧಾನ ಸಭೆಯ ಕಾರ್ಯದರ್ಶಿ ಎಂ ಕೆ ವಿಶಾಲಾಕ್ಷಿ ಅವರೂ ಸೇರಿದಂತೆ ವಿಧಾನಸಭಾ ಸಚಿವಾಲಯದ ಹಲವು ಅಧಿಕಾರಿಗಳು ಈ ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.


ಡಿ ಪಿ ಎಂ